ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಮೂರನೇ ಬಲಿ; ಕೌನ್ಸಿಲರ್ ಶಮ್ಸುದ್ದೀನ್ ಸಾವು – ಲಷ್ಕರ್ ಕೈವಾಡ ಶಂಕೆ

ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ನಗರಸಭೆಯ ಮೀಟಿಂಗ್ ವೇಳೆ ಸೋಮವಾರ ಮಧ್ಯಾಹ್ನ 1:15ಕ್ಕೆ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಪ್ರಾಣತ್ಯಾಗ ಮಾಡಿದ್ದಾರೆ. ಅವರಲ್ಲಿ ಇಬ್ಬರು ಕೌನ್ಸಿಲರ್​ಗಳಾಗಿದ್ದಾರೆ.

ಸಾಂದರ್ಬಿಕ ಚಿತ್ರ

ಸಾಂದರ್ಬಿಕ ಚಿತ್ರ

 • News18
 • Last Updated :
 • Share this:
  ಶ್ರೀನಗರ್(ಮಾ. 30): ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್​ನ ಸ್ಥಳೀಯ ಸಂಸ್ಥೆ ಸಭೆಯಲ್ಲಿ ನಿನ್ನೆ ಸೋಮವಾರ ಮಧ್ಯಾಹ್ನ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಮೂರನೇ ವ್ಯಕ್ತಿ ಬಲಿಯಾಗಿದ್ದಾರೆ. ನಿನ್ನೆಯ ಘಟನೆಯಲ್ಲಿ ಗಾಯಗೊಂಡಿದ್ದ ಪುರಸಭೆ ಸದಸ್ಯ (Councillor) ಶಮಸುದ್ದೀನ್ ಪೀರ್ ಇಂದು ಶ್ರೀನಗರದ ಆಸ್ಪತ್ರೆಯೊಂದರಲ್ಲಿ ಜೀವ ಬಿಟ್ಟಿದ್ದಾರೆ. ನಿನ್ನೆ ಪುರಸಭೆಯ ಪಕ್ಷೇತರ ಸದಸ್ಯ ರಿಯಾಜ್ ಅಹ್ಮದ್ ಹಾಗೂ ಸೆಕ್ಯೂರಿಟಿ ಗಾರ್ಡ್ ಶಫಕತ್ ಅಹ್ಮದ್ ಸ್ಥಳದಲ್ಲೇ ಸಾವನ್ನಪ್ಪಿದ್ದರು.

  ಸೋಪೋರ್ ಪುರಸಭೆಯ ಅಂಗಳದಲ್ಲಿ ಸಭೆ ನಡೆಯುತ್ತಿದ್ದ ವೇಳೆ ನಿನ್ನೆ ಮಧ್ಯಾಹ್ನ 1:15ಕ್ಕೆ ಅಪರಿಚಿತ ಬಂದೂಕುಧಾರಿಗಳು ನುಗ್ಗಿ ಗುಂಡಿನ ದಾಳಿ ಎಸಗಿದ್ದರು. ಈ ಘಟನೆಯಲ್ಲಿ ಈವರೆಗೆ ಮೂವರು ಬಲಿಯಾದಂತಾಗಿದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಲಷ್ಕರ್-ಇ-ತೈಬಾ ಸಂಘಟನೆಗೆ ಸೇರಿದ ಸ್ಥಳೀಯ ಉಗ್ರಗಾಮಿ ಮುದಸಿರ್ ಪಂಡಿತ್ ಹಾಗೂ ಮತ್ತೋರ್ವ ವಿದೇಶಿ ಉಗ್ರಗಾಮಿಯ ಕೈವಾಡ ಇರುವ ಸುಳಿವು ಸಿಕ್ಕಿದೆ. ಈ ಬಗ್ಗೆ ಮಾಹಿತಿ ನೀಡಿದ ಕಾಶ್ಮೀರ ವಲಯದ ಐಜಿಜಿ ವಿಜಯ್ ಕುಮಾರ್, ದುಷ್ಕರ್ಮಿಗಳನ್ನ ಹಿಡಿಯಲು ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿರುವುದನ್ನು ತಿಳಿಸಿದರು.

  ಸಭೆಯಲ್ಲಿ ರಕ್ಷಿತ ವ್ಯಕ್ತಿಗಳಿಗೆ ನಿಯೋಜಿಸಲಾಗಿದ್ದ ಭದ್ರತಾ ಸಿಬ್ಬಂದಿಯ ಕರ್ತವ್ಯ ಲೋಪವನ್ನು ಐಜಿಪಿ ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಸಂಬಂಧ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಲಾಗಿದ್ದು, ಘಟನೆಯ ತನಿಖೆ ನಡೆಸಲಾಗುತ್ತಿದೆ.

  ಇದನ್ನೂ ಓದಿ: ಮಾರ್ಚ್ 31ರಂದು ಭಾರತಕ್ಕೆ ಮತ್ತೆ ಮೂರು ರಫೇಲ್ ವಿಮಾನಗಳು ಫ್ರಾನ್ಸ್​ನಿಂದ ಆಗಮನ!

  ಉಗ್ರರ ದಾಳಿ ಘಟನೆಯನ್ನು ಬಿಜೆಪಿ ಬಲವಾಗಿ ಖಂಡಿಸಿದ್ದು, ಇದು ಹೇಡಿತನದ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದೆ. “ಕಾಶ್ಮೀರ ಈಗಾಗಲೇ ಸಾಕಷ್ಟು ರಕ್ತಪಾತ ಕಂಡಿದೆ. ಈಗ ಅಭಿವೃದ್ಧಿಯ ದಿಸೆಯಲ್ಲಿ ನಡೆಯುತ್ತಿರುವುದು ಭಯೋತ್ಪಾದಕ ಸಂಘಟನೆಗಳು ಮತ್ತವರ ಬಾಸ್​ಗಳಿಗೆ ಕಸಿವಿಸಿ ತಂದಿದೆ. ಇಂಥ ವಿದ್ವಂಸಕ ಕೃತ್ಯಗಳಿಂದ ಬಿಜೆಪಿ ಕಾರ್ಯಕರ್ತರ ಮನೋಸ್ಥೈರ್ಯವನ್ನು ಕುಂದಿಸಲು ಸಾಧ್ಯವಿಲ್ಲ” ಎಂದು ಜಮ್ಮು-ಕಾಶ್ಮೀರದ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ಹೇಳಿಕೆ ನೀಡಿದ್ಧಾರೆ.

  ನಿನ್ನೆಯ ಉಗ್ರರ ದಾಳಿ ಘಟನೆಯನ್ನು ಬಿಜೆಪಿಯಷ್ಟೇ ಅಲ್ಲ ಎಲ್ಲಾ ಪಕ್ಷಗಳೂ ಬಲವಾಗಿ ಖಂಡಿಸಿವೆ. ಇಂಥ ನಾಚಿಕೆಗೇಡಿತನದ ಕೃತ್ಯಗಳನ್ನ ಒಪ್ಪಲು ಸಾಧ್ಯವಿಲ್ಲ. ಸಮಾಜದ ಪ್ರತಿಯೊಬ್ಬರಿಂದಲೂ ಇದು ಖಂಡನಾರ್ಹವಾಗಿದೆ ಎಂದು ಜಮ್ಮು-ಕಾಶ್ಮೀರದ ಕಾಂಗ್ರೆಸ್ ಘಟಕ ಹಾಗೂ ನ್ಯಾಷನಲ್ ಕಾನ್ಫೆರೆನ್ಸ್ ಪಕ್ಷಗಳು ತಿಳಿಸಿವೆ.
  Published by:Vijayasarthy SN
  First published: