ಕಾಶ್ಮೀರ ವಿಚಾರದಲ್ಲಿ ವಿರೋಧಿಸುವವರ ಮನ ಮಾವೋವಾದಿ, ಭಯೋತ್ಪಾದಕರ ಪರ ಮಿಡಿಯುತ್ತದೆ; ಪ್ರಧಾನಿ ಮೋದಿ!

ರಾಷ್ಟ್ರದ 73ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಐಎಎನ್ಎಸ್ ವಾಹಿನಿಗೆ ಸಂದರ್ಶನ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ವಾಹಿನಿಯ ಮುಖ್ಯ ಸಂಪಾದಕ ಸಂದೀಪ್ ಬಮ್ಜೈ ಅವರ ಪ್ರಶ್ನೆಗಳಿಗೆ ಉತ್ತರಿಸುತ್ತಾ ತಮ್ಮ ಮನದಾಳದ ಮಾತುಗಳನ್ನು ಭವಿಷ್ಯದ ಕನಸು ಹಾಗೂ ಸಾಧನೆಯ ಮುನ್ನೋಟಗಳನ್ನು ಜನರ ಮುಂದೆ ತೆರೆದಿಟ್ಟಿದ್ದಾರೆ. ಈ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

MAshok Kumar | news18
Updated:August 14, 2019, 6:18 PM IST
ಕಾಶ್ಮೀರ ವಿಚಾರದಲ್ಲಿ ವಿರೋಧಿಸುವವರ ಮನ ಮಾವೋವಾದಿ, ಭಯೋತ್ಪಾದಕರ ಪರ ಮಿಡಿಯುತ್ತದೆ; ಪ್ರಧಾನಿ ಮೋದಿ!
ನರೇಂದ್ರ ಮೋದಿ
  • News18
  • Last Updated: August 14, 2019, 6:18 PM IST
  • Share this:
ನವ ದೆಹಲಿ (ಆಗಸ್ಟ್.14); ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ ಇಂದಿಗೆ 75 ದಿನಗಳು ಮುಗಿದಿವೆ. ಈ ನಡುವೆ ಅವರು ದೇಶದ ಅತ್ಯಂತ ಸೂಕ್ಷ್ಮ ವಿಚಾರಗಳಾದ ಜಮ್ಮು-ಕಾಶ್ಮೀರ ವಿಚಾರ, ಶಿಕ್ಷಣ, ವೈದ್ಯಕೀಯ, ಭ್ರಷ್ಟಾಚಾರ ಹಾಗೂ ಬಡತನ ನಿರ್ಮೂಲನೆ ಸೇರಿದಂತೆ ಅನೇಕ ವಿಚಾರಗಳ ಕುರಿತಾಗಿ ಐಎಎನ್ಎಸ್ ಜೊತೆಗೆ ವ್ಯಾಪಕವಾಗಿ ಹಾಗೂ ವಿಮರ್ಶಾತ್ಮಕವಾಗಿ ಮಾತನಾಡಿದ್ದಾರೆ. 

ರಾಷ್ಟ್ರದ 73ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಐಎಎನ್ಎಸ್ ವಾಹಿನಿಗೆ ಸಂದರ್ಶನ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ವಾಹಿನಿಯ ಮುಖ್ಯ ಸಂಪಾದಕ ಸಂದೀಪ್ ಬಮ್ಜೈ ಅವರ ಪ್ರಶ್ನೆಗಳಿಗೆ ಉತ್ತರಿಸುತ್ತಾ ತಮ್ಮ ಮನದಾಳದ ಮಾತುಗಳನ್ನು ಭವಿಷ್ಯದ ಕನಸು ಹಾಗೂ ಸಾಧನೆಯ ಮುನ್ನೋಟಗಳನ್ನು ಜನರ ಮುಂದೆ ತೆರೆದಿಟ್ಟಿದ್ದಾರೆ. ಈ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಸಂದೀಪ್ : ನಿಮ್ಮ ನೇತೃತ್ವದ ಎರಡನೇ ಅವಧಿಯ ಸರ್ಕಾರ ಇಂದು 75 ದಿನಗಳನ್ನು ಪೂರೈಸಿದೆ. ಪ್ರತಿಯೊಂದು ಸರ್ಕಾರಗಳು ಇಂತಹ ಸಂಖ್ಯೆ, ಮೈಲುಗಲ್ಲು ಹಾಗೂ ಸಾಧನೆಗಳನ್ನು ಧಾಟಿರುತ್ತವೆ. ಆದರೆ, ನಿಮ್ಮ ಸರ್ಕಾರ ಇದಕ್ಕಿಂತ ಹೇಗೆ ಭಿನ್ನ ಎಂದು ನಾವು ಪರಿಗಣಿಸಬೇಕು?

ಮೋದಿ : ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಅಭುತಪೂರ್ವ ವೇಗದಲ್ಲಿ ಕೆಲಸ ಆರಂಭಿಸಿದೆ. ಸರಿಯಾದ ಉದ್ದೇಶ ಹಾಗೂ ಸ್ಪಷ್ಟ ನೀತಿಯಿಂದಾಗಿ ನಾವು ಉತ್ತಮ ಫಲಿತಾಂಶವನ್ನು ಸಾಧಿಸುವುದು ಸಾಧ್ಯವಾಯಿತು. ಕೇವಲ ಈ 75 ದಿನಗಳಲ್ಲಿ ನಮ್ಮ ಸಾರ್ಕಾರ ಬಹಳಷ್ಟು ಸಾಧನೆ ಮಾಡಿದೆ. ಮಕ್ಕಳ ಸುರಕ್ಷತೆ, ಚಂದ್ರಯಾನ-2, ಭ್ರಷ್ಟಾಚಾರದ ವಿರುದ್ಧ ಹೋರಾಟದಿಂದ ಮುಸ್ಲಿಂ ಮಹಿಳೆಯರಿಗೆ ಉಪದ್ರವದಂತೆ ಕಾಡಿದ್ದ ತಲಾಖ್ ವರೆಗೆ, ಕಾಶ್ಮೀರದ ವಿಶೇಷ ಸವಲತ್ತು ರದ್ಧತಿಯಿಂದ ರೈತರ ಹಿತ ಕಾಯುವವರೆಗೆ ಅನೇಕ ಮಹತ್ವದ ಸಾಧನೆಗಳನ್ನು ನಾವು ಮಾಡಿದ್ದೇವೆ. ಅಲ್ಲದೆ ಒಂದು ಸರ್ಕಾರ ಮನಸ್ಸು ಮಾಡಿದರೆ ಏನು ಮಾಡಬಹುದು? ಎಂಬುದನ್ನು ನಾವು ತೋರಿಸಿಕೊಟ್ಟಿದ್ದೇವೆ.

ಸಂದೀಪ್ : ಈ ಅಭೂತಪೂರ್ವ ಜನಾದೇಶ ಭಾರತ ಜನತೆಗೆ ನಿಮ್ಮ ಬದ್ಧತೆಯನ್ನು ದೃಢೀಕರಿಸಲು ಸಹಕಾರಿಯಾಗಿದೆಯೇ? ಮತ್ತು ನೀವು ಕಾರ್ಯಕಾರಿಣಿಯನ್ನೂ ಮೀರಿ ಶಾಸಕಾಂಗದಲ್ಲಿ ರಾಜಕೀಯ ಹಿಡಿತವನ್ನು ಸಾಧಿಸಲು ಜನಾದೇಶವನ್ನು ಬಳಸಿದ್ದೀರ?

ಮೋದಿ : ಈ ಎಲ್ಲಾ ಸಾಧನೆಗಳು ಕೇವಲ 75 ದಿನಗಳಲ್ಲಿ ಕಂಡು ಬರಲು ಬಲವಾದ ಜನಾದೇಶವೇ ಕಾರಣ. ಈ ಸಾಧನೆಗೆ ಬೇಕಾದ ಅಸ್ಥಿಭಾರವನ್ನೇ ನಾವು ಕಳೆದ 5 ವರ್ಷದಿಂದ ನಿರ್ಮಿಸಿದ್ದು. ಕಳೆದ 5 ವರ್ಷಗಳಿಂದ ಜನರಿಂದ ಪ್ರೇರಿತವಾದ ನೂರಾರು ಸುಧಾರಣೆಗಳು ಇದೀಗ ಜನರ ಬಳಿಗೆ ಹೊರಡಲು ಸಿದ್ಧವಾಗಿವೆ.

1952 ರಿಂದ ಈವರೆಗೆ ಅತಿಹೆಚ್ಚು ಉತ್ಪಾದಕ ಚರ್ಚೆಗೆ ಸಾಕ್ಷಿಯಾದ ಅಧಿವೇಶನ ಎಂಬ ಹೆಮ್ಮೆಗೆ 17ನೇ ಲೋಕಸಭಾ ಅಧಿವೇಶನ ಪಾತ್ರವಾಗಿದೆ. ಇದು ಸಣ್ಣ ಪ್ರಮಾಣದ ಸಾಧನೆಯಲ್ಲ. ಆದರೆ, ನನ್ನ ದೃಷ್ಟಿಯಲ್ಲಿ ಜನರ ಅಗತ್ಯ ಹಾಗೂ ಆಕಾಂಕ್ಷೆಗಳಿಗೆ ಹೆಚ್ಚು ಸ್ಪಂದಿಸುವ ಇನ್ನೂ ಉತ್ತಮವಾದ, ಐತಿಹಾಸಿಕವಾದ ಸಾಧನೆಗೆ ನಮ್ಮ ಸಂಸತ್ತು ಪಾತ್ರವಾಗಲಿದೆ.ರೈತರು ವ್ಯಾಪಾರಿಗಳಿಗೆ ಪಿಂಚಣಿ ಯೋಜನೆ, ವೈದ್ಯಕೀಯ ಕ್ಷೇತ್ರದಲ್ಲಿನ ಸುಧಾರಣೆ, ದಿವಾಳಿತನ ಮತ್ತು ದಿವಾಳಿತನ ಸಂಹಿತೆಯ ಕುರಿತ ಪ್ರಮುಖ ತಿದ್ದುಪಡಿ, ಕಾರ್ಮಿಕರ ಬದುಕು ಸುಧಾರಣೆ ಸೇರಿದಂತೆ ಅನೇಕ ಉಪಕ್ರಮಗಳನ್ನು ಭವಿಷ್ಯದಲ್ಲಿ ಈ ಸರ್ಕಾರ ಕೈಗೊಳ್ಳಲಿದೆ. ಉದ್ದೇಶ ಸರಿಯಾಗಿದ್ದಾಗ ಮಾತ್ರ ಅದರ ಅನುಷ್ಟಾನದ ಕುರಿತು ಸ್ಪಷ್ಟತೆ ಇರುತ್ತದೆ. ಜನಾದೇಶ ಇದಕ್ಕೆ ಬೆಂಬಲವಾಗಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು.

ದಿಲೀಪ್ : ಈಗಾಗಲೇ ನೀವು ತಂದಿರುವ ವೈದ್ಯಕೀಯ ಸುಧಾರಣೆಗಳ ಬಗ್ಗೆ ಕೆಲವು ಕಡೆಗಳಿಂದ ಅಪಸ್ವರಗಳು ಕೇಳಿ ಬರುತ್ತಿವೆ. ಹೀಗಾಗಿ ಸರಿಯಾಗಿ ಯೋಚಿಸಿಯೇ ನೀವು ಈ ಕುರಿತ ಬದಲಾವಣೆಗಳನ್ನು ತಂದಿದ್ದೀರಿ ಎಂದು ಭಾವಿಸಿದ್ದೀರ?

ಮೋದಿ : 2014ರಲ್ಲಿ ನಾವು ಸರ್ಕಾರ ರಚಿಸಿದಾಗ ಅಸ್ಥಿತ್ವದಲ್ಲಿದ್ದ ವೈದ್ಯಕೀಯ ಶಿಕ್ಷಣದ ಬಗ್ಗೆ ಅನೇಕ ಆತಂಕಗಳು ಇದ್ದವು. ಈ ಹಿಂದೆ ನ್ಯಾಯಾಲಯಗಳು ಸಹ ‘ಭಾರತದಲ್ಲಿ ವೈದ್ಯಕೀಯ ಶಿಕ್ಷಣ ಭ್ರಷ್ಟಾಚಾರದ ಗುಹೆ” ಎಂದು ಕಟು ಶಬ್ಧಗಳಿಂದ ನಿಂದಿಸಿತ್ತು. ಹೀಗಾಗಿ ಈ ಕುರಿತ ಅಧ್ಯಯನಕ್ಕೆ ಸಂಸದೀಯ ಸಮಿತಿಯನ್ನು ನೇಮಕ ಮಾಡಲಾಯಿತು. ಕಠಿಣ ಅಧ್ಯಯನ ನಡೆಸಿದ ಇವರು ವೈದ್ಯಕೀಯ ಶಿಕ್ಷಣದಲ್ಲಿನ ಮಂದ ದೃಷ್ಠಿಕೋನ, ತಪ್ಪು ನಿರ್ವಹಣೆ ಮತ್ತು ಪಾರದರ್ಶಕತೆ ಕೊರತೆಯ ಕುರಿತು ಬೆಳಕು ಚೆಲ್ಲಿತ್ತು.

ಹಿಂದಿನ ಸರ್ಕಾರಗಳು ಸಹ ಈ ವಲಯವನ್ನು ಸುಧಾರಿಸುವ ಬಗ್ಗೆ ಚಿಂತನೆ ನಡೆಸಿದ್ದವು. ಆದರೆ, ಆ ಸರ್ಕಾರಗಳು ಅದರೊಂದಿಗೆ ಮುಂದುವರೆಯುವುದು ಸಾಧ್ಯವಾಗಲಿಲ್ಲ. ಆದರೆ, ನಾವು ಅದರ ಜೊತೆಗೆ ಹೋಗಲು ನಿರ್ಧರಿಸಿದೆವು. ಏಕೆಂದರೆ ಇದು ನಮ್ಮ ಜನರ ಅರೋಗ್ಯ ಮತ್ತು ನಮ್ಮ ಯುವಕರ ಭವಿಷ್ಯ ಎಂಬುದು ಲಘುವಾಗಿ ತೆಗೆದುಕೊಳ್ಳುವ ವಿಚಾರವಲ್ಲ. ಹೀಗಾಗಿ ನಾವು ತಜ್ಞರ ಸಮಿತಿ ನೇಮಿಸಿದೆವು, ತಜ್ಞರ ಅಧ್ಯಯನದ ವರದಿ ಹಾಗೂ ಸಲಹೆಯ ಮೇರರೆಗ ನಾವು ಈ ಕ್ಷೇತ್ರಗಳಲ್ಲಿ ಸುಧಾರಣೆಯನ್ನು ಮಸೂದೆಯ ಮೂಲಕ ಜಾರಿತಂದೆವು.

ದಿಲೀಪ್ : ಈ ಮಸೂದೆಯ ವಿರುದ್ಧ ಏಕೆ ಇಷ್ಟೊಂದು ಗಲಭೆ ಸೃಷ್ಟಿಯಾಗಿದೆ?

ಮೋದಿ : ಪ್ರಸ್ತುತ ರಾಷ್ಟ್ರೀಯ ವೈದ್ಯಕೀಯ ಆಯೋಗದಲ್ಲಿ (National Medical Commission) ಬಹುದೊಡ್ಡ ಸುಧಾರಣೆಯಾಗಿದ್ದು, ಚಾಲ್ತಿಯಲ್ಲಿರುವ ಸಮಸ್ಯೆಗಳನ್ನು ಸರಿಪಡಿಸಲು ಪ್ರಯತ್ನಿಸಲಾಗುತ್ತಿದೆ. ಈ ಆಯೋಗ ಭ್ರಷ್ಟಾಚಾರದ ಮಾರ್ಗಗಳನ್ನು ನಿಗ್ರಹಿಸುವ ಮತ್ತು ಪಾರದರ್ಶಕತೆಯನ್ನು ಸ್ಥಾಪಿಸುವ ಸುಧಾರಣೆಗಳನ್ನು ಒಳಗೊಂಡಿದೆ.

ವಿಶ್ವದ ಮುಂದಿನ ವೆಳವಣಿಗೆಯ ಅಲೆಗೆ ಶಕ್ತಿ ತುಂಬಲು ಇಡೀ ವಿಶ್ವ ಇಂದು ಭಾರತದ ಕಡೆಗೆ ಎದುರು ನೋಡುತ್ತಿವೆ. ಇಂತಹ ಸಾಧನೆ ಆರೋಗ್ಯಕರ ಜನಸಮುದಾಯದಿಂದ ಮಾತ್ರ ಸಾಧ್ಯ ಎಂದು ನಾವು ಅರಿತುಕೊಂಡಿದ್ದೇವೆ. ಹೀಗಾಗಿ ಆರೋಗ್ಯದ ಕೊರತೆ ಹಾಗೂ ಬಡತನದ ಕೆಟ್ಟ ಚಕ್ರದಿಂದ ಜನರನ್ನು ಮುಕ್ತಿಗೊಳಿಸುವುದು ಬಹಳ ಮುಖ್ಯ. ರಾಷ್ಟ್ರೀಯ ವೈದ್ಯಕೀಯ ಆಯೋಗ ಈ ಉದ್ದೇಶವನ್ನು ಪೂರೈಸುತ್ತಿದೆ. ಇದು ದೇಶದ ವೈದ್ಯಕೀಯ ಶಿಕ್ಷಣದ ಆಡಳಿತದಲ್ಲಿನ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಗುಣಮಟ್ಟವನ್ನು ಖಚಿತಪಡಿಸುತ್ತದೆ.

ಇದು ವಿದ್ಯಾರ್ಥಿಗಳ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ, ವೈದ್ಯಕೀಯ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ ಮತ್ತು ವೈದ್ಯಕೀಯ ಶಿಕ್ಷಣದ ವೆಚ್ಚವನ್ನು ಕಡಿಮೆ ಮಾಡಲು ಈ ಆಯೋಗ ಸಹಕಾರಿಯಾಗಿದೆ. ಈ ಮೂಲಕ ಹೆಚ್ಚು ಹೆಚ್ಚು ಪ್ರತಿಭಾವಂತ ಯುವಕರು ವೈದ್ಯಕೀಯವನ್ನು ವೃತ್ತಿಯಾಗಿ ತೆಗೆದುಕೊಳ್ಳಲು, ವೈದ್ಯಕೀಯ ವೃತ್ತಿಪರರ ಸಂಖ್ಯೆಯನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ.

ಅಲ್ಲದೆ, ಆಯುಷ್ಮಾನ್ ಭಾರತ್ ಯೋಜನೆ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನು ತರುತ್ತಿದೆ. ಇದು ಜಾಗೃತಿ ಮತ್ತು ಗುಣಮಟ್ಟದ ಆರೋಗ್ಯ ರಕ್ಷಣೆ ಕೈಗೆಟುವಂತೆ ಮಾಡುತ್ತಿದೆ. ಅಲ್ಲದೆ, 2019-20ರ ಸಾಲಿನಲ್ಲಿ 2 ಡಜನ್ಗೂ ಅಧಿಕ ವೈದ್ಯಕೀಯ ಸ್ಥಾನಗಳ ಸೃಷ್ಟಿಗೂ ಇದು ಕಾರಣವಾಗಿದೆ. ನಮ್ಮ ಮಾರ್ಗಸೂಚಿ ಸ್ಪಷ್ಟ ಮತ್ತು ಪಾರದರ್ಶಕವಾಗಿದೆ ಈ ಮೂಲಕ ಮಾತ್ರ ಉತ್ತಮ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವುದು ಸಾಧ್ಯ.

ದಿಲೀಪ್ : ಯುವ ರಾಷ್ಟ್ರದ ನಿರ್ಮಾಣಕ್ಕೆ ಶಿಕ್ಷಣ ಅನಿವಾರ್ಯ, ಆದಾಗ್ಯೂ ನಿಮ್ಮ ಸರ್ಕಾರದ ಸುತ್ತಲಿನ ಸಂಭಾಷಣೆಗಳಲ್ಲಿ ಶಿಕ್ಷಣ ಕಾಣೆಯಾಗಿದೆ. ಈ ಕುರಿತು ಸರ್ಕಾರ ಏನು ಮಾಡುತ್ತಿದೆ?

ಮೋದಿ : ಶಿಕ್ಷಣ ಕೇವಲ ನಿರ್ಣಾಯಕವಲ್ಲ, ಅದರ ಜೊತೆಗೆ ತಂತ್ರಜ್ಞಾನ ಆಧಾರಿತ ನುರಿತ ಮಾನವ ಸಂಪನ್ಮೂಲವನ್ನೂ ಅಭಿವೃದ್ಧಿಪಡಿಸಬೇಕಿದೆ. ಇದು ಜೀವನವನ್ನು ಸಕಾರಾತ್ಮಕವಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ, ಅಲ್ಲದೆ ರಾಷ್ಟ್ರದ ಭವಿಷ್ಯದ ಮೇಲೂ ಪರಿಣಾಮ ಬೀರುತ್ತದೆ.

ನಾವು ಶಿಕ್ಷಣದ ಎಲ್ಲಾ ಅಂಶಗಳ ಕುರಿತೂ ಕೆಲಸ ಮಾಡುತ್ತಿದ್ದೇವೆ. ಶಾಲಾ ಮಟ್ಟದಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು, ಕಲಿಕೆಯ ಫಲಿತಾಂಶಗಳನ್ನು ಸುಧಾರಿಸಲು, ನಾವೀನ್ಯತೆ ಮತ್ತು ವೈಜ್ಞಾನಿಕ ಮನೋಭಾವಕ್ಕೆ ಉತ್ತೇಜನ ನೀಡುವುದು, ಮೂಲಸೌಕರ್ಯಗಳನ್ನು ಸುಧಾರಿಸುವುದು, ವಿದ್ಯಾರ್ಥಿಗಳಲ್ಲಿ ತಿಳುವಳಿಕೆಯನ್ನು ಸುಧಾರಿಸಲು ತಂತ್ರಜ್ಞಾನವನ್ನು ಬಳಸುವುದರ ಕಡೆಗೂ ವಿಶೇಷ ಗಮನ ನೀಡಲಾಗುತ್ತಿದೆ. ಶಾಲಾ ಶಿಕ್ಷಣವನ್ನು ಸುಧಾರಿಸಲು ಅಗತ್ಯವಾದ ಎಲ್ಲಾ ಕ್ರಮಗಳಿಗೂ ಸರ್ಕಾರ ಮುಂದಾಗಿದೆ.

ಉನ್ನತ ಶಿಕ್ಷಣದಲ್ಲಿ ಸೀಟುಗಳ ಸಂಖ್ಯೆಯನ್ನು ವೃದ್ಧಿಸುವ ಸಲುವಾಗಿ ದೇಶದಾದ್ಯಂತ ಪ್ರಧಾನ ಸಂಸ್ಥೆಗಳ ಸಂಖ್ಯೆಗಳನ್ನು ಹೆಚ್ಚಿಸಲು, ಸಂಸ್ಥೆಗಳಿಗೆ ಹೆಚ್ಚಿನ ಸ್ವಾಯತ್ತತೆಯನ್ನು ನೀಡಲು ಮತ್ತು ಸಂಶೋಧನಾ ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ. 2022 ರ ವೇಳೆಗೆ ಒಂದು ಲಕ್ಷ ಕೋಟಿ ರೂ.ವರೆಗೆ ಹಣವನ್ನು ಒದಗಿಸುವ ಉದ್ದೇಶದಿಂದ ನಾವು ಉನ್ನತ ಶಿಕ್ಷಣ ಹಣಕಾಸು ಸಂಸ್ಥಯನ್ನೂ (Higher Education Financing Agency-HEFA) ಸ್ಥಾಪಿಸಿದ್ದೇವೆ.

21,000 ಕೋಟಿ ರೂ.ಗಳನ್ನು ಈಗಾಗಲೇ ಮಂಜೂರು ಮಾಡಲಾಗಿದೆ. 52 ವಿಶ್ವವಿದ್ಯಾಲಯಗಳು ಸೇರಿದಂತೆ 60 ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸ್ವಾಯತ್ತತೆ ನೀಡಲಾಗಿದೆ. ಈ ವಿಶ್ವವಿದ್ಯಾನಿಲಯಗಳು ಯುಜಿಸಿಯ ವ್ಯಾಪ್ತಿಯಲ್ಲಿ ಉಳಿಯುತ್ತವೆ. ಆದರೆ, ಹೊಸ ಕೋರ್ಸ್​ಗಳು, ಕ್ಯಾಂಪಸ್ ಕೇಂದ್ರಗಳು, ಕೌಶಲ್ಯ ಅಭಿವೃದ್ಧಿ ಕೋರ್ಸ್​ಗಳು, ಸಂಶೋಧನಾ ಉದ್ಯಾನಗಳು ಮತ್ತು ಯಾವುದೇ ಹೊಸ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪ್ರಾರಂಭಿಸುವ ಸ್ವಾತಂತ್ರ್ಯವನ್ನು ಇವು ಹೊಂದಿರುತ್ತವೆ. ವಿದೇಶಿ ಅಧ್ಯಾಪಕರನ್ನು ನೇಮಿಸಿಕೊಳ್ಳಲು, ವಿದೇಶಿ ವಿದ್ಯಾರ್ಥಿಗಳನ್ನು ದಾಖಲಿಸಲು, ಬೋಧಕ ವರ್ಗಕ್ಕೆ ಪ್ರೋತ್ಸಾಹ ಆಧಾರಿತ ಸಂಬಳವನ್ನು ನೀಡಲು, ಶೈಕ್ಷಣಿಕ ಸಹಯೋಗಕ್ಕೆ ಪ್ರವೇಶಿಸಲು ಮತ್ತು ಮುಕ್ತ ದೂರ ಶಿಕ್ಷಣ ಕಾರ್ಯಕ್ರಮಗಳನ್ನು ನಡೆಸಲು ಸಹ ಈ ಸಂಸ್ಥೆಗಳಿಗೆ ಸ್ವಾತಂತ್ರ್ಯ ನೀಡಲಾಗಿದೆ.

ದಿಲೀಪ್ : ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ನಿರ್ಧಾರಗಳು ಅಧಿಕಾರಶಾಹಿ ವರ್ಗದಲ್ಲಿ ಆಘಾತವನ್ನೇ ಸೃಷ್ಟಿಸಿದೆ. ಈ ಮೂಲಕ ನೀವು ಇಂತವರಿಗೆ ಯಾವ ಸಂದೇಶವನ್ನು ಕಳುಹಿಸಲು ಬಯಸಿದ್ದೀರಿ?

ಮೋದಿ : ಸ್ವಾತಂತ್ರ್ಯದ ನಂತರ ದೇಶವನ್ನು ಹಿಂದುಳಿಯುವಂತೆ ಮಾಡಿದ ದೊಡ್ಡ ವಿಷಯವೆಂದರೆ ಭ್ರಷ್ಟಾಚಾರ. ಭ್ರಷ್ಟಾಚಾರವು ಯಾರನ್ನೂ ಉಳಿಸಲಿಲ್ಲ. ಜನರು ಕೆಲವು ದುರಾಸೆಯಿಂದಾಗಿ, ತ್ವರಿತವಾಗಿ ಕೆಲಸವನ್ನು ಮಾಡಿಸಿಕೊಳ್ಳಲು ಅಥವಾ ಕೆಲವು ಬಲವಂತದ ಕಾರಣದಿಂದಾಗಿ ಭ್ರಷ್ಟಾಚಾರವನ್ನು ಆಶ್ರಯಿಸಿದ್ದರು. ಆದರೆ, ಇಂತಹ ಜನರೂ ಸಹ ಭ್ರಷ್ಟಾಚಾರವನ್ನು ತೊಲಗಿಸಬೇಕು ಎಂದು ಬಯಸಿದ್ದರು. ಈ ಸಂದರ್ಭದಲ್ಲಿ ಎಲ್ಲರ ಮನಸ್ಸಿನಲ್ಲಿದ್ದ ಪ್ರಶ್ನೆ ಎಂದರೆ ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಯಾರು ಪ್ರಾರಂಭಿಸುತ್ತಾರೆ? ಮತ್ತು ಎಲ್ಲಿಂದ? ಎಂಬುದೇ ದೊಡ್ಡ ಪ್ರಶ್ನೆಯಾಗಿತ್ತು.

ಎಲ್ಲಾ ಸಂದರ್ಭದಲ್ಲೂ ಭ್ರಷ್ಟಾಚಾರದ ವಿರುದ್ಧದ ಹೋರಾಟ ಜನ ಹಾಗೂ ಮಾಧ್ಯಮ ಸಂಸ್ಥೆಗಳ ಬೆಂಬಲವನ್ನು ಪಡೆದಿತ್ತು. ಏಕೆಂದರೆ ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಭ್ರಷ್ಟಾಚಾರವು ಒಂದು ಪ್ರಮುಖ ಅಡಚಣೆಯಾಗಿದೆ ಎಂದು ಎಲ್ಲರೂ ಒಪ್ಪಿಕೊಂಡಿದ್ದರು. ಮತ್ತು ಇದು ಹಣಕ್ಕೆ ಸಂಬಂಧಿಸಿದ ವಿಷಯ ಮಾತ್ರವಲ್ಲ, ಬದಲಾಗಿ ಭ್ರಷ್ಟಾಚಾರ ಎಂಬುದು ನಂಬಿಕೆಗೂ ಸಂಬಂಧಪಟ್ಟ ವಿಚಾರ.

ಸರ್ಕಾರಿ ಕಚೇರಿ ಅಥವಾ ಮಾರುಕಟ್ಟೆ ಯಾವುದೇ ಆಗಿರಲಿ ಇವು ಸಮಾಜದ ನಂಬಿಕೆಯನ್ನು ಕಳೆದುಕೊಂಡಿತ್ತು. ಪೊಲೀಸ್ ಠಾಣೆಗೆ ಹೋಗುವ ವ್ಯಕ್ತಿಯು ತನಗೆ ನ್ಯಾಯ ಸಿಗುತ್ತದೆಯೇ? ಎಂದು ಯೋಚಿಸುತ್ತಾನೆ ಮತ್ತು ಅದೇ ರೀತಿ ಮಾರುಕಟ್ಟೆಯಿಂದ ಏನನ್ನಾದರೂ ಖರೀದಿಸುವ ವ್ಯಕ್ತಿಯು ಕಲಬೆರಕೆಗೆ ಹೆದರುತ್ತಾನೆ. ಭ್ರಷ್ಟಾಚಾರದಿಂದಾಗಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಹೀಗಾಗಿ ಭ್ರಷ್ಟಾಚಾರ ಮೇಲೆ ದಾಳಿ ಮಾಡಲು ನಾವು ಮೊದಲ ದಿನದಿಂದಲೇ ನಿರ್ಧರಿಸಿದ್ದೆವು. ರಾಜಕೀಯ ಪರಿಣಾಮಗಳ ಕುರಿತು ಚಿಂತಿಸದೆ ನಾವು ಇದನ್ನು ಕೈಗೆತ್ತಿಕೊಂಡೆವು. ನಾವು ಯಶಸ್ವಿಯಾಗುತ್ತಿದ್ದೇವೆ ಎಂಬುದನ್ನು ಇಂದಿನ ಫಲಿತಾಂಶಗಳೇ ತೋರಿಸುತ್ತಿವೆ. ಪರಿಣಾಮ ಇದೀಗ ದೇಶದಾದ್ಯಂತ ಭ್ರಷ್ಟಾಚಾರ ಕಡಿಮೆಯಾಗುತ್ತಿದೆ. ಮಾತ್ರವಲ್ಲ, ಸಮಾಜದ ಮೇಲಿನ ನಂಬಿಕೆಯೂ ಹೆಚ್ಚುತ್ತಿದೆ.

ಆದಾಯ ತೆರಿಗೆ ಪಾವತಿ ಸಲ್ಲಿಸುವ ಜನರ ಸಂಖ್ಯೆ ಕಳೆದ 5 ವರ್ಷಗಳಲ್ಲಿ ದ್ವಿಗುಣಗೊಂಡಿದೆ. ಆನ್​​ಲೈನ್​ನಲ್ಲಿ ತೆರಿಗೆ ಸಲ್ಲಿಕೆ ಮತ್ತು ಮರುಪಾವತಿ ಪ್ರಕ್ರಿಯೆಯನ್ನು ಮಾಡಿದ್ದೇವೆ. ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ, ಮರುಪಾವತಿಗಳನ್ನು ಆದಾಯ-ತೆರಿಗೆ ಪಾವತಿದಾರರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುತ್ತಿದೆ. ಹೀಗೆ ನಾವು ವ್ಯವಸ್ಥಿತವಾಗಿ ಭ್ರಷ್ಟಾಚಾರವನ್ನು ನಿಯಂತ್ರಿಸುತ್ತಿದ್ದೇವೆ.

ನಾವು ಭ್ರಷ್ಟಾಚಾರವನ್ನು ಅನುಮತಿಸುವುದಿಲ್ಲ ಹಾಗೂ ಯಾವುದೇ ರೀತಿಯ ಅನಗತ್ಯ ಕಿರುಕುಳವನ್ನು ಸಹಿಸುವುದಿಲ್ಲ. ನಮ್ಮ ಈ ಬದ್ಧತೆಯಲ್ಲಿ ನಾವು ದೃಢವಾಗಿದ್ದೇವೆ. ಇದೇ ಕಾರಣಕ್ಕೆ ಕೆಲವು ಕಠಿಣ ಕ್ರಮಗಳನ್ನೂ ತೆಗೆದುಕೊಂಡಿದ್ದೇವೆ. ಕಳೆದ ಕೆಲವೇ ವಾರಗಳಲ್ಲಿ ಭ್ರಷ್ಟಾಚಾರ ಆರೋಪ ಹೊಂದಿದ್ದ ಕೆಲವು ತೆರಿಗೆ ಇಲಾಖೆ ಅಧಿಕಾರಿಗಳನ್ನು ಕಡ್ಡಾಯವಾಗಿ ನಿವೃತ್ತಿ ಮಾಡಿದ್ದೇವೆ. ಹಿಂದಿನ ಅವಧಿಯಲ್ಲೂ ಸಹ ನೂರಾರು ಸರ್ಕಾರಿ ಅಧಿಕಾರಿಗಳನ್ನು ಸೇವೆಯಿಂದ ತೆಗೆದುಹಾಕಲಾಗಿತ್ತು.

ದಿಲೀಪ್ : ಆರ್ಟಿಕಲ್ 370ರ ಕುರಿತ ನಿಮ್ಮ ನಿರ್ಧಾರವನ್ನು ಅನೇಕರು ಸ್ವಾಗತಿಸಿದ್ದಾರೆ. ಆದರೆ, ಕೆಲವರು ಇದನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಕಣಿವೆ ರಾಜ್ಯದಲ್ಲಿ ಶಾಂತಿಯ ಕುರಿತ ಆತಂಕವೂ ಶುರುವಾಗಿದೆ. ಇಂತಹ ಸಂದರ್ಭದಲ್ಲಿ ಜಮ್ಮು-ಕಾಶ್ಮೀರ ಜನರು ಈ ನಿಮ್ಮ ನಿರ್ಧಾರದಲ್ಲಿ ನಿಮ್ಮೊಂದಿಗೆ ನಿಲ್ಲುತ್ತಾರೆ ಎಂದು ನೀವು ಹೇಗೆ ಭಾವಿಸುತ್ತೀರಿ?

ಮೋದಿ : ದಯವಿಟ್ಟು ಕಾಶ್ಮೀರದ ಬಗೆಗಿನ ಸರ್ಕಾರದ ನಿರ್ಧಾರವನ್ನು ವಿರೋಧಿಸಿದ ಜನರ ಪಟ್ಟಿಯನ್ನು ಒಮ್ಮೆ ನೋಡಿ. ಸಾಮಾನ್ಯವಾಗಿ ಪಟ್ಟಭದ್ರ ಹಿತಾಸಕ್ತಿ ಗುಂಪುಗಳು, ರಾಜಕೀಯ ರಾಜವಂಶಗಳು, ಭಯೋತ್ಪಾದನೆಯ ಬಗ್ಗೆ ಸಹಾನುಭೂತಿ ಹೊಂದಿರುವವರು ಮತ್ತು ಪ್ರತಿಪಕ್ಷದ ಕೆಲವು ಸ್ನೇಹಿತರು ಮಾತ್ರ ಈ ನಿರ್ಧಾರವನ್ನು ವಿರೋಧಿಸಿದ್ದಾರೆ.

ಆದರೆ, ಭಾರತದ ಜನರು ತಮ್ಮ ರಾಜಕೀಯ ಆದ್ಯತೆ ಏನೇ ಇರಲಿ ಜಮ್ಮು- ಕಾಶ್ಮೀರ ಮತ್ತು ಲಡಾಕ್ ವಿಚಾರದಲ್ಲಿ ಸರ್ಕಾರ ಕೈಗೊಂಡ ಕ್ರಮಗಳನ್ನು ಬೆಂಬಲಿಸಿದ್ದಾರೆ. ಅಸಾಧ್ಯವೆಂದು ಈ ಹಿಂದೆ ಭಾವಿಸಲಾಗಿದ್ದ ಕಠಿಣ ಆದರೆ ಅಗತ್ಯವಾದ ನಿರ್ಧಾರಗಳು ಇದೀಗ ವಾಸ್ತವವಾಗುತ್ತಿವೆ. ಇದನ್ನು ಭಾರತದ ಜನರು ನೋಡುತ್ತಿದ್ದಾರೆ.

ಆರ್ಟಿಕಲ್ 370 ಮತ್ತು 35 (ಎ) ವಿಧಿಗಳು ಜಮ್ಮು, ಕಾಶ್ಮೀರ ಮತ್ತು ಲಡಾಕ್ ಅನ್ನು ಹೇಗೆ ಭಾರತದಿಂದ ಸಂಪೂರ್ಣವಾಗಿ ಪ್ರತ್ಯೇಕಿಸಿವೆ ಎಂಬುದು ಈಗ ಎಲ್ಲರಿಗೂ ಸ್ಪಷ್ಟವಾಗಿದೆ. ಏಳು ದಶಕಗಳ ಯಥಾಸ್ಥಿತಿ ಸ್ಪಷ್ಟವಾಗಿ ಜನರ ಆಕಾಂಕ್ಷೆಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ. ಅಭಿವೃದ್ಧಿಯಿಂದ ಇಲ್ಲಿನ ನಾಗರೀಕರನ್ನು ದೂರವಿಡಲಾಗಿತ್ತು. ಆದರೆ, ಜಮ್ಮು-ಕಾಶ್ಮೀರ ಮತ್ತು ಲಡಾಕ್ ಇನ್ನು ಈ ದೇಶದ ಭಾಗವಾಗಿದ್ದು, ಅಭಿವೃದ್ಧಿಯ ಪಥದಲ್ಲಿ ಹೆಜ್ಜೆ ಹಾಕಲಿದೆ.

ದಿಲೀಪ್ : ಶಿಸ್ತಿನ ಹಾಗೂ ಸುಧಾರಣೆಯ ದೇಶವನ್ನು ಕಟ್ಟಲು ಜಮ್ಮು-ಕಾಶ್ಮೀರದ ಜನರಿಗೆ ನೀವು ನೀಡುವ ಸಂದೇಶ ಏನು?

ಮೋದಿ : ಏಳು ದಶಕಗಳಿಂದ ಜಮ್ಮು ಕಾಶ್ಮೀರವನ್ನು ಬೆದರಿಕೆ ಮತ್ತು ಭಯೋತ್ಪಾದನೆ ಆಳ್ವಿಕೆ ನಡೆಸಿತ್ತು. ಈಗ ಅಭಿವೃದ್ಧಿಗೆ ಅವಕಾಶ ನೀಡೋಣ. ಜಮ್ಮು- ಕಾಶ್ಮೀರ ಮತ್ತು ಲಡಾಖ್ ನಲ್ಲಿ ನೆಲೆಸಿರುವ ನನ್ನ ಸಹೋದರ ಸಹೋದರಿಯರು ಯಾವಾಗಲೂ ಅವರಿಗೆ ಉತ್ತಮ ಭವಿಷ್ಯವನ್ನು ಬಯಸಿದ್ದರು. ಆದರೆ, 370 ನೇ ವಿಧಿ ಈ ಮಹತ್ವಾಕಾಂಕ್ಷೆಯನ್ನು ಸಕ್ರಿಯಗೊಳಿಸಿರಲಿಲ್ಲ.

ಮಹಿಳೆಯರು, ಮಕ್ಕಳು ಮತ್ತು ಎಸ್​ಸಿ-ಎಸ್​ಟಿ ಸಮುದಾಯಗಳಿಗೆ ಈ ವಿಧಿಯಿಂದ ಸಾಕಷ್ಟು ಅನ್ಯಾಯವಾಗಿದೆ. ಮುಖ್ಯವಾಗಿ ಈ ವಿಧಿಯಿಂದ ಜಮ್ಮು, ಕಾಶ್ಮೀರ ಮತ್ತು ಲಡಾಕ್ ಜನರ ಉತ್ಸಾಹವನ್ನು ಈ ದೇಶ ಸಮರ್ಪಕವಾಗಿ ಬಳಸಿಕೊಂಡಿಲ್ಲ. ಈಗ, ಬಿಪಿಓಗಳಿಂದ ಸ್ಟಾರ್ಟ್ಅಪ್​ಗಳವರೆಗೆ, ಆಹಾರ ಸಂಸ್ಕರಣೆಯಿಂದ ಪ್ರವಾಸೋದ್ಯಮದವರೆಗೆ, ಅನೇಕ ಕೈಗಾರಿಕೆಗಳ ನಿರ್ಮಾಣಕ್ಕೆ ಈ ರಾಜ್ಯ ಇನ್ನು ಹೂಡಿಕೆಯನ್ನು ಪಡೆಯಬಹುದು. ಈ ಮೂಲಕ ಸ್ಥಳೀಯ ಯುವಕರಿಗೆ ಅವಕಾಶಗಳನ್ನು ಸೃಷ್ಟಿಸಬಹುದು. ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯೂ ಸಹ ಈ ಮೂಲಕ ಸಾಧ್ಯವಾಗಲಿದೆ.

ಸ್ಥಳೀಯ ಜನರ ಆಶಯ ಅವರ ಕನಸುಗಳು ಮತ್ತು ಮಹತ್ವಾಕಾಂಕ್ಷೆಗಳಿಗೆ ಅನುಗುಣವಾಗಿ ಈ ಪ್ರದೇಶಗಳು ಅಭಿವೃದ್ಧಿಗೊಳ್ಳುತ್ತವೆ ಎಂದು ಈ ಭಾಗದ ನನ್ನ ಸಹೋದರ ಸಹೋದರಿಯರಿಗೆ ನಾನು ಸ್ಪಷ್ಟ ಭರವಸೆ ನೀಡಲು ಬಯಸುತ್ತೇನೆ. ಕಲಂ 370 ಹಾಗೂ 35 (ಎ) ವಿಧಿಗಳು ಜನರನ್ನು ಕಟ್ಟಿಹಾಕುವ ಸರಪಳಿಗಳಂತೆ ಇದ್ದವು. ಈ ಸರಪಳಿಗಳು ಈಗ ಮುರಿದುಹೋಗಿವೆ.

ಜಮ್ಮು ಮತ್ತು ಕಾಶ್ಮೀರದ ನಿರ್ಧಾರಗಳನ್ನು ವಿರೋಧಿಸುವವರು ಒಂದು ಮೂಲಭೂತ ಪ್ರಶ್ನೆಗೆ ಉತ್ತರಿಸಬೇಕು- 370 ಮತ್ತು 35 (ಎ) ವಿಧಿಯಿಂದ ಕಣಿವೆ ರಾಜ್ಯದ ಜನರ ಸುರಕ್ಷತೆ ಸಾಧ್ಯವಾಯಿತೇ? ಈ ಪ್ರಶ್ನೆಗೆ ಅವರ ಬಳಿ ಉತ್ತರವಿಲ್ಲ. ಸಾಮಾನ್ಯ ಜನರಿಗೆ ಸಹಾಯ ಮಾಡುವ ಯಾವುದಾದರೂ ವಿಷಯ ಬಂದಾಗ ಇಂತವರು ಪ್ರತಿಭಟಿಸಲು ಇದನ್ನು ಬಳಸಿಕೊಳ್ಳುತ್ತಾರೆ. ಕೇಂದ್ರ ಸರ್ಕಾರದ ಬಳಿ ಇಲ್ಲಿನ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಹಾಗೂ ರೈಲ್ವೆ ಹಳಿ ನಿರ್ಮಿಸುವ ಯೋಜನೆ ಇದೆ. ಆದರೆ ಇಂತವರು ಈ ಎಲ್ಲಾ ಯೋಜನೆಗಳನ್ನು ವಿರೋಧಿಸುತ್ತಾರೆ.

ಸಾಮಾನ್ಯ ನಾಗರಿಕರನ್ನು ಬೆದರಿಸಿರುವ ಈ ಮಾವೋವಾದಿಗಳು ಮತ್ತು ಭಯೋತ್ಪಾದಕರಂತವರಿಗೆ ಮಾತ್ರ ಅವರ ಹೃದಯ ಮಿಡಿಯುತ್ತದೆ. ಇಂದು, ಪ್ರತಿಯೊಬ್ಬ ಭಾರತೀಯನು ಜಮ್ಮು, ಕಾಶ್ಮೀರ ಮತ್ತು ಲಡಾಖ್ ಜನರೊಂದಿಗೆ ಸಂಪೂರ್ಣವಾಗಿ ನಿಂತಿದ್ದಾನೆ. ಈ ಭಾಗವನ್ನು ಅಭಿವೃದ್ಧಿಯ ಪಥದಲ್ಲಿ ನಡೆಸುವ ಇಲ್ಲಿ ಶಾಶ್ವತ ಶಾಂತಿಯನ್ನು ಸ್ಥಾಪಿಸುವ ಕೇಂದ್ರ ಸರ್ಕಾರದ ಉದ್ದೇಶದಿಂದಾಗಿ ಕಾಶ್ಮೀರಿಗಳು ನಮ್ಮೊಂದಿಗೆ ನಿಲ್ಲುತ್ತಾರೆ ಎಂಬ ವಿಶ್ವಾಸ ನನಗಿದೆ.
First published: August 14, 2019, 3:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading