West Bengal Assembly Election2021: ನಂದಿಗ್ರಾಮದಲ್ಲಿ ಶೇ.90ರಷ್ಟು ಮತಗಳು ಟಿಎಂಸಿಗೆ: ಸಿಎಂ ಮಮತಾ ಹಾಗೂ ಯಶವಂತ ಸಿನ್ಹ ವಿಶ್ವಾಸ

ನಂದಿಗ್ರಾಮದಲ್ಲಿ ಶೇ.90 ರಷ್ಟು ಮತಗಳು ಟಿಎಂಸಿ ಪಾಲಾಗಿವೆ ಎಂದು ಸಿಎಂ ಮಮತಾ ಬ್ಯಾನರ್ಜಿ ಹಾಗೂ ಹಿರಿಯ ನಾಯಕ ಯಶವಂತ್​ ಸಿನ್ಹಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಮತಾ ಬ್ಯಾನರ್ಜಿ.

ಮಮತಾ ಬ್ಯಾನರ್ಜಿ.

 • Share this:
  ಕೋಲ್ಕತ್ತಾ (ಏಪ್ರಿಲ್ 01); ಪಶ್ಚಿಮ ಬಂಗಾಳದಲ್ಲಿ ಇಂದು ಎರಡನೇ ಹಂತದ ಚುನಾವಣೆ ಮುಕ್ತಾಯವಾಗಿದ್ದು, ಬಹು ನಿರೀಕ್ಷಿತ ನಂದಿಗ್ರಾಮದಲ್ಲೂ ಚುನಾವಣೆ ಮುಕ್ತಾಯವಾಗಿದೆ. ಈ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿಯಾಗಿ ಸ್ವತಃ ಸಿಎಂ ಮಮತಾ ಬ್ಯಾನರ್ಜಿ ಸ್ಪರ್ಧಿಸಿದ್ದರೆ, ಅವರಿಗೆ ಎದುರಾಗಿ ಒಂದು ಕಾಲದ ಅವರದೇ ಆಪ್ತ ಸುವೆಂದು ಅಧಿಕಾರಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಕೊನೆಗೂ ಹೈವೋಲ್ಟೇಜ್ ಕ್ಷೇತ್ರದಲ್ಲಿ​ ಮತದಾನ ಮುಕ್ತಾಯವಾಗಿದೆ. ಮತದಾನದ ನಂತರ ಮಾತನಾಡಿರುವ ಮಮತಾ ಬ್ಯಾನರ್ಜಿ, "ನೀವು (ಚುನಾವಣಾ ಆಯೋಗ) ಏನೇ ಪ್ರಯತ್ನ ಮಾಡಿದರೂ ಬಿಜೆಪಿ ಗೆಲ್ಲುವುದಿಲ್ಲ. ನಂದಿಗ್ರಾಮದಲ್ಲಿ ಶೇ.90 ರಷ್ಟು ಮತಗಳು ಟಿಎಂಸಿ ಪಾಲಾಗಿವೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಿರಿಯ ನಾಯಕ ಯಶವಂತ್​ ಸಿನ್ಹಾ ಸಹ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಗೆಲುವು ಖಚಿತ ಎಂದು ತಿಳಿಸಿದ್ದಾರೆ.

  ನಿನ್ನೆ ಸಹ ಚುನಾವಣಾ ಆಯೋಗದ ವಿರುದ್ಧ ಹರಿಹಾಯ್ದಿದ್ದ ಮಮತಾ ಬ್ಯಾನರ್ಜಿ, "ಚುನಾವಣಾ ಆಯೋಗ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪರವಾಗಿದೆ" ಎಂದು ದೂರಿದ್ದರು. ಇಂದು ಸಹ ಇದೇ ವಾಗ್ದಾಳಿಯನ್ನು ಮುಂದುವರೆಸಿರುವ ಅವರು, "ನಂದಿಗ್ರಾಮದಲ್ಲಿ ಹಲವು ಮತದಾರರಿಗೆ ಅವರ ಹಕ್ಕನ್ನು ಚಲಾವಣೆ ಮಾಡಲು ಚುನಾವಣಾ ಆಯೋಗ ಅವಕಾಶ ನೀಡಿಲ್ಲ. ಈ ಬಗ್ಗೆ ರಾಜ್ಯಪಾಲ ಜಗದೀಪ್ ಧಂಕರ್ ಅವರಿಗೆ ದೂರು ನೀಡಲಾಗಿದೆ. ಬಂಗಾಳದಲ್ಲಿ ಆಯೋಗವು ಬಿಜೆಪಿಯೊಂದಿಗೆ ನಿಂತಿರುವುದು ಸ್ಪಷ್ಟವಾಗಿದೆ. ಇದೇ ಕಾರಣಕ್ಕೆ ತೃಣಮೂಲ ಕಾಂಗ್ರೆಸ್‌ ಇಂದು ಸಲ್ಲಿಸಿದ ಹಲವಾರು ದೂರುಗಳ ಬಗ್ಗೆ ಆಯೋಗ ನಿಷ್ಕ್ರಿಯವಾಗಿದೆ" ಎಂದು ದೂರಿದ್ದಾರೆ.

  ಇದನ್ನೂ ಓದಿ: West Bengal Assembly Election2021: ಬಿಜೆಪಿ ಕಾರ್ಯಕರ್ತರಿಂದ ನಂದಿಗ್ರಾಮ ಬೂತ್​ ವಶ: ಚುನಾವಣಾ ಆಯೋಗಕ್ಕೆ ಮಮತಾ ಬ್ಯಾನರ್ಜಿ ದೂರು!

  "ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಬಿಜೆಪಿ ಗೂಂಡಾಗಳಿಗೆ ಸಹಾಯ ಮಾಡಲು ಕೇಂದ್ರ ಪಡೆಗಳಿಗೆ ಸೂಚನೆ ನೀಡುತ್ತಿದ್ದಾರೆ. ಸ್ವತಃ ಸಿಆರ್ಪಿಎಫ್, ಬಿಎಸ್ಎಫ್ ಮತ್ತು ಇತರ ಜವಾನರಿಗೆ ಬಿಜೆಪಿ ಮತ್ತು ಅದರ ಗೂಂಡಾಗಳಿಗೆ ಮಾತ್ರ ಸಹಾಯ ಮಾಡುವಂತೆ ಸೂಚಿಸುತ್ತಿದ್ದಾರೆ. ಮತದಾನ ಕೇಂದ್ರವನ್ನು ವಶಪಡಿಸಿರುವ ಬಗ್ಗೆ 63 ದೂರುಗಳನ್ನು ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿದೆ. ಆದರೆ, ಯಾವುದೇ ಉಪಯೋಗ ಇಲ್ಲ" ಎಂದು ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಅವರ ವಿರುದ್ದ ಅವರ ಒಂದು ಕಾಲದ ಆಪ್ತ ಸುವೆಂದು ಅಧಿಕಾರಿ ಬಿಜೆಪಿ ಅಭ್ಯರ್ಥಿಯಾಗಿ ಇದ್ದಾರೆ. ಈ ಕ್ಷೇತ್ರದಲ್ಲಿ ಇಂದು ಮತದಾನ ನಡೆಯಿತು. ಇಂದು ನಡೆದ ಎರಡನೇ ಹಂತದ ವಿಧಾನಸಭಾ ಚುನಾವಣಾ ಪ್ರಕ್ರಿಯೆಯಲ್ಲಿ ರಾಜ್ಯದ 30 ಕ್ಷೇತ್ರಗಳಿಗೆ ಮತದಾನ ನಡೆಯಿತು. ಪಶ್ಚಿಮ ಬಂಗಾಳದಲ್ಲಿ ಒಟ್ಟು ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಏಪ್ರಿಲ್ 29 ಕ್ಕೆ ಕೊನೆಗೊಳ್ಳುತ್ತದೆ. ಫಲಿತಾಂಶಗಳನ್ನು ಮೇ 2 ರಂದು ಪ್ರಕಟಿಸಲಾಗುವುದು.
  Published by:MAshok Kumar
  First published: