ವಿಶ್ವನಾಥ್ ಸಜ್ಜನರ್​; 11 ವರ್ಷದಲ್ಲಿ 3 ಎನ್​ಕೌಂಟರ್​, ಒಂದೇ ರೀತಿಯಲ್ಲಿ ಹತ್ಯೆ ಮತ್ತು ವಿವರಣೆ; ಅನುಮಾನಕ್ಕೆ ಕಾರಣವಾದ ನಡೆ

Vishwanath Sajjanar: ಹಿರಿಯ ಪೊಲೀಸ್​ ಅಧಿಕಾರಿ ವಿಶ್ವನಾಥ್ ಸಜ್ಜನರ್​ ಕಳೆದ 11 ವರ್ಷದ ಅವಧಿಯಲ್ಲಿ ನಡೆಸಿದ ಆ ಮೂರು ಎನ್​ಕೌಂಟರ್ ಯಾವುದು? ಎನ್​ಕೌಂಟರ್​ ನಂತರ ಅವರು ನೀಡಿದ ವಿವರಣೆ ಏನು? ಈ ಎನ್​ಕೌಂಟರ್​ಗಳು ಅಸಲಿಯೋ..ನಕಲಿಯೋ? ಕೊನೆಗೆ ಈ ಪ್ರಕರಣಗಳು ಏನಾಯ್ತು? ಇಲ್ಲಿದೆ ಮಾಹಿತಿ.

MAshok Kumar | news18-kannada
Updated:December 7, 2019, 2:35 PM IST
ವಿಶ್ವನಾಥ್ ಸಜ್ಜನರ್​; 11 ವರ್ಷದಲ್ಲಿ 3 ಎನ್​ಕೌಂಟರ್​, ಒಂದೇ ರೀತಿಯಲ್ಲಿ ಹತ್ಯೆ ಮತ್ತು ವಿವರಣೆ; ಅನುಮಾನಕ್ಕೆ ಕಾರಣವಾದ ನಡೆ
ಪ್ರಾತಿನಿಧಿಕ ಚಿತ್ರ.
  • Share this:
ಕಳೆದ ಎರಡು ದಿನಗಳಿಂದ ಇಡೀ ದೇಶದಲ್ಲಿ ಸಾಕಷ್ಟು ಚಾಲ್ತಿಯಲ್ಲಿರುವ ಹೆಸರು ವಿಶ್ವನಾಥ್ ಸಜ್ಜನರ್. ಇದಕ್ಕೆ ಏಕೈಕ ಕಾರಣ ತೆಲಂಗಾಣ ಪಶುವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಆರೋಪಿಗಳ ಎನ್​ಕೌಂಟರ್​.

ನವೆಂಬರ್​ 27ರಂದು ನಾಲ್ಕು ಜನ ಲಾರಿ ಚಾಲಕರು ತೆಲಂಗಾಣ ಪಶುವೈದ್ಯೆಯ ಗಾಡಿಯನ್ನು ಉದ್ದೇಶಪೂರ್ವಕವಾಗಿ ಪಂಕ್ಚರ್​ ಮಾಡಿದ್ದರು. ಅಲ್ಲದೆ, ಆಕೆಯ ಮೇಲೆ ಅತ್ಯಾಚಾರ ಎಸಗಿ ಜೀವಂತವಾಗಿ ಸುಟ್ಟುಹಾಕಿದ್ದರು. ಈ ಪ್ರಕರಣ ದೇಶದಾದ್ಯಂತ ದೊಡ್ಡ ಮಟ್ಟದ ಸುದ್ದಿಯಾಗಿದ್ದು. ಅತ್ಯಾಚಾರ ಆರೋಪಿಗಳನ್ನು ಗುಂಡಿಟ್ಟು ಕೊಲ್ಲುವಂತೆ ಜನಾಕ್ರೋಶ ರೂಪುಗೊಂಡಿತ್ತು.

ಕಾಕತಾಳಿಯವೋ ಅಥವಾ ಉದ್ದೇಶಪೂರ್ವಕವಾಗಿ ನಡೆದ ಘಟನೆಯೋ ಗೊತ್ತಿಲ್ಲ ಆದರೆ, ಅತ್ಯಾಚಾರ ಘಟನೆ ಸಂಭವಿಸಿ ಕೇವಲ ಒಂದು ವಾರಕ್ಕೆ ಸೈಬರಾಬಾದ್​ ಪೊಲೀಸರು ಅತ್ಯಾಚಾರ ಆರೋಪಿಗಳನ್ನು ಹೊಡೆದುರುಳಿಸಿದ್ದಾರೆ. ಈ ಎನ್​ಕೌಂಟರ್​ ಜೊತೆಗೆ ದೊಡ್ಡ ಮಟ್ಟದ ಸದ್ದು ಮಾಡುತ್ತಿರುವ ಹೆಸರು ಹುಬ್ಬಳ್ಳಿ ಮೂಲದ ಕನ್ನಡಿಗ 1996ರ ಬ್ಯಾಚ್ ಐಪಿಎಸ್ ಅಧಿಕಾರಿ ವಿಶ್ವನಾಥ್ ಸಜ್ಜನರ್​.

ಪಶುವೈದ್ಯೆಯ ಅತ್ಯಾಚಾರ ಆರೋಪಿಗಳನ್ನೇನೋ ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ. ಆದರೆ, ಪ್ರಕರಣ ಮಾತ್ರ ಇಲ್ಲಿಗೆ ಮುಗಿದಿಲ್ಲ. ಅಸಲಿ ಪ್ರಕರಣ ಆರಂಭವಾಗುವುದೇ ಇಲ್ಲಿಂದ. ಕಾರಣ ಕಳೆದ 11 ವರ್ಷದಲ್ಲಿ ಪೊಲೀಸ್ ಅಧಿಕಾರಿ ವಿಶ್ವನಾಥ್ ಸಜ್ಜನರ್ ಮೂರು ಎನ್​ಕೌಂಟರ್​ ಮಾಡಿದ್ದಾರೆ. ಆದರೆ, ಈ ಮೂರೂ ಎನ್​ಕೌಂಟರ್ ನಡೆದೆರುವ ರೀತಿ ಹಾಗೂ ಎನ್​ಕೌಂಟರ್​ ನಂತರ ಅವರು ನೀಡಿರುವ ವಿವರಣೆ ಥೇಟ್ ಒಂದೇ ರೀತಿ ಇದೆ. ಇದೇ ಕಾರಣಕ್ಕೆ ಈ ಎನ್​ಕೌಂಟರ್​ ನ ಸಾಚಾತನದ ಕುರಿತು ಕಾನೂನಾತ್ಮಕವಾಗಿ ಹತ್ತಾರು ತೊಡಕುಗಳು ಮತ್ತು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ.

ಹಾಗಾದರೆ ಹಿರಿಯ ಪೊಲೀಸ್​ ಅಧಿಕಾರಿ ವಿಶ್ವನಾಥ್ ಸಜ್ಜನರ್​ ಕಳೆದ 11 ವರ್ಷದ ಅವಧಿಯಲ್ಲಿ ನಡೆಸಿದ ಆ ಮೂರು ಎನ್​ಕೌಂಟರ್ ಯಾವುದು? ಎನ್​ಕೌಂಟರ್​ ನಂತರ ಅವರು ನೀಡಿದ ವಿವರಣೆ ಏನು? ಈ ಎನ್​ಕೌಂಟರ್​ಗಳು ಅಸಲಿಯೋ..ನಕಲಿಯೋ? ಕೊನೆಗೆ ಈ ಪ್ರಕರಣಗಳು ಏನಾಯ್ತು? ಇಲ್ಲಿದೆ ಮಾಹಿತಿ.

ಪ್ರಕರಣ.1 ವಾರಂಗಲ್ ಎನ್​ಕೌಂಟರ್..!

2008ರಲ್ಲಿ ಅಂದಿನ ಅಖಂಡ ಆಂಧ್ರಪ್ರದೇಶವನ್ನು ತಲ್ಲಣಕ್ಕೆ ದೂಡಿದ್ದ ಪ್ರಕರಣ ಇದು. ಓದಿ ಸಮಾಜದಲ್ಲಿ ದೊಡ್ಡವರಾಗಬೇಕಿದ್ದ ಇಂಜಿಯರಿಂಗ್ ವಿದ್ಯಾರ್ಥಿಗಳು ಪ್ರೀತಿ ವಿಚಾರಕ್ಕೆ ಯುವತಿಯರ ಮುಖಕ್ಕೆ ಆಸಿಡ್ ಎರಚಿ ಕೊನೆಗೆ ಅನಾಮತ್ತು ಪೊಲೀಸರ ಗುಂಡಿಗೆ ಬಲಿಯಾಗಿದ್ದ ತೆಲುಗು ಜನ ಎಂದಿಗೂ ಮರೆಯಲಾಗದ ಕಹಿ ಘಟನೆ ಅದು.ಅದು 2008 ಡಿಸೆಂಬರ್ 13. ವಾರಂಗಲ್ ಜಿಲ್ಲೆಯ ಕಾಕತೀಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದ ಸ್ವಪ್ನಿಕ ಮತ್ತು ಪ್ರಣೀತ ಎಂದಿನಂತೆ ಕಾಲೇಜು ಮುಗಿಸಿ ಬಸ್ಸಿಗಾಗಿ ಬಸ್ ನಿಲ್ದಾಣದಲ್ಲಿ ಕಾದು ನಿಂತಿದ್ದರು.

ಈ ವೇಳೆ ಅದೇ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದ ಎಸ್. ಶ್ರೀನಿವಾಸ ರಾವ್ (25), ಪಿ. ಹರಿಕೃಷ್ಣ (24) ಹಾಗೂ ಬಿ. ಸಂಜಯ್ (22) ಬಸ್ ನಿಲ್ದಾಣಕ್ಕೆ ಆಗಮಿಸಿ ಯುವತಿಯರ ಜೊತೆಗೆ ಗಲಾಟೆ ಮಾಡಿದ್ದರು. ಅಲ್ಲದೆ, ತಾವು ತಂದಿದ್ದ ಆಸಿಡ್ ಅನ್ನು ಇಬ್ಬರೂ ಯುವತಿಯರ ಮುಖಕ್ಕೆ ಎರಚಿ ಪರಾರಿಯಾಗಿದ್ದರು.

ಆಸಿಡ್ ದಾಳಿಯಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಯುವತಿ ಸ್ವಪ್ನಿಕ ಚಿಕಿತ್ಸೆ ಫಲಕಾರಿಯಾಗದೆ ಕೊನೆಗೂ ಮೃತಪಟ್ಟಿದ್ದಳು. ತನಿಖೆಯ ವೇಳೆ ಬಾಯ್ಬಿಟ್ಟಿದ್ದ ಪ್ರಮುಖ ಆರೋಪಿ ಶ್ರೀನಿವಾಸ್ ರಾವ್ ಸ್ವಪ್ನಿಕ ತನ್ನ ಪ್ರೇಮ ನಿವೇದನೆಯನ್ನು ಒಪ್ಪಿಕೊಳ್ಳದ ಕಾರಣಕ್ಕೆ ಆಸಿಡ್ ದಾಳಿ ನಡೆಸಿದ್ದಾಗಿ ತಿಳಿಸಿದ್ದ.

ಈ ಪ್ರಕರಣ ಇಡೀ ದೇಶವನ್ನು ಬೆಚ್ಚಿ ಬೀಳಿಸಿತ್ತು. ಆಂಧ್ರಪ್ರದೇಶದ ಜನ ಬೀದಿಗಿಳಿದು ದೊಡ್ಡ ಮಟ್ಟದ ಹೋರಾಟ ನಡೆಸಿದ್ದರು. ಆರೋಪಿಗಳನ್ನು ಸಾರ್ವಜನಿಕವಾಗಿ ಗುಂಡಿಟ್ಟು ಕೊಲ್ಲುವಂತೆ ಆಗ್ರಹಿಸಿದ್ದರು. ಅಂದಿನ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿಗೆ ಈ ಪ್ರಕರಣ ದೊಡ್ಡ ತಲೆ ನೋವಾಗಿ ಪರಿಣಮಿಸಿತ್ತು.

ಕೊನೆಗೆ ಆಸಿಡ್ ದಾಳಿ ನಡೆದು ಒಂದು ವಾರದ ತರುವಾಯ ಸ್ಥಳ ಮಹಜರ್ ಹೆಸರಲ್ಲಿ ದಾಳಿ ನಡೆದ ಸ್ಥಳಕ್ಕೆ ಆರೋಪಿಗಳನ್ನು ಕರೆದೊಯ್ದಿದ್ದ ಪೊಲೀಸರು ಆತ್ಮರಕ್ಷಣೆಯ ಹೆಸರಲ್ಲಿ  ಮೂವರು ಆರೋಪಿಗಳನ್ನು ಹೊಡೆದುರುಳಿಸಿದ್ದರು. ಅಂದು ಈ ತಂಡದ ನೇತೃತ್ವವಹಿಸಿದ್ದ ಪೊಲೀಸ್ ಅಧಿಕಾರಿ ಕನ್ನಡಿಗ ವಿಶ್ವನಾಥ್ ಸಜ್ಜನರ್.

ಪ್ರಕರಣ.2  ನಕ್ಸಲೈಟ್​ ಎನ್​ಕೌಂಟರ್​:

ಅದು ಆಗಸ್ಟ್​ 2016. ವಿಶ್ವನಾಥ್ ಸಜ್ಜನರ್ ಆಗ ವಿಶೇಷ ಗುಪ್ತಚರ ಖಾತೆಯ ಐಜಿ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಹೈದರಾಬಾದ್​ ಹೊರವಲಯದಲ್ಲಿ ಮಾಜಿ ನಕ್ಸಲೈಟ್​ ಮೊಹಮ್ಮದ್ ನಯೀಮುದ್ದೀನ್ ಅವರನ್ನು ಎನ್​ಕೌಂಟರ್ ನಲ್ಲಿ ಹತ್ಯೆ ಮಾಡಿದ್ದರು.

ಈ ಪ್ರಕರಣ ಸಾರ್ವಜನಿಕ ವಲಯದಲ್ಲಿ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಆದರೆ, ಈ ಕುರಿತು ಅಂದು ಮಾನವ ಹಕ್ಕು ಆಯೋಗಕ್ಕೆ ವರದಿ ನೀಡಿದ್ದ ವಿಶ್ವನಾಥ್ ಸಜ್ಜನರ್​, "ಶಾದ್ ನಗರದಲ್ಲಿ ನಯೀಮುದ್ದೀನ್ ಇರುವ ಕುರಿತು ಖಚಿತ ಮಾಹಿತಿ ಪಡೆದ ನಮ್ಮ ತಂಡ ಆತನನ್ನು ಸೆರೆಹಿಡಿಯಲು ಅಲ್ಲಿ ತೆರಳಿತ್ತು. ಈ ವೇಳೆ ಆತ ಪೊಲೀಸ್ ತಂಡದ ಮೇಲೆ ಗುಂಡಿನ ದಾಳಿ ನಡೆಸಿದ್ದ. ಹೀಗಾಗಿ ಎನ್​ಕೌಂಟರ್ ಮಾಡಲಾಯಿತು" ಎಂದು ತಿಳಿಸಿದ್ದರು.

ಪ್ರಕರಣ.3 ಪಶುವೈದ್ಯೆ ಅತ್ಯಾಚಾರಿಗಳ ಎನ್​ಕೌಂಟರ್​:

ನಾಲ್ವರು ಲಾರಿ ಚಾಲಕರು ಕಳೆದ ನವೆಂಬರ್​ 27 ರಂದು ತೆಲಂಗಾಣ ಪಶುವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಅಮಾನವೀಯವಾಗಿ ಆಕೆಯನ್ನು ಜೀವಂತ ಸುಟ್ಟು ಕೊಲೆ ಮಾಡಿದ್ದರು. ಈ ಘಟನೆ ರಾಷ್ಟ್ರದಾದ್ಯಂತ ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿತ್ತು. ಮಹಿಳೆಯರು ಹಾಗೂ ಮಹಿಳಾ ಪರ ಸಂಘಟನೆಗಳು ಮತ್ತೊಮ್ಮೆ ಬೀದಿಗಿಳಿದು ಅತ್ಯಾಚಾರಿಗಳ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಸಿದ್ದರು. ಅಲ್ಲದೆ, ಇಂತಹ ಅತ್ಯಾಚಾರಿಗಳಿಗೆ ಕ್ರೂರ ಶಿಕ್ಷೆಯನ್ನು ನೀಡಬೇಕು ಎಂದು ಒತ್ತಾಯಿಸಿದ್ದರು.

ಘಟನೆಯ ಕುರಿತು ದೇಶದಾದ್ಯಂತ ಅಲ್ಲಲ್ಲಿ ಪ್ರತಿನಿತ್ಯ ಜನಾಕ್ರೋಶ ವ್ಯಕ್ತವಾಗುತ್ತಲೇ ಇತ್ತು. ತನಿಖೆ ಆರಂಭಿಸಿದ ಹೈದರಾಬಾದ್ ಪೊಲೀಸರು ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿಯೂ ಸಹ ಯಶಸ್ವಿಯಾಗಿದ್ದರು. ಆದರೆ, ಈ ನಾಲ್ಕೂ ಜನ ಆರೋಪಿಗಳನ್ನು ಡಿಸೆಂಬರ್​ 06 ರಂದು ಅತ್ಯಾಚಾರ ನಡೆದ ಸ್ಥಳದಲ್ಲೇ ಹಿರಿಯ ಪೊಲೀಸ್ ಅಧಿಕಾರಿ ವಿಶ್ವನಾಥ್ ಸಜ್ಜನರ್​ ನೇತೃತ್ವದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ಮೂರು ಎನ್​ಕೌಂಟರ್​ ಥೇಟ್ ಒಂದೇ ರೀತಿಯ ವಿವರಣೆ:

ಪ್ರಸ್ತುತ ಸೈಬರಾಬಾದ್ ನಗರದ ಪೊಲೀಸ್ ಆಯುಕ್ತರಾಗಿರುವ 1996 ಬ್ಯಾಚ್ ಐಪಿಎಸ್​ ಅಧಿಕಾರಿ ವಿಶ್ವನಾಥ್ ಸಜ್ಜನರ್ ಕಳೆದ 11 ವರ್ಷದಲ್ಲಿ ನಡೆಸಿರುವ ಮೂರು ಎನ್​ಕೌಂಟರ್ ಪ್ರಕರಣಗಳು ಇದಾಗಿವೆ. ಈ ಮೂರೂ ಪ್ರಕರಣದಲ್ಲಿ ಎನ್​ಕೌಂಟರ್​ಗೆ ಸಜ್ಜನರ್​ ನೀಡಿರುವ ಏಕೈಕ ಕಾರಣ ಆತ್ಮರಕ್ಷಣೆ. "ಆರೋಪಿಗಳು ಪೊಲೀಸರ ಬಂದೂಕುಗಳನ್ನು ಕಸಿದು ನಮ್ಮ ಮೇಲೆಯೇ ದಾಳಿ ಮಾಡಿದ ಪರಿಣಾಮ ಆತ್ಮರಕ್ಷಣೆಗಾಗಿ ಎನ್​ಕೌಂಟರ್ ಅನಿವಾರ್ಯವಾಗಿತ್ತು". ಇದು ಎಲ್ಲಾ ಪ್ರಕರಣದಲ್ಲೂ ವಿಶ್ವನಾಥ್ ಸಜ್ಜನವರ್​ ನೀಡಿರುವ ಒಂದು ಸಾಲಿನ ವಿವರಣೆ.

ಆದರೆ, ಈ ಮೂರು ಪ್ರಕರಣದಲ್ಲಿ ಎನ್​ಕೌಂಟರ್​ ಅನ್ನು ರಾತ್ರಿಯ ವೇಳೆ ನಿರ್ಜನ ಪ್ರದೇಶದಲ್ಲೇ ನಡೆಸಿರುವುದು ಏಕೆ? ವಾರಂಗಲ್​ ಆಸಿಡ್​ ದಾಳಿಯ ಆರೋಪಿಗಳು ಹಾಗೂ ಪಶುವೈದ್ಯೆ ಅತ್ಯಾಚಾರ ಆರೋಪಿಗಳನ್ನು ಸ್ಥಳ ಮಹಜರ್​ ಮಾಡಲು ನಡುರಾತ್ರಿಯೇ ಕರೆದುಕೊಂಡುಹೋಗುವ ಅನಿವಾರ್ಯ ಏನಿತ್ತು? ಹೀಗೆ ಆರೋಪಿಗಳನ್ನು ಕರೆದುಕೊಂಡು ಹೋಗುವಾಗ ಅವರ ಕೈಗಳಿಗೆ ಏಕೆ ಕೋಳ ಹಾಕಿರಲಿಲ್ಲ? ನಿಜಕ್ಕೂ ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದರೇ?

ಹೀಗೆ ಹತ್ತು ಹಲವು ಪ್ರಶ್ನೆಗಳು ಈ ಮೂರು ಎನ್​ಕೌಂಟರ್​ ಸುತ್ತ ಸುಳಿದಾಡುತ್ತಿವೆ. ಅಲ್ಲದೆ, ಈಗಾಗಲೇ  ಹಲವು ಪ್ರಮುಖರು ಇದೊಂದು ನಕಲಿ ಎನ್​ಕೌಂಟರ್ ಎಂದು ದೂರುತಿದ್ದಾರೆ. 2008ರ ವಾರಂಗಲ್ ಎನ್​ಕೌಂಟರ್ ಹಿಂದೆ ಅಂದಿನ ಆಂಧ್ರಪ್ರದೇಶದ ಸಿಎಂ ವೈ.ಎಸ್​. ರಾಜಶೇಖರ ರೆಡ್ಡಿ ನೇರ ಆದೇಶ ಇತ್ತು ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಈ ಪ್ರಕರಣ ಸಜ್ಜನರ್ ಅವರನ್ನು ಹೆಚ್ಚು ಕಾಡಿರಲಿಲ್ಲ. ಇನ್ನೂ 2016ರ ನಕ್ಸಲೈಟ್ ಎನ್​ಕೌಂಟರ್ ಮಾಧ್ಯಮಗಳಲ್ಲಿ ಅಷ್ಟರ ಮಟ್ಟಿಗೆ ಸದ್ದು ಮಾಡಿರಲಿಲ್ಲ.

ಆದರೆ, ಈಗ ಮಾಧ್ಯಮಗಳು ಪ್ರಬಲವಾಗಿವೆ. ಕಾನೂನು ಸಹ ಬಲಿಷ್ಟವಾಗಿದೆ. ಅಲ್ಲದೆ, ಈ ಎನ್​ಕೌಂಟರ್ ಸಂಬಂಧ ತೆಲಂಗಾಣ ಹೈಕೋರ್ಟ್​ ಸೋಮವಾರ ತುರ್ತು ವಿಚಾರಣೆಯನ್ನೂ ಕರೆದಿದೆ. ಮಾನವ ಹಕ್ಕು ಆಯೋಗ ಈ ಎನ್​ಕೌಂಟರ್ ಸಾಚಾತನದ ಕುರಿತ ತನಿಖೆಗೆ ಈಗಾಗಲೇ ಫೀಲ್ಡಿಗೆ ಇಳಿದಿದೆ. ಹೀಗಾಗಿ ಪಶುವೈದ್ಯೆ ಅತ್ಯಾವರಿಗಳ ಎನ್​ಕೌಂಟರ್​ ಪ್ರಕರಣ ಭವಿಷ್ಯದಲ್ಲಿ ಖಡಕ್ ಅಧಿಕಾರಿ ಎನಿಸಿಕೊಂಡಿರುವ ವಿಶ್ವನಾಥ್ ಸಜ್ಜನರ್ ಅವರ ತಲೆದಂಡಕ್ಕೆ ಕಾರಣವಾದರೂ ಅಚ್ಚರಿ ಇಲ್ಲ.

ಇದನ್ನೂ ಓದಿ : ವಾರಂಗಲ್ ಮಾದರಿಯಲ್ಲೇ ನಡೆದೋಯ್ತು ಎನ್​ಕೌಂಟರ್; ಎರಡೂ ಪ್ರಕರಣದ ಹಿಂದಿದೆ ಕನ್ನಡಿಗ ವಿಶ್ವನಾಥ್ ಸಜ್ಜನವರ್ ಖದರ್!
First published:December 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading