ತಿರುವನಂತಪುರ: ನಾವು ಸಾಮಾನ್ಯವಾಗಿ ಈ ಕೇರಳ ರಾಜ್ಯದಲ್ಲಿ (Kerala News) ಹಾಗೂ ಕರ್ನಾಟಕ ಮತ್ತು ಕೇರಳ ಗಡಿ ಭಾಗದಲ್ಲಿರುವ ಹಳ್ಳಿಗಳಲ್ಲಿ ಆನೆಗಳು (Elephants In Kerala) ಮತ್ತು ಕಾಡು ಹಂದಿಗಳಂತಹ ಪ್ರಾಣಿಗಳು ನುಗ್ಗಿ ಬರುವುದರ ಬಗ್ಗೆ ಅನೇಕ ಘಟನೆಗಳನ್ನು ನೋಡಿದ್ದೇವೆ. ಕಾಡಿನಿಂದ (Forest) ನಾಡಿಗೆ ಈ ರೀತಿಯಾಗಿ ಪ್ರಾಣಿಗಳು ಹಠಾತ್ತನೆ ಬಂದು ಬೆಳೆಗಳನ್ನು ನಾಶಪಡಿಸಿದ, ಒಮ್ಮೊಮ್ಮೆ ಮನುಷ್ಯರ ಮೇಲೆ ಆಕ್ರಮಣ ಮಾಡಿದ ಅನೇಕ ಉದಾಹರಣೆಗಳಿವೆ.
ಆದರೆ ಕೇರಳ ರಾಜ್ಯದಲ್ಲಿರುವ ಒಂದು ಹಳ್ಳಿಯಲ್ಲಿ ವಾಸವಾಗಿರುವ ಜನರಿಗೆ ಹದ್ದುಗಳು ತುಂಬಾನೇ ಕಾಟ ಕೊಡುತ್ತಿದೆಯಂತೆ. ಇದನ್ನು ಕೇಳಿ ನಿಮಗೆ ಸ್ವಲ್ಪ ಆಶ್ಚರ್ಯ ಅಂತ ಅನ್ನಿಸಬಹುದು, ಆದರೆ ಇದು ಅಕ್ಷರಶಃ ಆಲ್ಫ್ರೆಡ್ ಹಿಚ್ಕಾಕ್ ಅವರ 1963 ರ ಭಯಾನಕ ಚಿತ್ರ ‘ದಿ ಬರ್ಡ್ಸ್’ ದೃಶ್ಯಗಳನ್ನು ನೆನಪಿಸುವಂತಿದೆ ಅಂತ ನೋಡಿದವರು ಹೇಳುತ್ತಾರೆ.
ಹದ್ದುಗಳ ಕಾಟದಿಂದ ಬೇಸತ್ತ ಅಡೂರಿನ ಚಾಲಾದ ನಿವಾಸಿಗಳು
ಅಡೂರಿನ ನಿವಾಸಿಗಳು ಹೆಚ್ಚುತ್ತಿರುವ ಹದ್ದುಗಳ ಕಾಟದಿಂದ ಬೇಸತ್ತು ಹೋಗಿದ್ದಾರೆ ಅಂತ ಹೇಳಬಹುದು. ಹದ್ದುಗಳ ಭಯ ಎಷ್ಟರ ಮಟ್ಟಿಗಿದೆ ಅಂತ ಹೇಳಿದರೆ, ಅಲ್ಲಿನ ಜನರು ಹಗಲಿನಲ್ಲಿಯೂ ತಮ್ಮ ಮನೆಗಳಿಂದ ಹೊರಬರಲು ಭಯ ಪಡುತ್ತಿದ್ದಾರೆ ಅಂತ ಹೇಳಬಹುದು.
ಈಗಾಗಲೇ ಹದ್ದಿನ ದಾಳಿಯಲ್ಲಿ ಸುಮಾರು 20 ಸ್ಥಳೀಯರು ಗಾಯಗೊಂಡಿದ್ದಾರೆ. ಅನೇಕರಿಗೆ ವೈದ್ಯಕೀಯ ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯತೆ ಸಹ ಬಂದೊದಗಿದೆ. ಈ ಪಕ್ಷಿಗಳು ತಮ್ಮ ರೆಕ್ಕೆಗಳು ಮತ್ತು ಕೊಕ್ಕುಗಳಿಂದ ಜನರನ್ನು ಗಾಯಗೊಳಿಸುತ್ತಿರುವುದಾಗಿ ಜನರು ದೂರಿದ್ದಾರೆ.
ಹದ್ದುಗಳ ದಾಳಿಯ ಬಗ್ಗೆ ವಾರ್ಡ್ ಸದಸ್ಯೆ ಹೇಳಿದ್ದೇನು?
"ಬಹುತೇಕ ರೈತರಿರುವ ಈ ಗ್ರಾಮದಲ್ಲಿ ಸುಮಾರು 600 ಕುಟುಂಬಗಳು ವಾಸಿಸುತ್ತಿವೆ. ಸುಮಾರು ಎಂಟು ತಿಂಗಳ ಹಿಂದೆ ಮೊದಲ ದಾಳಿ ವರದಿಯಾಗಿತ್ತು. ನಾವು ಮೊದಲು ಇದು ಸಾಕಿದ ಹದ್ದು ಇರಬಹುದು ಅಂತ ಭಾವಿಸಿದ್ದೆವು. ಆದರೆ ಈಗ ನಾನು ಪ್ರತಿದಿನ ಕನಿಷ್ಠ 10 ದೂರುಗಳನ್ನು ಸ್ವೀಕರಿಸುತ್ತೇನೆ. ನಾವು ಅರಣ್ಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಅವರು ನಮಗೆ ಅದನ್ನು ಸೆರೆಹಿಡಿದು ಅವರಿಗೆ ಹಸ್ತಾಂತರಿಸಲು ಕೇಳಿದರು.
ಆದ್ದರಿಂದ ಕಳೆದ ಭಾನುವಾರ, ನಾವು ಒಂದು ಹದ್ದನ್ನು ಹಿಡಿದು ಅವರಿಗೆ ವರ್ಗಾಯಿಸಿದ್ದೇವೆ. ಅದರ ನಂತರ ಈಗ ಎರಡನೇ ಹದ್ದನ್ನು ಸಹ ಹಿಡಿದಿದ್ದೇವೆ, ಹಳ್ಳಿಯಲ್ಲಿ ಇನ್ನೂ ಸುಮಾರು ಹತ್ತು ಹದ್ದುಗಳು ಹಾರಾಡುತ್ತಿವೆ. ಅವು ಮುಖ್ಯವಾಗಿ ಮಹಿಳೆಯರು ಮತ್ತು ಮಕ್ಕಳ ಮೇಲೆ ದಾಳಿ ಮಾಡುತ್ತಿವೆ. ವಿರಳವಾಗಿ ಪುರುಷರನ್ನು ಗುರಿಯಾಗಿಸುತ್ತವೆ. ಈ ಸಮಸ್ಯೆಗೆ ತುರ್ತು ಪರಿಹಾರದ ಅಗತ್ಯವಿದೆ ಎಂದು ಚಾಲಾದ ವಾರ್ಡ್ ಸದಸ್ಯೆ ದಿವ್ಯಾ ಅನೀಶ್ ಹೇಳಿದ್ದಾರೆ.
ಹದ್ದಿನ ದಾಳಿಗೆ ಗಾಯಗೊಂಡವರು ಏನ್ ಹೇಳ್ತಾರೆ?
"ಕಣ್ಣುಗಳಿಗಷ್ಟೇ ಗಾಯವಾಗದಿರುವುದು ನನ್ನ ಅದೃಷ್ಟ. ನಾನು ಅಡೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡೆ ಮತ್ತು ವೈದ್ಯರ ಸಲಹೆಯ ಮೇರೆಗೆ ಎರಡು ವಾರಗಳ ಕಾಲ ವಿಶ್ರಾಂತಿ ಪಡೆದೆ.
ಹದ್ದುಗಳು ಇನ್ನೂ ಹಾಗೆಯೇ ಸುತ್ತಲೂ ಓಡಾಡುತ್ತಿವೆ ಮತ್ತು ಹಗಲಿನಲ್ಲಿ ನನ್ನ ಮನೆಯಿಂದ ಹೊರ ಬರಲು ನಾನು ಹೆದರುತ್ತೇನೆ. ಸಂಬಂಧಪಟ್ಟ ಅಧಿಕಾರಿಗಳು ನಮ್ಮ ರಕ್ಷಣೆಗೆ ಬರಬೇಕು" ಎಂದು 53 ವರ್ಷದ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ವಿಜಯಮ್ಮ ಹೇಳುತ್ತಾರೆ.
ಇದನ್ನೂ ಓದಿ: Uttar Pradesh: SPಗೆ ಸೇರ್ಪಡೆಯಾಗ್ತಾರಾ ಮುಲಾಯಂ ಕಿರಿ ಸೊಸೆ ಅಪರ್ಣಾ ಯಾದವ್? ಬಿಜೆಪಿಗೆ ಗುಡ್ಬೈ?
ಈ ಹದ್ದುಗಳು ಬೆಳಿಗ್ಗೆ 6 ರಿಂದ ಸಂಜೆಯವರೆಗೆ ಹಾಗೆಯೇ ಆಕಾಶದಲ್ಲಿ ಹಾರಾಡುತ್ತಲೇ ಇರುತ್ತವೆ. ರೈತರು ಮತ್ತು ನರೆಗಾ ಕಾರ್ಮಿಕರು ಮುಖ್ಯವಾಗಿ ಅದರ ದಾಳಿಗೆ ಒಳಗಾಗಿದ್ದಾರೆ. ಅನೇಕರು ತಮ್ಮ ಪಕ್ಕದಲ್ಲಿ ಛತ್ರಿಗಳು ಮತ್ತು ಕೋಲುಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತಾರೆ.
“ಹದ್ದುಗಳು ಎಲ್ಲಿಂದಲೋ ಇದ್ದಕ್ಕಿದ್ದಂತೆ ಬಂದು ನಮ್ಮ ಮೇಲೆ ದಾಳಿ ಮಾಡಿ ನಮ್ಮಲ್ಲಿರುವ ಮೀನುಗಳನ್ನು ಎತ್ತಿಕೊಂಡು ಹೋಗುವುದರಿಂದ ಮೀನುಗಳನ್ನು ಸ್ವಚ್ಛಗೊಳಿಸುವುದು ಸಹ ತುಂಬಾ ಕಷ್ಟಕರವಾಗಿದೆ" ಎಂದು ಗೃಹಿಣಿ ಅರ್ಚನಾ ಪ್ರಶಾಂತ್ ಹೇಳುತ್ತಾರೆ.
ಇದನ್ನೂ ಓದಿ: Traffic Rules: ಇನ್ಮುಂದೆ ಬೇಕಾಬಿಟ್ಟಿಯಾಗಿ ವಾಹನ ಓಡಿಸಿದರೆ, ಬೀಳುತ್ತೇ ಭಾರೀ ದಂಡ!
"ನನ್ನ ತಾಯಿ ಮತ್ತು ನನ್ನ ಮೇಲೆ ಸಹ ಈ ಹದ್ದುಗಳು ದಾಳಿ ಮಾಡಿದ್ದವು. ಅದೃಷ್ಟವಶಾತ್ ನಮಗೆ ಯಾವುದೇ ಗಾಯಗಳಾಗಿಲ್ಲವಾದರೂ, ನಮ್ಮ ಮನೆಗಳಿಂದ ಏಕಾಂಗಿಯಾಗಿ ಹೊರ ಬರಲು ಹೆದರಿಕೆಯಾಗುತ್ತದೆ" ಎಂದು ಅವರು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ