ದೆಹಲಿ ವಿಧಾನಸಭಾ ಚುನಾವಣೆಗೆ ಇವತ್ತು ಕಾಂಗ್ರೆಸ್ ಅಭ್ಯರ್ಥಿಗಳ ಪ್ರಕಟಣೆ ಮಾಡಿದೆ. ನಿನ್ನೆ ಪಟ್ಟಿ ಪ್ರಕಟಿಸಿದ್ದ ಬಿಜೆಪಿಯಲ್ಲಿ ಬಂಡಾಯ ವ್ಯಕ್ತವಾಗುತ್ತಿದೆ. ಆಮ್ ಆದ್ಮಿ ಪಕ್ಷ ನಾಮಪತ್ರ ಸಲ್ಲಿಕೆಗೆ ತಯಾರಾಗುತ್ತಿದೆ. ದಿಲ್ಲಿ ಚುನಾವಣೆಯ ಇಂದಿನ ಬೆಳವಣಿಗೆಗಳು ಹೀಗಿವೆ.
70 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ದೆಹಲಿ ವಿಧಾನಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಾಂಗ್ರೆಸ್ ಪಡುತ್ತಿರುವ ಪಡಿಪಾಟಿಲು ಅಷ್ಟಿಷ್ಟಲ್ಲ. ಬರೋಬ್ಬರಿ ಮೂರು ದಿನದಿಂದ ಎಐಸಿಸಿಯಲ್ಲಿ ಸಭೆ ಮೇಲೆ ಸಭೆ ನಡೆಸಿ ಕಡೆಗೂ ಇವತ್ತು ಪಟ್ಟಿ ಬಿಡುಗಡೆ ಮಾಡಿದೆ.
ಕಳೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ್ದು ಶೂನ್ಯ ಸಾಧನೆ. ಹಾಗಾಗಿ ಈ ಬಾರಿ ಹೇಗಾದರೂ ಮಾಡಿ ಅಸ್ತಿತ್ವ ಉಳಿಸಿಕೊಳ್ಳಬೇಕೆಂದು ಪ್ರಯತ್ನಿಸುತ್ತಿದೆ. ಗೆಲ್ಲುವ ಕುದುರೆಗಳಿಗಾಗಿ ಹುಡುಕಾಟ ನಡೆಸಿದೆ. ಬಿಜೆಪಿ, ಆಪ್ ನಾಯಕರಿಗೂ ಗಾಳ ಹಾಕುತ್ತಿದೆ. ಶೀಲಾ ದೀಕ್ಷಿತ್ ಪುತ್ರ ಸಂದೀಪ್ ದೀಕ್ಷಿತ್, ಖ್ಯಾತ ವಕೀಲ ಕಪಿಲ್ ಸಿಬಾಲ್, ಆಮ್ ಆದ್ಮಿ ಪಕ್ಷದಿಂದ ಬಂದ ಹಾಲಿ ಶಾಸಕಿ ಅಲಕಾ ಲಂಬಾ ಅವರ ಮೇಲೆ ಅಪಾರವಾದ ನಿರೀಕ್ಷೆ ಇಟ್ಟುಕೊಂಡಿದೆ.
ಇನ್ನು ಬಿಜೆಪಿಯಲ್ಲಿ ನಿನ್ನೆ ಮತ್ತು ಇವತ್ತು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಿದ್ದು, ಈಗ ಬಂಡಾಯದ ಬಿಸಿ ಕಾಣಿಸಿಕೊಂಡಿದೆ. ಆಕಾಂಕ್ಷಿಯಾಗಿದ್ದ ಕರಣ್ ಸಿಂಗ್ ಬೆಂಬಲಿಗರು ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಮನೆ ಮುಂದೆ ಇವತ್ತು ಪ್ರತಿಭಟನೆ ನಡೆಸಿದ್ದಾರೆ.
ಕಾಂಗ್ರೆಸ್-ಬಿಜೆಪಿ ಪಕ್ಷಗಳು ಇನ್ನೂ ಅಭ್ಯರ್ಥಿಗಳ ಹುಡುಕಾಟ, ತಿಣುಕಾಟ ನಡೆಸುತ್ತಿದ್ದರೆ ಆಮ್ ಆದ್ಮಿ ಪಕ್ಷ ಈಗಾಗಲೇ ನಾಮಪತ್ರ ಸಲ್ಲಿಕೆಗೆ ತಯಾರಾಗಿದೆ. ಇದೇ 20ರಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ.
ಈ ಬೆಳವಣಿಗೆಗಳ ನಡುವೆ 2012ರಲ್ಲಿ ದೆಹಲಿಯಲ್ಲಿ ನಡೆದಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣ ಮುಂದಿಟ್ಟುಕೊಂಡು ರಾಜಕೀಯ ಮಾಡುವ ಕೆಲಸ ಮತ್ತೂ ಮಂದುವರೆದಿದೆ. ಅಪರಾಧಿಗಳನ್ನು ಗಲ್ಲಿಗೇರಿಸುವುದು ತಡವಾಗುತ್ತಿರುವುದಕ್ಕೆ ಆಪ್ ಕಾರಣ ಅಂತಾ ಬಿಜೆಪಿ ಆರೋಪ ಮಾಡುತ್ತಿದೆ. ಈ ನಡುವೆ ಇವತ್ತು ಅರವಿಂದ್ ಕೇಜ್ರಿವಾಲ್ ವಕೀಲರಾದ ಇಂದಿರಾ ಜೈಸಿಂಗ್ ಮಾಡಿರುವ ಟ್ವೀಟ್ ಹೊಸ ವಿವಾದ ಸೃಷ್ಟಿಸಿದೆ. ಮರಣದಂಡನೆಗೆ ಗುರಿಯಾಗುತ್ತಿರುವವರನ್ನು ಕ್ಷಮಿಸುವಂತೆ ಇಂದಿರಾ ಜೈಸಿಂಗ್ ಟ್ವೀಟ್ ಮಾಡಿದ್ದಾರೆ.
ಇದನ್ನು ಓದಿ: ಇತರೆ ರಾಜಕೀಯ ಪಕ್ಷಗಳಿಗಿಂತ ಭಿನ್ನ ಪ್ರಣಾಳಿಕೆ - ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡಿದ ಎಎಪಿ
ಅರವಿಂದ ಕೇಜ್ರಿವಾಲ್ ಮೇಲೆ ಮುಗಿಬಿದ್ದಿರುವ ಬಿಜೆಪಿ, ಈಗ ನಿರ್ಭಯಾ ಪ್ರಕರಣದಲ್ಲಿ ಕೇಜ್ರಿವಾಲ್ ತಮ್ಮ ವಕೀಲರಾದ ಇಂದಿರಾ ಜೈಸಿಂಗ್ ಅವರನ್ನು ಇನ್ನೂ ಒಂದು ಹೆಜ್ಜೆ ಮುಂದಿಡುವಂತೆ ಮಾಡಿದ್ದಾರೆ ಎಂದು ಆರೋಪಿಸಿದೆ. ಈ ಬಗ್ಗೆ ಆಮ್ ಆದ್ಮಿ ಬಿಟ್ಟು ಈಗ ಬಿಜೆಪಿ ಸೇರಿರುವ ಕಪಿಲ್ ಮಿಶ್ರಾ ಕಿಡಿಕಾರಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ