Bengal: ನಾರದ ಪ್ರಕರಣದ ಆರೋಪಿ ಬಿಜೆಪಿ ನಾಯಕ ಸುವೇಂದು ವಿರುದ್ಧ ರಾಷ್ಟ್ರಪತಿಗೆ ಟಿಎಂಸಿ ಸಂಸದರ ಪತ್ರ

ಸುವೇಂದು ಅವರು ಮೂವತ್ತು ನಿಮಿಷಗಳ ಕಾಲ ಸಾಲಿಸಿಟರ್‌ ಜನರಲ್‌ ಅವರ ನಿವಾಸದಲ್ಲಿ ಇದ್ದುದರಿಂದ ಈ ರಹಸ್ಯ ಸಭೆ ಕುರಿತಾದ ಊಹಾಪೋಹಗಳನ್ನು ತಳ್ಳಿಹಾಕಲು ಸಾಲಿಸಿಟರ್‌ ಜನರಲ್‌ ಅವರು ಈ ಭೇಟಿಯ ಸಿಸಿಟಿವಿ ದೃಶ್ಯಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಬೇಕು. ಆಗ ಅವರ ಮಾತಿಗೆ ಬೆಲೆ ಬರುತ್ತದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಸುವೇಂದು ಅಧಿಕಾರಿ

ಸುವೇಂದು ಅಧಿಕಾರಿ

  • Share this:
    ನಾರದ ಪ್ರಕರಣದ ಆರೋಪಿ ಹಾಗೂ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರೊಂದಿಗೆ ಸಭೆ ನಡೆಸಿದ ಸಾಲಿಸಿಟರ್‌ ಜನರಲ್‌ (ಎಸ್‌ಜಿ) ತುಷಾರ್‌ ಮೆಹ್ತಾ ಅವರನ್ನು ತಮ್ಮ ಹುದ್ದೆಯಿಂದ ತೆಗೆದು ಹಾಕುವಂತೆ ಕೋರಿ ತೃಣಮೂಲ ಕಾಂಗ್ರೆಸ್‌ನ ಇಬ್ಬರು ಸಂಸದರು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರಿಗೆ ಪತ್ರ ಬರೆದಿದ್ದಾರೆ.

    ಪತ್ರದಲ್ಲಿ “ನಂದಿಗ್ರಾಮ ಶಾಸಕರಾಗಿರುವ ಸುವೇಂದು ಅಧಿಕಾರಿ ಅವರು ತಮಗೆ ತಿಳಿಸದೆ ಮನೆಗೆ ಬಂದಿದ್ದರು. ಅವರನ್ನು ತಾನು ಭೇಟಿಯಾಗಲಿಲ್ಲ. ಬದಲಿಗೆ ಸುವೇಂದು ಅವರಿಗೆ ತಮ್ಮ ಕಚೇರಿಯ ಸಿಬ್ಬಂದಿ ಚಹಾ ನೀಡಿ ತಮ್ಮನ್ನು ಭೇಟಿಯಾಗಲು ಸಾಧ್ಯವಾಗದ ವಿಚಾರವನ್ನು ತಿಳಿಸಿದರು. ಬಳಿಕ ಸುವೇಂದು ಹೊರ ನಡೆದರು ಎಂಬುದಾಗಿ ಮೆಹ್ತಾ ಹೇಳುತ್ತಿದ್ದಾರೆ. ಆದರೆ ಇದಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ಬಹಿರಂಗಗೊಳಿಸಿದರೆ ಮಾತ್ರ ಮೆಹ್ತಾ ಮಾತಿಗೆ ಬೆಲೆ ಬರುತ್ತದೆ” ಎಂದು ಸಂಸದರಾದ ಮಹುವಾ ಮೊಯಿತ್ರಾ ಮತ್ತು ಸುಖೇಂದು ಶೇಖರ್‌ ರಾಯ್‌ ತಿಳಿಸಿದ್ದಾರೆ.

    ಸುವೇಂದು ಅವರು ಮೂವತ್ತು ನಿಮಿಷಗಳ ಕಾಲ ಸಾಲಿಸಿಟರ್‌ ಜನರಲ್‌ ಅವರ ನಿವಾಸದಲ್ಲಿ ಇದ್ದುದರಿಂದ ಈ ರಹಸ್ಯ ಸಭೆ ಕುರಿತಾದ ಊಹಾಪೋಹಗಳನ್ನು ತಳ್ಳಿಹಾಕಲು ಸಾಲಿಸಿಟರ್‌ ಜನರಲ್‌ ಅವರು ಈ ಭೇಟಿಯ ಸಿಸಿಟಿವಿ ದೃಶ್ಯಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಬೇಕು. ಆಗ ಅವರ ಮಾತಿಗೆ ಬೆಲೆ ಬರುತ್ತದೆ ಎಂದು ಪತ್ರದಲ್ಲಿ ಹೇಳಲಾಗಿದೆ.

    ಮೆಹ್ತಾ ಅವರನ್ನು ಸಾಲಿಸಿಟರ್‌ ಜನರಲ್‌ ಹುದ್ದೆಯಿಂದ ತೆಗೆದುಹಾಕಬೇಕೆಂದು ಆಗ್ರಹಿಸಿ ಸಂಸದರು ಈ ಹಿಂದೆ ಪ್ರಧಾನಿ ಅವರಿಗೆ ಪತ್ರ ಬರೆದಿದ್ದರು. ಆದರೆ ಅವರನ್ನು ತಾವು ಭೇಟಿಯಾಗಿಲ್ಲ ಎಂದು ಎಸ್‌ಜಿ ಈ ಹಿಂದೆ ಕೂಡ ಪ್ರತಿಕ್ರಿಯಿಸಿದ್ದರು.

    ಮೆಹ್ತಾ ಅವರ ದೆಹಲಿ ನಿವಾಸಕ್ಕೆ ಸುವೇಂದು ಅಧಿಕಾರಿ ಭೇಟಿ ನೀಡಿರುವ ಕುರಿತು ವಿಡಿಯೋದೊಂದಿಗೆ ಸುದ್ದಿಗಳು ಪ್ರಸಾರವಾಗಿವೆ. ವಂಚನೆ, ಅಕ್ರಮ ಆಸ್ತಿ ಗಳಿಕೆ ಹಾಗೂ ಲಂಚ ಪಡೆದ ಪ್ರಕರಣಗಳಲ್ಲಿ ಸುವೇಂದು ಆರೋಪಿಯಾಗಿದ್ದು ನಾರದ ಕುಟುಕು ಕಾರ್ಯಾಚರಣೆಯಲ್ಲಿ ಅವರು ಲಂಚ ಪಡೆಯುತ್ತಿರುವುದು ಕ್ಯಾಮೆರಾದಲ್ಲಿ ದಾಖಲಾಗಿದೆ. ಸಾಲಿಸಿಟರ್‌ ಜನರಲ್‌ ಅವರು ಎರಡನೇ ಅತ್ಯುನ್ನತ ಕಾನೂನು ಅಧಿಕಾರಿಯಾಗಿದ್ದು ಸಿಬಿಐ ತನಿಖೆ ನಡೆಸುತ್ತಿರುವ ನಾರದ ಪ್ರಕರಣವೂ ಸೇರಿದಂತೆ ಮಹತ್ವದ ಪ್ರಕರಣಗಳಲ್ಲಿ ಸರ್ಕಾರಕ್ಕೆ ಮತ್ತು ಅದರ ಅಂಗಸಂಸ್ಥೆಗಳಿಗೆ ಕಾನೂನು ಸಲಹೆ ನೀಡುತ್ತಾರೆ ಎಂಬುದಾಗಿ ಸಂಸದರು ಪತ್ರದಲ್ಲಿ ವಿವರಿಸಿದ್ದರು.

    ಆ ಪ್ರಕರಣದಲ್ಲಿ ಆರೋಪಿಯಾಗಿರುವವರನ್ನು ಭೇಟಿಯಾಗುವುದರಿಂದ ಸಾಲಿಸಿಟರ್‌ ಜನರಲ್‌ ಅವರ ಶಾಸನಬದ್ಧ ಕರ್ತವ್ಯಗಳೊಂದಿಗೆ ಹಿತಾಸಕ್ತಿಯ ಸಂಘರ್ಷ ಏರ್ಪಡುತ್ತದೆ. ಎಸ್‌ಜಿ ಅವರ ನಡವಳಿಕೆಯನ್ನು ತನಿಖೆ ಮಾಡಬೇಕಿದ್ದು ಹೀಗಿರುವಾಗ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

    ಇದನ್ನೂ ಓದಿ:  Punjab: ಪಂಜಾಬ್​ ಕಾಂಗ್ರೆಸ್​ ಬಿಕ್ಕಟ್ಟು: ಸೋನಿಯಾ ಅವರ ಯಾವ ತೀರ್ಮಾನಕ್ಕೂ ನಾನು ಬದ್ಧ- ಕ್ಯಾಪ್ಟನ್​ ಅಮರೀಂದರ್​

    ಇತ್ತೀಚೆಗೆ ನಡೆದ ಬಂಗಾಳ ವಿಧಾನಸಭಾ ಚುನಾವಣೆಯ ವೇಳೆ ಪ್ರಭಾವಿ ನಾಯಕ ಸುವೇಂದು ಅಧಿಕಾರಿ ತೃಣಮೂಲ ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ್ದರು. ಆ ನಂತರ ಇವರ ವಿರುದ್ಧ ಸಿಡಿದೆದ್ದ ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮದಲ್ಲಿ ಸುವೇಂದು ವಿರುದ್ದ ಚುನಾವಣೆಗೆ ನಿಂತಿದ್ದರು. ಮಮತಾ ಬ್ಯಾನರ್ಜಿ ಸುವೇಂದು ವಿರುದ್ದ ಸೋತಿದ್ದು ಈಗ ಇತಿಹಾಸ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
    Published by:HR Ramesh
    First published: