Afghanistan Crisis: ಅಫ್ಘಾನಿಸ್ತಾನದಲ್ಲಿ ಉಗ್ರರ ನರಮೇಧಕ್ಕೆ 100ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ನಿನ್ನೆ ಕಾಬೂಲ್ ಏರ್ಪೋರ್ಟ್( Kabul Airport) ಸಮೀಪ ನಡೆದ ಅವಳಿ ಆತ್ಮಾಹುತಿ ಬಾಂಬ್ ದಾಳಿಯಿಂದ ರಕ್ತಸಿಕ್ತ ಅಧ್ಯಾಯ ಬಿಚ್ಚಿಕೊಂಡಿದೆ. ಇದೇ ವೇಳೆ ಸಂಭವಿಸಲಿದ್ದ 3ನೇ ಆತ್ಮಾಹುತಿ ಬಾಂಬ್ ದಾಳಿಯನ್ನು ತಡೆಯಲಾಗಿದೆ ಎಂಬ ಮಾಹಿತಿ ಬಹಿರಂಗಗೊಂಡಿದೆ. ನಿನ್ನೆ ಕಾಬೂಲ್ ವಿಮಾನ ನಿಲ್ದಾಣ ಮತ್ತು ಬ್ಯಾರನ್ ಹೋಟೆಲ್ನಲ್ಲಿ ಎರಡು ಸ್ಫೋಟಗಳು ಸಂಭವಿಸಿದ ನಂತರ ಹಕ್ಕಾನಿಗೆ ಸೇರಿದ ಪಾಕಿಸ್ತಾನಿ ಬಾಂಬರ್(Pakistani bomber) ಅನ್ನು ಬಂಧಿಸಲಾಗಿದೆ. ಆ ಮೂಲಕ ಸಂಭವಿಸಲಿದ್ದ 3ನೇ ಸ್ಫೋಟವನ್ನು ಕೂದಲೆಳೆ ಅಂತರದಲ್ಲಿ ತಪ್ಪಿಸಲಾಗಿದೆ.
ಕಾಬೂಲ್ ಸ್ಫೋಟದಲ್ಲಿ ಹಕ್ಕಾನಿ ಹಾಗೂ ಪಾಕಿಸ್ತಾನ ಕೈವಾಡ ಇರುವ ಬಗ್ಗೆ ತಾಲಿಬಾನ್ಗೆ ತಿಳಿದಿತ್ತು. ಇನ್ನು 3ನೇ ಸ್ಫೋಟವನ್ನು ತುರ್ಕಮೆನಿಸ್ತಾನ್ ರಾಯಭಾರ ಕಚೇರಿಯಲ್ಲಿ ನಡೆಸಲು ಪ್ಲಾನ್ ಮಾಡಲಾಗಿತ್ತು. ಆದರೆ ಇಲ್ಲಿ ಸ್ಫೋಟ ಸಂಭವಿಸುವ ಮೊದಲೇ ಇಬ್ಬರನ್ನು ಬಂಧಿಸಲಾಯಿತು ಎಂದು ಮೂಲಗಳು ತಿಳಿಸಿವೆ. ವಿಚಾರಣೆ ವೇಳೆ ಇಬ್ಬರೂ ಪಾಕಿಸ್ತಾನದವರು ಎಂದು ತಿಳಿದು ಬಂದಿದ್ದು, ತಾಲಿಬಾನ್ ವಶದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಬೂಲ್ ವಿಮಾನ ನಿಲ್ದಾಣದ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 100 ದಾಟಿದ್ದು, 150 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಐಸಿಸ್-ಕೆ ಈ ದಾಳಿಯ ಹೊಣೆ ಹೊತ್ತಿದೆ. ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಲೆವಂಟ್-ಖೊರಾಸನ್ ಪ್ರಾಂತ್ಯದ ಆತ್ಮಾಹುತಿ ಬಾಂಬರ್ಗಳು ಹಮೀದ್ ಕರ್ಜಾಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ಗುರುವಾರ ಜಮಾಯಿಸಿದ ಜನರ ಮೇಲೆ ದಾಳಿ ಮಾಡಿದರು. ತಾಲಿಬಾನ್ ನಿಯಂತ್ರಣದಲ್ಲಿರುವ ಅಫ್ಘಾನಿಸ್ತಾನದಿಂದ ಪಲಾಯನ ಮಾಡುವ ನಿರೀಕ್ಷೆಯಲ್ಲಿದ್ದ ಜನ ಸ್ಫೋಟಕ್ಕೆ ಬಲಿಯಾಗಿದ್ದಾರೆ. ಸ್ಫೋಟದಲ್ಲಿ 13 ಮಂದಿ ಅಮೆರಿಕಾ ಸೈನಿಕರು ಹತರಾಗಿದ್ದು, ಇದಕ್ಕೆ ಕಾರಣರಾದವರನ್ನು ಸುಮ್ಮನೆ ಬಿಡಲ್ಲ ಎಂದು ಯುಎಸ್ ಅಧ್ಯಕ್ಷ ಜೋ ಬಿಡೆನ್ ಎಚ್ಚರಿಸಿದ್ದಾರೆ.
ಇದನ್ನೂ ಓದಿ: Explained: ಅಫ್ಘಾನಿಸ್ತಾನ ಬಾಂಬ್ ಸ್ಫೋಟ ಪ್ರಕರಣ: ISIS-K ಅಂದ್ರೆ ಏನು..? ಇವರಿಗೂ ತಾಲಿಬಾನಿಗಳಿಗೂ ಸಂಬಂಧವಿದೆಯಾ..? ಇಲ್ಲಿದೆ ವಿವರ..
ದಾಳಿಯ ಹೊಣೆ ಹೊತ್ತಿರುವ ಐಸಿಸ್ ಉಗ್ರ ಸಂಘಟನೆ, ಅಮೆರಿಕದ ಸೈನ್ಯ ಮತ್ತು ಅವರ ಅಫಘಾನ್ ಮಿತ್ರರನ್ನು ಗುರಿಯಾಗಿಸಿಕೊಂಡ ದಾಳಿ ಮಾಡಿರುವುದಾಗಿ ತಿಳಿಸಿದೆ. ತಾಲಿಬಾನ್ ಕಾಬೂಲ್ ವಿಮಾನ ನಿಲ್ದಾಣವನ್ನು ನಿರ್ವಹಿಸಲು ಟರ್ಕಿಯನ್ನು ಕೇಳಿದೆ. ಆದರೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗನ್ ಶುಕ್ರವಾರ ಹೇಳಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣವನ್ನು ನಿರ್ವಹಿಸಲು ತಾಲಿಬಾನ್ ನಮಗೆ ವಿನಂತಿಯನ್ನು ಮಾಡಿದೆ. ಈ ವಿಷಯದ ಬಗ್ಗೆ ನಾವು ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅವರು ಇಸ್ತಾಂಬುಲ್ನ ಅಟತುರ್ಕ್ ವಿಮಾನ ನಿಲ್ದಾಣದಲ್ಲಿ ಸುದ್ದಿಗೋಷ್ಠಿಯಲ್ಲಿ ಬೋಸ್ನಿಯಾ ಪ್ರವಾಸಕ್ಕೆ ಹೊರಡುವ ಮುನ್ನ ಹೇಳಿದರು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ