Tips to get more Money: ಇಂದಿನ ದಿನಗಳಲ್ಲಿ ಸಾಲ (Debt) ಮಾಡುವುದು ಎಂದರೆ ಸಾಮಾನ್ಯ ವಿಷಯವಾಗಿದ್ದರೂ ಸಾಲ ತೀರಿಸುವ ಸಮಯದಲ್ಲಿ ಅದುವೇ ಒಂದು ಹೊರೆಯಾಗಿ ಪರಿಣಮಿಸುತ್ತದೆ ಹಾಗೂ ಒಮ್ಮೊಮ್ಮೆ ಸಾಲದ ಬಾಧೆ ತಾಳಲಾರದೆ ಜೀವನ ಅಂತ್ಯಗೊಳಿಸುವ ಪರಿಸ್ಥಿತಿಯೂ ಎದುರಾಗಿ ಬಿಡುತ್ತದೆ. ಆದ್ದರಿಂದಲೇ ಸಾಲ ಮಾಡುವ ಮುನ್ನ ಸಾಲವನ್ನು ಹೇಗೆ ತೀರಿಸಬಹುದು ಎಂಬ ಅಂಶದ ಮೇಲೂ ಗಮನ ಹರಿಸುವುದು ಮುಖ್ಯವಾಗಿದೆ. ಆದರೆ ಇಂದಿನ ಲೇಖನದಲ್ಲಿ ನಾವು ಹೇಳಹೊರಟಿರುವ ವಿಷಯ ಅಸಾಮಾನ್ಯ ಸಂಗತಿಯಾಗಿದೆ. ಅಮೆರಿಕದ ಕುಟುಂಬವೊಂದು ಕೇವಲ 17 ತಿಂಗಳಲ್ಲಿ 3 ಕೋಟಿ ಸಾಲ ತೀರಿಸಿ ಸಾಲದ ಋಣದಿಂದ ಹೇಗೆ ಹೊರಬಹುದು ಎಂಬ ಉಪಾಯ ತಿಳಿಸಿಕೊಟ್ಟಿದ್ದಾರೆ. ಅವರು ಇಷ್ಟು ದೊಡ್ಡ ಮೊತ್ತವನ್ನು (Money) ಕಡಿಮೆ ಸಮಯದಲ್ಲಿ ಹೇಗೆ ತೀರಿಸಿದರು..? ಸಾಲ ತೀರಿಸಲು ಯಾವ ವಿಧಾನಗಳನ್ನು (Methods) ಅನುಸರಿಸಿದರು ಎಂಬುದನ್ನು ತಿಳಿದುಕೊಳ್ಳೋಣ.
ಶಾನನ್ ತನ್ನ ಪತಿ ಹಾಗೂ ಐವರು ಕುಟುಂಬ ಸದಸ್ಯರೊಂದಿಗೆ ವಾಸಿಸುತ್ತಿದ್ದರು. ಯಾವುದೋ ತುರ್ತು ಕಾರ್ಯಕ್ಕಾಗಿ 4.66 ಕೋಟಿ ರೂ. ಸಾಲದ ರೂಪದಲ್ಲಿ ಪಡೆದುಕೊಂಡಿದ್ದರು ಹಾಗೂ ಈ ಸಾಲ ತೀರಿಸುವುದು ಅವರ ಜವಾಬ್ದಾರಿಯಾಗಿತ್ತು. ಇದಕ್ಕಾಗಿ ಶಾನನ್ ಹಾಗೂ ಅವರ ಪರಿವಾರ ಉಳಿತಾಯ ಮಾರ್ಗವನ್ನು ಅನುಸರಿಸಿತು.
ಅಗತ್ಯವಿದ್ದಲ್ಲಿ ಮಾತ್ರವೇ ಖರ್ಚು ಮಾಡುವುದು, ಹಿತಮಿತವಾಗಿ ಹಣ ವ್ಯಯಿಸುವುದು ಮೊದಲಾದ ಉಳಿತಾಯ ವಿಧಾನಗಳನ್ನು ಅನುಸರಿಸಿದರು. ಶಾನನ್ ಸಾಲದ ಹೊರೆಯಿಂದ ಮುಕ್ತರಾಗಲು ಯಾವ ವಿಧಾನಗಳನ್ನು ಅನುಸರಿಸಿದರು ಎಂಬುದನ್ನು ಟಿಕ್ಟಾಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಉಳಿತಾಯ ಯೋಜನೆಗಳೇ ಅವರ ಕುಟುಂಬಕ್ಕೆ ಸಾಲದ ಹೊರೆಯಿಂದ ಹೊರಬರಲು ಸಹಕಾರಿಯಾಗಿದ್ದು ಎಂದು ಶಾನನ್ ತಿಳಿಸಿದ್ದಾರೆ.
ಶಾನನ್ ಹೇಳಿರುವಂತೆ ಪೀಠೋಪಕರಣಗಳಿಂದ ಹಿಡಿದು ಆಹಾರ ಪದಾರ್ಥಗಳವರೆಗೆ ಬಿಗಿ ಕ್ರಮವನ್ನು ಅನುಸರಿಸಿದರು. ಅಗತ್ಯ ವಸ್ತುಗಳಿಗೆ ಮಾತ್ರವೇ ಖರ್ಚು ಮಾಡಿದರು. ಹೀಗೆ ಪ್ರತಿಯೊಂದರ ಮೇಲೆ ಶಾನನ್ ಹಾಗೂ ಕುಟುಂಬ ಕೈಹಿಡಿತವನ್ನು ಮಾಡಿದರು. ದುಂದು ವೆಚ್ಚಕ್ಕೆ ಕಡಿವಾಣ ಹಾಕಿದರು. ಅಲ್ಲದೆ ತಿಂಗಳಿನ ವೆಚ್ಚಗಳಿಗೆ ಕಡಿವಾಣ ಹಾಕಲು ಶಾನನ್ ಚಾರ್ಟ್ ಅನ್ನು ಸಿದ್ಧಪಡಿಸಿದರು.
ಕುಟುಂಬ ಸಾಲವನ್ನು ಹೇಗೆ ತೀರಿಸಿತು
ಶಾನನ್ ಸಾಲದಿಂದ ಮುಕ್ತರಾಗಿದ್ದು ಹೇಗೆ ಎಂಬುದನ್ನು ತಿಳಿಸುವುದಕ್ಕಾಗಿ ವಿಡಿಯೋ ಮಾಡಿದ್ದು ಅದನ್ನು ಟಿಕ್ಟಾಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ದಿನಸಿ ಸಾಮಗ್ರಿಗಳನ್ನು 7000 ರೂ. ಗೆ ಸೀಮಿತಗೊಳಿಸಿದರು ಹಾಗೂ ಬಟ್ಟೆಗಳನ್ನು ಹಾಗೂ ಇತರ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಸೇಲ್ ಬರುವ ಸಮಯಕ್ಕಾಗಿ ಕಾದರು. ಇಷ್ಟೇ ಅಲ್ಲದೆ ಕುಟುಂಬವು 3000 ಸ್ಕ್ವೇರ್ ಫೀಟ್ನಿಂದ 1000 ಸ್ಕ್ವೇರ್ ಫೀಟ್ಗೆ ತಮ್ಮ ಬಾಡಿಗೆ ಮನೆಯನ್ನು ಬದಲಾಯಿಸಿಕೊಂಡರು. ಇದರಿಂದ ಅವರಿಗೆ ಪ್ರತೀ ತಿಂಗಳು 86,000 ರೂ. ಉಳಿತಾಯವಾಗುತ್ತಿತ್ತು.
ಇನ್ನು ಹೊಸ ಕಾರಿನ ಬದಲಿಗೆ ಕುಟುಂಬವು ಹಳೆಯ ಹಾಗೂ ಸೆಕೆಂಡ್ ಹ್ಯಾಂಡ್ ಕಾರನ್ನು ಬಳಸಲಾರಂಭಿಸಿತು. ಡಿನ್ನರ್ ಹಾಗೂ ಹೊರಗೆ ಮಾಡುತ್ತಿದ್ದ ಖರ್ಚುಗಳಿಗೆ ಕಡಿವಾಣ ಹಾಕಿದರು. ಇದರಿಂದ ಸಾಕಷ್ಟು ಹಣ ಉಳಿತಾಯವಾಗುತ್ತಿತ್ತು ಎಂದು ಶಾನನ್ ತಿಳಿಸಿದ್ದಾರೆ. ಈ ಉಳಿತಾಯದಿಂದ 2 ವರ್ಷಗಳಲ್ಲಿ ಸಾಲದ ಮುಕ್ಕಾಲು ಭಾಗ ತೀರಿಸಿದ್ದಾರೆ. ಇನ್ನೂ 1.32 ಕೋಟಿ ಸಾಲ ಬಾಕಿಯಿದ್ದು ಶಾನನ್ ಹಾಗೂ ಕುಟುಂಬ ಅದನ್ನು ಆದಷ್ಟು ಬೇಗ ತೀರಿಸುವ ಭರವಸೆಯಲ್ಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ