ತಮಿಳುನಾಡಿನ ಪೊಲೀಸ್ ಕಸ್ಟಡಿಯಲ್ಲಿ ದಾರುಣ ಸಾವುಂಡ ಜಯರಾಜ್ ಮತ್ತು ಬೆನಿಕ್ಸ್; ಪ್ರಕರಣದ ಒಂದು ಟೈಮ್​ಲೈನ್

ವಿಚಾರಣೆ ಹೆಸರಲ್ಲಿ ಪೊಲೀಸರು ಎಸಗಿದ ಘೋರ ಕೃತ್ಯಕ್ಕೆ ಇಡೀ ದೇಶವೇ ಶಾಕ್ ಆಗಿದೆ. ಅಧಿಕಾರದ ಮದ ಪೊಲೀಸರನ್ನ ರಕ್ಕಸರನ್ನಾಗಿಸುತ್ತಿದೆಯಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಜಯರಾಜ್ ಮತ್ತು ಬೆನ್ನಿಕ್ಸ್

ಜಯರಾಜ್ ಮತ್ತು ಬೆನ್ನಿಕ್ಸ್

 • Share this:
  ಚೆನ್ನೈ: ಅಮೆರಿಕದಲ್ಲಿ ಕಪ್ಪು ಜನಾಂಗಕ್ಕೆ ಸೇರಿದ ಜಾರ್ಜ್ ಫ್ಲಾಯ್ಡ್ ಅವರನ್ನ ಅಲ್ಲಿಯ ಪೊಲೀಸರು ಸಾಯಿಸಿದ ಘಟನೆ ಇಡೀ ಜಗತ್ತಿನಲ್ಲಿ ದೊಡ್ಡ ಆಂದೋಲನವನ್ನೇ ಹುಟ್ಟುಹಾಕಿದೆ. ಈಗ ಅಲ್ಲಿ ಪೊಲೀಸ್ ವ್ಯವಸ್ಥೆಯಲ್ಲೇ ಇನ್ನಷ್ಟು ಸುಧಾರಣೆ ತರುವ ಪ್ರಯತ್ನವಾಗುತ್ತಿದೆ. ಅಧಿಕಾರದ ಮದ ಹತ್ತಿದ ಪೊಲೀಸರ ದರ್ಪ ಅಮೆರಿಕವೊಂದೇ ಅಲ್ಲ ಅನೇಕ ದೇಶಗಳಲ್ಲೂ ಇದೆ. ಭಾರತದಲ್ಲೂ ಅಮಾನವೀಯ ಎನಿಸಿರುವ ಅನೇಕ ಲಾಕ್ ಅಪ್ ಡೆತ್ ಕೇಸ್​ಗಳಿವೆ. ಈಗ ಈ ಲಿಸ್ಟ್​ಗೆ ತಮಿಳುನಾಡಿನ ಡಬಲ್ ಡೆತ್ ಕೇಸ್​ಗಳು ಸೇರಿವೆ. ಜೂನ್ 23ರಂದು ತಮಿಳುನಾಡು ಪೊಲೀಸರ ಹಲ್ಲೆಯಿಂದ 58 ವರ್ಷದ ಜಯರಾಜ್ ಮತ್ತು 31 ವರ್ಷದ ಬೆನಿಕ್ಸ್ ಸಾವನ್ನಪ್ಪಿದ್ದಾರೆ. ಬಹಳಷ್ಟು ಜನರು, ಸಂಘ ಸಂಸ್ಥೆಗಳು ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಹೋರಾಟ ರೂಪಿಸುತ್ತಿವೆ. ಮದ್ರಾಸ್ ಹೈಕೋರ್ಟ್​ನ ಮಧುರೈ ಪೀಠ ಈ ಪ್ರಕರಣದ ವಿಚಾರಣೆಯನ್ನ ಗಮನಿಸುತ್ತಿದೆ.

  ಅಷ್ಟಕ್ಕೂ ಈ ಅಪ್ಪ ಮಗನ ಸಾವಿಗೆ ಕಾರಣವೇನು? ತೂತ್ತುಕುಡಿ ಜಿಲ್ಲೆಯ ಸಾತ್ತಾನ್​ಕುಳಂ ಪಟ್ಟ ಪೊಲೀಸ್ ಠಾಣೆಯಲ್ಲಿ ಜೂನ್ 23 ಮತ್ತು 23ರಂದು ಇವರಿಬ್ಬರ ಸಾವಾಗಿದೆ. ವಿಚಾರಣೆಗೆಂದು ಕರೆಸಿಕೊಂಡು ಪೊಲೀಸರು ಇವರಿಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಎಸಗಿದ್ಧಾರೆ. ಒಬ್ಬರ ಮೇಲೆ ಅಮಾನುಷ ರೀತಿಯಲ್ಲಿ ಲೈಂಗಿಕ ಹಲ್ಲೆಯನ್ನೂ ಮಾಡಿದ್ದಾರೆನ್ನಲಾಗಿದೆ. ಭಾರತದ ಪೊಲೀಸ್ ಇತಿಹಾಸದಲ್ಲೇ ಅತ್ಯಂತ ಅಮಾನುಷ ಘಟನೆಗಳಲ್ಲಿ ಇದೂ ಒಂದೆನಿಸಿದೆ.

  ಏನಿದು ಘಟನೆ?

  ಅಪ್ಪ ಮತ್ತು ಮಗ ಜೆಯರಾಜ್ ನಾಟಾರ್ ಮತ್ತು ಬೆನ್ನಿಕ್ಸ್ ಅವರು ಸಾತ್ತಾನ್​ಕುಳಂನಲ್ಲಿ ಮರದಂಗಡಿ ಮತ್ತು ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದರು. ವಿವಿಧ ಮೂಲಗಳಿಂದ ಮಾಧ್ಯಮಗಳಿಗೆ ಈವರೆಗೆ ಸಿಕ್ಕಿರುವ ಮಾಹಿತಿ ಪ್ರಕಾರ ಜೂನ್ 18ರಂದು ಅಂಗಡಿಯ ಮುಂದೆ ಕರ್ಫ್ಯೂ ವಿಚಾರವಾಗಿ ಪೊಲೀಸರು ಹಾಗೂ ಜಯರಾಜ್ ಮತ್ತಿತರರ ಮಧ್ಯೆ ವಾಗ್ವಾದ ನಡೆದಿತ್ತು. ಪೊಲೀಸರು ಆವತ್ತಿನ ಘಟನೆಯ ವಿವರ ನೀಡಿದ ಪ್ರಕಾರ, ಕರ್ಫ್ಯೂ ಇದ್ದರೂ ಹಲವರು ಅಂಗಡಿ ತೆರೆದಿದ್ದರು. ಬಾಗಿಲು ಹಾಕಿ ಹೋಗುವಂತೆ ತಾನು ಹೇಳಿದಾಗ ಜಯರಾಜ್ ಮತ್ತು ಬೆನಿಕ್ಸ್ ಬಿಟ್ಟು ಉಳಿದ ಅಂಗಡಿಯವರೆಲ್ಲರೂ ಹೊರಟುಹೋದರು. ಈ ಅಪ್ಪ ಮತ್ತು ಮಗ ಪೊಲೀಸರ ಮೇಲೆಯೇ ಕೊಲೆ ಬೆದರಿಕೆ ಹಾಕಿದರು ಎಂದು ಪೊಲೀಸರು ಹೇಳುತ್ತಾರೆ.

  ಇದನ್ನೂ ಓದಿ: ವಿಜಯಪುರ ಯುವಕನ ಸಾವು ಪ್ರಕರಣ: ಪೊಲೀಸರ ಹಲ್ಲೆಯಿಂದಲೇ ಸಾವನ್ನಪ್ಪಿದ ಸಾಗರ ಕಾಂಬಳೆ?

  ಜೂನ್ 19ರಂದು ಇದೇ ವಿಚಾರವಾಗಿ ಪೊಲೀಸರು 58 ವರ್ಷದ ಜಯರಾಜ್​ರನ್ನ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಾರೆ. ಅಂದು ಸಂಜೆ ಈ ವಿಚಾರ ತಿಳಿದ ಮಗ ಬೆನಿಕ್ಸ್ ಕೂಡ ಠಾಣೆಗೆ ಹೋಗುತ್ತಾರೆ. ಆಗ ಪೊಲೀಸರು ವಿಚಾರಣೆ ಹೆಸರಲ್ಲಿ ಇಬ್ಬರ ಮೇಲೂ ಅಮಾನುಷವಾಗಿ ಹಲ್ಲೆ ಎಸಗುತ್ತಾರೆ. ಬೆನಿಕ್ಸ್​ನ ಸ್ನೇಹಿತರು ಠಾಣೆಯಲ್ಲಿದ್ದರೂ ಅವರಿಗೆ ಒಳಗೆ ಬಂದು ನೋಡುವ ಅವಕಾಶವೇ ಸಿಗುವುದಿಲ್ಲ.

  ಮರುದಿನ ಜೂನ್ 20ರಂದು ಜಯರಾಜ್ ಮತ್ತು ಬೆನಿಕ್ಸ್ ಅವರಿಗೆ ಮೆಡಿಕಲ್ ಫಿಟ್ನೆಸ್ ಪರೀಕ್ಷೆ ಮಾಡಿಸಿ ಸಾತ್ತಾನ್​ಕುಳಂ ಮ್ಯಾಜಿಸ್ಟ್ರೇಟ್ ಬಳಿ ಹಾಜರುಪಡಿಸಲಾಯಿತು. ನ್ಯಾಯಾಧೀಶರು ಇಬ್ಬರನ್ನೂ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದರು. ಇಬ್ಬರ ಜಾಮೀನಿಗೆ ಅರ್ಜಿ ಹಾಕಿದ್ದ ವಕೀಲ ಮಣಿಮಾರನ್ ಅವರಿಗೆ ಈ ಆದೇಶ ವಿಚಿತ್ರವೆನಿಸುತ್ತದೆ. ಪೊಲೀಸರ ಹಲ್ಲೆಯಿಂದ ಇಬ್ಬರಿಗೂ ಗಂಭೀರ ಗಾಯವಾಗಿ ನಡೆಯುವುದೇ ಕಷ್ಟದ ಸ್ಥಿತಿಯಲ್ಲಿದ್ದಾಗ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ರಿಮ್ಯಾಂಡ್​ಗೆ ಆದೇಶಿಸಿದ್ದು ಅಚ್ಚರಿ ತಂದಿತು ಎಂದು ಮಣಿಮಾರನ್ ಹೇಳುತ್ತಾರೆ.

  ನಂತರ, ಸಾತ್ತಾನ್​ಕುಳಂ ಪಟ್ಟಣದಿಂದ 100 ಕಿಮೀ ದೂರದಲ್ಲಿರುವ ಕೋವಿಲ್​ಪಟ್ಟಿ ಉಪಕಾರಾಗೃಹಕ್ಕೆ ಇಬ್ಬರನ್ನೂ ಕರೆದೊಯ್ಯಲಾಗುತ್ತದೆ. ಜೂನ್ 22, ಸೋಮವಾರ ರಾತ್ರಿ ಬೆನ್ನಿಕ್ಸ್ ಅವರು ಕೋವಿಲ್​ಪಟ್ಟಿ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪುತ್ತಾರೆ. ಮರುದಿನ ಅಂದರೆ ಜೂನ್ 23ರಂದು ಮುಂಜಾವಿನಲ್ಲಿ ಜಯರಾಜ್ ಕೂಡ ಅದೇ ಆಸ್ಪತ್ರೆಯಲ್ಲಿ ನಿಧನರಾಗುತ್ತಾರೆ.

  ಜಯರಾಜ್ ಮತ್ತು ಬೆನಿಕ್ಸ್ ಸಾವು ಸಾತ್ತಾನ್​ಕುಳಂ ಪಟ್ಟಣವನ್ನ ಬಡಿದೆಬ್ಬಿಸುತ್ತದೆ. ಅಲ್ಲಿರುವ ಅಂಗಡಿ ಮಾಲಿಕರು ಮತ್ತು ಸಾರ್ವಜನಿಕರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುತ್ತಾರೆ. ಜೂನ್ 24ರಂದು ತಮಿಳುನಾಡಿನ ಹಲವೆಡೆ ವರ್ತಕರು ತಮ್ಮ ಅಂಗಡಿಗಳನ್ನ ಬಂದ್ ಮಾಡಿ ಪ್ರತಿಭಟಿಸುತ್ತಾರೆ.

  ಇದನ್ನೂ ಓದಿ: 16 ವರ್ಷದ ಬಾಲಕಿಗೆ 66 ವರ್ಷದವನಿಂದ ಲವ್ ಲೆಟರ್; ಪೊಲೀಸರ ಅತಿಥಿಯಾದ ಪೋಲಿ ತಾತ!

  ಮಾಧ್ಯಮಗಳಲ್ಲಿ ಘಟನೆಯ ವರದಿ ಬಂದ ಬೆನ್ನಲ್ಲೇ ಮದ್ರಾಸ್ ಹೈಕೋರ್ಟ್​ನ ಮದುರೈ ಪಿಠವು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತೂತ್ತುಕುಡಿ ಎಸ್​ಪಿ ಅರುಣ್ ಗೋಪಾಲನ್ ಅವರಿಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆದೇಶ ಹೊರಡಿಸುತ್ತದೆ.

  ಇದೇ ವೇಳೆ, ತೂತ್ತುಕುಡಿ ಪೊಲೀಸ್ ವಿಭಾಗವು ಸಾತ್ತಾನ್​ಕುಳಂ ಠಾಣೆಯ ಎಸ್​ಐಗಳಾದ ಬಾಲಕೃಷ್ಣನ್ ಮತ್ತು ಪಿ ರಘುಗಣೇಶ್ ಅವರನ್ನ ಅಮಾನತುಗೊಳಿಸಿತು. ಇನ್ಸ್​ಪೆಕ್ಟರ್ ಶ್ರೀಧರ್ ಅವರ ವರ್ಗಾವಣೆ ಮಾಡಿತು. ಠಾಣೆಯ ಕಾನ್ಸ್​ಟೆಬಲ್​ಗಳಾದ ಎಸ್. ಮುರುಗನ್ ಮತ್ತು ಮುತುರಾಜ್ ವಿರುದ್ಧವೂ ಶಿಸ್ತಿನ ಕ್ರಮ ಜರುಗಿಸಲಾಗಿದೆ ಎಂದು ಅರುಣ್ ಗೋಪಾಲನ್ ಕೋರ್ಟ್​ಗೆ ತಿಳಿಸುತ್ತಾರೆ.  ಹೈಕೋರ್ಟ್ ಸೂಚನೆಯಂತೆ ಜೂನ್ 25ರಂದು ಮೂವರು ವೈದ್ಯರ ತಂಡದಿಂದ ಜಯರಾಜ್ ಮತ್ತು ಬೆನಿಕ್ಸ್ ಅವರ ಪಾರ್ಥಿವ ಶರೀರದ ಪೋಸ್ಟ್ ಮಾರ್ಟಮ್ ಮಾಡಲಾಗುತ್ತದೆ. ಜೂನ್ 26ರಂದು ಎಸ್​ಪಿ ಅವರು ವಿಡಿಯೋ ಕಾನ್ಫೆರೆನ್ಸ್ ಮೂಲಕ ನಡೆದ ಕೋರ್ಟ್ ಕಲಾಪದಲ್ಲಿ ಮಧ್ಯಂತರ ವರದಿಯನ್ನ ಸಲ್ಲಿಸುತ್ತಾರೆ. ಆ ಬಳಿಕ, ಕೋವಿಲ್​ಪಟ್ಟಿ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರಿಂದ ತನಿಖೆಗೆ ಹೈಕೋರ್ಟ್ ಸೂಚಿಸಿದೆ. ಜೂನ್ 30ರಂದು ಮುಂದಿನ ವಿಚಾರಣೆ ನಿಗದಿಯಾಗಿದೆ.
  First published: