ಯುರೋಪ್ ನಲ್ಲಿ (Europe) ಕಂಡು ಕೇಳರಿಯದ ಕ್ಷಾಮ ಉಂಟಾಗಿದೆ. ನೀರಿನ ಸೆಲೆಗಳೆಲ್ಲ ಬತ್ತಿ ಹೋಗಿ ಭೀಕರ ಬರ ತಾಂಡವವಾಡುತ್ತಿದೆ. ಯುರೋಪಿಯನ್ ಒಕ್ಕೂಟದ ಜಂಟಿ ಸಂಶೋಧನಾ ಕೇಂದ್ರದ ಪ್ರಾಥಮಿಕ ವಿಶ್ಲೇಷಣೆಯ ಪ್ರಕಾರ, ಕನಿಷ್ಠ 500 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಯುರೋಪ್ ಈ ರೀತಿಯಾದ ಬರವನ್ನು (Drought) ಅನುಭವಿಸುತ್ತಿದೆ ಎಂದು ಹೇಳಿದೆ. ಶಾಖದ ಹೊಡೆತಕ್ಕೆ ಜನ (People) ಕಂಗಾಲಾಗಿದ್ದಾರೆ. ತಾಪಮಾನ ಮತ್ತು ಶುಷ್ಕ ಪರಿಸ್ಥಿತಿಗಳಿಂದಾಗಿ ಬೆಳೆ ಇಳುವರಿ, ವಿದ್ಯುತ್ ಉತ್ಪಾದನೆ (Power generation) ಕಡಿಮೆಯಾಗಿದೆ. ಜೋಳ, ಸೋಯಾಬೀನ್ ಮತ್ತು ಸೂರ್ಯಕಾಂತಿ ಬೆಳೆಗಳು (Sunflower crop) ಹಿಂದಿನ ಐದು ವರ್ಷಗಳ ಸರಾಸರಿಗಿಂತ ಕ್ರಮವಾಗಿ 16%, 15% ಮತ್ತು 12% ರಷ್ಟು ಕಡಿಮೆಯಾಗಿವೆ. ಅಷ್ಟೇ ಅಲ್ಲ, ಈ ಸ್ಥಿತಿ ಅಲ್ಲಲ್ಲಿ ಕಾಡ್ಗಿಚ್ಚಿಗೂ ಸಹ ಕಾರಣವಾಗಿದೆ.
ಹೆಚ್ಚಿದ ತಾಪಮಾನದಿಂದ ಸ್ಥಳಾಂತರಗೊಳ್ಳುತ್ತಿರುವ ಜನ
ಯುರೋಪ್ ನಲ್ಲಿ ಹೆಚ್ಚಿದ ತಾಪಮಾನದಿಂದಾಗಿ ಸಾವಿರಾರು ಜನ ಸ್ಥಳಾಂತರಗೊಳ್ಳುತ್ತಿದ್ದಾರೆ, ಅಲ್ಲದೇ ಹಲವಾರು ಸಾವು-ನೋವುಗಳು ಸಹ ಸಂಭವಿಸುತ್ತಿವೆ. ಹವಾಮಾನ ಬದಲಾವಣೆಯು ಹೆಚ್ಚಿನ ತಾಪಮಾನ ಮತ್ತು ಬರಗಳನ್ನು ತೀವ್ರಗೊಳಿಸಿದೆ.
ನೀರಿನ ಮೂಲಗಳಾದ ಸರೋವರಗಳು ಮತ್ತು ನದಿಗಳು ಬತ್ತಿಹೋಗಿದ್ದು, ಹಡಗು ಮತ್ತು ಇತರ ಸಂಪರ್ಕ ಸಾಧನಗಳಿಗೆ ಸಮಸ್ಯೆ ಶುರುವಾಗಿದೆ. ಇದರ ಜೊತೆಗೆ ನೀರಿನ ಅಡಿಯಲ್ಲಿ ಮುಳುಗಿದ್ದ ಹಲವಾರು ಅಪರೂಪದ ಕೆಲವು ವಸ್ತುಗಳು ನೀರು ಬತ್ತಿ ಹೋದ್ದರಿಂದ ನೋಡಲು ಸಿಕ್ಕಿವೆ. ಈ ರೀತಿಯಾದ ಹಲವಾರು ವಿಶೇಷ ಜಾಗ, ವಸ್ತುಗಳನ್ನು ಫೋಟೋದಲ್ಲಿ ಸೆರೆ ಹಿಡಿಯಲಾಗಿದೆ. ಹಾಗೆಯೇ ಈ ಫೋಟೋಗಳು ಯುರೋಪ್ ರಾಷ್ಟ್ರದಲ್ಲಿ ಎಷ್ಟರ ಮಟ್ಟಿಗೆ ಕ್ಷಾಮ ಇದೆ ಎಂಬುವುದಕ್ಕೆ ಜೀವಂತ ಸಾಕ್ಷಿಗಳಾಗಿವೆ.
ಹಡಗು ಸಾಗುವ ನದಿಯ ಮಾರ್ಗದಲ್ಲಿ ಕಲ್ಲುಗಳು ಪತ್ತೆ
ನದಿ, ಸರೋವರ ಈಗಾಗ್ಲೇ ಸಾಕಷ್ಟು ಪ್ರಮಾಣದಲ್ಲಿ ಬತ್ತಿ ಹೋಗಿದ್ದರಿಂದ ಅದರಡಿಯಲ್ಲಿರುವ ಕಲ್ಲುಗಳು ಗೋಚರವಾಗುತ್ತಿವೆ. ನೀರಿನಿಂದ ಮೇಲಿರುವ ಕಲ್ಲುಗಳು ಭವಿಷ್ಯದ ತೊಂದರೆಗಳನ್ನು ಎತ್ತಿ ತೋರಿಸುತ್ತಿವೆ ಎನ್ನಬಹುದು.
ನಾಜಿಗಳು ಸೋವಿಯತ್ ಪಡೆಗಳಿಂದ ಪಲಾಯನ ಮಾಡುತ್ತಿರುವ ಸಂದರ್ಭದಲ್ಲಿ ಮುಳುಗಿದ್ದ ಜರ್ಮನ್ ಹಡಗುಗಳು ಪತ್ತೆ
ಸೆರ್ಬಿಯಾದ ಡ್ಯಾನ್ಯೂಬ್‌ನಲ್ಲಿ ಕಡಿಮೆ ನೀರಿನ ಮಟ್ಟದಿಂದಾಗಿ ಅಲ್ಲಿ ಸ್ಫೋಟಕಗಳನ್ನು ಹೊತ್ತ ಎರಡನೇ ಮಹಾಯುದ್ಧದ ಹಡಗುಗಳ ಅವಶೇಷಗಳು ಪತ್ತೆಯಾಗಿವೆ. ಇವುಗಳನ್ನು ಜರ್ಮನ್ ಹಡುಗಗಳು ಎಂದು ಗುರುತಿಸಲಾಗಿದೆ.
ಸ್ಫೋಟಗೊಳ್ಳದ ಬಾಂಬ್ ಅನ್ನು ಪೊ ನದಿಯಿಂದ ಹೊರತಂದ ಇಟಾಲಿಯನ್ ಸೇನೆ
ಪೊ ಇಟಲಿಯ ಅತಿ ಉದ್ದದ ನದಿಯಾಗಿದ್ದು, ಇದು ಸಹ ತಾಪಮಾನದ ಹೊಡೆತಕ್ಕೆ ಬರಿದಾಗುತ್ತಿದೆ. ಈ ನದಿಯಲ್ಲಿ ಸ್ಫೋಟಗೊಳ್ಳದ ಶಸ್ತ್ರಾಸ್ತ್ರಗಳನ್ನು ಸೇನೆ ಪತ್ತೆಹಚ್ಚಿದ್ದು, ದೊಡ್ಡ ಬಾಂಬ್ ಗಳನ್ನು ನೀರಿನಿಂದ ಹೊರಕ್ಕೆ ತೆಗೆಯಲಾಗಿದೆ.
"ಜಿಬೆಲ್ಲೋ" ಬಾರ್ಜ್ ಗೋಚರ
ಪೋ ನದಿಯಲ್ಲಿ, 1943 ರ ಸಂದರ್ಭದಲ್ಲಿ ಮುಳುಗಿದ್ದ ಜರ್ಮನ್ನರು ಬಳಸಿದ ಬಾರ್ಜ್ ಕೂಡ ಪತ್ತೆಯಾಗಿದೆ. ಪೋ ನದಿಯಲ್ಲಿ ಕೆಲವು ತಿಂಗಳುಗಳ ಹಿಂದೆ ನೀರಿನ ಮಟ್ಟವು ಕುಸಿದಿದ್ದರಿಂದ ಜಿಬೆಲ್ಲೊ ಬಾರ್ಜ್ ಸ್ಥಳೀಯರಿಗೆ ಮೊದಲ ಬಾರಿಗೆ ಗೋಚರವಾಗಿದೆ. ಪೋ ನದಿ ಸಾಕಷ್ಟು ಬರಿದಾಗುತ್ತಿರುವುದರಿಂದ ನದಿಯ ಅಡಿಯಲ್ಲಿದ್ದ ಹಲವಾರು ಅವಶೇಷಗಳು ಪತ್ತೆಯಾಗುತ್ತಿವೆ.
ನೀರೋ ದೊರೆ ನಿರ್ಮಿಸಿದ ಸೇತುವೆಯ ಅವಶೇಷಗಳು ಟೈಬರ್ ನದಿಯಲ್ಲಿ ಬಹಿರಂಗ
ಕ್ರಿ.ಶ. 50ರ ಸುಮಾರಿಗೆ ನೀರೋ ಚಕ್ರವರ್ತಿ ನಿರ್ಮಿಸಿದ ಹಳೆಯ ಸೇತುವೆಯ ಅವಶೇಷಗಳು ಕಡಿಮೆ ನದಿಯ ಮಟ್ಟದಿಂದಾಗಿ ರೋಮ್‌ನ ಟೈಬರ್ ನದಿಯಲ್ಲಿ ಪತ್ತೆಯಾಗಿವೆ.
"ಫ್ರಾಂಕೋ-ಯುಗದ ಅಧಿಕಾರಿಗಳು ಮುಳುಗಿಸಿದ್ದ ಸ್ಪ್ಯಾನಿಷ್ ಸ್ಟೋನ್‌ಹೆಂಜ್" ಮತ್ತೆ ಬೆಳಕಿಗೆ
ಸ್ಪೇನ್‌ನ ಕ್ಯಾಸೆರೆಸ್ ಪ್ರಾಂತ್ಯದ ಕೇಂದ್ರ ವಾಲ್ಡೆಕಾನಾಸ್ ಜಲಾಶಯದಲ್ಲಿ "ಸ್ಪ್ಯಾನಿಷ್ ಸ್ಟೋನ್‌ಹೆಂಜ್" ಕಾಣಿಸಿಕೊಂಡಿದೆ. ಗ್ವಾಡಾಲ್ಪೆರಲ್ಲಿನ ಡಾಲ್ಮೆನ್ ಎಂದು ಅಧಿಕೃತವಾಗಿ ಕರೆಯಲ್ಪಡುವ ಕಲ್ಲುಗಳ ವೃತ್ತವು ಸುಮಾರು 5000 BC ಯಿಂದ ಅಸ್ತಿತ್ವದಲ್ಲಿದೆ ಎಂದು ಹೇಳಲಾಗಿದೆ. ಅಂದಿನಿಂದ ಇಂದಿನವರೆಗೆ ಈ ಕಲ್ಲುಗಳು ನಾಲ್ಕು ಬಾರಿ ಕಾಣಿಸಿಕೊಂಡಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ