ಮುಂಬೈ (ಆಗಸ್ಟ್ 16); ಅಮೇರಿಕ ತನ್ನ ಸೈನಿಕರನ್ನು ಹಿಂಪಡೆದುಕೊಂಡ ಬೆನ್ನಿಗೆ ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಕೈಮೀರಿದೆ. ತಾಲಿಬಾನ್ ಬಂಡುಕೋರರು ಭಾನುವಾರ ಕಾಬೂಲ್ ಪ್ರವೇಶಿಸಿ ಇಡೀ ದೇಶವನ್ನು ತಮ್ಮ ವಶಕ್ಕೆ ಪಡೆದುಕೊಂಡಿ ದ್ದಾರೆ. ಅಘ್ಘಾನ್ ಅಧ್ಯಕ್ಷ ಅಶ್ರಫ್ ಘಾನಿ ಕೂಡ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ತಜಕಿಸ್ಥಾನಕ್ಕೆ ಪಲಾಯನ ಮಾಡಿದ್ದಾರೆ. ದೇಶದ ಜನ ಜೀವ ಉಳಿಸಿಕೊಂಡರೆ ಸಾಕು ಎಂಬ ಭಯದಲ್ಲಿ ಅನ್ಯ ದೇಶಗಳಿಗೆ ಪಲಾಯನ ಮಾಡಲು ವಿಮಾನ ನಿಲ್ದಾಣಗಳ ಲ್ಲಿ ಜಮಾಯಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಒಳಗಾಗುತ್ತಿದೆ. ಇದರ ಬೆನ್ನಿಗೆ ಇಂದು ಮಹತ್ವದ ಹೇಳಿಕೆ ನೀಡಿರುವ ಮಾಜಿ ರಕ್ಷಣಾ ಸಚಿವ ಮತ್ತು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (NCP) ಅಧ್ಯಕ್ಷರೂ ಆಗಿರುವ ಶರದ್ ಪವಾರ್ , "ಎಲ್ಲಾ ನೆರೆಯ ರಾಷ್ಟ್ರಗಳಿಗೆ ಸಂಬಂಧಿಸಿದಂತೆ ಭಾರತದ ವಿದೇಶಾಂಗ ನೀತಿಯನ್ನು ಪರಿಶೀಲಿಸುವ ಅಗತ್ಯವಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
ತಾಲಿಬಾನಿಗಳ ಮೇಲುಗೈ ನಿಂದಾಗಿ ಅಫ್ಘಾನಿಸ್ತಾನದಲ್ಲಿ ರಾಜಕೀಯ ಅರಾಜಕತೆ ಸೃಷ್ಟಿಯಾಗಿದೆ. ಈ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಶರದ್ ಪವಾರ್, "ನಾವು ಜಾಗರೂಕರಾಗಿದ್ದು, ದೀರ್ಘಾವಧಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಪಾಕಿಸ್ತಾನ ಮತ್ತು ಚೀನಾ ಹೊರತುಪಡಿಸಿ, ಇತರ ನೆರೆಹೊರೆಯ ದೇಶಗಳೊಂದಿಗೆ ಭಾರತದ ಸಂಬಂಧ ಉತ್ತಮವಾಗಿದ್ದ ಸಮಯವೊಂದಿತ್ತು. ಆದರೆ, ಈಗ ಪರಿಸ್ಥಿತಿ ಹಿಂದಿನಂತಿಲ್ಲ.
ಹೀಗಾಗಿ ಭಾರತ ಇತರ ದೇಶಗಳಿಗೆ ಸಂಬಂಧಿಸಿದ ವಿದೇಶಾಂಗ ನೀತಿಯನ್ನು ಪರಿಶೀಲಿಸಲು ಇದು ಸಕಾಲವಾಗಿದೆ. ಪರಿಸ್ಥಿತಿ ಉತ್ತಮವಾಗಿಲ್ಲ. ಆದರೆ ಇದು ಸೂಕ್ಷ್ಮ ಮತ್ತು ರಾಷ್ಟ್ರೀಯ ಭದ್ರತೆಯ ವಿಷಯವಾಗಿರುವುದರಿಂದ ನಾವು ಸರ್ಕಾರದೊಂದಿಗೆ ಸಹಕರಿಸುತ್ತೇವೆ" ಎಂದು ಮಾಜಿ ರಕ್ಷಣಾ ಸಚಿವ ಶರದ್ ಪವಾರ್ ಹೇಳಿದ್ದಾರೆ.
ಅಫ್ಘಾನ್ ಸರ್ಕಾರ ಪತನಗೊಂಡು ಅಲ್ಲಿನ ಅಧ್ಯಕ್ಷ ಅಶ್ರಫ್ ಗನಿ ದೇಶವನ್ನು ತೊರೆದ ನಂತರ ಭಾನುವಾರ ತಾಲಿಬಾನ್ ಬಂಡುಕೋರರು ಅಫ್ಘಾನಿಸ್ತಾನದ ರಾಜಧಾನಿಗೆ ನುಗ್ಗಿದ್ದಾರೆ. ಅಫ್ಘಾನ್ ರಾಜಧಾನಿ ಕಾಬೂಲ್‌ನಲ್ಲಿ ಜನರು ಭಯಭೀತರಾಗಿ ದೇಶದಿಂದ ತಪ್ಪಿಸಿಕೊಳ್ಳಲು ವಿಮಾನ ನಿಲ್ದಾಣದಲ್ಲಿ ನೆರೆದಿದ್ದು, ಜನಜಂಗುಳಿಯಲ್ಲಿ ಹಲವು ಜನರು ಮೃತಪಟ್ಟಿರುವ ಸುದ್ದಿಗಳನ್ನು ಮಾಧ್ಯಮಗಳು ಬಿತ್ತರಿಸಿವೆ.
ಇದನ್ನೂ ಓದಿ: Corona Death| ಆಮ್ಲಜನಕ ಕೊರತೆಯಿಂದಾದ ಸಾವುಗಳ ಬಗ್ಗೆ ತನಿಖೆಗೆ ದೆಹಲಿ ಸರ್ಕಾರ ಆಗ್ರಹ
ನಡುವೆ ಕೇಂದ್ರ ಸರ್ಕಾರದ ಎದುರು ಮನವಿ ಮಾಡಿರುವ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್, "ಅಘ್ಘಾನಿಸ್ತಾನದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಇಡೀ ಅಘ್ಘನ್ ದೇಶವನ್ನು ತಾಲಿಬಾನಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಹೀಗಾಗಿ ಅಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸಬೇಕಾದದ್ದು ನಮ್ಮ ಕರ್ತವ್ಯ.
ತಾಲಿಬಾನ್ ಸ್ವಾಧೀನದ ನಂತರ ಅಫ್ಘಾನಿಸ್ತಾನದ ಗುರುದ್ವಾರದಲ್ಲಿ ಸಿಲುಕಿರುವ ಸುಮಾರು 200 ಸಿಖ್ಖರು ಸೇರಿದಂತೆ ಎಲ್ಲಾ ಭಾರತೀಯರನ್ನು ತಕ್ಷಣವೇ ಸ್ಥಳಾಂತರಿಸಲು ವ್ಯವಸ್ಥೆ ಮಾಡುವಂತೆ ನಾನು ಸಚಿವ ಡಾ.ಎಸ್.ಜೈಶಂಕರ್ ಅವರನ್ನು ಒತ್ತಾಯಿಸುತ್ತೇನೆ. ಅವರ ಸುರಕ್ಷಿತ ಸ್ಥಳಾಂತರಕ್ಕೆ ಅಗತ್ಯವಿರುವ ಯಾವುದೇ ಸಹಾಯವನ್ನು ನೀಡಲು ನನ್ನ ಸರ್ಕಾರ ಸಿದ್ಧವಿದೆ" ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ