ಭಯೋತ್ಪಾದಕ ಕೇಜ್ರಿವಾಲ್: ಸಂಸದ ಪರ್ವೇಶ್ ವರ್ಮಾ ಆರೋಪಕ್ಕೆ ಧ್ವನಿಗೂಡಿಸಿದ ಪ್ರಕಾಶ್ ಜಾವಡೇಕರ್

ಶಾಹೀನ್ ಬಾಗ್​ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ‘ಅಸ್ಸಾಮ್ ಕೋ ಆಜಾದಿ’, ’ಜಿನ್ನಾ ವಾಲಿ ಆಜಾದಿ’ ಎಂಬ ಘೋಷಣೆಗಳು ಕೇಳಿಬರುತ್ತಿವೆ. ಇಂಥವಕ್ಕೆ ಬೆಂಬಲ ಕೊಡುವುದೂ ಕೂಡ ಭಯತ್ಪಾದನೆಯೇ ಎಂದು ಪ್ರಕಾಶ್ ಜಾವಡೇಕರ್ ಟೀಕಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮನೋಜ್ ತಿವಾರಿ, ಪ್ರಕಾಶ್ ಜಾವಡೇಕರ್ ಮತ್ತು ಅನುರಾಗ್ ಠಾಕೂರ್

ಸುದ್ದಿಗೋಷ್ಠಿಯಲ್ಲಿ ಮನೋಜ್ ತಿವಾರಿ, ಪ್ರಕಾಶ್ ಜಾವಡೇಕರ್ ಮತ್ತು ಅನುರಾಗ್ ಠಾಕೂರ್

  • News18
  • Last Updated :
  • Share this:
ನವದೆಹಲಿ(ಫೆ. 03): ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಒಬ್ಬ ಭಯೋತ್ಪಾದಕ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ಪರ್ವೇಶ್ ವರ್ಮಾ ವಿವಾದಕ್ಕೆ ಈಡಾಗಿದ್ದಾರೆ. ತಮ್ಮ ಆರೋಪವನ್ನು ಸಮರ್ಥಿಸಿಕೊಳ್ಳುತ್ತಿರುವ ಪರ್ವೇಶ್ ವರ್ಮಾಗೆ ಬಿಜೆಪಿಯ ಇತರ ನಾಯಕರು ಬೆಂಬಲವಾಗಿ ನಿಂತಿದ್ದಾರೆ. ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರೂ ಕೂಡ ವರ್ಮಾ ಆರೋಪಕ್ಕೆ ಧ್ವನಿಗೂಡಿಸಿದ್ದಾರೆ. ಪ್ರಕಾಶ್ ಜಾವಡೇಕರ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೇಜ್ರಿವಾಲ್ ಭಯೋತ್ಪಾದಕ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ಹೇಳಿದ್ದಾರೆ.

“ನಾನೊಬ್ಬ ಭಯೋತ್ಪಾದಕನಾ ಎಂದು ಕೇಜ್ರಿವಾಲ್ ಅಮಾಯಕತನದಿಂದ ಕೇಳುತ್ತಿದ್ಧಾರೆ. ನೀವು ಒಬ್ಬ ಭಯೋತ್ಪಾದಕ ಎಂಬುದನ್ನು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಿವೆ. ನೀವೊಬ್ಬ ಅರಾಜಕತಾವಾದಿ (Anarchist) ಎಂದು ನೀವೇ ಹಿಂದೆ ಹೇಳಿಕೊಂಡಿದ್ದಿರಿ. ಅರಾಜಕತಾವಾದಿಗೂ ಉಗ್ರವಾದಿಗೂ ಅಂಥ ಏನೂ ವ್ಯತ್ಯಾಸ ಇಲ್ಲ” ಎಂದು ಪ್ರಕಾಶ್ ಜಾವಡೇಕರ್ ಕುಟುಕಿದರು.

ಇದನ್ನೂ ಓದಿ: ರಾಜಕೀಯ ಪ್ರೇರಿತ ಶಾಹೀನ್ ಬಾಗ್, ಜಾಮಿಯಾ ಪ್ರತಿಭಟನೆಗಳು ಭಾರತವನ್ನು ಇಬ್ಭಾಗವಾಗಿಸಿದೆ; ಪ್ರಧಾನಿ ಮೋದಿ

ಇಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ ಪ್ರಕಾಶ್ ಜಾವಡೇಕರ್ ಈ ವಾಗ್ದಾಳಿ ನಡೆಸಿದ್ದಾರೆ. ಸದಾ ವಿವಾದಾತ್ಮಕ ಹೇಳಿಕೆಗಳಿಂದ ಹೆಸರು ಮಾಡಿರುವ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ, ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಜೊತೆಗಿದ್ದ ಈ ಪತ್ರಿಕಾಗೋಷ್ಠಿಯಲ್ಲಿ ಪ್ರಕಾಶ್ ಜಾವಡೇಕರ್ ದೆಹಲಿ ಸಿಎಂ ವಿರುದ್ಧ ಆರೋಪಗಳ ಮಳೆಯನ್ನೇ ಸುರಿಸಿದರು.

“ಪಂಜಾಬ್ ವಿಧಾನಸಭಾ ಚುನಾವಣೆಯ ವೇಳೆ ಮೋಗಾ ಪಟ್ಟಣದಲ್ಲಿರುವ ಖಲಿಸ್ತಾನ್ ಕಮಾಂಡೋ ಫೋರ್ಸ್​ನ ಮುಖ್ಯಸ್ಥ ಗುರೀಂದರ್ ಸಿಂಗ್ ಅವರ ಮನೆಯಲ್ಲಿ ಕೇಜ್ರಿವಾಲ್ ಒಂದು ರಾತ್ರಿ ಕಳೆದಿದ್ದರು. ಅದು ಉಗ್ರಗಾಮಿಯ ಮನೆ ಎಂದು ನಿಮಗೆ ಗೊತ್ತಿತ್ತು. ಆದರೂ ಅಲ್ಲಿ ಉಳಿದುಕೊಂಡಿರಿ. ನೀವು ಉಗ್ರಗಾಮಿ ಎಂಬುದಕ್ಕೆ ಇದಕ್ಕಿಂತ ಇನ್ನೇನು ಸಾಕ್ಷ್ಯ ಬೇಕು?” ಎಂದು ಜಾವಡೇಕರ್ ಪ್ರಶ್ನೆ ಮಾಡಿದರು.

ಶಾಹೀನ್ ಬಾಗ್​ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಆಮ್ ಆದ್ಮಿ ಪಕ್ಷ ಬೆಂಬಲ ನೀಡುತ್ತದೆ. ಈ ಪ್ರತಿಭಟನೆಗಳಲ್ಲಿ ‘ಅಸ್ಸಾಮ್ ಕೋ ಆಜಾದಿ’(ಅಸ್ಸಾಮ್​ಗೆ ಸ್ವಾತಂತ್ರ್ಯ), ’ಜಿನ್ನಾ ವಾಲಿ ಆಜಾದಿ’ (ಜಿನ್ನಾ ಮಾದರಿಯ ಆಜಾದಿ) ಎಂಬ ಘೋಷಣೆಗಳು ಕೇಳಿಬರುತ್ತಿವೆ. ಇಂಥ ದೇಶದ್ರೋಹಿ ಘೋಷಣೆಗಳಿಗೆ ಬೆಂಬಲ ಕೊಡುವುದೂ ಕೂಡ ಭಯತ್ಪಾದನೆಯೇ ಎಂದು ಪ್ರಕಾಶ್ ಜಾವಡೇಕರ್ ಟೀಕಿಸಿದರು.

ಇದನ್ನೂ ಓದಿ: ಶಾಹೀನ್ ಬಾಗ್ ಬಿಸಿ ಆರಲು ಅಮಿತ್ ಶಾ ಬಿಡುವುದಿಲ್ಲ: ಅರವಿಂದ್ ಕೇಜ್ರಿವಾಲ್

ಜವಾಹರ್ ಲಾಲ್ ನೆಹರೂ ವಿಶ್ವ ವಿದ್ಯಾಲಯದಲ್ಲಿ ಭಾರತ ವಿರೋಧಿ ಘೋಷಣೆ ಮೊಳಗಿಸುವವರ ಪರ ಕೇಜ್ರಿವಾಲ್ ನಿಂತಿದ್ದರು. ಅವರನ್ನು ಕಾನೂನು ವಿಚಾರಣೆಗೆ ಒಳಪಡಿಸಲು ಕೇಜ್ರಿವಾಲ್ ಅವಕಾಶ ಕೊಡಲಿಲ್ಲ ಎಂದೂ ಕೇಂದ್ರ ಸಚಿವರು ತಮ್ಮ ಉಗ್ರ ಆರೋಪಕ್ಕೆ ಪೂರಕವಾಗಿ ಘಟನೆಯನ್ನು ಉಲ್ಲೇಖಿಸಿದರು.

“ಜನವರಿ 26ರಂದು ನೀವು ಅವರ ವಿಚಾರಣೆಯನ್ನು ನಿಲ್ಲಿಸಿಸುವುದಾಗಿ ಬೆದರಿಕೆ ಹಾಕಿದಿರಿ. ನಿಮಗೆ ಇನ್ನೂ ಎಷ್ಟು ಸಾಕ್ಷ್ಯಗಳು ಬೇಕು? ನೀವು ಸುಳ್ಳುಗಾರರ ಮುಖ್ಯಸ್ಥ, ಅರಾಜಕತಾವಾದಿ ಎಂಬುದು ಹಾಗೂ ಭಯೋತ್ಪಾದಕರ ಬಗ್ಗೆ ಅನುಕಂಪ ಹೊಂದಿರುವುದು ದೆಹಲಿಯ ಜನರಿಗೆ ಈಗ ಗೊತ್ತಾಗಿದೆ. ಶಾಹೀನ್ ಬಾಗ್, ಜೆಎನ್​ಯು, ಭಾರತ ವಿರೋಧಿ ಘೋಷಣೆ, ಅರಾಜಕತಾವಾದ ಇತ್ಯಾದಿಗಳಿಗೆ ಬೆಂಬಲ ನೀಡುತ್ತಿರುವ ನೀವು ಖಂಡಿತವಾಗಿ ಭಯೋತ್ಪಾದಕನೇ. ನೀವು ಎಷ್ಟೇ ಅಮಾಯಕತನದ ಮುಖವಾಡ ಹಾಕಿದರೂ ಇದೇ ನಿಮ್ಮ ಗುರುತು” ಎಂದು ತೀಕ್ಷ್ಣ ದಾಳಿ ನಡೆಸಿದರು.

ಇದನ್ನೂ ಓದಿ: ಆರ್ಥಿಕತೆ ಚೇತರಿಕೆ? ಜನವರಿ ಪಿಎಂಐ ಇಂಡೆಕ್ಸ್ ಪ್ರಕಾರ ಉತ್ಪಾದನಾ ವಲಯ 8 ವರ್ಷದಲ್ಲೇ ಗರಿಷ್ಠ ಮಟ್ಟ

ಪರ್ವೇಶ್ ವರ್ಮಾ ತನ್ನನ್ನು ಭಯೋತ್ಪಾದಕ ಎಂದು ಟೀಕಿಸಿದ ಬಳಿಕ ಅರವಿಂದ್ ಕೇಜ್ರಿವಾಲ್, ಜನರ ಸೇವೆ ಮಾಡಿದ ತಾನು ಭಯೋತ್ಪಾದಕನಾ? ತಾನ್ಯಾರೆಂಬುದನ್ನು ದೆಹಲಿಯ ಜನರೇ ನಿರ್ಧರಿಸುತ್ತಾರೆ ಎಂದು ಪ್ರತಿಕ್ರಿಯಿಸಿದ್ದರು. “ನಾನು ಹೇಗೆ ಭಯೋತ್ಪಾದಕನಾಗುತ್ತೇನೆ? ಔಷಧಗಳಿಗೆ ವ್ಯವಸ್ಥೆ ಮಾಡಿದ್ದೇನೆ. ಅಗತ್ಯ ಇದ್ದವರಿಗೆ ಸಾಕಷ್ಟು ಕೆಲಸ ಮಾಡಿದ್ದೇನೆ. ನನ್ನ ಬಗ್ಗೆಯಾಗಲೀ, ನನ್ನ ಕುಟುಂಬದ ಬಗ್ಗೆಯಾಗಲೀ ನಾನು ಯಾವತ್ತೂ ಯೋಚಿಸಿದವನೇ ಅಲ್ಲ. ದೇಶಕ್ಕಾಗಿ ನನ್ನ ಜೀವವನ್ನೇ ಸಮರ್ಪಿಸಲು ಸಿದ್ಧನಿದ್ದೇನೆ” ಎಂದು ಕೇಜ್ರಿವಾಲ್ ಪತ್ರಿಕಾಗೋಷ್ಠಿ ಭಾವನಾತ್ಮಕವಾಗಿ ಹೇಳಿದ್ದರು.

ಫೆಬ್ರುವರಿ 8ರಂದು ದೆಹಲಿಯಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿವೆ. ಅರವಿಂದ್ ಕೇಜ್ರಿವಾಲ್ ತಮ್ಮ ಸರ್ಕಾರದ ಸಾಧನೆಯನ್ನೇ ಪ್ರಮುಖವಾಗಿ ಬಿಂಬಿಸಿಕೊಂಡು ಮತ ಯಾಚನೆ ಮಾಡುತ್ತಿದ್ದಾರೆ. ಬಿಜೆಪಿಯು ಪೌರತ್ವ ಕಾಯ್ದೆ ವಿರೋಧಿ ಹೋರಾಟಗಳ ಉಗ್ರ ಸ್ವರೂಪವನ್ನು ಎತ್ತಿ ತೋರಿಸಿ ಜನ ಬೆಂಬಲ ಗಳಿಸಲು ಯತ್ನಿಸುತ್ತಿರುವಂತಿದೆ. ಹಲವು ಚುನಾವಣಾ ಪೂರ್ವ ಸಮೀಕ್ಷೆಗಳು ಎಎಪಿ ಗೆಲುವನ್ನು ಸೂಚಿಸಿವೆಯಾದರೂ ಸಿಎಎ ವಿರೋಧಿ ಹೋರಾಟಗಳು ಬಿಜೆಪಿ ಪರ ಒಳ ಅಲೆ ಸೃಷ್ಟಿಯಾಗಲು ಸಹಕಾರಿಯಾಗುತ್ತಿರಬಹುದು ಎಂಬ ವಿಶ್ಲೇಷಣೆಗಳಿವೆ. ಫೆ. 11ರಂದು ಪ್ರಕಟವಾಗುವ ಫಲಿತಾಂಶದಿಂದ ದೆಹಲಿ ಮತದಾರನ ಅಂತಿಮ ನಿರ್ಣಯ ಬಹಿರಂಗವಾಗಲಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: