West Bengal Bypolls: ಪಶ್ಚಿಮ ಬಂಗಾಳ ಉಪ ಚುನಾವಣೆ: ಅಭ್ಯರ್ಥಿಗಳ ಪಟ್ಟಿ ಘೋಷಿಸಿದ ಟಿಎಂಸಿ

ಮುಖ್ಯಮಂತ್ರಿಯಾಗಿ ಮುಂದುವರೆಯಲು ಮಮತಾ ಬ್ಯಾನರ್ಜಿ ಶಾಸಕರಾಗಿ ಆಯ್ಕೆಯಾಗುವುದು ಅನಿವಾರ್ಯವಾಗಿದೆ. ಈ ಹಿನ್ನಲೆ ಭವಾನಿಪುರದಿಂದ ಅವರು ಚುನಾವಣೆ ಕಣಕ್ಕೆ ಇಳಿಯಲಿದ್ದಾರೆ.

ಮಮತಾ ಬ್ಯಾನರ್ಜಿ

ಮಮತಾ ಬ್ಯಾನರ್ಜಿ

  • Share this:
    ಪಶ್ಚಿಮ ಬಂಗಾಳ ಉಪಚುನಾವಣೆ ( West Bengal Bypolls) ಘೋಷಣೆಯಾಗುತ್ತಿದ್ದಂತೆ ಮೂರು ಕ್ಷೇತ್ರಗಳಿಗೂ ಅಭ್ಯರ್ಥಿಗಳ ಪಟ್ಟಿಯನ್ನು ತೃಣಮೂಲ ಕಾಂಗ್ರೆಸ್ ಬಿಡುಗಡೆ ಮಾಡಿದೆ. ನಿರೀಕ್ಷೆಯಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ  (Mamata banerjee) ಅವರನ್ನು ಭವಾನಿಪುರ ಕ್ಷೇತ್ರದ ಚುನಾವಣಾ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಇನ್ನು ಉಳಿದ ಜಂಗೀಪುರ ಕ್ಷೇತ್ರದಲ್ಲಿ ಜಾಕೀರ್​ ಹುಸೇನ್​ ಅಭ್ಯರ್ಥಿಯಾಗಿ ಕಣಕ್ಕೆ ಇಳಿದರೆ, ಸಂಸರ್‌ಗಂಜ್ ​ನಿಂದ ಅರ್ಮಿಲ್​ ಇಸ್ಲಾಂ ಚುನಾವಣೆ ಎದುರಿಸಲಿದ್ದಾರೆ. ಶನಿವಾರವಷ್ಟೇ ಈ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕವನ್ನು ಭಾರತೀಯ ಚುನಾವಣಾ ಆಯೋಗ ಘೋಷಣೆ ಮಾಡಿತ್ತು. ಇದೇ ತಿಂಗಳ ಅಂತ್ಯದಲ್ಲಿ ಅಂದರೆ, ಸೆಪ್ಟೆಂಬರ್​ 30ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ.

    ಕಳೆದ ಎರಡು ತಿಂಗಳ ಹಿಂದೆ ನಡೆದ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮಮತಾ ಬಿಜೆಪಿ ನಾಯಕ ಸುವೇಂದು ಅಧಿಕಾರಿ ವಿರುದ್ಧ ನಂದಿ ಗ್ರಾಮದಲ್ಲಿ ಕಣಕ್ಕೆ ಇಳಿದಿದ್ದರು. ಟಿಎಂಸಿ ತೊರೆದು ಹೋದ ತಮ್ಮ ಈ ಹಿಂದಿನ ಆಪ್ತರಾಗಿದ್ದ ಸುವೇಂದು ಅಧಿಕಾರಿ ವಿರುದ್ಧ ಚುನಾವಣೆಗೆ ಸ್ಪರ್ಧಿಸಲು ಅವರು ತಮ್ಮ ಭವಾನಿಪುರ ಕ್ಷೇತ್ರವನ್ನು ತೊರೆದಿದ್ದರು. ತೀವ್ರ ಹಣಾಹಣಿಗೆ ಸಾಕ್ಷಿಯಾಗಿದ್ದ ಈ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಗೆಲುವು ಸಾಧಿಸುವ ಮೂಲಕ ಮಮತಾ ಸೋತರು.

    ನಂದಿ ಗ್ರಾಮದಲ್ಲಿ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಸೋಲು ಕಂಡರೂ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಧಿಕ ಬಹುಮತ ಪಡೆದು ಜಯಭೇರಿ ಬಾರಿಸಿತು. ಈ ಹಿನ್ನಲೆ ಅವರನ್ನು ಮುಖ್ಯಮಂತ್ರಿಯಾಗಿ ಪಕ್ಷ ಆಯ್ಕೆ ಮಾಡಿತು.

    ಮುಖ್ಯಮಂತ್ರಿಯಾಗಿ ಮುಂದುವರೆಯಲು ಮಮತಾ ಬ್ಯಾನರ್ಜಿ ಶಾಸಕರಾಗಿ ಆಯ್ಕೆಯಾಗುವುದು ಅನಿವಾರ್ಯವಾಗಿದೆ. ಈ ಹಿನ್ನಲೆ ಈಗ ತಮ್ಮ ಕ್ಷೇತ್ರವಾದ ಭವಾನಿಪುರದಿಂದ ಅವರು ಚುನಾವಣೆ ಕಣಕ್ಕೆ ಇಳಿಯಲಿದ್ದಾರೆ. ಮಮತಾ ಅವರಿಗಾಗಿಯೇ ಭವಾನಿಪುರದಲ್ಲಿ ಗೆಲುವು ಸಾಧಿಸಿದ್ದ ಟಿಎಂಸಿ ಅಭ್ಯರ್ಥಿ ಶೋಭಂದೇಬ್​ ಚಟ್ಟೋಪಾಧ್ಯಾಯ ಫಲಿತಾಂಶ ಪ್ರಕಟವಾದ ಕೆಲವೇ ದಿನಗಳಲ್ಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

    ಇದನ್ನು ಓದಿ: ದೇಶಕ್ಕೆ Infosys ಕೊಡುಗೆ ಅಪಾರ: ಪಾಂಚಜನ್ಯ RSS ಮುಖವಾಣಿ ಅಲ್ಲ; ವಿವಾದಕ್ಕೆ ತೆರೆ ಎಳೆಯಲು ಮುಂದಾದ ಸಂಘ

    ರಾಜ್ಯದಲ್ಲಿ ಕೋವಿಡ್​-19 ಪ್ರಕರಣ ಕಡಿಮೆಯಾಗಿರುವ ಹಿನ್ನೆಲೆ ಚುನಾವಣಾ ಆಯೋಗ ಚುನಾವಣೆ ನಡೆಸಲು ಸಜ್ಜಾಗಿದ್ದು, ಟಿಎಂಸಿ ಗೆಲುವಿನ ಉತ್ಸಾಹ ಹೊಂದಿದೆ. ನಾವು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದೇವೆ ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಕುನಾಲ್​​ ಘೋಷ್​ ತಿಳಿಸಿದ್ದಾರೆ.

    ಆಡಳಿತಾತ್ಮಕ ಅಗತ್ಯತೆಗಳು ಮತ್ತು ಸಾರ್ವಜನಿಕ ಹಿತಾಸಕ್ತಿ ಹಾಗೂ ಖಾಲಿ ಇರುವ ಶಾಸಕ ಸ್ಥಾನ ಭರ್ತಿ ಮಾಡಲು ಈ ಚುನಾವಣೆ ನಡೆಸಬಹುದು ಎಂದು ಚುನಾವಣಾ ಆಯೋಗಕ್ಕೆ ಪಶ್ಚಿಮ ಬಂಗಾಳ ಮುಖ್ಯ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.

    ಚುನಾವಣೆ ವೇಳೆ ಕೋವಿಡ್ -19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜೊತೆಗೆ ಪ್ರಚಾರದ ವೇಳೆ ಯಾವುದೇ ರೋಡ್ ಶೋ, ಯಾವುದೇ ಬೈಕ್ ರ್ಯಾಲಿಗಳನ್ನು ಅನುಮತಿಸಲಾಗುವುದಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಇನ್ನು ಈ ಉಪ ಚುನಾವಣೆಯಲ್ಲಿ ಭವಾನಿಪುರದಿಂದ ಕಾಂಗ್ರೆಸ್​ ಸ್ಪರ್ಧಿಸುವುದಿಲ್ಲ ಎಂದು ಈ ಹಿಂದೆಯೇ ಕಾಂಗ್ರೆಸ್​ ನಾಯಕ ಅಧೀರ್​ ಚೌಧರಿ ತಿಳಿಸಿದ್ದರು
    Published by:Seema R
    First published: