ಹೆಸರಲ್ಲೇನಿದೆ? ಹೆಸರಲ್ಲಿ ಎಲ್ಲವೂ ಇದೆ: ಕೆಲ ದೇಶಗಳಲ್ಲಿ ಈ ಹೆಸರುಗಳನ್ನು ನಾಮಕರಣ ಮಾಡುವಂತಿಲ್ಲ

zahir | news18
Updated:December 24, 2018, 3:20 PM IST
ಹೆಸರಲ್ಲೇನಿದೆ? ಹೆಸರಲ್ಲಿ ಎಲ್ಲವೂ ಇದೆ: ಕೆಲ ದೇಶಗಳಲ್ಲಿ ಈ ಹೆಸರುಗಳನ್ನು ನಾಮಕರಣ ಮಾಡುವಂತಿಲ್ಲ
ತೈಮೂರ್
zahir | news18
Updated: December 24, 2018, 3:20 PM IST
ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಅತ್ಯುತ್ತಮ ಹೆಸರಿಡಲು ಬಯಸುತ್ತಾರೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಹೆಸರಿನ ವ್ಯಾಮೋಹ ತುಸು ಹೆಚ್ಚು ಎನ್ನಬಹುದು. ಅದರಲ್ಲೂ ಭಾರತದಲ್ಲಿ ಎಲ್ಲರ ಗಮನ ಸೆಳೆದಂತಹ ಹೆಸರೆಂದರೆ ತೈಮೂರ್. ತಾರಾ ದಂಪತಿ ಸೈಫ್​ ಅಲಿ ಖಾನ್​ ಮತ್ತು ಕರೀನಾ ಕಪೂರ್​ ಎರಡು ವರ್ಷಗಳ ಹಿಂದೆ ತೈಮೂರ್​ ಎಂದು ನಾಮಕರಣ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವಿವಾದವನ್ನು ಹುಟ್ಟು ಹಾಕಿತ್ತು.

ಭಾರತದ ಮೇಲೆ ಆಕ್ರಮಣ ಮಾಡಿದ ಒಬ್ಬ ರಾಜನ ಹೆಸರು ಕೂಡ ತೈಮೂರ್​ ಆಗಿದ್ದರಿಂದ ಅನೇಕರು ಇಂತಹ ಹೆಸರಿಡಬಾರದೆಂದು ವಿತಂಡ ವಾದ ಮಂಡಿಸಿದ್ದರು. ಸದ್ಯ ಭಾರತದ ಅತಿ ಸಣ್ಣ ಸೆಲೆಬ್ರಿಟಿಯಲ್ಲಿ ಇಂದು ತೈಮೂರ್ ಮೊದಲ ಸ್ಥಾನದಲ್ಲಿ​ ಕಾಣಿಸಿಕೊಂಡಿದ್ದಾನೆ. ಆದರೆ ದೇಶದಲ್ಲಿ ತೈಮೂರ್​ಕ್ಕಿಂತಲೂ ಮುಂಚಿತವಾಗಿ ಯಾವುದೇ ಮಗುವಿನ ಹೆಸರು ಈ ರೀತಿ ವಿವಾದಕ್ಕೀಡಾಗಿರಲಿಲ್ಲ ಎಂಬುದು ಕೂಡ ಅಷ್ಟೇ ಸತ್ಯ.

ಕೆಲವು ಹೆಸರುಗಳು ಇನ್ನೊಬ್ಬರ ಭಾವನೆಗಳನ್ನು ಕೆರಳಿಸುತ್ತದೆ ಎಂಬುದು ತೈಮೂರ್​ ನಾಮ ವಿವಾದದಿಂದ ಭಾರತದಲ್ಲಿ ಗೊತ್ತಾಗಿತ್ತು. ಇದೇ ರೀತಿ ಕೆಲವೊಂದು ದೇಶಗಳಲ್ಲಿ ಕೆಲವು ಹೆಸರುಗಳನ್ನಿಟ್ಟರೆ ಪೋಷಕರು ಜೈಲು ಪಾಲಾಗುತ್ತಾರೆ ಎಂದರೆ ನೀವು ನಂಬಲೇಬೇಕು. ಅಂತಹ ದೇಶಗಳಾವು ಮತ್ತು ಅಲ್ಲಿ ನಿಷೇಧಿಸಲ್ಪಟ್ಟಿರುವ ಹೆಸರುಗಳೇನು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಸೌದಿ ಅರೇಬಿಯಾ : ಈ ದೇಶದಲ್ಲಿ 50ಕ್ಕೂ ಹೆಚ್ಚು ಹೆಸರುಗಳನ್ನು ನಿಷೇಧಿಸಲಾಗಿದೆ. ಇಲ್ಲಿ ಕೆಲ ಹೆಸರುಗಳು ಅಧರ್ಮ, ದೇಶ ವಿರೋಧಿ, ವಿದೇಶಿತೆಯನ್ನು ಸೂಚಿಸುತ್ತಿದೆ ಎಂಬ ಕಾರಣಕ್ಕೆ ಬ್ಯಾನ್​ ಮಾಡಲಾಗಿದೆ.

ನಿಷೇಧಿಸಲ್ಪಟ್ಟ ಪ್ರಮುಖ ಹೆಸರುಗಳು: ಬಿನ್ಯಾಮಿನ್​, ಮಲ್ಲಿಕಾ, ಮಲಕ್, ಲಿಂಡಾ ಮತ್ತು ಮಾಯಾ

_____________________________________________________________

ಫ್ರಾನ್ಸ್: ಫ್ರಾನ್ಸ್​ನಲ್ಲಿ ಮಕ್ಕಳ ಹೆಸರುಗಳು ಹಾಸ್ಯಕ್ಕೀಡಾಗಬಾರದೆಂಬ ಕಾನೂನಿದೆ. ಈ ಕಾರಣದಿಂದ ಜನನ ಪ್ರಮಾಣ ಪತ್ರವನ್ನು ರಿಜಿಸ್ಟರ್​ ಮಾಡುವಾಗ ಸ್ಥಳೀಯ ನ್ಯಾಯಾಲಯ ಮಗುವಿನ ಹೆಸರಿನಲ್ಲಿ ಅಪಹಾಸ್ಯವಿದೆಯೇ ಎಂಬುದನ್ನ ಪರೀಕ್ಷಿಸುತ್ತದೆ.
Loading...

ಬ್ಯಾನ್​ ಮಾಡಿರುವ  ಹೆಸರುಗಳು: ನ್ಯೂಟೆಲ್ಲಾ, ಸ್ಟ್ರಾಬೆರಿ, ಡಿಮೊನ್, ಪ್ರಿನ್ಸ್ ವಿಲಿಯಂ ಮತ್ತು ಮಿನಿ ಕೂಪರ್

_______________________________________________________________

ಜರ್ಮನಿ: ಈ ದೇಶದಲ್ಲೂ ನಾಮಕರಣ ಮಾಡಲು ವಿಶೇಷ ನಿಯಮಗಳಿವೆ. ಇದರ ಅನುಸಾರ ಗಂಡು ಮತ್ತು ಹೆಣ್ಣು ಮಕ್ಕಳು ಬೇರೆ ಬೇರೆ ಹೆಸರುಗಳನ್ನು ಹೊಂದಿರಬೇಕು. ಹಾಗೆಯೇ ಯಾವುದೇ ವಸ್ತುಗಳ ಹೆಸರುಗಳನ್ನು ಮಕ್ಕಳಿಗೆ ಇಡುವಂತಿಲ್ಲ.

ಜರ್ಮನಿಯಲ್ಲಿ ನಿಷೇಧಿಸಲ್ಪಟ್ಟ ಹೆಸರುಗಳು: ಮಟ್ಟಿ, ಒಸಾಮಾ ಬಿನ್ ಲಾಡೆನ್, ಅಡಾಲ್ಫ್ ಹಿಟ್ಲರ್, ಕೋಲ್, ಸ್ಟೊಂಪಿ

_________________________________________________________________

ಸ್ವಿಟ್ಜರ್ಲೆಂಡ್​: ಜರ್ಮನಿಯಂತೆಯೇ ಸ್ವಿಟ್ಜರ್ಲೆಂಡ್​ನಲ್ಲೂ ನಾಮಕರಣದ ವಿಷಯದಲ್ಲಿ ಕಟ್ಟುನಿಟ್ಟಿನ ನಿಯಮಗಳಿವೆ. ಮಕ್ಕಳಿಗೆ ಹೆಸರಿಡಲು ಸಿವಿಲ್ ರಿಜಿಸ್ಟರ್​ನಿಂದ ಅನುಮತಿ ಪಡೆಯಬೇಕು. ಇಲ್ಲಿ ಮಗುವಿಗೆ ನೋವುಂಟಾಗುವ ಯಾವುದೇ ರೀತಿಯ ಹೆಸರುಗಳನ್ನು ಇಡಲು ಅವಕಾಶವಿರುವುದಿಲ್ಲ. ಅದೇ ರೀತಿ ಹುಡುಗನ ಹೆಸರನ್ನು ಹುಡುಗಿಗೆ ಹಾಗೂ ಹುಡುಗಿಯ ಹೆಸರನ್ನು ಹುಡುಗನಿಗೆ ನೀಡಬಾರದು. ಹಾಗೆಯೇ ಬೈಬಲ್​ನಲ್ಲಿ ಸೂಚಿಸಿರುವ ದುಷ್ಟ ವ್ಯಕ್ತಿಗಳ ಹೆಸರನ್ನು ಇಡಬಾರದು.

ಸ್ವಿಜರ್ಲೆಂಡ್​ನಲ್ಲಿ ಬ್ಯಾನ್ ಆಗಿರುವ ಹೆಸರುಗಳು: ಜುದಾಸ್, ಚಾನೆಲ್, ಪ್ಯಾರಿಸ್, ಶಿಮ್ಡ್, ಮರ್ಸಿಡಿಸ್

_______________________________________________________________

ಐಸ್​ಲ್ಯಾಂಡ್​: ಈ ದೇಶದಲ್ಲಿ ಮಕ್ಕಳಿಗೆ ಹೆಸರಿಡುವುದೇ ದೊಡ್ಡ ಸಾಧನೆ ಎನ್ನಲಾಗುತ್ತದೆ. ಏಕೆಂದರೆ ಇಲ್ಲಿ ಮಕ್ಕಳಿಗೆ ನಾಮಕರಣ ಮಾಡಿದ 6 ತಿಂಗಳೊಳಗೆ ರಾಷ್ಟ್ರೀಯ ನೋಂದಣಿ ಮಾಡಿಕೊಳ್ಳಬೇಕು. ಈ ಸಂದರ್ಭದಲ್ಲಿ ಹೆಸರುಗಳು ತಿರಸ್ಕೃತಗೊಳ್ಳುತ್ತದೆ. ಇಲ್ಲಿ ಪ್ರತಿವರ್ಷ ಅರ್ಧದಷ್ಟು ಹೆಸರುಗಳು ತಿರಸ್ಕರಿಸಲ್ಪಡುತ್ತದೆ ಎನ್ನಲಾಗಿದೆ. ಈ ದೇಶದ ವರ್ಣಮಾಲೆಯಲ್ಲಿ ಸಿ, ಕ್ಯೂ ಮತ್ತು ಡಬ್ಲ್ಯೂ ಇಲ್ಲ. ಈ ಕಾರಣದಿಂದ ಈ ಅಕ್ಷರಗಳಿಂದ ಪ್ರಾರಂಭವಾಗುವ ಯಾವುದೇ ಹೆಸರುಗಳನ್ನು ಇಡಬಾರದು.

ಐಸ್​ಲ್ಯಾಂಡ್​ನಲ್ಲಿ ನಿಷೇಧಿಸಲ್ಪಟ್ಟಿರುವ ಹೆಸರುಗಳು:  ಝೊ, ಹ್ಯಾರಿಯೆಟ್, ಡಂಕನ್, ಎನ್ರಿಕ್, ಲುಡ್ವಿಗ್

_____________________________________________________________

ಡೆನ್ಮಾರ್ಕ್: ಈ ದೇಶದಲ್ಲಿ ಸರ್ಕಾರವೇ 7 ಸಾವಿರ ಹೆಸರುಗಳನ್ನು ಸೂಚಿಸಿದೆ. ಇದರ ಹೊರತಾಗಿಯು ಯಾರಾದರೂ ಬೇರೊಂದು ಹೆಸರು ಇಡಬೇಕೆಂದು ಇಚ್ಛಿಸಿದರೆ ಅನುಮತಿ ಪಡೆಯಬೇಕಾಗುತ್ತದೆ. ಇಲ್ಲಿ ಪ್ರತಿ ವರ್ಷ ಸಾವಿರಕ್ಕೂ ಹೆಚ್ಚು ಹೆಸರನ್ನು ನವೀಕರಿಸಲಾಗುತ್ತದೆ.

ಡೆನ್ಮಾರ್ಕ್​ನಲ್ಲಿ ಬ್ಯಾನ್ ಆದ ಹೆಸರುಗಳು: ಜಾಕೋಬ್, ಆಶ್ಲೇ, ಅನುಸ್, ಮಂಕಿ, ಪ್ಲುಟೊ

__________________________________________________________

ನಾರ್ವೆ: ಭಾರತೀಯರಂತೆ ನಾರ್ವೆ ದೇಶದವರು ಕೂಡ ಉಪನಾಮವನ್ನು ಇರಿಸಿಕೊಳ್ಳುತ್ತಾರೆ. ಈ ಕಾರಣದಿಂದ ಈ ದೇಶದಲ್ಲಿ ಉಪನಾಮವನ್ನು ಮೊದಲ ಹೆಸರಾಗಿ ಬಳಸುವುದರ ಮೇಲೆ ನಿಷೇಧ ಹೇರಲಾಗಿದೆ. ಇಲ್ಲಿ ಹ್ಯಾನ್ಸೆನ್​ ಅಥವಾ ಹ್ಯುಗೆನ್​ನಂತಹ ಪ್ರಸಿದ್ಧ ಉಪನಾಮಗಳನ್ನು ಹೆಸರಾಗಿ ಬಳಸಲು ಅವಕಾಶವಿರುವುದಿಲ್ಲ.

ನಾರ್ವೆಯಲ್ಲಿ ಬ್ಯಾನ್ ಮಾಡಿರುವ ಹೆಸರುಗಳು: ಹ್ಯಾನ್ಸೆನ್, ಯುಹನ್ಸೆನ್, ಓಲ್ಸೆನ್, ಹ್ಯುಗೆನ್, ಲಾರ್ಸೆನ್

____________________________________________________________

ಸ್ವೀಡನ್​: ಈ ದೇಶದಲ್ಲಿ ನಿಂದನೆಗೆ ಒಳಗಾಗುವಂತಹ ಯಾವುದೇ ಹೆಸರುಗಳನ್ನು ಇಡಲು ಅವಕಾಶವಿಲ್ಲ. ಮಗು ಜನಿಸಿದ ಮೂರು ತಿಂಗಳೊಳಗೆ ಹೆಸರಿಟ್ಟು, ಆ ನಾಮವನ್ನು ಟ್ಯಾಕ್ಸ್​ ಏಜೆನ್ಸಿಗಳೊಂದಿಗೆ ಹಂಚಿಕೊಳ್ಳುವುದು ಇಲ್ಲಿ ಅನಿವಾರ್ಯ.

ಸ್ವೀಡನ್​ನಲ್ಲಿ ನಿಷೇಧಿಸಿ ಹೆಸರುಗಳು: ಮೆಟಾಲಿಕಾ, ಸೂಪರ್​ಮ್ಯಾನ್, ಇಕಿಯಾ, ಎಲ್ವಿಸ್

__________________________________________________________

ಮಲೇಷ್ಯಾ: ಈ ದೇಶದಲ್ಲಿ ಪ್ರಾಣಿಗಳ ಮತ್ತು ಆಹಾರಗಳ ಹೆಸರುಗಳನ್ನು ಮಕ್ಕಳಿಗೆ ನಾಮಕರಣ ಮಾಡುವಂತಿಲ್ಲ. ಮುಖ್ಯವಾಗಿ ರಾಜಮನೆತನದ ಹೆಸರು, ಸಂಖ್ಯೆಗಳು, ಪ್ರಾಣಿಗಳ ಹೆಸರುಗಳನ್ನು ಇಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇಂತಹ ಹೆಸರುಗಳನ್ನು ಮಕ್ಕಳಿಗಿಟ್ಟರೆ ಅದನ್ನು ಕಾನೂನು ಬಾಹಿರ ಎಂದು ಪರಿಗಣಿಸಲಾಗುತ್ತದೆ.

ಮಲೇಶಿಯಾದಲ್ಲಿ ಬ್ಯಾನ್ ಆಗಿರುವ ಹೆಸರುಗಳು: ಚೀನೀ ಅಹ್ ಚ್ವಾರ್​ (ಹಾವು), ವೋಟಿ (ಸೆಕ್ಸ್​), ಖಿಯೊ ಖೂ, ಚೌ ಟಾವ್ (ವಾಸನೆ)

___________________________________________________________

ಪೋರ್ಚುಗಲ್​: ಈ ದೇಶದ ಸರ್ಕಾರ 82 ಪುಟಗಳಿಷ್ಟಿರುವ ಹೆಸರುಗಳನ್ನು ಸೂಚಿಸಿದೆ. ಇಲ್ಲಿ ನೀಡಲಾಗಿರುವ ಹೆಸರುಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಅದೇ ರೀತಿ ಹುಡುಗ ಮತ್ತು ಹುಡುಗಿ ಹೆಸರುಗಳು ಕೂಡ ಭಿನ್ನವಾಗಿರುತ್ತದೆ. ಹಾಗೆಯೇ ಯಾವುದೇ ರೀತಿಯ ನಿಕ್ ನೇಮ್​ಗಳನ್ನು ಬಳಸಲು ಅವಕಾಶವಿರುವುದಿಲ್ಲ.

ಪೋರ್ಚುಗಲ್​ನಲ್ಲಿ​ ನಿಷೇಧಿಸಲ್ಪಟ್ಟಿರುವ ಹೆಸರುಗಳು: ನಿರ್ವಾಣ, ರಿಹಾನಾ, ಜಿಮಿ, ವೈಕಿಂಗ್, ಸಾಯೊನಾರ

_________________________________________________________

ಅಮೆರಿಕದಲ್ಲಿ ಸಂಪೂರ್ಣ ಸ್ವಾತಂತ್ರ್ಯ: ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ ಕೆಲವು ಹೆಸರುಗಳನ್ನು ಬ್ಯಾನ್​ ಮಾಡಲಾಗಿದ್ದರೂ, ಅಮೆರಿಕದಲ್ಲಿ ತಮಗೆ ಬೇಕಾದಂತೆ ನಾಮಕರಣ ಮಾಡುವ ಸ್ವಾತಂತ್ರ್ಯವಿದೆ. ಈ ಕಾರಣದಿಂದ ಅಮೆರಿಕದಲ್ಲಿ ಹಿಟ್ಲರ್​ ಎಂಬ ಹೆಸರುಗಳು ಕೂಡ ಸಾಮಾನ್ಯ. ಅಮೆರಿಕದಲ್ಲಿರುವ ಹಲವು ನಾಜಿ ಸಮುದಾಯದವರು ಈಗಲೂ 'ಅಡಾಲ್ಫ್​ ಹಿಟ್ಲರ್'​ ಹೆಸರನ್ನು ತಮ್ಮ ಮಕ್ಕಳಿಗೆ ಇಡುತ್ತಾರೆ.

ಇದನ್ನೂ ಓದಿ: ಆರ್​ಪಿಎಫ್​ ನೇಮಕಾತಿ: ಎಸ್​ಎಸ್​ಎಲ್​ಸಿ ಪಾಸಾದವರಿಗೆ ಸರ್ಕಾರಿ ಉದ್ಯೋಗ ಪಡೆಯಲು ಸುವರ್ಣಾವಕಾಶ

 

First published:December 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ