Maharashtra Politics: ಜುಲೈ 11ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್, ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಶಿಂಧೆ ಟೀಂ!
ಶಿವಸೇನೆಯ 16 ಮಂದಿ ಬಂಡಾಯ ಶಾಸಕರಿಗೆ ಮಹಾರಾಷ್ಟ್ರ ವಿಧಾನಸಭೆಯ ಉಪ ಸ್ಪೀಕರ್ ಅನರ್ಹತೆಯ ನೋಟಿಸ್ ಜಾರಿ ಮಾಡಿದ್ದರು. ಈ ಎಲ್ಲ 16 ಶಾಸಕರು ಜೂನ್ 27ರ ಸೋಮವಾರ ದೊಳಗೆ ಅಂದರೆ ಇಂದು ನೋಟಿಸ್ಗೆ ತಮ್ಮ ಲಿಖಿತ ಉತ್ತರಗಳನ್ನು ಸಲ್ಲಿಸಬೇಕೆಂದು ಸೂಚಿಸಲಾಗಿತ್ತು.
ನವದೆಹಲಿ: ಮಹಾರಾಷ್ಟ್ರ (Maharashtra) ರಾಜ್ಯ ರಾಜಕೀಯ (State Politics) ಹೈಡ್ರಾಮಾ (High Drama) ಸುಪ್ರೀಂ ಕೋರ್ಟ್ (Supreme Court) ಅಂಗಳ ತಲುಪಿದೆ. ಶಿವಸೇನೆಯ (Shiv Sena) ಬಂಡಾಯ ಶಾಸಕರ (Rebel MLA) ನಾಯಕ ಏಕನಾಥ ಶಿಂಧೆ (Eknath Shindhe) ಅವರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಏಕನಾಥ ಶಿಂಧೆ ಸೇರಿ 16 ಶಾಸಕರನ್ನು ಅನರ್ಹ (Disqualify) ಮಾಡಲು ಉಪ ಸ್ಪೀಕರ್ (Deputy Speaker) ನರಹರಿ ಅವರು ನೀಡಿರುವ ನೋಟಿಸ್ (Notice) ಅನ್ನು ರದ್ದು ಮಾಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಂದಿನ ವಿಚಾರಣೆಯನ್ನು ಜುಲೈ 11ಕ್ಕೆ ಮುಂದೂಡಿದೆ.
ಜುಲೈ 11ಕ್ಕೆ ಅರ್ಜಿ ವಿಚಾರಣೆ ಮುಂದೂಡಿಕೆ
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾ. ಜೆ.ಬಿ ಪರ್ಡಿವಾಲ ಅವರು ಇರುವ ರಜಾಕಾಲದ ದ್ವಿಸದಸ್ಯ ಪೀಠ ಈ ಅರ್ಜಿಯ ವಿಚಾರಣೆ ನಡೆಸಿತು. ಈ ವೇಳೆ ಸುಪ್ರೀಂ ಕೋರ್ಟ್ಗೆ ಬರುವುದಕ್ಕೂ ಮುನ್ನ ನೀವು ಯಾಕೆ ಬಾಂಬೆ ಹೈ ಕೋರ್ಟನ್ನು ಸಮೀಪಿಸಿಲ್ಲ ಎಂದು ಪ್ರಶ್ನೆ ಮಾಡಿತು. ಅಲ್ಲದೇ ಈ ಎಲ್ಲಾ ಪ್ರಕರಣ ಸಂಬಂಧ ಉಪ ಸ್ಪೀಕರ್, ಮಹಾರಾಷ್ಟ್ರ ವಿಧಾನಸಭೆ ಕಾರ್ಯದರ್ಶಿ, ರೆಬೆಲ್ ಶಾಸಕರು ಸೇರಿ ಅರ್ಜಿ ಸಲ್ಲಿಸಿದವರಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಜುಲೈ 11ಕ್ಕೆ ಮುಂದೂಡಿತು. ಇನ್ನು ಶಾಸಕರನ್ನು ಅನರ್ಹಗೊಳಿಸುವ ಸಂಬಂಧ ಉಪ ಸ್ಪೀಕರ್ ರೆಬೆಲ್ ಶಾಸಕರಿಗೆ ನೀಡಿರುವ ನೋಟಿಸ್ ಬಗ್ಗೆ ವಿಸ್ಕೃತವಾದ ಅಫಿಡವಿಟ್ ಸಲ್ಲಿಸಬೇಕು ಎಂದು ಉಪ ಸ್ಪೀಕರ್ಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಅನರ್ಹತೆಯ ನೋಟಿಸ್ ನೀಡಿದ್ದ ಶಿವಸೇನೆ?
ಶಿವಸೇನೆಯ 16 ಮಂದಿ ಬಂಡಾಯ ಶಾಸಕರಿಗೆ ಮಹಾರಾಷ್ಟ್ರ ವಿಧಾನಸಭೆಯ ಉಪ ಸ್ಪೀಕರ್ ಅನರ್ಹತೆಯ ನೋಟಿಸ್ ಜಾರಿ ಮಾಡಿದ್ದರು. ಈ ಎಲ್ಲ 16 ಶಾಸಕರು ಜೂನ್ 27ರ ಸೋಮವಾರ ದೊಳಗೆ ಅಂದರೆ ಇಂದು ನೋಟಿಸ್ಗೆ ತಮ್ಮ ಲಿಖಿತ ಉತ್ತರಗಳನ್ನು ಸಲ್ಲಿಸಬೇಕೆಂದು ಸೂಚಿಸಲಾಗಿತ್ತು.
ತಮ್ಮನ್ನು ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ವಜಾ ಮಾಡಿ ಅಜಯ್ ಚೌಧರಿಯನ್ನು ನೇಮಕ ಮಾಡಿದ ಪಕ್ಷದ ನಿರ್ಧಾರ ಪ್ರಶ್ನಿಸಿ, 16 ಬಂಡಾಯ ಶಾಸಕರು ಅರ್ಜಿ ಸಲ್ಲಿಸಿದ್ದರು. ಉಪ ಸ್ಪೀಕರ್ ನರಹರಿ ಝಿರ್ವಾಲ್ ಅವರು ನೀಡಿರುವ ನೋಟಿಸ್ ಅನ್ನು ರದ್ದು ಮಾಡಬೇಕು, ಉಪ ಸ್ಪೀಕರ್ ಅವರ ಮೇಲೆ ತಮ್ಮ ಗುಂಪು ಮಂಡಿಸಿರುವ ಅವಿಶ್ವಾಸ ನಿರ್ಣಯವನ್ನು ರದ್ದು ಮಾಡಿದ ತೀರ್ಮಾನವನ್ನು ತಡೆ ಹಿಡಿಯಬೇಕು ಎಂದು ಕೋರಿ ಬಂಡಾಯ ಗುಂಪಿನ ನಾಯಕ ಏಕನಾಥ ಶಿಂಧೆ ಅವರು ಸುಪ್ರೀಂ ಕೋರ್ಟ್ಗೆ ಭಾನುವಾರ ಅರ್ಜಿ ಸಲ್ಲಿಸಿದ್ದರು.
ಬಂಡಾಯ ಶಾಸಕರ ಕುಟುಂಬಸ್ಥರಿಗೆ ರಕ್ಷಣೆ ನೀಡಿ
ಇದೇ ವೇಳೆ ತಮ್ಮ ಕುಟುಂಬ ಸದಸ್ಯರಿಗೆ ರಕ್ಷಣೆ ನೀಡಬೇಕು ಎಂದು ಕೋರಿರುವ ಶಿಂಧೆ ಬಣದ ಮನವಿಯನ್ನು ಸರ್ವೋಚ್ಚ ನ್ಯಾಯಾಲಯ ಪುರಸ್ಕರಿಸಿದೆ. ಎಲ್ಲಾ 39 ಅಸಮಾಧಾನಿತ ಶಾಸಕರು ಹಾಗೂ ಅವರ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕು ಎಂದು ಸರ್ಕಾರಕ್ಕೆ ಸೂಚನೆ ನೀಡಿದೆ.
ಇನ್ನು ಬಂಡಾಯ ಶಾಸಕರ ವಿರುದ್ಧ ಸಿಎಂ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಕಿಡಿಕಾರಿದ್ದಾರೆ. ನಾವು ಶಿವಸೇನೆ ಇಲ್ಲದೆ ಅಧಿಕಾರಕ್ಕೆ ಬರಲು ಸಿದ್ಧವಿದ್ದರೆ ನಿಮ್ಮೊಂದಿಗೆ ಹೋರಾಡಲು ನಾವೂ ಸಿದ್ಧರಿದ್ದೇವೆ. ದೇಶದ್ರೋಹಿಗಳು ಯಾವುದೇ ಕಾರಣಕ್ಕೂ ಗೆಲ್ಲಲು ನಾವು ಬಿಡುವುದಿಲ್ಲ ಅಂತ ಗುಡುಗಿದ್ದಾರೆ.
Published by:Annappa Achari
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ