Study In Abroad: ವಿದೇಶದಲ್ಲಿ ಓದುವ ಪ್ಲ್ಯಾನ್ ಇದೆಯೇ? ಹಾಗಿದ್ರೆ ಇದನ್ನು ತಪ್ಪದೇ ಓದಿ

ಈ 2022 ರಲ್ಲಿ ವಿದೇಶಕ್ಕೆ ಹೋಗಿ ಅಲ್ಲಿ ನಿಮ್ಮ ವಿದ್ಯಾಭ್ಯಾಸವನ್ನು ಶುರು ಮಾಡಲು ನೀವು ಕೆಲವು ಹಂತಗಳನ್ನು ದಾಟಲೇಬೇಕು. ಈ ಹಂತಗಳನ್ನು ಇಲ್ಲಿ ವಿವರವಾಗಿ ನೀಡಲಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • News18
  • Last Updated :
  • Share this:
ಎಷ್ಟೋ ಜನ ವಿದ್ಯಾರ್ಥಿಗಳು (Students) ಭಾರತದಲ್ಲಿ ಇಂಜಿನಿಯರಿಂಗ್, ವೈದ್ಯಕೀಯ ಪದವಿಗಳನ್ನು ಮುಗಿಸಿ ತಮ್ಮ ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ (Abroad) ಹೋಗುವುದನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಕೋವಿಡ್-19.0 ಸಾಂಕ್ರಾಮಿಕ ವೈರಸ್ ಹಾವಳಿಯಿಂದಾಗಿ ಈ ಎರಡು ವರ್ಷಗಳಿಂದ ವಿದೇಶಕ್ಕೆ ಉನ್ನತ ವ್ಯಾಸಂಗಕ್ಕೆ (Study In Abroad) ಹೋಗುವವರ ಸಂಖ್ಯೆಯಲ್ಲಿ ಸ್ವಲ್ಪ ಇಳಿಮುಖ ಆಗಿರಬಹುದೇನೋ, ಆದರೆ ವಿದೇಶಕ್ಕೆ ಓದಲು ಹೋಗುವುದು ಕೆಲವು ರಾಜ್ಯಗಳ ವಿದ್ಯಾರ್ಥಿಗಳಿಗೆ ಇನ್ನೂ ಇದು ಪ್ರಥಮ ಆಯ್ಕೆಯಾಗಿ ಉಳಿದಿದೆ ಎಂದು ಹೇಳಬಹುದು. ಬಹುತೇಕರು ವಿದೇಶಕ್ಕೆ ಹೋಗಿ ತಮ್ಮ ಸ್ನಾತಕೋತ್ತರ ಪದವಿಯನ್ನು ಅಲ್ಲೇ ಪಡೆದುಕೊಂಡು ಅಲ್ಲಿಯೇ ಕೈತುಂಬಾ ಸಂಬಳ (Salary) ಬರುವಂತಹ ಕೆಲಸವನ್ನು ಹುಡುಕಿಕೊಂಡು ಅಲ್ಲಿಯೇ ನೆಲೆಸಿಬಿಡುವ ಯೋಚನೆಯನ್ನು ಹೊಂದಿರುತ್ತಾರೆ ಎಂದರೆ ಸುಳ್ಳಲ್ಲ.

ಅನೇಕ ಅಂಶಗಳನ್ನು ತಿಳಿದುಕೊಂಡು ಅರ್ಜಿ ಸಲ್ಲಿಸುವುದು ಉತ್ತಮ
ಈಗ ಈ ಕೋವಿಡ್ ನ ಹಾವಳಿಯ ಮಧ್ಯೆ ವಿದೇಶಕ್ಕೆ ಹೋಗಿ ಓದುವುದು ಎಂದರೆ ಅಷ್ಟೊಂದು ಸುಲಭದ ಪ್ರಯಾಣವೇನಲ್ಲ ಬಿಡಿ. ಇದರ ಜೊತೆಗೆ ಅವರು ಹೋಗಬೇಕು ಎಂದು ಅಂದು ಕೊಳ್ಳುವ ದೇಶ, ಅಲ್ಲಿನ ವಿಶ್ವವಿದ್ಯಾಲಯಗಳು, ಅಲ್ಲಿನ ಪದವಿ ಮತ್ತು ಸ್ನಾತಕೋತ್ತರ ಪದವಿ ಅಧ್ಯಯನಗಳು, ಕೋರ್ಸ್ ಗಳು, ಅಲ್ಲಿನ ಹಣಕಾಸಿನ ಪರಿಸ್ಥಿತಿ, ಉಳಿದುಕೊಳ್ಳುವ ವ್ಯವಸ್ಥೆ, ವಾತಾವರಣ, ಊಟ ತಿಂಡಿಯ ವ್ಯವಸ್ಥೆ ಮತ್ತು ಆ ಶಿಕ್ಷಣ ಸಂಸ್ಥೆಗಳಿಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಅನೇಕ ಪ್ರಶ್ನೆಗಳು ಆಕಾಂಕ್ಷಿಗಳನ್ನು ಆತಂಕಕ್ಕೀಡು ಮಾಡುತ್ತವೆ ಎನ್ನುವುದಂತೂ ನಿಜ.

ಅನೇಕ ಅಂಶಗಳ ಬಗ್ಗೆ ಮುಂಚಿತವಾಗಿಯೇ ಚೆನ್ನಾಗಿ ತಿಳಿದುಕೊಂಡು ನಂತರ ಆ ವಿದೇಶಗಳಲ್ಲಿರುವ ವಿಶ್ವವಿದ್ಯಾಲಯಗಳಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ವಿದೇಶದಲ್ಲಿ ಅಧ್ಯಯನ ಮಾಡಲು ಯೋಜಿಸುವ ವಿದ್ಯಾರ್ಥಿಗಳು ತಮ್ಮ ಆದ್ಯತೆಗಳನ್ನು ಚೆನ್ನಾಗಿ ತಿಳಿದು ಕೊಂಡಿರಬೇಕು.

ಇದಕ್ಕೆ ಸಂಭಂದಪಟ್ಟ ದಾಖಲೆಗಳಿವೆಯೇ ಎಂದು ಖಚಿತಪಡಿಸಿಕೊಳ್ಳಿ
ಈ ಅರ್ಜಿ ಸಲ್ಲಿಸಲು ತಮ್ಮ ಬಳಿ ಅದಕ್ಕೆ ಸಂಬಂಧಪಟ್ಟಂತಹ ಎಲ್ಲಾ ರೀತಿಯ ದಾಖಲೆಗಳು ನಮ್ಮ ಬಳಿ ಇವೆಯೆ ಎಂಬುದನ್ನು ಮೊದಲು ಖಚಿತ ಪಡಿಸಿಕೊಳ್ಳಬೇಕು. ನೀವು ತುಂಬಾ ವರ್ಷಗಳಿಂದ ವಿದೇಶಕ್ಕೆ ಹೋಗಿ ನಿಮ್ಮ ವ್ಯಾಸಂಗವನ್ನು ಮುಂದುವರೆಸಬೇಕು ಎಂದು ಅಂದು ಕೊಂಡಿದ್ದರೇ, ಆದನ್ನು ಹೇಗೆ ಶುರು ಮಾಡಬೇಕು ಎಂಬುದರ ಬಗ್ಗೆ ನಿಮ್ಮಲ್ಲಿ ಅನೇಕರಿಗೆ ತಿಳಿದಿಲ್ಲದಿದ್ದರೆ, ಮುಂದೆ ಓದಿ ಅರ್ಥವಾಗುತ್ತದೆ. ಅದರಲ್ಲೂ ಈ 2022 ರಲ್ಲಿ ವಿದೇಶಕ್ಕೆ ಹೋಗಿ ಅಲ್ಲಿ ನಿಮ್ಮ ವಿದ್ಯಾಭ್ಯಾಸವನ್ನು ಶುರು ಮಾಡಲು ನೀವು ಕೆಲವು ಹಂತಗಳನ್ನು ದಾಟಲೆಬೇಕು. ಈ ಹಂತಗಳನ್ನು ಇಲ್ಲಿ ವಿವರವಾಗಿ ನೀಡಲಾಗಿದೆ.

1. ನೀವು ವಿದೇಶಕ್ಕೆ ಹೋಗುವ ಯೋಜನೆಯ ಮೇಲೆ ಚೆನ್ನಾಗಿ ಕೆಲಸ ಮಾಡಿ
ನೀವು ಮೊದಲ ಬಾರಿಗೆ ವಿದೇಶಕ್ಕೆ ಓದಲು ಹೋಗುತ್ತಿದ್ದರೆ, ನಿಮ್ಮ ಸುತ್ತಮುತ್ತಲಿನ ಜನರು ಮತ್ತು ಸ್ನೇಹಿತರ ಮಾತುಗಳಿಗೆ, ಊಹೆಗಳಿಗೆ ಮತ್ತು ಕಿವಿಮಾತುಗಳಿಗೆ ಅಷ್ಟೊಂದು ಕಿವಿ ಕೊಡಬೇಡಿ. ಏಕೆಂದರೆ ಅವರು ಹೇಳುವ ಆ ಮಾತುಗಳು ನಿಮಗೆ ಗೊಂದಲಕ್ಕೀಡು ಮಾಡಬಹುದು. ಹೀಗಾಗಿ, ಅವುಗಳಿಂದ ತಪ್ಪಿಸಿಕೊಳ್ಳುವ ಏಕೈಕ ಮಾರ್ಗವೆಂದರೆ ಒಂದು ಯೋಜನೆಯನ್ನು ರೂಪಿಸುವುದು ಮತ್ತು ನೀವು ವಿದೇಶದಲ್ಲಿ ಅಧ್ಯಯನ ಮಾಡಲು ಹೋದಾಗ ಯಾವೆಲ್ಲಾ ಮೂಲಭೂತ ಅಂಶಗಳು ನಿಮ್ಮ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತವೆಯೋ, ಅದನ್ನೆಲ್ಲಾ ಒಂದು ಕಡೆ ಬರೆದಿಟ್ಟುಕೊಳ್ಳುವ ಮೂಲಕ ಪ್ರಾರಂಭಿಸುವುದು.

ಈಗ ಬೇರೆ ದೇಶದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಲಭ್ಯವಿರುವ ಆಯ್ಕೆಗಳ ಹೇರಳತೆಯನ್ನು ಗಮನಿಸಿದರೆ, ಅತಿರೇಕಕ್ಕೆ ಒಳಗಾಗುವುದು ಮತ್ತು ಗೊಂದಲಕ್ಕೊಳಗಾಗುವುದು ಸ್ವಾಭಾವಿಕವಾಗಿರುತ್ತದೆ. ನಿಮ್ಮ ಆಯ್ಕೆಗಳನ್ನು ತಿಳಿದುಕೊಂಡು ಅವುಗಳನ್ನು ವಿಂಗಡಿಸಿಕೊಳ್ಳುವ ಮೂಲಕ ನಿಮ್ಮ ಯೋಜನೆಯನ್ನು ಪ್ರಾರಂಭಿಸಿ. ಉನ್ನತ ಸಂಸ್ಥೆಗಳು ಮತ್ತು ನೀವು ಅರ್ಜಿ ಸಲ್ಲಿಸಲು ಬಯಸುವ ಕೋರ್ಸ್ ಗಳ ಪಟ್ಟಿಯನ್ನು ಆಯಾ ಶಿಕ್ಷಣ ಸಂಸ್ಥೆಗಳ ವೆಬ್‌ಸೈಟ್ ಮೂಲಕ ಒಟ್ಟುಗೂಡಿಸಿ.

ಸಾಧ್ಯವಾದರೆ, ಆ ಸಂಸ್ಥೆಯಲ್ಲಿ ನಿಮ್ಮ ಭವಿಷ್ಯ ಮತ್ತು ಅವಕಾಶಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಅಲ್ಲಿ ಕೆಲಸ ಮಾಡುವ ಅಧಿಕಾರಿಗಳೊಂದಿಗೆ ಸಂಪರ್ಕಿಸಿ. ಪ್ರಪಂಚದಾದ್ಯಂತದ ವಿಶ್ವವಿದ್ಯಾಲಯದ ಅಧಿಕಾರಿಗಳನ್ನು ಒಟ್ಟಿಗೆ ಒಂದೇ ವೇದಿಕೆಯ ಮೇಲೆ ಕರೆ ತರುವಂತಹ ಮತ್ತು ಸಂಸ್ಥೆಗಳು ಮತ್ತು ಅಂತರರಾಷ್ಟ್ರೀಯ ಶಿಕ್ಷಣ ತಜ್ಞರು ಆಯೋಜಿಸುವ ವೆಬಿನಾರ್ ಗಳು ಮತ್ತು ಕಾರ್ಯಕ್ರಮಗಳಿಗೆ ತಪ್ಪದೆ ಹಾಜರಾಗಿ ಮತ್ತು ಹೆಚ್ಚು ಮಾಹಿತಿಯನ್ನು ಕಲೆ ಹಾಕಿರಿ.

2. ಬಜೆಟ್ ಯೋಜನೆ ಮಾಡಿಕೊಳ್ಳಿರಿ
ವಿದೇಶಕ್ಕೆ ಉನ್ನತ ವ್ಯಾಸಂಗಕ್ಕೆ ಹೋಗುವಾಗ ವಿದ್ಯಾರ್ಥಿಗಳಿಗೆ ಹೆಚ್ಚಿಗೆ ಕಾಡುವ ಒಂದು ಯೋಚನೆ ಎಂದರೆ ಅದು ಬಜೆಟ್ ಯೋಜನೆ ಬಗ್ಗೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅನೇಕ ವಿದ್ಯಾರ್ಥಿಗಳಿಗೆ ದೊಡ್ಡ ಸವಾಲುಗಳಲ್ಲಿ ಒಂದು ಆರ್ಥಿಕ ನಿರ್ಬಂಧಗಳು. ಹಲವಾರು ಸಂಸ್ಥೆಗಳು ಮತ್ತು ಸರ್ಕಾರಗಳು ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಒದಗಿಸುತ್ತವೆ. ಅರ್ಹತಾ ಮಾನದಂಡಗಳನ್ನು ಪರಿಶೀಲಿಸುವ ಮೂಲಕ ನೀವು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು. ಅಧ್ಯಯನ ಮಾಡುವಾಗ ಅಲ್ಲಿಯೇ ನೀವು ಅರೆಕಾಲಿಕವಾಗಿಯೂ ಕೆಲಸ ಮಾಡಬಹುದು. ಆದಾಗ್ಯೂ, ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಅನುಮತಿಸಲಾದ ಕೆಲಸದ ಸಮಯದ ಪ್ರಮಾಣವು ನೀವು ಅಧ್ಯಯನ ಮಾಡಲು ಉದ್ದೇಶಿಸಿರುವ ದೇಶದ ಸರ್ಕಾರವು ಸ್ಥಾಪಿಸಿದ ನಿಯಮಗಳು ಮತ್ತು ನಿಬಂಧನೆಗಳಿಗೆ ಒಳಪಟ್ಟಿರುತ್ತದೆ.

ಇದನ್ನೂ ಓದಿ: Flight: ವಿಮಾನದಲ್ಲಿ ಪ್ರಯಾಣಿಸುವವರಿಗೆ ಫೌಂಟೇನ್​ ಪೆನ್​ ತೆಗೆದುಕೊಂಡು ಹೋಗಲು ಅನುಮತಿಯಿಲ್ಲ! ಯಾಕೆ?

ನಿಮ್ಮ ಬೋಧನಾ ಶುಲ್ಕದ ಅವಶ್ಯಕತೆಗಳೊಂದಿಗೆ ಜೀವನ ನಡೆಸಲು ಬೇಕಾಗುವ ಎಲ್ಲಾ ವೆಚ್ಚವನ್ನು ಒಮ್ಮೆ ವಿವರವಾಗಿ ಮೌಲ್ಯಮಾಪನ ಮಾಡಿ. ನೀವಿರುವ ಸ್ಥಳದಲ್ಲಿ ನೀವು ಜೀವನ ನಡೆಸಲು ಎಷ್ಟು ಹಣ ಬೇಕಾಗಬಹುದು ಎಂಬುದನ್ನು ಮೊದಲೇ ಯೋಜಿಸಿಕೊಳ್ಳಿರಿ.

3. ವಿದೇಶ ಪ್ರಯಾಣದ ನಿಯಮಗಳು ಮತ್ತು ವೀಸಾ ನೀತಿಯನ್ನು ತಿಳಿದುಕೊಳ್ಳಿರಿ
ಈ ದೇಶಗಳಿಂದ ದೇಶಕ್ಕೆ ಅವರವರ ಪ್ರಯಾಣದ ನಿಯಮಗಳು ಮತ್ತು ವೀಸಾ ನೀತಿಗಳು ಸಹ ಬೇರೆ ಬೇರೆಯಾಗಿರುತ್ತವೆ ಮತ್ತು ಆಗಾಗ್ಗೆ ಬದಲಾಗುತ್ತಾ ಸಹ ಇರುತ್ತವೆ. ಅದರಲ್ಲೂ ಈಗ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿಯ ಮಧ್ಯೆ ಜಗತ್ತು ಇನ್ನೂ ಸಾಮಾನ್ಯ ಸ್ಥಿತಿಯತ್ತ ಸಂಪೂರ್ಣವಾಗಿ ಮರಳಿಲ್ಲ ಎಂದಾದಾಗ ಇವುಗಳ ಬಗ್ಗೆ ಎಷ್ಟು ವಿವರಗಳನ್ನು ಕಲೆ ಹಾಕಿದರೂ ಸಹ ಕಡಿಮೇನೆ ಎಂದು ಹೇಳಬಹುದು. ನೀವು ಹೋಗಬೇಕೆಂದಿರುವ ವಿದೇಶದ ಪ್ರಯಾಣದ ನಿಯಮಗಳು ಮತ್ತು ವೀಸಾ ನೀತಿಯ ಅವಶ್ಯಕತೆಗಳು ಮತ್ತು ಆ ನಿರ್ದಿಷ್ಟ ದೇಶದಲ್ಲಿ ಅಧ್ಯಯನ ಮಾಡುವ ಪ್ರಕ್ರಿಯೆಯನ್ನು ಮೊದಲು ಚೆನ್ನಾಗಿ ಅರಿತುಕೊಳ್ಳಿರಿ.

ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧದ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಂಡಿರಲೇ ಬೇಕಾಗಿರುವುದರಿಂದ, ನೀವು ಹೋಗುತ್ತಿರುವ ದೇಶದ ವೈದ್ಯಕೀಯ ಪ್ರಾಧಿಕಾರವು ಹೊರಡಿಸಿದ ಅನುಮೋದಿತ ಲಸಿಕೆಗಳ ಪಟ್ಟಿಯನ್ನು ಪರಿಶೀಲಿಸುವುದು ತುಂಬಾನೇ ಮುಖ್ಯವಾಗುತ್ತದೆ.

4. ನಿಮ್ಮ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಸುಲಭಗೊಳಿಸಿಕೊಳ್ಳಿರಿ
ವು ನಿಮ್ಮ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೊದಲು ವಿಷಯಗಳನ್ನು ಸುಲಭವಾಗಿ ಮತ್ತು ವ್ಯವಸ್ಥಿತವಾಗಿ ಇರಿಸಿಕೊಳ್ಳಿ. ನೀವು ಈ ಪ್ರಕ್ರಿಯೆಯಲ್ಲಿ ಪ್ರಮುಖ ದಿನಾಂಕಗಳನ್ನು ವಿವರಿಸಲು ಸ್ಪ್ರೆಡ್ ಶೀಟ್, ಚೆಕ್ ಲಿಸ್ಟ್ ಅನ್ನು ನಿರ್ವಹಿಸುವುದನ್ನು ಕಲಿಯಿರಿ. ಇದರಿಂದ ನೀವು ಯಾವುದೇ ರೀತಿಯ ಈ ಗಡುವುಗಳನ್ನು ತಪ್ಪಿಸಿಕೊಳ್ಳುವುದಿಲ್ಲ. ಉದ್ದೇಶದ ಹೇಳಿಕೆ, ಅಂಕಪಟ್ಟಿಗಳ ಸ್ಕ್ಯಾನ್ ಮಾಡಿದ ಪ್ರತಿಗಳು, ಪರೀಕ್ಷಾ ಅಂಕಗಳು, ಶಿಫಾರಸು ಪತ್ರ, ಇತ್ಯಾದಿಗಳಂತಹ ನಿಮ್ಮ ಎಲ್ಲಾ ಅಗತ್ಯ ದಾಖಲೆಗಳನ್ನು ಒಂದೇ ಕಡೆಯಲ್ಲಿ ನೀಟಾಗಿ ಇರಿಸಿಕೊಳ್ಳಿರಿ.

ವಿದೇಶದಲ್ಲಿರುವ ಶಿಕ್ಷಣ ಸಂಸ್ಥೆಗಳಿಗೆ ನೀವು ಅರ್ಜಿ ಸಲ್ಲಿಸುವ ಸಂಪೂರ್ಣ ಪ್ರಕ್ರಿಯೆಯು ನಿಮಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದರೆ, ಅಪ್ಲಿಕೇಶನ್ ಪ್ರಕ್ರಿಯೆಯನ್ನು ಹೇಗೆ ಪೂರ್ಣಗೊಳಿಸಬೇಕು ಎಂಬುದರ ಬಗ್ಗೆ ನಿಮಗೆ ಮಾರ್ಗದರ್ಶನ ನೀಡಲು ನುರಿತ ವ್ಯಕ್ತಿಗಳ ಮತ್ತು ಅತ್ಯಾಧುನಿಕ ಕೃತಕ ಬುದ್ದಿವಂತಿಕೆ (ಎಐ) ಅನ್ನು ಬಳಸುವ ಸಾಗರೋತ್ತರ ಶಿಕ್ಷಣ ಸಲಹೆಗಾರರಿಂದ ಸಹಾಯವನ್ನು ಪಡೆಯಿರಿ.

ನಿಮಗೆ ಯಾವುದು ಸೂಕ್ತವೋ, ಅದನ್ನು ನೀವು ಆಯ್ಕೆ ಮಾಡಿಕೊಳ್ಳಿರಿ ಮತ್ತು ನಿಮ್ಮ ಆಯ್ಕೆ ಪ್ರಕ್ರಿಯೆಯಲ್ಲಿ ನೀವು ಭರ್ತಿ ಮಾಡುವಂತಹ ಅಪ್ಲಿಕೇಶನ್ ಗಳು ನಿರ್ಣಾಯಕ ಪಾತ್ರ ವಹಿಸುವುದರಿಂದ ಈ ಹಂತದಲ್ಲಿ ಶ್ರದ್ಧೆಯಿಂದ ಕೆಲಸ ಮಾಡುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.

5. ನಿಮಗೆ ಒಟ್ಟಿಗೆ ಎರಡು ಮೂರು ವಿಶ್ವವಿದ್ಯಾಲಯಗಳಿಂದ ಒಪ್ಪಿಗೆ ಪತ್ರ ಲಭಿಸಿದರೆ ಏನು ಮಾಡುವಿರಿ?
ನೀವು ಒಂದೇ ವಿಶ್ವವಿದ್ಯಾಲಯದಿಂದ ಒಪ್ಪಿಗೆ ಪತ್ರವನ್ನು ಪಡೆದರೆ ನೀವು ಕಣ್ಮುಚ್ಚಿಕೊಂಡು ಅದಕ್ಕೆ ಹೋಗಬಹುದು. ಆದರೆ ಒಮ್ಮೊಮ್ಮೆ ಒಂದಕ್ಕಿಂತ ಹೆಚ್ಚು ವಿಶ್ವವಿದ್ಯಾಲಯಗಳಿಂದ ಪ್ರವೇಶದ ಒಪ್ಪಿಗೆ ಪತ್ರವನ್ನು ನೀವು ಪಡೆದರೆ, ಏನು ಮಾಡುವಿರಿ? ಹೀಗಾದಾಗ ನಿಮ್ಮ ಆದ್ಯತೆಯನ್ನು ತಲೆಯಲ್ಲಿ ಇರಿಸಿಕೊಳ್ಳಿರಿ.

ನಿಮ್ಮ ವೃತ್ತಿಜೀವನದ ಆಕಾಂಕ್ಷೆಗಳೊಂದಿಗೆ ಯಾವ ಸಂಸ್ಥೆ ಉತ್ತಮವಾಗಿ ಹೊಂದಿಕೊಳ್ಳುತ್ತದೆ ಎಂದು ತಿಳಿದಿದ್ದರೆ, ಕಣ್ಣು ಮಿಟುಕಿಸುವ ಸಮಯದಲ್ಲಿ ನೀವು ನಿಮ್ಮ ಆಯ್ಕೆಯನ್ನು ಮಾಡಬಹುದು. ಈ ಆಯ್ಕೆಯು ಅನೇಕರಿಗೆ ಗೊಂದಲಮಯವಾಗಬಹುದು. ಹಾಗಾದಾಗ ಅದರ ಸಾಧಕ ಬಾಧಕಗಳ ಚೆಕ್ ಲಿಸ್ಟ್ ಅನ್ನು ತಯಾರಿಕೊಂಡು ಅದನೊಮ್ಮೆ ನೋಡಿಕೊಂಡು ಮುಂದುವರೆಯುವುದು ಒಳ್ಳೆಯದು. ನಿಮ್ಮ ಆದ್ಯತೆಗಳನ್ನು ಪರಿಗಣಿಸಿ ಮತ್ತು ಸಂಸ್ಥೆಯನ್ನು ಆಯ್ಕೆ ಮಾಡುವುದರಿಂದ ನಿಮ್ಮ ವೃತ್ತಿಜೀವನದ ಗುರಿಗಳು ಈಡೇರುತ್ತವೆಯೆ ಎಂದು ನೋಡಿಕೊಳ್ಳಿರಿ.

ಇದನ್ನೂ ಓದಿ:  Viral Photo: ಆಗಷ್ಟೇ ಪದವಿ ಪಡೆದ ತಂದೆಯ ಫೋಟೋವನ್ನು ಹೆಮ್ಮೆಯಿಂದ ಕ್ಲಿಕ್ಕಿಸಿದ ಪುಟಾಣಿ

ಇನ್ನಿತರೆ ಬೋಧನಾ ಶುಲ್ಕ ಮತ್ತು ಜೀವನ ನಡೆಸಲು ಬೇಕಾಗುವ ವೆಚ್ಚವನ್ನು ತಿಳಿದುಕೊಳ್ಳಿರಿ. ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಬೋಧಕ ವರ್ಗ, ಕೋರ್ಸ್, ಇಂಟರ್ನ್ಶಿಪ್ ಅವಕಾಶಗಳು ಮತ್ತು ಬೆಂಬಲ ಸೇವೆಗಳ ಬಗ್ಗೆ ಹೆಚ್ಚು ಸಂಶೋಧನೆ ಮಾಡುವುದು ನಿಮ್ಮ ನಿರ್ಧಾರವನ್ನು ತರ್ಕಬದ್ಧಗೊಳಿಸಲು ನಿಮಗೆ ಇನ್ನಷ್ಟು ಸಹಾಯ ಮಾಡುತ್ತದೆ.
Published by:Ashwini Prabhu
First published: