ನವ ದೆಹಲಿ: ಉತ್ತರಪ್ರದೇಶದ ಹತ್ರಾಸ್ ಎಂಬಲ್ಲಿ ದಲಿತ ಯುವತಿಯ ಮೇಲೆ ಅದೇ ಊರಿನ ಮೇಲ್ಜಾತಿಗೆ ಸೇರಿದ ಯುವಕರು ನಡೆಸಿದ್ದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇತ್ತೀಚೆಗೆ ಇಡೀ ದೇಶದ ಜನಾಕ್ರೋಶಕ್ಕೆ ಕಾರಣವಾಗಿತ್ತು. ಆದರೆ, ಅದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಆರೋಪಿಗಳನ್ನು ರಕ್ಷಿಸುತ್ತಿದೆ ಎಂಬ ಆರೋಪವೂ ಕೇಳಿ ಬಂದಿತ್ತು. ಸ್ವತಃ ಜಿಲ್ಲಾಧಿಕಾರಿ ಸಂತ್ರಸ್ತೆಯ ಕುಟುಂಬಸ್ಥರನ್ನು ಹೆದರಿಸುವ ವಿಡಿಯೋ ಸಹ ಬಿಡುಗಡೆಯಾಗಿ ಸಂಚಲನ ಉಂಟು ಮಾಡಿತ್ತು. ಹೀಗಾಗಿ ಈ ಪ್ರಕರಣದ ವಿಚಾರಣೆ ಉತ್ತರಪ್ರದೇಶದ ಅಲಹಾಬಾದ್ ಕೋರ್ಟ್ನಲ್ಲಿ ನಡೆಯುವುದು ಸರಿಯಲ್ಲ. ಇದರಿಂದ ಸಂತ್ರಸ್ತೆಯ ಕುಟುಂಬಸ್ಥರ ಮೇಲೆ ಮತ್ತಷ್ಟು ಒತ್ತಡ ಬೀಳಲಿದೆ. ಹೀಗಾಗಿ ಈ ಪ್ರಕರಣದ ವಿಚಾರಣೆಯನ್ನು ದೆಹಲಿ ಕೋರ್ಟ್ಗೆ ವರ್ಗಾಯಿಸಬೇಕು ಎಂದು ಸುಪ್ರೀಂ ಕೋರ್ಟ್ನಲ್ಲಿ ಒತ್ತಾಯಿಸಲಾಗಿತ್ತು. ಆದರೆ, ಈ ಸಂಬಂಧ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್ "ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ದಲಿತ ಯುವತಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ಅಲಹಾಬಾದ್ ಹೈಕೋರ್ಟ್ ಮೇಲ್ವಿಚಾರಣೆ ನಡೆಸಲಿದೆ" ಎಂದು ತಿಳಿಸಿದೆ.
ದೆಹಲಿಯ ನಿರ್ಭಯಾ ಪ್ರಕರಣದಲ್ಲಿ ಎಲ್ಲಾ ಆರೋಪಿಗಳಿಗೂ ಗಲ್ಲು ಶಿಕ್ಷೆ ಆಗುವಂತೆ ನೋಡಿಕೊಂಡ ಸುಪ್ರೀಂ ಕೋರ್ಟ್ ವಕೀಲೆ ಸೀಮಾ ಕುಶ್ವಾಹ ಅವರೇ ಇಂದು ಹತ್ರಾಸ್ ದಲಿತ ಹೆಣ್ಣು ಮಗಳ ಅತ್ಯಾಚಾರ ಕೊಲೆ ಪ್ರಕರಣದಲ್ಲೂ ಕೋರ್ಟ್ಗೆ ಹಾಜರಾಗುತ್ತಿದ್ದಾರೆ. ಈ ಪ್ರಕರಣವನ್ನು ದೆಹಲಿಗೆ ವರ್ಗಾಯಿಸಬೇಕು ಎಂದು ಸುಪ್ರೀಂ ಕೋರ್ಟ್ ಸೀಮಾ ಕುಶ್ವಾಹ ಅವರೇ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ಗುರುವಾರ ನಡೆಸಲಾಗಿತ್ತು. ಈ ವೇಳೆ ಪ್ರಕರಣದ ವಿಚಾರಣೆಯಲ್ಲಿ ಸಂತ್ರಸ್ತೆಯ ಕುಟುಂಬದ ಪರ ಹಾಜರಾದ ವಕೀಲೆ ಸೀಮಾ ಕುಶ್ವಾಹ ಪ್ರಕರಣವನ್ನು ಉತ್ತರಪ್ರದೇಶದಿಂದ ದೆಹಲಿಯ ನ್ಯಾಯಾಲಯಕ್ಕೆ ವರ್ಗಾಯಿಸಬೇಕೆಂದು ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಎಸ್.ಎ.ಬೋಬ್ಡೆ ನೇತೃತ್ವದ ಪೀಠಕ್ಕೆ ವಿನಂತಿಸಿದರು.
ಅಲ್ಲದೆ, ತನಿಖೆಯ ವರದಿಯನ್ನು ನೇರವಾಗಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸುವಂತೆ ಸಿಬಿಐಗೆ ಸೂಚಿಸಬೇಕು ಹಾಗೂ ತನಿಖೆ ಮುಗಿದ ನಂತರ ದಿಲ್ಲಿಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಬೇಕು" ಎಂದು ಮನವಿ ಮಾಡಿದರು.
ಇದನ್ನೂ ಓದಿ : ಗಡಿ ತಂಟೆಗೆ ಸಂಬಂಧಿಸಿದಂತೆ ಚೀನಾ ಜೊತೆಗಿನ ಮಾತುಕತೆ ಗೌಪ್ಯವಾಗಿರಲಿದೆ; ಸಚಿವ ಎಸ್. ಜೈಶಂಕರ್
ಆದರೆ, ಸಂತ್ರಸ್ತೆಯ ಪರ ವಕೀಲರ ಆತಂಕಕ್ಕೆ ಉತ್ತರಿಸಿದ ನ್ಯಾಯಮೂರ್ತಿ ಬೋಬ್ಡೆ, “ಅಲಹಾಬಾದ್ ಹೈಕೋರ್ಟ್ ಇದರ ಮೇಲ್ಚಿಚಾರಣೆಯನ್ನು ನಿಭಾಯಿಸಲಿದೆ. ಏನಾದರೂ ಸಮಸ್ಯೆ ಇದ್ದರೆ ನಾವಿದ್ದೇವೆ” ಎಂದು ಆಶ್ವಾಸನೆ ನೀಡಿದ್ದಾರೆ ಎಂದು ವರದಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ