ಬೆಂಗಳೂರು(ಮಾ. 16): ಇಂದು ನಡೆಯಬೇಕಿದ್ದ ಆರೆಸ್ಸೆಸ್ ಅಖಿಲ ಭಾರತ ಪ್ರತಿನಿಧಿ ಸಭೆಯನ್ನು ಕೊರೋನಾ ವೈರಸ್ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ. ಅದರ ಬದಲು ಮಾಗಡಿ ರಸ್ತೆಯ ಚೆನ್ನೇನಹಳ್ಳಿಯಲ್ಲಿರುವ ಜನಸೇವಾ ವಿದ್ಯಾ ಕೇಂದ್ರದಲ್ಲಿ ಇಂದು ಕಾರ್ಯಕಾರಿ ಮಂಡಳಿ ಸಭೆ ನಡೆಸಲಾಯಿತು. ರಾಷ್ಟ್ರ ಸಂಘಟನೆಯ ಗುರಿ ಹೊಂದಿದೆ ಎನ್ನಲಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇಂದು ಕೆಲ ಬೆಳವಣಿಗೆಗಳನ್ನು ಸ್ವಾಗತಿಸಿ ಮೂರು ನಿರ್ಣಯಗಳನ್ನು ತೆಗೆದುಕೊಂಡಿತು. ಹಾಗೆಯೇ, ಕೆಲ ಸಾಮಾಜಿಕ ಮತ್ತು ಪರಿಸರ ಸಮಸ್ಯೆಗಳ ಬಗ್ಗೆಯೂ ತನ್ನ ಗಮನ ಹರಿಸಿತು.
ಸಂವಿಧಾನದಲ್ಲಿ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿ ರದ್ದು ಮಾಡಿ ಕಾಶ್ಮೀರವನ್ನು ಇಬ್ಭಾಗ ಮಾಡಿದ ಕೇಂದ್ರದ ಕ್ರಮವನ್ನು ಆರೆಸ್ಸೆಸ್ ಸ್ವಾಗತಿಸಿದೆ. ಹಾಗೆಯೇ, ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಧಾರ್ಮಿಕ ದೌರ್ಜನ್ಯಕ್ಕೊಳಗಾಗಿ ಭಾರತಕ್ಕೆ ವಲಸೆ ಬಂದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವ ಕಲ್ಪಿಸುವ ಸಿಎಎ ಕಾಯ್ದೆ ಜಾರಿಗೆ ತಂದ ಕ್ರಮವನ್ನೂ ಆರೆಸ್ಸೆಸ್ ಶ್ಲಾಘಿಸಿದೆ. ಅಯೋಧ್ಯೆಯ ರಾಮನ ಜನ್ಮಸ್ಥಳದಲ್ಲಿ ರಾಮ ಮಂದಿರ ನಿರ್ಮಿಸಲು ಅವಕಾಶ ಮಾಡಿಕೊಟ್ಟ ಸುಪ್ರೀಂ ಕೋರ್ಟ್ಗೂ ಅಭಿನಂದನೆ ಸಲ್ಲಿಸಿದೆ.
ಇದನ್ನೂ ಓದಿ: ಕೊರೋನಾ ಭೀತಿ; ಬಿಬಿಎಂಪಿ ವ್ಯಾಪ್ತಿಯ ಎಸಿ ಸೂಪರ್ ಮಾರ್ಕೆಟ್ಗಳು ಇಂದಿನಿಂದಲೇ ಬಂದ್
ಮೂರು ನಿರ್ಣಯಗಳು:
* ಜಮ್ಮು-ಕಾಶ್ಮೀರಕ್ಕೆ ಭಾರತದ ಸಂವಿಧಾನವನ್ನು ವಿಸ್ತರಿಸಿದ್ದು ಮತ್ತು ಅದರ ಪುನಾರಚನೆ ಮಾಡಿದ್ದು ಒಂದು ಶ್ಲಾಘನೀಯ ಹೆಜ್ಜೆ. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಕೆ.
* ರಾಮನ ಜನ್ಮಸ್ಥಳದಲ್ಲಿ ರಾಮ ಮಂದಿರ ನಿರ್ಮಾಣವಾಗುವುದು ರಾಷ್ಟ್ರೀಯ ಅಭಿಮಾನದ ಸಂಕೇತ. ಈ ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂಕೋರ್ಟ್ಗೆ ಅಭಿನಂದನೆ ಸಲ್ಲಿಕೆ.
* ಭಾರತ ಪೌರತ್ವ ತಿದ್ದುಪಡಿ ಕಾಯ್ದೆ 2019 ಭಾರತದ ನೈತಿಕ ಮತ್ತು ಸಂವಿಧಾನಿಕ ಬಾಧ್ಯತೆಯಾಗಿದೆ. ಈ ಸಿಎಎ ಜಾರಿಗೆ ತಂದ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಕೆ.
ಜನಸೇವಾ ವಿದ್ಯಾ ಕೇಂದ್ರದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಆರೆಸ್ಸೆಸ್ ಸರ ಕಾರ್ಯವಾಹ ಸುರೇಶ್ ಭೈಯಾಜಿ ಜೋಷಿ ಈ ವಿಚಾರಗಳನ್ನ ತಿಳಿಸಿದರು. ಆರೆಸ್ಸೆಸ್ನ ಪ್ರಚಾರ ಮುಖ್ಯಸ್ಥರಾದ ಅರುಣ್ ಕುಮಾರ್ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇತಿಹಾಸದಲ್ಲಿ ಮೊದಲ ಬಾರಿ ಸಭೆ ರದ್ದು: ಆರೆಸ್ಸೆಸ್ನ ಅಖಿಲ ಭಾರತ ಪ್ರತಿನಿಧಿ ಸಭೆಯನ್ನು ಈ ಹಿಂದೆ ಯಾವ ಸಂದರ್ಭದಲ್ಲೂ ರದ್ದು ಮಾಡಿರಲಿಲ್ಲ. ಕೊರೋನಾ ವೈರಸ್ ಸೋಂಕು ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಸಭೆ ರದ್ದು ಮಾಡಲು ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಭಯ್ಯಾಜಿ ಜೋಷಿ ಮಾಹಿತಿ ನೀಡಿದರು.
ಇದನ್ನೂ ಓದಿ: ಕೊರೋನಾ ಭೀತಿ; ದ್ವೀಪಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ವಿಶ್ವಸಂಸ್ಥೆ ನಿಷೇಧ
ಗ್ರಾಮೀಣಾಭಿವೃದ್ಧಿಗೆ ಕೈಂಕರ್ಯ:
ಗ್ರಾಮೀಣಾಭಿವೃದ್ಧಿಗೆ ಕೆಲ ಕಾರ್ಯಕ್ರಮಗಳನ್ನ ಹಾಕಿಕೊಂಡಿದ್ದೇವೆ. 5 ಆಯಾಮಗಳಲ್ಲಿ ಗ್ರಾಮೀಣಾಭಿವೃದ್ಧಿ ಸಾಧಿಸಲು 1 ಸಾವಿರ ಗ್ರಾಮಗಳನ್ನ ಗುರುತಿಸಲಾಗಿದೆ ಎಂದು ಸುರೇಶ್ ಭಯ್ಯಾಜಿ ಜೋಷಿ ತಿಳಿಸಿದರು. ಹಾಗೆಯೇ, ಕೌಟುಂಬಿಕ, ಪರಿಸರೀಯ ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ಆರೆಸ್ಸೆಸ್ ಚಿಂತನಶೀಲವಾಗಿರುವುದನ್ನು ಹಾಗೂ ತರಬೇತಿ ಕೇಂದ್ರಗಳಲ್ಲಿ ಈ ಮೂರು ವಿಚಾರಗಳ ಬಗ್ಗೆ ತರಬೇತಿ ನೀಡಲಾಗುತ್ತಿರುವುದನ್ನು ಅವರು ವಿವರಿಸಿದರು.
ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗುತ್ತಿದೆ. ಕುಟುಂಬ ವ್ಯವಸ್ಥೆ ಕುಗ್ಗುತ್ತಿದೆ. ಪರಿಸರ ಸಂರಕ್ಷಣೆ, ನೀರಿನ ಸಂರಕ್ಷಣೆ, ಪ್ಲಾಸ್ಟಿಕ್ ತ್ಯಜಿಸುವಿಕೆ ಬಗ್ಗೆ ತರಬೇತಿ ಕೊಡಲಾಗುತ್ತಿದೆ. ಜೊತೆಗೆ, ಜಾತಿ ವ್ಯವಸ್ಥೆಯ ಸಮಸ್ಯೆ ಹೆಚ್ಚಾಗುತ್ತಿದ್ದು, ಇದನ್ನು ಹೋಗಲಾಡಿಸುವ ಬಗ್ಗೆ ತರಬೇತಿ ನೀಡಲಾಗುತ್ತಿದೆ ಎಂದು ಭಯ್ಯಾಜಿ ಜೋಷಿ ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ