ಕೊರೊನಾ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದ ಸಾಂಕ್ರಾಮಿಕ ರೋಗ. ಏಕಾಏಕಿ ಎಂಟ್ರಿ ಕೊಟ್ಟ ಈ ಮಹಾಮಾರಿ ನೋಡ ನೋಡುತ್ತಿದ್ದಂತೆಯೇ ಜಗತ್ತನ್ನೇ ಆವರಿಸಿ, ಜನರ ಜೀವನವನ್ನೇ ನಿಂತ ನೀರಾಗಿಸಿತ್ತು. ಲಾಕ್ಡೌನ್ ಘೋಷಣೆ ಬಳಿಕವಂತೂ ಜನರ ಬದುಕೇ ನರಕವಾಗಿತ್ತು ಒಂದೆಡೆ ಜನರು ಜೀವ ಭಯದಿಂದ ತಮ್ಮ ದಿನಗಳನ್ನು ನಾಲ್ಕು ಗೋಡೆಗಳ ಮಧ್ಯೆ ಕಳೆಯುವಂತಾದರೆ, ಮತ್ತೊಂದೆಡೆ ವಲಸೆ ಕಾರ್ಮಿಕರ ಪಾಡು ಹೇಳತೀರದು. ಅನೇಕರು ದೂರದ ತಮ್ಮ ಮನೆ ಸೇರಲು ಕಾಲ್ನಡಿಗೆಯಲ್ಲೇ ತೆರಳಿದ್ದರು. ಈ ನಡುವೆ ಈ ಮಹಾಮಾರಿಯನ್ನು ಹಿಮ್ಮೆಟ್ಟಿಸಲು ವಿಶ್ವದೆಲ್ಲೆಡೆ ವ್ಯಾಕ್ಸಿನ್ ಕಂಡುಹಿಡಿಯುವ ಪ್ರಕ್ರಿಯೆಯೂ ತ್ವರಿತಗತಿಯಲ್ಲಿ ಸಾಗಿತ್ತು. ಈ ಸಂಶೋಧನೆಯಲ್ಲಿ ಭಾರತಕ್ಕೆ ಸಿಕ್ಕ ಗೆಲುವು ಅಸಾಧಾರಣವಾದದ್ದು. ದೇಶದಲ್ಲಷ್ಟೇ ಅಲ್ಲ ಭಾರತ ಸಂಶೋಧಿಸಿದ ಈ ಸಂಜೀವಿನಿ ವಿದೇಶಗಳಲ್ಲೂ ಪ್ರಶಂಸೆಗೆ ಪಾತ್ರವಾಯ್ತು.
ಇದೀಗ ಭಾರತದ ಕೋವಿಡ್ ವ್ಯಾಕ್ಸಿನ್ ಸಂಶೋಧನೆ, ವ್ಯಾಕ್ಸಿನ್ ಡ್ರೈವ್ ಬಗ್ಗೆ ಹಿಸ್ಟರಿ ಟಿವಿ 18 ಸಾಕ್ಷ್ಯ ಚಿತ್ರ (History TV18 Documentary) ತಯಾರಿಸಿದ್ದು, ‘ದಿ ವೈಲ್’ (The Vial) ಹೆಸರಿನಲ್ಲಿ ಈ ಡಾಕ್ಯುಮೆಂಟರಿ ರಿಲೀಸ್ ಆಗಿದೆ. ಬಾಲಿವುಡ್‌ನ ಖ್ಯಾತ ನಟ ಮನೋಜ್ ಬಾಜಪೇಯಿ (Manoj Bajpayee) ನಿರೂಪಣೆಯಲ್ಲಿ ದಿ ವೈಲ್ ಮೂಡಿಬಂದಿದೆ. ಇಂದು ರಾತ್ರಿ ಈ ಬಹುನಿರೀಕ್ಷಿತ ಡಾಕ್ಯುಮೆಂಟರಿ ಪ್ರಸಾರವಾಗಿದೆ.
ಹಿಸ್ಟರಿ ಟಿವಿ 18ನ ದಿ ವೈಲ್ ಸಾಕ್ಷ್ಯಚಿತ್ರ
ಭಾರತ ಕೈಗೊಂಡ ಕೋವಿಡ್-19 ಲಸಿಕೆ ಕಾರ್ಯಕ್ರಮ ವಿಶ್ವದಲ್ಲೇ ಅತಿ ದೊಡ್ಡ ಯೋಜನೆ ಎಂಬುವುದು ಸಾಬೀತಾಗಿದೆ. ಆದರೆ ಕೊರೊನಾ ಇಡೀ ವಿಶ್ವದಲ್ಲೇ ತಾಂಡವವಾಡುತ್ತಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರವು ಇಷ್ಟು ದೊಡ್ಡ ಮಟ್ಟದ ವ್ಯಾಕ್ಸಿನ್ ಡ್ರೈವ್ ಹೇಗೆ ಪ್ರಾರಂಭಿಸಿತು ಎಂಬುವುದು ನಿಜಕ್ಕೂ ಕುತೂಹಲಕಾರಿ ವಿಚಾರ. ಆದರೀಗ ಈ ಕುತೂಹಲಕ್ಕೆ ತೆರೆ ಬಿದ್ದಿದೆ. ಹೌದು ಐತಿಹಾಸಿಕ ಮತ್ತು ಅಭೂತಪೂರ್ವ ಸಮರದ ವಿವರಗಳುಳ್ಳ ದಿ ವೈಲ್ ಸಾಕ್ಷ್ಯಚಿತ್ರ ಇಂದು ರಾತ್ರಿ 8 ಗಂಟೆಗೆ ಪ್ರಸಾರವಾಗಿದೆ. ಬಾಲಿವುಡ್‌ನ ಖ್ಯಾತ ನಟ ಮನೋಜ್ ಬಾಜಪೇಯಿ ಈ ಡಾಕ್ಯುಮೆಂಟಿರಿಯ ನಿರೂಪಣೆ ಮಾಡಿದ್ದಾರೆ.
ದಿ ವೈಲ್‌ನಲ್ಲಿ ಏನಿದೆ?
ಕೋವಿಡ್ -19 ಲಸಿಕೆ ಸಂಶೋಧನೆ ಹಾಗೂ ಉತ್ಪಾದಿಸುವ ಸಂದರ್ಭದಲ್ಲಿ ನಡೆದ ಬೆಳವಣಿಗೆಗಳೇನು? ಎಂಬುದರ ಆಂತರಿಕ ಕಥೆಯೇ 'ದಿ ವೈಲ್'ನಲ್ಲಿ ನೀಡಲಾಗಿದೆ. ಅಭೂತಪೂರ್ವ ಟೈಮ್‌ಲೈನ್‌ಗಳಲ್ಲಿ ಕೋವಿಡ್ -19 ಲಸಿಕೆಯನ್ನು ಅಭಿವೃದ್ಧಿಪಡಿಸುವಲ್ಲಿ, ತಯಾರಿಸುವಲ್ಲಿ ಮತ್ತು ತಲುಪಿಸುವಲ್ಲಿ ಭಾರತದ ಯಶಸ್ಸಿನ ಹಿಂದಿನ ಕಥೆಯನ್ನು ಇದು ಬಿಚ್ಚಿಡುತ್ತದೆ. ಅನೇಕ ಸಂಕಷ್ಟಗಳನ್ನೆದುರಿಸಿ ದುರ್ಗಮ ಪ್ರದೇಶಗಳಿಗೆ ತೆರಳಿ ಜನರ ವಿರೋಧದ ಮಧ್ಯೆಯೂ, ಅವರಿಗೆ ಅರ್ಥೈಸಿ ಲಸಿಕೆಗಳನ್ನು ಭಾರತ ಸರ್ಕಾರ ಹೇಗೆ ನೀಡಿತು? ಈ ಸಮರದಲ್ಲಿ ಆರೋಗ್ಯ ಕಾರ್ಯಕರ್ತರ ಸಮರ ಹೇಗಿತ್ತು. ಎಂಬಿತ್ಯಾದಿ ಗಮನ ಸೆಳೆಯುವ ಕೆಲವು ಕೇಸ್ ಸ್ಟಡಿಗಳನ್ನು 'ದಿ ವೈಲ್' ಪರಿಚಯಿಸುತ್ತದೆ.
ಇದನ್ನೂ ಓದಿ: Cough Syrup: ಕೆಮ್ಮು ನಿವಾರಿಸುವ ಸಿರಪ್ ಪ್ರಾಣ ತೆಗೆದಿದ್ದೇಕೆ? ವಿಷವಾಗುತ್ತಿರುವುದೇಕೆ ಔಷಧಿಗಳು?
ಫ್ಯಾಮಿಲಿ ಮ್ಯಾನ್ ಖ್ಯಾತಿಯ ನಟ ಮನೋಜ್ ಬಾಜಪೇಯಿ ನಿರೂಪಣೆ
60 ನಿಮಿಷಗಳ ಸಾಕ್ಷ್ಯಚಿತ್ರವನ್ನು ಖ್ಯಾತ ನಟ ಮನೋಜ್ ಬಾಜಪೇಯಿ ನಿರೂಪಿಸಿದ್ದಾರೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಭಾರತದ ವಿಜಯದ ಬಗ್ಗೆ ವಿವರವಾಗಿ ಮಾತನಾಡುವ ಪ್ರಧಾನಿ ಮೋದಿಯನ್ನು ಒಳಗೊಂಡಿರುವ ಮೊದಲ ಸಾಕ್ಷ್ಯಚಿತ್ರ ಇದಾಗಿದೆ. ಹಿಸ್ಟರಿ TV18 ಸಾಕ್ಷ್ಯಚಿತ್ರದಲ್ಲಿ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಅಡಾರ್ ಪೂನವಾಲ್ಲಾ ಮತ್ತು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಇತರ ಅಭಿಪ್ರಾಯ ಇದರಲ್ಲಿದೆ.
'ದಿ ವೈಲ್'ನಲ್ಲಿದೆ ಕೋವಿಶೀಲ್ಡ್ ಲಸಿಕೆ ಕಥೆ
ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿನ ಸಾಧನೆಯ ಕಥೆಯೂ ಇಲ್ಲಿದೆ. ವ್ಯಾಕ್ಸಿನ್ ಸ್ಟ್ರೈನ್ ಅನ್ನು ಪ್ರತ್ಯೇಕಿಸುವುದರಿಂದ ಹಿಡಿದು ದೇಶದ ಬೃಹತ್ ಜನಸಂಖ್ಯೆಯನ್ನು ಪೂರೈಸಲು ದಾಖಲೆಯ ಸಮಯದಲ್ಲಿ ವಿಶ್ವದ ಎರಡು ಅತ್ಯಂತ ಪರಿಣಾಮಕಾರಿ ಲಸಿಕೆ ಅಭ್ಯರ್ಥಿಗಳ ಶತಕೋಟಿ ಬಾಟಲಿಗಳನ್ನು ತಯಾರಿಸುವವರೆಗೆ ವಿವರ ಇದರಲ್ಲಿದೆ.
ಸಾಕ್ಷ್ಯ ಚಿತ್ರದ ಬಗ್ಗೆ ನಟ ಮನೋಜ್ ಬಾಜಪೇಯಿ ಅಭಿಪ್ರಾಯವೇನು?
Network18 ನೊಂದಿಗೆ ಮಾತನಾಡಿದ ಮನೋಜ್ ಬಾಜ್‌ಪೇಯಿ “ಭಾರತದ ಕೋವಿಡ್ -19 ಲಸಿಕೆ ಕಥೆಯು ದೇಶದ ಗಮನಾರ್ಹ ಸಾಧನೆಯಾಗಿದೆ. ಭಾರತೀಯರಾಗಿ ನಾವೆಲ್ಲರೂ ಅದರ ಬಗ್ಗೆ ತಿಳಿದಿರಬೇಕು ಮತ್ತು ಹೆಮ್ಮೆಪಡಬೇಕು. ಹಲವಾರು ಸವಾಲುಗಳ ನಡುವೆಯೂ ಅಭೂತಪೂರ್ವ ಟೈಮ್‌ಲೈನ್‌ಗಳಲ್ಲಿ ಲಸಿಕೆಗಳನ್ನು ತಯಾರಿಸಿದ ಮತ್ತು ವ್ಯಾಕ್ಸಿನೇಷನ್ ಡ್ರೈವ್ ಅನ್ನು ಕಾರ್ಯಗತಗೊಳಿಸಿದ ನಮ್ಮ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿಯ ಕಾರ್ಯಕರ್ತರಿಗೆ ಈ ಸಾಕ್ಷ್ಯಚಿತ್ರವು ಗೌರವ ಸಲ್ಲಿಸುತ್ತದೆ ಅಂತ ಹೇಳಿದ್ದಾರೆ. ಇಂದು ನಾವು ಆತ್ಮವಿಶ್ವಾಸದಿಂದ ನಮ್ಮ ಮನೆಯಿಂದ ಹೊರಬರಲು ಅವರೇ ಕಾರಣ ಅಂತ ಶ್ಲಾಘಿಸಿದ್ದಾರೆ.
ಭಾರತದ ಸಾಅಧನೆ ಜಗತ್ತಿಗೇ ಮಾದರಿ
ಇಂದು, ಭಾರತದ 1.3 ಶತಕೋಟಿ ಜನರಲ್ಲಿ ಬಹುಪಾಲು ಜನರು ಕನಿಷ್ಠ ಒಂದು ಸುತ್ತಿನ ಲಸಿಕೆಯನ್ನು ಪಡೆದಿದ್ದಾರೆ. ಲಸಿಕೆ ವಿತರಣೆಯಲ್ಲಿ ಭಾರತವು ಜಗತ್ತಿಗೆ ಮಾದರಿಯಾಗಿದೆ, ಇದರ ಮೂಲಕ 100 ದೇಶಗಳಲ್ಲಿ 232.43 ಮಿಲಿಯನ್ ಕೋವಿಡ್ -19 ಲಸಿಕೆಗಳನ್ನು ಒದಗಿಸಲಾಗಿದೆ. ಇವೆಲ್ಲವನ್ನೂ ಈ ಸಾಕ್ಷ್ಯಚಿತ್ರ ಒಳಗೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ