ಸುಶೀಲ್ ಕುಮಾರ್: ಎರಡೆರಡು ಒಲಂಪಿಕ್ ಪದಕ ಗೆದ್ದು ಮೆರೆದ ಕುಸ್ತಿಪಟು ಜೈಲು ಪಾಲಾದ ಕಥೆ.. 

ಸುಶೀಲ್ ಕುಮಾರ್

ಸುಶೀಲ್ ಕುಮಾರ್

ಬಡ ಕುಟುಂಬದಿಂದ ಬಂದರೂ ತನ್ನ ಸಾಧನೆಯ ಮೂಲಕ ಖ್ಯಾತಿಯ ಉತ್ತುಂಗಕ್ಕೆ ಏರಿದ್ದ ಸುಶೀಲ್ ಹಣೆಬರಹ ಅವರನ್ನು ಈಗ ಜೈಲು ಪಾಲು ಮಾಡಿದೆ. ಸುಶೀಲ್ ಮಾಡಿರುವುದು ಗಂಭೀರ ಅಪರಾಧ, ಆ ಕುರಿತು ನ್ಯಾಯಾಲಯ ತೀರ್ಮಾನ ಕೈಗೊಳ್ಳಲಿದೆ.

 • Share this:

  ಟೋಕಿಯೋ ಒಲಿಂಪಿಕ್ಸ್‌ ಬ್ಯಾಡ್ಮಿಂಟನ್‌ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಪಡೆದ ಬಳಿಕ ಪಿ.ವಿ ಸಿಂಧು, ಎರಡನೇ ಬಾರಿಗೆ ಒಲಿಂಪಿಕ್ಸ್‌ ಪದಕ ಗೆದ್ದ ಎರಡನೇ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಾಗಾದರೆ ಎರಡು ಒಲಿಂಪಿಕ್ಸ್‌ ಗೆದ್ದಿರುವ ಮೊದಲ ಭಾರತೀಯ ಕ್ರೀಡಾಪಟು ಯಾರು..?


  ಅವರೇ ಕುಸ್ತಿಪಟು ಸುಶೀಲ್ ಕುಮಾರ್. ಅವರು 2008 ರಲ್ಲಿ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದರು ಮತ್ತು ಅದಾದ 4 ವರ್ಷಗಳ ಬಳಿಕ ಲಂಡನ್‍ನಲ್ಲಿ ಬೆಳ್ಳಿ ಗೆದ್ದರು.
  ವೈಯಕ್ತಿಕವಾಗಿ ಎರಡೆರಡು ಒಲಂಪಿಕ್ ಪದಕಗಳನ್ನು ಗೆದ್ದಿರುವ ಇಬ್ಬರೇ ಭಾರತೀಯರು ಇವರು. ಈಗಾಗಲೇ ವೃತ್ತಿ ಜೀವನದಲ್ಲಿ ಮಿಂಚುತ್ತಿರುವ 26 ವರ್ಷದ ಸಿಂಧುವಿಗೆ ಇನ್ನಷ್ಟು ಸಾಧನೆ ಮಾಡಲು ಹಲವು ವರ್ಷಗಳು ಉಳಿದಿವೆ. ಆದರೆ 38 ವರ್ಷದ ಸುಶೀಲ್ ಕುಮಾರ್ ಸದ್ಯಕ್ಕೆ ತನ್ನ ಐತಿಹಾಸಿಕ ಸಾಧನೆ ಮತ್ತು ಶೌರ್ಯದ ಕಥೆಗಳನ್ನು ನೆನಪಿಸಿಕೊಳ್ಳುವುದನ್ನು ಬಿಟ್ಟರೆ ಇನ್ನೇನು ಮಾಡುವಂತಿಲ್ಲ. ಏಕೆಂದರೆ ಅವರು ಈಗ ಜೈಲಿನಲ್ಲಿದ್ದಾರೆ.


  ಆಗಸ್ಟ್ 2ರಂದು, ಅಂದರೆ ಪಿ ವಿ ಸಿಂಧು ಒಲಪಿಂಕ್ಸ್ ಪದಕ ಗೆದ್ದ ಮಾರನೆಯ ದಿನ, ಸುಶೀಲ್ ಕುಮಾರ್‌ರನ್ನು ಕುಸ್ತಿಪಟು ಸಾಗರ್ ಧಂಕರ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂದು ಹೆಸರಿಸಿ, ದೆಹಲಿ ಪೊಲೀಸರು 170 ಪುಟಗಳ ಚಾರ್ಜ್‍ಶೀಟನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಮೇ ತಿಂಗಳಲ್ಲಿ ಕೊಲೆ ಆರೋಪಕ್ಕೆ ಒಳಗಾದಾಗ ಅಭಿಮಾನಿಗಳಿಗೆ ಅದನ್ನು ನಂಬಲು ಸಾಧ್ಯವಾಗಿರಲಿಲ್ಲ.


  23 ವರ್ಷದ ಕುಸ್ತಿಪಟು ಸಾಗರ್ ಧಂಕರ್ ಕೊಲೆ ಆರೋಪ ಸುಶೀಲ್ ಮೇಲಿತ್ತು. ದೆಹಲಿಯ ಛತ್ರಾಸಲ್ ಕ್ರೀಡಾಂಗಣದ ಹೊರಗೆ ನಡೆದ ಜಗಳದಲ್ಲಿ ಸುಶೀಲ್ ಕುಮಾರ್ ಮತ್ತು ಇತರರು ಭಾಗಿಯಾಗಿದ್ದರು, ಅದು ಧಂಕರ್ ಅವರ ಕೊಲೆಯಲ್ಲಿ ಅಂತ್ಯಗೊಂಡಿತ್ತು. ಬಳಿಕ ಸುಶೀಲ್ ಘಟನಾ ಸ್ಥಳದಿಂದ ಪರಾರಿಯಾಗಿದ್ದರು.


  ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದ ಸುಶೀಲ್ ಬಂಧನದ ಸುದ್ದಿ ಕೇಳಿ ಇಡೀ ದೇಶವೇ ದಂಗಾಗಿತ್ತು ಮತ್ತು ಕಟ್ಟಾ ಅಭಿಮಾನಿಗಳಿಗೆ ಶಾಕ್ ಆಗಿತ್ತು. ಕೊಲೆಯಾದ ಸಾಗರ್, ಸುಶೀಲ್‌ರನ್ನು ತಮ್ಮ ಗುರು ಎಂದು ಭಾವಿಸಿದ್ದರು ಮತ್ತು ಅವರಿಬ್ಬರು ಅತ್ಯಂತ ಆತ್ಮೀಯರಾಗಿದ್ದರು. ಆ ದುರಾದೃಷ್ಟಕರ ಕ್ಷಣ ಎಲ್ಲವನ್ನೂ ಬುಡಮೇಲು ಮಾಡಿತು.
  ಆಗಸ್ಟ್ 1 ರಂದು ಪಿ.ವಿ ಸಿಂಧು ಒಲಂಪಿಕ್ಸ್ ಪದಕ ಗೆದ್ದಾಗ , ಸುಶೀಲ್ ಆ ಆಟವನ್ನು ನೋಡಿಯೂ ಇರಲಿಕ್ಕಿಲ್ಲ, ಬಹುಶ: ಮರುದಿನ ಪೊಲೀಸರು ತನ್ನ ಮೇಲೆ ಸಲ್ಲಿಸಲಿರುವ ಚಾರ್ಜ್‍ಶೀಟ್ ಕುರಿತ ಯೋಚನೆಗಳಲ್ಲಿ ಕಳೆದು ಹೋಗಿರಬಹುದು.


  ನೈರುತ್ಯ ದೆಹಲಿಯ ನಜಫ್‍ಘರ್ ಎಂಬ ಹಳ್ಳಿಯಲ್ಲಿ ಜನಿಸಿದ ಸುಶೀಲ್ ಕುಮಾರ್ ಬಡ ಕುಟುಂಬದ ಹಿನ್ನಲೆ ಉಳ್ಳವರು. ಅವರ ತಂದೆ ದೆಹಲಿಯಲ್ಲಿ ಬಸ್ ಚಾಲಕರಾಗಿದ್ದರು. ಕುಸ್ತಿಪಟುವಾಗಬೇಕು ಎಂಬ ಕನಸು ಹೊತ್ತಿದ್ದ ಸುಶೀಲ್ ಕುಮಾರ್ ತರಬೇತಿ 2 ದಶಕಗಳ ಹಿಂದೆ ಅದೇ ಛತ್ರಸಾಲ್ ಕ್ರೀಡಾಂಗಣದಲ್ಲಿ ಆರಂಭವಾಗಿತ್ತು.


  ಒಲಂಪಿಕ್ಸ್ ಆರಂಭವಾಗುವ ಮುನ್ನ ಸುಶೀಲ್ ಜೈಲಿನಲ್ಲಿ, ಟಿವಿಯಲ್ಲಿ ಒಲಿಂಪಿಕ್ಸ್ ಅಪ್‍ಡೇಟ್ಸ್ ನೋಡಲು ಅವಕಾಶ ಮಾಡಿಕೊಡಬೇಕು ಎಂದು ವಿನಂತಿ ಮಾಡಿದ್ದರು. ಒಲಂಪಿಕ್ಸ್ ಪಂದ್ಯಾವಳಿಗಳನ್ನು ಟೀವಿಯಲಿ ನೋಡಲು ಅವರಿಗೆ ಅನುಮತಿ ನೀಡಲಾಗಿದೆ. ಆದರೆ ಒಲಿಂಪಿಕ್ ಕುಸ್ತಿ ಪಂದ್ಯಾಟಗಳು ಇನ್ನಷ್ಟೇ ಆರಂಭವಾಗಬೇಕಿದೆ. ಆದರೆ ಪಿ ವಿ ಸಿಂಧು ಅವರ ಎರಡನೇ ಪದಕದ ಸಾಧನೆಯನ್ನು ನೋಡಿದ್ದಾರೋ ಇಲ್ಲವೋ ಎಂಬುವುದು ಸ್ಪಷ್ಟವಾಗಿಲ್ಲ.


  ಬಡ ಕುಟುಂಬದಿಂದ ಬಂದರೂ ತನ್ನ ಸಾಧನೆಯ ಮೂಲಕ ಖ್ಯಾತಿಯ ಉತ್ತುಂಗಕ್ಕೆ ಏರಿದ್ದ ಸುಶೀಲ್ ಹಣೆಬರಹ ಅವರನ್ನು ಈಗ ಜೈಲು ಪಾಲು ಮಾಡಿದೆ. ಸುಶೀಲ್ ಮಾಡಿರುವುದು ಗಂಭೀರ ಅಪರಾಧ, ಆ ಕುರಿತು ನ್ಯಾಯಾಲಯ ತೀರ್ಮಾನ ಕೈಗೊಳ್ಳಲಿದೆ. ಅವರ ಸಾಧನೆ ಮತ್ತು ಅದರಿಂದ ದೊರೆತ ಶ್ರೀಮಂತಿಕೆ ಇನ್ನು ಮುಂದೆ ಒಂದು ಸಿಹಿ ನೆನಪು ಮಾತ್ರ. ಇನ್ನು ಮುಂದೆ ಅವರ ಪ್ರತಿಕ್ರಿಯೆ ಪಡೆಯಲು ಮಾಧ್ಯಮದವರು ಅವರ ಹಿಂದೆ ಬೀಳುವುದಿಲ್ಲ. ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಶುಭ ಕೋರುವ ಸಂದೇಶಗಳು ಬರುವುದಿಲ್ಲ.


  ಇದನ್ನು ಓದಿ: ’’ಯೋಗಿ ಬಗ್ಗೆ ಮಾತನಾಡಿದರೆ ಹುಷಾರ್​’’ ಎಂದ ಯುಪಿ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್​

  ಒಲಂಪಿಕ್ಸ್‌ನಲ್ಲಿ ಸಾಧನೆ ಮಾಡಿರುವ ಮೀರಾ ಬಾಯಿ ಚಾನು, ಲೊವಿನಾ ಬೊರ್ಗೊಹೈನ್, ಪಿ ವಿ ಸಿಂಧು, ಮಹಿಳಾ ಹಾಕಿಯಲ್ಲಿ ಸಾಧನೆ ಮಾಡಿದ ರಾಣಿ ರಾಂಪಾಲ್ ಮುಂತಾದವರು ಕೂಡ ಬಡತನದ ಹಿನ್ನೆಲೆಯಿಂದಲೇ ಬಂದವರು. ಇನ್ನು ಆ ಬಡತನ ಇರುವುದಿಲ್ಲ .ಅವರೆಲ್ಲರ ಸಾಧನೆಯಿಂದಾಗಿ ಮುಂದಿನ ಜೀವನ ಬದಲಾಗುತ್ತದೆ.
  ಆದರೆ ಸುಶೀಲ್ ಕುಮಾರ್ ಕತೆ ಹಾಗಲ್ಲ, ಜೈಲಿನಲ್ಲಿ ಅವರ ಮುಂದಿನ ಜೀವನ ಹೇಗಿರುತ್ತದೆ ಎಂದು ಕಾದು ನೋಡಬೇಕು.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  Published by:HR Ramesh
  First published: