ಗೋಪಾಲ್‌ಗಂಜ್: ಜೈಲಿನಲ್ಲಿ ಅಧಿಕಾರಿಗಳು (Inspection) ತಪಾಸಣೆ ಮಾಡುತ್ತಿದ್ದ ವೇಳೆ ಖೈದಿಯೊಬ್ಬ (Prisoner) ಸಿಕ್ಕಿ ಹಾಕಿಕೊಳ್ಳುವ ಭಯದಿಂದ ತನ್ನಲ್ಲಿದ್ದ ಮೊಬೈಲ್ ನುಂಗಿದ (Swallows Mobile) ಘಟನೆ ಬಿಹಾರದಲ್ಲಿ (Bihar) ನಡೆದಿದೆ. ಬಿಹಾರದ ಗೋಪಾಲ್‌ಗಂಜ್ ಜಿಲ್ಲಾ ಕಾರಾಗೃಹದಲ್ಲಿ ಈ ಘಟನೆ ನಡೆದಿದ್ದು, ನಂತರ ಆತನಿಗೆ ತೀವ್ರ ತರದಲ್ಲಿ ಹೊಟ್ಟೆ ನೋವು (Stomach Pain) ಕಾಣಿಸಿಕೊಂಡ ಕಾರಣ ಈ ವಿಚಾರ ಬೆಳಕಿಗೆ ಬಂದಿದೆ.
ಹೌದು.. ಕಳೆದ ಶನಿವಾರ ಜೈಲು ತಪಾಸಣೆ ವೇಳೆ ಖೈದಿಯೊಬ್ಬ ತಾನು ಅಧಿಕಾರಿಗಳಿಗೆ ತಗ್ಲಾಕ್ಕೊಳ್ಳುವ ಭಯದಿಂದ ತಾನು ಅಕ್ರಮವಾಗಿ ಇಟ್ಟುಕೊಂಡಿದ್ದ ಮೊಬೈಲ್ ಅನ್ನು ನುಂಗಿದ ವಿಚಿತ್ರ ಘಟನೆ ನಡೆದಿದೆ. ಖೈಶರ್ ಅಲಿ ಎಂಬಾತನೇ ಮೊಬೈಲ್ ನುಂಗಿದ ಭೂಪನಾಗಿದ್ದು, ಉನ್ನತ ಮಟ್ಟದ ಅಧಿಕಾರಿಗಳು ಜೈಲಿಗೆ ಭೇಟಿ ನೀಡಿ ತಪಾಸಣೆ ಮಾಡುತ್ತಿದ್ದಾಗ ಆತ ಇಂತಹ ದುಸ್ಸಾಹಸಕ್ಕೆ ಕೈ ಹಾಕಿದ್ದಾನೆ.
ಇದನ್ನೂ ಓದಿ: Husband and Wife: ಹೆಂಡತಿಯನ್ನು ಇಂಪ್ರೆಸ್ ಮಾಡಲು ಹೋಗಿ ಜೈಲು ಪಾಲಾದ ಇಂಜಿನಿಯರ್! ಆತ ಮಾಡಿದ ಘನಂದಾರಿ ಕೆಲಸ ಏನ್ ಗೊತ್ತಾ?
ಮರುದಿನ ಕಾಣಿಸಿಕೊಂಡ ಹೊಟ್ಟೆನೋವು!
ಅಧಿಕಾರಿಗಳು ಬಂದಿದ್ದ ವೇಳೆ ಭಯದಿಂದ ಮೊಬೈಲ್ ನುಂಗಿದ್ದ ಅಪರಾಧಿ ಖೈಶರ್ ಅಲಿಗೆ ತಕ್ಷಣ ಏನೂ ಗೊತ್ತಾಗಿಲ್ಲ., ಹೀಗಾಗಿ ಆತ ಸಹಜವಾಗಿಯೇ ಬದುಕಿದೆಯಾ ಬಡಜೀವ ಎಂದು ಅಧಿಕಾರಿಗಳ ಕೈನಿಂದ ತಪ್ಪಿಸಿಕೊಂಡು ಆರಾಮವಾಗಿದ್ದ. ಆದರೆ ಮರುದಿನ ಆತನಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಆರಂಭದಲ್ಲಿ ನಿರ್ಲಕ್ಷ್ಯ ಮಾಡಿದ್ದ ಖೈಶರ್ ಅಲಿಗೆ ನಂತರ ಹೊಟ್ಟೆನೋವು ಜೋರಾಗಿ ಕಾಣಿಸಿಕೊಳ್ಳಲು ಶುರುವಾಗಿದೆ. ನಂತರ ತಡೆದುಕೊಳ್ಳಲು ಆಗದೇ ಇದ್ದಾಗ ಆತ ಹೊಟ್ಟೆ ನೋವಿನ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದಾನೆ.
ಕೂಡಲೇ ಆತನನ್ನು ಆಸ್ಪತ್ರೆಗೆ ಕರೆತಂದ ಜೈಲಿನ ಅಧಿಕಾರಿಗಳು ಖೈದಿಗೆ ಹೊಟ್ಟೆನೋವು ಕಾಣಿಸಿಕೊಂಡಿರುವ ವಿಷಯವನ್ನು ವೈದ್ಯರಿಗೆ ತಿಳಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ವೈದ್ಯ ಸಲಾಮ್ ಸಿದ್ದಿಕಿ, ಖೈಶರ್ ಅಲಿಯ ಹೊಟ್ಟೆಯ ಎಕ್ಸ್‌ರೇ ಮಾಡಿದಾಗ ಆತನ ಹೊಟ್ಟೆಯಲ್ಲಿ ವಸ್ತುವೊಂದು ಇರುವುದು ಪತ್ತೆಯಾಗಿದೆ. ಬಳಿಕ ನುರಿತ ವೈದ್ಯರ ತಂಡವೊಂದನ್ನು ರಚಿಸಿ ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಗೋಪಾಲ್‌ಗಂಜ್ ಜಿಲ್ಲಾಸ್ಪತ್ರೆಯಿಂದ ಪಾಟ್ನಾ ವೈದ್ಯಕೀಯ ಕಾಲೇಜಿಗೆ ದಾಖಲು ಮಾಡಿದರು. ಅಲ್ಲಿ ಪಾಟ್ನಾ ವೈದ್ಯಕೀಯ ಕಾಲೇಜಿನ ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮಾಡಿ ಮೊಬೈಲ್‌ನ್ನು ಹೊರ ತೆಗೆದಿದ್ದಾರೆ.
ಇದನ್ನೂ ಓದಿ: Aung San Suu Kyi: ಭ್ರಷ್ಟಾಚಾರದ ಆರೋಪ; 33 ವರ್ಷ ಸೆರೆಮನೆವಾಸಕ್ಕೆ ಗುರಿಯಾದ ನೋಬೆಲ್ ಪ್ರಶಸ್ತಿ ವಿಜೇತೆ ಆಂಗ್ ಸಾನ್ ಸೂಕಿ!
ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದ ಬಳಿಕ ಜೈಲಿನ ಅಧಿಕಾರಿಗಳು ಖೈದಿ ಖೈಶರ್ ಅಲಿ ಬಳಿ ಮೊಬೈಲ್ ಹೊಟ್ಟೆಯೊಳಗೆ ಹೋದ ವಿಚಾರವನ್ನು ಕೇಳಿದ್ದು, ಆಗ ಆತ ನಡೆದ ವಿಷಯವನ್ನು ತಿಳಿಸಿದ್ದಾನೆ.
ಮೊಬೈಲ್ ಬಳಕೆ ನಿಷೇಧ
ದೇಶದ ಜೈಲುಗಳಲ್ಲಿ ಖೈದಿಗಳಿಗೆ ಮೊಬೈಲ್ ನೀಡುವುದನ್ನು ಅಥವಾ ಮೊಬೈಲ್ ಇಟ್ಟುಕೊಳ್ಳುವುದನ್ನು ನಿಷೇಧಿಸಲಾಗಿದೆ. ಜೈಲಿನಿಂದಲೇ ಅಪರಾಧ ಕೃತ್ಯಗಳಿಗೆ ಪ್ಲಾನ್ ಮಾಡಬಹುದು ಅಥವಾ ಜೈಲಿನಿಂದ ಪರಾರಿಯಾಗಲು ಯೋಜನೆ ರೂಪಿಸಬಹುದು ಅಥವಾ ಜೈಲಿನಲ್ಲಿದ್ದರೂ ಎಲ್ಲಾ ಸೌಲಭ್ಯಗಳನ್ನು ಒದಗಿಸಿದರೆ ಖೈದಿಗಳಿಗೆ ತಾವು ಅಪರಾಧಿಗಳು, ಶಿಕ್ಷೆ ಅನುಭವಿಸುತ್ತಿದ್ದೀವಿ ಅನ್ನುವ ಭಾವನೆ ಬಾರದೇ ಇರಬಹುದು ಎಂಬ ಮುಂತಾದ ಕಾರಣಗಳಿಗೆ ಭಾರತದಲ್ಲಿ ಜೈಲುವಾಸ ಅನುಭವಿಸುತ್ತಿರುವ ಖೈದಿಗಳಿಗೆ ಮೊಬೈಲ್ ನಿಷೇಧಿಸಲಾಗಿದೆ.
ಹಾಗಂತ ಸಂಪೂರ್ಣವಾಗಿ ಮೊಬೈಲ್ ನಿಷೇಧವಾಗಿದೆಯೇ ಎಂದು ಕೇಳಿದರೆ ಖಂಡಿತವಾಗಿಯೂ ಇಲ್ಲ. ಈಗಲೂ ಪ್ರತಿಯೊಂದು ಜೈಲಿನಲ್ಲೂ ಕನಿಷ್ಟ ಒಬ್ಬರಾದರೂ ಕದ್ದು ಮುಚ್ಚಿ ಮೊಬೈಲ್ ಬಳಕೆ ಮಾಡೋರು ಸಿಕ್ಕೇ ಸಿಗುತ್ತಾರೆ. ಕೆಲವು ಕಡೆಗಳಲ್ಲಿ ಜೈಲಿನ ಅಧಿಕಾರಿಗಳೇ ಖೈದಿಗಳೊಂದಿಗೆ ಕೈಜೋಡಿಸಿ ಮೊಬೈಲ್ ಸೇರಿದಂತೆ ಅವರಿಗೆ ಅಗತ್ಯ ಇರುವ ವಸ್ತುಗಳನ್ನು ಒದಗಿಸಿದರೆ ಇನ್ನೂ ಕೆಲವಡೆ ಮತ್ಯಾವುದೋ ಕಳ್ಳಮಾರ್ಗದಲ್ಲಿ ತಮಗೆ ಬೇಕಾದುದನ್ನು ದಕ್ಕಿಸಿಕೊಳ್ಳುತ್ತಾರೆ. ಇಂತಹ ಪ್ರಕರಣಗಳು ಇನ್ಯಾವುದೋ ಸಂದರ್ಭದಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಜೈಲಿಗೆ ಭೇಟಿ ನೀಡಿ ತಪಾಸಣೆ ಮಾಡಿದಾಗಲೇ ಬೆಳಕಿಗೆ ಬರೋದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ