ಇಡೀ ದೇಶದಲ್ಲಿ 11 ದಿನ ಇಂಟರ್ನೆಟ್ ಇಲ್ಲದಿದ್ರೆ ಏನಾಗುತ್ತೆ? ಟೋಂಗಾ ದೇಶಕ್ಕೆ ಕಾದಿತ್ತು ಆಘಾತ

ಒಂದು ಹಡಗಿನ ಲಂಗರು ಇಡೀ ದೇಶದ ಇಂಟರ್ನೆಟ್ ವ್ಯವಸ್ಥೆಯನ್ನೇ ಬಂದ್ ಮಾಡಿದ ಘಟನೆ ಎಚ್ಚರಿಕೆಯ ಕರೆಗಂಟೆಯಾಗಿದೆ.

Vijayasarthy SN | news18
Updated:February 2, 2019, 9:40 PM IST
ಇಡೀ ದೇಶದಲ್ಲಿ 11 ದಿನ ಇಂಟರ್ನೆಟ್ ಇಲ್ಲದಿದ್ರೆ ಏನಾಗುತ್ತೆ? ಟೋಂಗಾ ದೇಶಕ್ಕೆ ಕಾದಿತ್ತು ಆಘಾತ
ಟೋಂಗಾ ದೇಶದ ಒಂದು ಬೀದಿ
Vijayasarthy SN | news18
Updated: February 2, 2019, 9:40 PM IST
ಬೆಂಗಳೂರು(ಫೆ. 02): ನಮ್ಮ ಮೊಬೈಲ್​ನಲ್ಲಿ ಒಂದು ದಿನ ಡೇಟಾ ಇಲ್ಲದಿದ್ದರೆ ಅದೆಷ್ಟು ಪರದಾಡುತ್ತೇವೆ..! ನೀರಿನಿಂದ ಹೊರತೆಗೆದ ಮೀನಿನಂತೆ ವಿಲವಿಲ ಒದ್ದಾಡುತ್ತೇವೆ. ಇಡೀ ದೇಶದ ಇಂಟರ್ನೆಟ್ ವ್ಯವಸ್ಥೆಯೇ ಬಂದ್ ಆಗಿಬಿಟ್ಟರೆ ಏನಾದೀತು? ಇಂಥ ಸ್ಥಿತಿಯನ್ನು ಊಹಿಸಲೂ ಅಸಾಧ್ಯ. ನಾವು ನೀವೆಲ್ಲಾ ನೆನಸಿಕೊಳ್ಳಲೂ ಭಯಪಡುವ ಇಂಥ ಸ್ಥಿತಿಯನ್ನು ಟೋಂಗಾ ಎಂಬ ಪುಟ್ಟ ರಾಷ್ಟ್ರ ಅನುಭವಿಸಿದೆ. ಇದು ಒಂದೆರಡು ಗಂಟೆಯ ಸ್ಥಿತಿಯಲ್ಲ, ಒಂದೆರಡು ದಿನದ ಕಥೆಯೂ ಅಲ್ಲ, ಬರೋಬ್ಬರಿ 11 ದಿನಗಳ ಕಾಲ ಈ ದೇಶದ ಜನರು ಇಂಟರ್ನೆಟ್ ಇಲ್ಲದೇ ಒದ್ದಾಡಿ ಹೋಗಿದ್ದಾರೆ.

ನ್ಯೂಜಿಲೆಂಡ್​ನ ಈಶಾನ್ಯ ಭಾಗದಲ್ಲಿ ಸುಮಾರು 2 ಸಾವಿರ ಕಿಮೀ ಆಚೆ ಇರುವ ಒಂದು ಪುಟ್ಟ ದ್ವೀಪ ರಾಷ್ಟ್ರ ಟೋಂಗಾ. ಸುಮಾರು 170 ಸಣ್ಣಪುಟ್ಟ ದ್ವೀಪಗಳಿಂದ ಕೂಡಿರುವ ಈ ದೇಶದ ಒಟ್ಟಾರೆ ಜನಸಂಖ್ಯೆ 1 ಲಕ್ಷವಿರಬಹುದು. ಜನವರಿ 20ರಂದು ಇಂಟರ್ನೆಟ್ ಸಂಪರ್ಕವೇ ಕಡಿದು ಹೋಗಿ ಇಡೀ ದೇಶವು ಡಿಜಿಟಲ್ ಕತ್ತಲೆಯಲ್ಲಿ ಮುಳುಗಿಹೋಯಿತು. ಇಂಟರ್ನ್ಯಾಷನಲ್ ಫೋನ್ ಕರೆ ಇಲ್ಲ, ಕ್ರೆಡಿಟ್ ಕಾರ್ಡ್ ಬಳಕೆ ಇಲ್ಲ, ಫೇಸ್ಬುಕ್ ಇಲ್ಲ, ಯೂಟ್ಯೂಬ್, ಇಮೇಲ್ ಏನೂ ಇಲ್ಲ. ಇಂಟರ್ನೆಟನ್ನೇ ನಂಬಿಕೊಂಡ ವ್ಯಾಪಾರಸ್ಥರು ಮತ್ತು ಉದ್ಯಮಿಗಳಂತೂ ಹೈರಾನಾಗಿ ಹೋದರು. ಮೊಬೈಲ್​ನಲ್ಲಿ ಇಂಟರ್ನೆಟ್ ಇಲ್ಲದೇ ಜನಸಾಮಾನ್ಯರು ಕೂಡ ಒದ್ದಾಡಿದರು.

ಈ ದೇಶದಲ್ಲಿ ಹೈಸ್ಪೀಡ್ ಇಂಟರ್ನೆಟ್ ಬಂದದ್ದೇ ಐದಾರು ವರ್ಷಗಳ ಈಚೆಗೆ. ದಶಕದ ಹಿಂದೆ ಇದ್ದ ಡಯಲ್ ಅಪ್ ಇಂಟರ್ನೆಟ್ ವ್ಯವಸ್ಥೆ ಈ ಪುಟ್ಟ ರಾಷ್ಟ್ರಕ್ಕೆ ಆಪದ್ಬಾಂಧವದಂತೆ ಕಾಣಿಸಿತು. ನೀರಿನಲ್ಲಿ ಮುಳುಗುವವನಿಗೆ ಹುಲ್ಲುಕಡ್ಡಿಯೇ ಆಸರೆ ಎಂಬಂತೆ ಇಂಟರ್ನೆಟ್ ಇಲ್ಲದವರ ಪಾಲಿಗೆ ಈ ಡಯಲ್ ಅಪ್ ಇಂಟರ್ನೆಟ್ ಒಂದು ರೀತಿ ರಿಲೀಫ್ ಕೊಟ್ಟಿತ್ತು. ಟೋಂಗಾ ಆಡಳಿತವು ಫೇಸ್ಬುಕ್, ಯೂಟ್ಯೂಬ್​ನಂಥ ಮನರಂಜನಾ ವೆಬ್ ತಾಣಗಳನ್ನ ಬ್ಲಾಕ್ ಮಾಡಿತು. ಇಮೇಲ್​ನಂತಹ ಅಗತ್ಯ ಸೇವೆಗಳನ್ನ ಮಾತ್ರ ತನ್ನ ಕಮ್ಯೂನಿಕೇಶನ್ಸ್ ಕಾರ್ಪೊರೇಷನ್​ನ ಸೆಂಟರ್​ಗಳಲ್ಲಿ ಒದಗಿಸಿತು. ಭಾರತದಲ್ಲಿ ನೋಟ್ ಬ್ಯಾನ್ ಆದಾಗ ಎಟಿಎಂ ಸೆಂಟರ್​ಗಳಲ್ಲಿ ಉದ್ದುದ್ದ ಕ್ಯೂ ಇದ್ದಂತೆ ಟೋಂಗಾದ ಇಂಟರ್ನೆಟ್ ಸೆಂಟರ್​ಗಳಲ್ಲಿ ಜನರು ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲಬೇಕಾದಂತಹ ಸ್ಥಿತಿ ಇತ್ತು.

ಅನೇಕ ವ್ಯಾಪಾರಸ್ಥರಿಗೆ ಇಮೇಲ್ ವ್ಯವಹಾರ ಅತ್ಯಗತ್ಯ. ತನ್ನ ಗ್ರಾಹಕರಿಗೆ ಕೂಡಲೇ ಸ್ಪಂದಿಸದಿದ್ದರೆ ವ್ಯವಹಾರ ನಿಂತೇ ಹೋಗುವ ಅಪಾಯವಿರುತ್ತದೆ. ಹೀಗಾಗಿ, ಉದ್ಯಮಿಗಳು ಹಾಗೂ ವ್ಯಾಪಾರಸ್ತರು ಇಂಟರ್ನೆಟ್ ಸೆಂಟರ್​ಗಳಲ್ಲಿ ಕ್ಯೂನಲ್ಲಿ ನಿಂತು ಸಮಯ ಕಳೆಯುವುದು ಅನಿವಾರ್ಯವಾಗಿ ಹೋಗಿತ್ತು.

ಇಂಟರ್ನೆಟ್ ಕಟ್ ಆಗಿದ್ದು ಯಾಕೆ?

2013ರಲ್ಲಿ ಟೋಂಗಾಗೆ ಫೈಬರ್ ಆಪ್ಟಿಕ್ ಕೇಬಲ್ ವ್ಯವಸ್ಥೆ ಬಂತು. ಟೋಂಗಾದಿಂದ ಫಿಜಿ ದ್ವೀಪದವರೆಗೂ 827 ಕಿಮೀ ಉದ್ದದ ಈ ಫೈಬರ್ ಆಪ್ಟಿಕ್ ಕೇಬಲ್ ವ್ಯವಸ್ಥೆಯು ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಹವಾಯಿ ಇತ್ಯಾದಿ ದೇಶಗಳ ಕೇಬಲ್​ಗೆ ಸಂಪರ್ಕಿತವಾಗಿದೆ. 30 ಮಿಲಿಯನ್ ಡಾಲರ್ ವೆಚ್ಚದ ಈ ಫೈಬರ್ ಆಪ್ಟಿಕ್ ಕೇಬಲ್ ಬಂದಾಗ ಇದನ್ನು ಹೊಸ ಸೈಬರ್ ಕ್ರಾಂತಿ ಎಂದು ಬಣ್ಣಿಸಲಾಯಿತು. ಈಗ ಸೈಬರ್ ಕ್ರಾಂತಿಯ ಬಲೂನು ಠುಸ್ ಆಗಿದೆ. ಈ ಕೇಬಲ್ ವ್ಯವಸ್ಥೆ ಬಹಳ ದುರ್ಬಲವಾಗಿರುವುದು ಇಂಟರ್ನೆಟ್ ಕನೆಕ್ಷನ್ ಕಟ್ ಆಗಿರುವುದೇ ಸಾಕ್ಷಿಯಾಗಿದೆ.

ಇಂಟರ್ನೆಟ್ ಕನೆಕ್ಷನ್ ಕಟ್ ಆಗಲು ವಿಚಿತ್ರ ಕಾರಣವಿದೆ. ಸಾಗರದೊಳಗಿದ್ದ ಆಪ್ಟಿಕ್ ಫೈಬರ್ ಕೇಬಲಿನ ಮೇಲೆ ದೊಡ್ಡ ಹಡಗೊಂದು ಸಾಗಿದೆ. ಹಡಗಿನ ಲಂಗರಿಗೆ ಸಿಕ್ಕಿಕೊಂಡ ಕೇಬಲ್ ಹಲವು ಕಡೆ ಕಿತ್ತೇ ಹೋಗಿದೆ. ಇದನ್ನು ಸರಿ ಮಾಡುವ ದೈತ್ಯ ಕೆಲಸ ಟೋಂಗೋಗೆ ತಲೆನೋವು ತಂದಿದೆ.
Loading...

ಟೋಂಗೋದಂತಹ ಪುಟ್ಟ ದೇಶಕ್ಕೆ ಇಡೀ ಕೇಬಲ್ ವ್ಯವಸ್ಥೆಯನ್ನು ಹೊಸದಾಗಿ ಮಾಡಬೇಕಾಗಿದೆ. ಈಗಾಗಲೇ 11 ದಿನ ಗತಿಸಿವೆ. ದುರಸ್ತಿಗೆ ಇನ್ನೆಷ್ಟು ದಿನವಾಗುತ್ತೋ ಗೊತ್ತಿಲ್ಲ. ಒಂದು ಹಡಗಿನಿಂದಾಗಿ ಕೇಬಲ್ ಕಿತ್ತುಹೋಗಬಹುದಾದರೆ ಅದರ ವ್ಯವಸ್ಥೆ ಎಷ್ಟು ದುರ್ಬಲವಾಗಿದೆ ಎಂದು ಜನರು ಪ್ರಶ್ನೆ ಮಾಡಲು ಆರಂಭಿಸಿದ್ದಾರೆ. ಅದೇನೇ ಇರಲಿ, ಇಂಟರ್ನೆಟ್ ಇಲ್ಲದೆ ಬದುಕು ಎಷ್ಟು ದುಸ್ತರವಾಗಬಹುದು ಎಂಬ ಕುತೂಹಲವನ್ನು ಈ ದೇಶ ತಣಿಸಿದೆ.
First published:February 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ