ಕೊರೋನಾ ವೈರಸ್ ಕಳೆದ ಒಂದು ವರ್ಷದಿಂದ ಎಷ್ಟು ಮಂದಿಯ ಜೀವವನ್ನು ಬಲಿ ತೆಗೆದುಕೊಂಡಿದೆ ಎಂಬುದು ತಿಳಿದೇ ಇದೆ. ಅಲ್ಲದೇ ಎಷ್ಟೋ ಮಂದಿಯ ಬದುಕು ಬೀದಿಪಾಲಾಗಿದೆ. ಕೆಲಸವಿಲ್ಲದೇ, ತುತ್ತಿನ ಚೀಲ ತುಂಬಿಸಿಕೊಳ್ಳಲು ರಸ್ತೆಯಲ್ಲಿ ನಿಂತು ಬೇಡಿಕೊಂಡಿದ್ದು ಇದೆ. ಇಂತಹ ಹೀನಾಯ ಸ್ಥಿತಿಯಲ್ಲೂ ಸ್ಥಿತಿವಂತರು ಬಡವರ ಸಹಾಯಕ್ಕೆ ನಿಂತದ್ದು ಕೆಲವೇ ಮಂದಿ. ಅದರಲ್ಲೂ ಸಮಾಜದಲ್ಲಿ ಕೆಳಸ್ತರದವರು ಎಂದೇ ಗುರುತಿಸಿಕೊಂಡವರ ಸಹಾಯಕ್ಕೆ ಯಾರು ನಿಂತರು?
ಈ ಎಲ್ಲಾ ಪ್ರಶ್ನೆಗಳ ನಡುವೆಯೂ ಕೊರೋನಾ ವೇಳೆ ಬಡವರ ಪಾಲಿನ ದೇವರಾದವರು ಬಾಲಿವುಡ್ ನಟ ಸೂನು ಸೂದ್. ಇವರು ವಲಸೆ ಕಾರ್ಮಿಕರಿಗೆ ಊಟದ ವ್ಯವಸ್ಥೆಯಿಂದ ಹಿಡಿದು ಮನೆಗೆ ಹೋಗುವವರಿಗೆ ಪ್ರಯಾಣದ ವ್ಯವಸ್ಥೆವರೆಗೂ ಮಾಡಿಕೊಟ್ಟು ನೂರಾರು ಮಂದಿಯ ಬದುಕನ್ನು ಉಳಿಸಿದರು.
ಈ ನಡುವೆಯೇ ಮತ್ತೊಬ್ಬ ಮಹಿಳೆಯು ಗರ್ಭಿಣಿಯರ ಹಾಗೂ ಮಕ್ಕಳ ಸಹಾಯಕ್ಕೆ ನಿಂತಿದ್ದರು. ಇವರಿಗೆ ನರ್ಮದಾ ನದಿಯಲ್ಲಿ ಓಡಾಡಿದ ಅನುಭವವಿದೆ, ಅಲ್ಲಿಯ ಮಂದಿಯ ಒಡನಾಟವಿದೆ, ತೊಂದರೆ-ತಾಪತ್ರಯಗಳ ಅರಿವಿದೆ. ಈಕೆ ನರ್ಮದಾ ನದಿಯ ಸುತ್ತಮುತ್ತ ಬದುಕುತ್ತಿರುವ ತಾಯಿಯಂದಿರು ಹಾಗೂ ಮಕ್ಕಳ ಜೀವವನ್ನು ಉಳಿಸಲು ಶ್ರಮವಹಿಸಿದ್ದಾಳೆ. ಇವರನ್ನು ಕೊರೋನಾ ವಾರಿಯರ್ ಎಂದರೆ ತಪ್ಪಾಗಲಾರದು.
27 ವರ್ಷದ ಈ ಕೊರೊನಾ ವಾರಿಯರ್ ಹೆಸರು ರೇಲು ವಾಸವೆ. ಈಕೆ ವೃತ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ. ಈಕೆ ತಮ್ಮ ನರ್ಮದಾ ನದಿಯ ಹರಿವನ್ನು ನೋಡುತ್ತಾ, ಅಲ್ಲಿಯೇ ಓಡಾಡುತ್ತಾ ಬೆಳೆದ ಯುವತಿ. ಈಜುವುದು, ದೋಣಿ ನಡೆಸುವುದು ಇವೆಲ್ಲದರ ಅರಿವಿರುವವಳು.
ಕೊರೋನಾ ಕಾರಣ ಇಲ್ಲಿನ ಬುಡಕಟ್ಟು ಜನಾಂಗದ ಸಾಕಷ್ಟು ತಾಯಿಯಂದಿರು ಅಂಗನವಾಡಿಗೆ ಬಂದು ಪೌಷ್ಟಿಕ ಆಹಾರ ತೆಗೆದುಕೊಂಡು ಹೋಗಲು, ತಪಾಸಣೆಗೆ ಬರುವುದನ್ನು ನಿಲ್ಲಿಸಿದರು. ಆದರೆ ಈಕೆಯ ಅವರ ಬಳಿ ಹೋದಳು. ರಸ್ತೆಯಲ್ಲಿ ಸಂಚರಿಸಲು ಅವಕಾಶವಿಲ್ಲದ ಕಾರಣ ದೋಣಿ ಸಾಗಿಸುವುದರ ಅರಿವಿದ್ದ ಈಕೆ ಖುದ್ದಾಗಿ ದೋಣಿಯ ಮೂಲಕ ನರ್ಮದಾ ನದಿಯಲ್ಲಿ ಸಾಗಿ ಜನರಿಗೆ ತಲುಪಬೇಕಾದ ಆಹಾರವನ್ನು ತುಪಿಸಿದ್ದಳು. ಸುಮಾರು 18 ಕಿ.ಮೀ ಪಯಣಕ್ಕೆ ಎದೆಗುಂದದೆ, ತಮ್ಮ ಉತ್ಸಾಹ ಕಳೆದುಕೊಳ್ಳದೇ ಸೇವೆಯನ್ನು ಮುಂದುವರಿಸಿದಳು.
ಈಕೆ ಸ್ಥಳೀಯ ಮೀನುಗಾರರಿಂದ ಸಣ್ಣ ದೋಣಿ ಎರವಲು ಪಡೆದು ಬುಡಕಟ್ಟು ಕುಗ್ರಾಮಗಳಾದ ಅಲಿಗಟ್ ಮತ್ತು ದಾದರ್ ಗೆ ಹೊರಟಳು. ಅವರು ಏಪ್ರಿಲ್‍ನಿಂದ ವಾರದಲ್ಲಿ ಐದು ದಿನ ನರ್ಮದಾದಲ್ಲಿ ದೋಣಿ ವಿಹಾರ ಮಾಡಿ, 25 ನವಜಾತ ಶಿಶುಗಳು ಮತ್ತು ಅಪೌಷ್ಟಿಕತೆಯಿಂದ ಬಳಸಲುತ್ತಿರುವ ಮಕ್ಕಳು ಮತ್ತು ಏಳು ಗರ್ಭಿಣಿಯರಿಗೆ ಸರಿಯಾದ ಆರೈಕೆ ಮತ್ತು ವೈದ್ಯಕೀಯ ಆರೈಕೆ ಮಾಡಿ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವುದನ್ನು ತಡೆದರು.
ಅಂಗನವಾಡಿಯಲ್ಲಿ, ನವಜಾತ ಮಕ್ಕಳು, ಆರು ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿಯರ ಆರೈಕೆ ಮಾಡುವುದು ರೇಲು ಅವರ ಕೆಲಸ. ಆಕೆ ಮಕ್ಕಳ, ಗರ್ಭಿಣಿಯರ ತೂಕ ಪರಿಶೀಲಿಸುವುದು ಮತ್ತು ಸರ್ಕಾರವು ಒದಗಿಸುವ ಪೌಷ್ಟಿಕ ಆಹಾರಗಳನ್ನು ಅವರಿಗೆ ನೀಡುತ್ತಾರೆ. ಮಾರ್ಚ್‍ನಲ್ಲಿ ಲಾಕ್‍ಡೌನ್ ಹೇರಿದ ನಂತರ, ಬುಡಕಟ್ಟು ಜನಾಂಗದವರು ದೋಣಿ ಮೂಲಕ ಅಂಗನವಾಡಿಯನ್ನು ತಲುಪುವುದು ಕಷ್ಟಕರವಾಯಿತು.
ಸ್ವತಃ ಎರಡು ಮಕ್ಕಳ ತಾಯಿಯಾದ ರೇಲು, “ಸಾಮಾನ್ಯವಾಗಿ, ಮಕ್ಕಳು ಮತ್ತು ಗರ್ಭಿಣಿಯರು ತಮ್ಮ ಕುಟುಂಬಗಳೊಂದಿಗೆ ಅಂಗನವಾಡಿ ಕೇಂದ್ರಕ್ಕೆ ದೋಣಿ ಮೂಲಕ ಆಹಾರವನ್ನು ಸಂಗ್ರಹಿಸಲು ಬರುತ್ತಿದ್ದರು. ಆದರೆ ಅವರು ವೈರಸ್ ಭಯದಿಂದ ಭೇಟಿ ನೀಡುವುದನ್ನು ನಿಲ್ಲಿಸಿದರು. ಆಗ ನಾನೇ ಅವರ ಸ್ಥಳಗಳಿಗೆ ಹೋಗಿ ಆಹಾರ ತಲುಪಿಸಲು ಚಿಂತಿಸಿದೆ. ಪ್ರತಿದಿನ 18 ಕಿ.ಮೀಗಟ್ಟಲಏ ದೋಣಿ ನಡೆಸುವುದು ಸುಲಭವಲ್ಲ. ನಾನು ಸಂಜೆ ಮನೆಗೆ ಹಿಂದಿರುಗುವ ಹೊತ್ತಿಗೆ ನನ್ನ ಕೈ ನೋವಾಗುತ್ತಿತ್ತು. ಆದರೆ ಅದು ನನಗೆ ಮುಖ್ಯವಾಗಲಿಲ್ಲ. ಶಿಶುಗಳು ಮತ್ತು ತಾಯಂದಿರು ಪೌಷ್ಠಿಕ ಆಹಾರವನ್ನು ಸೇವಿಸುವುದಷ್ಟೇ ನನಗೆ ಮುಖ್ಯವಾಗಿತ್ತು. ಕೋವಿಡ್ ಪರಿಸ್ಥಿತಿ ಸುಧಾರಿಸುವವರೆಗೆ ನಾನು ಈ ಕುಗ್ರಾಮಗಳಿಗೆ ಭೇಟಿ ನೀಡುತ್ತೇನೆ ಎಂದು ತಮ್ಮ ಉತ್ಸಾಹವನ್ನು ಟೈಮ್ಸ್ ಆಫ್ ಇಂಡಿಯಾ ಸುದ್ದಿ ಸಂಸ್ಥೆ ಎದುರು ವ್ಯಕ್ತಪಡಿಸುತ್ತಾರೆ.
ನಿಜವಾಗಿಯೂ ರೆಲು ಅವರ ದಿನ ತೀರಾ ಕಷ್ಟಕರ. ಆಕೆ ಬೆಳಿಗ್ಗೆ 7.30 ರ ಸುಮಾರಿಗೆ ಅಂಗನವಾಡಿಯನ್ನು ತಲುಪಿ ಮಧ್ಯಾಹ್ನದವರೆಗೆ ಅಲ್ಲಿ ಕೆಲಸ ಮಾಡುತ್ತಾಳೆ. ಊಟದ ನಂತರ, ಅವಳು ದೋಣಿಯ ಮೂಲಕ ಕುಗ್ರಾಮಗಳಿಗೆ ತಲುಪಿ ಅಲ್ಲಿಯವರನ್ನು ವಿಚಾರಿಸಿಕೊಂಡು ಸಂಜೆ ತಡವಾಗಿ ಮನೆಗೆ ಹಿಂದಿರುಗುತ್ತಾಳೆ. ದೋಣಿ ಸವಾರಿಯ ನಂತರ, ಅವಳು ಕುಗ್ರಾಮಗಳನ್ನು ತಲುಪಲು ಗುಡ್ಡಗಾಡು ಪ್ರದೇಶಗಳನ್ನು ಚಾರಣ ಮಾಡಬೇಕು. ಅವರ ಈ ಶ್ರಮ ಮತ್ತು ಪ್ರಯತ್ನಗಳನ್ನು ಸಿಎಂ ಉಧವ್ ಠಾಕ್ರೆ ಗುರುತಿಸಿ ಶ್ಲಾಘಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ