ರಾಷ್ಟ್ರಧ್ವಜ ವಿಚಾರದಲ್ಲಿ ಮುಫ್ತಿ ಹೇಳಿಕೆಯಿಂದ ನೋವು; ಮೂವರು ಪಿಡಿಪಿ ಮುಖಂಡರ ರಾಜೀನಾಮೆ

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರಳಿಸುವವರೆಗೂ ರಾಷ್ಟ್ರ ಧ್ವಜ ಹಿಡಿಯುವುದಿಲ್ಲ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ನೀಡಿದ ಹೇಳಿಕೆಗೆ ಅಸಮಾಧಾನಗೊಂಡು ಆ ಪಕ್ಷದ ಮೂವರು ರಾಜೀನಾಮೆ ನೀಡಿದ್ದಾರೆ.

ಮೆಹಬೂಬ ಮುಫ್ತಿ

ಮೆಹಬೂಬ ಮುಫ್ತಿ

 • News18
 • Last Updated :
 • Share this:
  ನವದೆಹಲಿ(ಅ. 26): ಜಮ್ಮು-ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಮರಳಿಸುವವರೆಗೂ ರಾಷ್ಟ್ರ ಧ್ವಜ ಹಿಡಿಯುವುದಿಲ್ಲ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ಮೂವರು ಪಿಡಿಪಿ ಮುಖಂಡರು ರಾಜೀನಾಮೆ ನೀಡಿದ್ದಾರೆ. ಜಮ್ಮು ವಲಯದ  ಹಿರಿಯ ಪಿಡಿಪಿ ನಾಯಕರಾದ ಟಿ ಎಸ್ ಬಾಜವಾ, ಹಸನ್ ಅಲಿ ವಾಫಾ ಮತ್ತು ಬೇದ್ ಮಹಾಜನ್ ಅವರು ರಾಜೀನಾಮೆ ನೀಡಿದವರು. ಪಿಡಿಪಿ ಮೂಲಗಳ ಪ್ರಕಾರ, ಮುಫ್ತಿ ಅವರು ರಾಷ್ಟ್ರ ಧ್ವಜ ವಿಚಾರವಾಗಿ ನೀಡಿದ ಹೇಳಿಕೆಯಿಂದ ಬೇಸರಗೊಂಡು ರಾಜೀನಾಮೆ ನೀಡಿರುವುದು ತಿಳಿದುಬಂದಿದೆ.

  ಸಂವಿಧಾನದಲ್ಲಿ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಕಲ್ಪಿಸಿದ್ದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ಕಳೆದ ವರ್ಷ ಹಿಂಪಡೆದಿತ್ತು. ಕಾಶ್ಮೀರದ ವಿಶೇಷ ಸ್ಥಾನಮಾನ ಮರಳುವಂತೆ ಹೋರಾಟ ಮಾಡಲು ಗುಪ್ಕಾರ್ ಘೋಷಣೆಯ ಜನತಾ ಮೈತ್ರಿಕೂಟ ರಚಿಸಲಾಗಿದೆ. ನ್ಯಾಷನಲ್ ಕಾನ್ಫೆರೆನ್ಸ್, ಪಿಡಿಪಿ ಮೊದಲಾದ ಪ್ರಾದೇಶಿಕ ಪಕ್ಷಗಳು ಒಗ್ಗೂಡಿ ರಚಿಸಲಾಗಿರುವ ಈ ಮೈತ್ರಿಕೂಟಕ್ಕೆ ಮೆಹಬೂಬ ಮುಫ್ತಿ ಉಪಾಧ್ಯಕ್ಷೆಯಾಗಿದ್ಧಾರೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರಳಿ ಸಂಸ್ಥಾಪಿತ ಆಗುವವರೆಗೂ ಹಾಗೂ ಕಾಶ್ಮೀರದ ಹಳೆಯ ಧ್ವಜಕ್ಕೆ ಮಾನ್ಯತೆ ಸಿಗುವವರೆಗೂ ತಾನು ರಾಷ್ಟ್ರಧ್ವಜ ಮುಟ್ಟುವುದಿಲ್ಲ, ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಕಾಶ್ಮೀರ ಮುಖ್ಯಮಂತ್ರಿಯೂ ಆದ ಅವರು ಹೇಳಿದ್ದರು. ಅವರ ಈ ಹೇಳಿಕೆ ಬಗ್ಗೆ ಕೆಲ ಪಿಡಿಪಿ ಮುಖಂಡರು ಅಸಮಾಧಾನಗೊಂಡಿದ್ದಾರೆ. ತಮ್ಮ ದೇಶಪ್ರೇಮ ಭಾವನೆಗಳಿಗೆ ಇದರಿಂದ ಧಕ್ಕೆಯಾಗುತ್ತಿದೆ ಎಂದು ಈ ಮೂವರು ನಾಯಕರು ಅಭಿಪ್ರಾಯಪಟ್ಟಿರುವುದು ತಿಳಿದುಬಂದಿದೆ.

  ಇದನ್ನೂ ಓದಿ: ದೀಪಾವಳಿಗೆ ಮುನ್ನ ಕೇಂದ್ರ ಸರ್ಕಾರದಿಂದ ಮತ್ತೊಂದು ಸುತ್ತಿನ ಉತ್ತೇಜಕ ಪ್ಯಾಕೇಜ್ ಘೋಷಣೆ ಸಾಧ್ಯತೆ

  ಪಿಡಿಪಿ ಮುಖ್ಯಸ್ಥೆ ತಮ್ಮ ಕಚೇರಿಯಲ್ಲಿ ಕಾಶ್ಮೀರದ ಪ್ರತ್ಯೇಕ ಧ್ವಜ ಹಾಗೂ ಪಿಡಿಪಿ ಪಕ್ಷದ ಧ್ವಜವನ್ನು ಮಾತ್ರ ಹಾರಿಸಿದ್ಧಾರೆ. ರಾಷ್ಟ್ರ ಧ್ವಜವನ್ನು ಹಾರಿಸಿಲ್ಲ. ಜಮ್ಮು ಮತ್ತು ಕಾಶ್ಮೀರವನ್ನು ನಮಗೆ ಮರಳಿಸುವವರೆಗೂ ತ್ರಿವರ್ಣ ಧ್ವಜ ಹಿಡಿಯುವುದಿಲ್ಲ ಎಂದು ಅವರು ಹೇಳಿದ್ದಾರೆ.

  ಆರ್ಟಿಕಲ್ 370 ಅನ್ನ ತೆಗೆದುಹಾಕಿದ್ದು ಸಂವಿಧಾನಕ್ಕೆ ಮಾಡಿದ ವಂಚನೆ. ನಾವು ಹೋರಾಟ ಮಾಡುತ್ತೇವೆ. ಕಾಶ್ಮೀರಿ ಜನರು ಸಾಕಷ್ಟು ರಕ್ತಪಾತ ನೋಡಿದ್ದಾರೆ. ಈಗ ನೇತಾರರು ಈ ಹೋರಾಟಕ್ಕೆ ಧುಮುಕಿ ಪ್ರಾಣ ತ್ಯಾಗ ಮಾಡುವ ಸಮಯ ಬಂದಿದೆ ಎಂದು ಅವರು ತಿಳಿಸಿದ್ಧಾರೆ.

  ಇದೇ ವೇಳೆ, ಮೆಹಬೂಬ ಮುಫ್ತಿ ರಾಷ್ಟ್ರಧ್ವಜದ ಬಗ್ಗೆ ನೀಡಿದ ಹೇಳಿಕೆ ದೇಶದ್ರೋಹಿತನವಾಗಿದ್ದು ಅದನ್ನು ಸಹಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕರು ಗುಡುಗಿದ್ದಾರೆ.
  Published by:Vijayasarthy SN
  First published: