ಈಗೆಲ್ಲಾ ನಾವು ಜಿಮ್ ಗೆ (Gym) ಹೋಗಿ ಕಠಿಣವಾದ ವ್ಯಾಯಾಮ (Exercise) ಮಾಡುವವರು ತಮ್ಮದೇ ಆದ ವಿಭಿನ್ನವಾದ ಡಯೆಟ್ (Diet) ಅನ್ನು ಫಾಲೋ ಮಾಡುತ್ತಿರುವುದನ್ನು ನೋಡುತ್ತೇವೆ. ಹೀಗೆ ತಮ್ಮದೇ ಆದ ಡಯೆಟ್ ಅನ್ನು ಅವರು ಫಾಲೋ ಮಾಡುವಾಗ, ಪ್ರೋಟೀನ್ ಪೂರಕಗಳು ಮತ್ತು ಇನ್ನಿತರೆ ಸಪ್ಲಿಮೆಂಟ್ (Supplement) ಗಳನ್ನು ಸೇವಿಸುವುದರ ಬಗ್ಗೆ ಕೇಳಿರುತ್ತೇವೆ. ಇದರ ಬಗ್ಗೆ ಈಗೇಕೆ ಮಾತನಾಡುತ್ತಿದ್ದೇವೆ ಅಂತ ನೀವು ಕೇಳಬಹುದು. ವಿಷಯ ಏನೆಂದರೆ ಇಲ್ಲೊಬ್ಬ ವ್ಯಕ್ತಿಯು ಹೀಗೆ ವರ್ಷಾನುಗಟ್ಟಲೆ ಕೆಲವು ಪೂರಕಗಳನ್ನು ಎಂದರೆ ಸಪ್ಲಿಮೆಂಟ್ ಗಳನ್ನು ಸೇವಿಸಿದ್ದಾನೆ. ಹೀಗೆ ಅನೇಕ ವರ್ಷಗಳ ಕಾಲ ಪೂರಕವನ್ನು ಸೇವಿಸಿದ್ದರಿಂದ ಅವನ ಇಡೀ ದೇಹದ ಚರ್ಮ ನೀಲಿ ಬಣ್ಣಕ್ಕೆ ತಿರುಗಿದೆ ಅಂತ ಹೇಳಲಾಗುತ್ತಿದೆ.
ಯಾವುದೇ ರೀತಿಯ ಪೂರಕಗಳನ್ನು ನಾವು ಸೇವಿಸುವಾಗ ಅದರ ಬಗ್ಗೆ ತುಂಬಾನೇ ಜಾಗರೂಕರಾಗಿರುವುದು ಒಳ್ಳೆಯದು ಮತ್ತು ಇದನ್ನು ಸೇವಿಸುವುದಕ್ಕೂ ಮುಂಚಿತವಾಗಿ ಪೌಷ್ಟಿಕ ತಜ್ಞರ ಸಲಹೆಯನ್ನು ಪಡೆದುಕೊಳ್ಳುವುದು ತುಂಬಾನೇ ಸಹಾಯಕ್ಕೆ ಬರುತ್ತದೆ ಅಂತ ಹೇಳಬಹುದು. ಈ ವ್ಯಕ್ತಿ ಅಜಾಗರೂಕತೆಯಿಂದ ಅದನ್ನು ಸೇವಿಸಿ ಅವನ ದೇಹದ ಚರ್ಮದ ಬಣ್ಣ ನೀಲಿ ಬಣ್ಣಕ್ಕೆ ತಿರುಗಿದ್ದು, ಈ ವ್ಯಕ್ತಿಯ ಫೋಟೋಗಳು ಸಾರ್ವಜನಿಕರ ಕಣ್ಣಿಗೆ ಬಿದ್ದ ಒಂದು ದಶಕದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಮತ್ತೊಮ್ಮೆ ಕಾಣಿಸಿಕೊಂಡಿವೆ ನೋಡಿ.
ಆರೋಗ್ಯ ಸಮಸ್ಯೆ ನಿವಾರಣಗೆ ಸಪ್ಲಿಮೆಂಟ್ ತೆಗೆದುಕೊಳ್ತಿದ್ದ ವ್ಯಕ್ತಿ
ಪಾಲ್ ಕರಸನ್ ಎಂಬಾತ ಈತ ಸಂಧಿವಾತ, ಡರ್ಮಟೈಟಿಸ್ ಮತ್ತು ಇತರ ಪರಿಸ್ಥಿತಿಗಳ ರೋಗಲಕ್ಷಣಗಳನ್ನು ನಿವಾರಿಸಲು ವರ್ಷಗಳ ಕಾಲ ಮನೆಯಲ್ಲಿ ತಯಾರಿಸಿದ ಆಹಾರ ಪೂರಕವನ್ನು ತೆಗೆದುಕೊಂಡರು ಎಂದು ಡೈಲಿ ಮೇಲ್ ವರದಿ ಮಾಡಿದೆ. ಪೂರಕವು ಅಸಾಮಾನ್ಯ ಅಡ್ಡಪರಿಣಾಮವನ್ನು ಹೊಂದಿದ್ದು, ಈ ಪೂರಕಗಳಲ್ಲಿನ ಕೊಲೊಯ್ಡಲ್ ಸಿಲ್ವರ್ ಅವನ ಚರ್ಮವನ್ನು ನೀಲಿ ಬಣ್ಣಕ್ಕೆ ತಿರುಗಿಸಿತು.
2008 ರಲ್ಲಿ, ವಾಷಿಂಗ್ಟನ್ ನಿವಾಸಿ ರಾಷ್ಟ್ರೀಯ ದೂರದರ್ಶನದಲ್ಲಿ ಕಾಣಿಸಿಕೊಂಡ ನಂತರ ಕರಸನ್ ಅವರ ಕಥೆ ನಿಧಾನವಾಗಿ ವೈರಲ್ ಆಗಲು ಪ್ರಾರಂಭಿಸಿತು. ಟುಡೇ ಶೋ ಪ್ರದರ್ಶನದ ಸಮಯದಲ್ಲಿ ಅವರ ಚರ್ಮವು ಸಂಪೂರ್ಣ ನೀಲಿ ಬಣ್ಣದ್ದಾಗಿತ್ತು. ನ್ಯೂ ಏಜ್ ಮ್ಯಾಗಜೀನ್ ನಲ್ಲಿ ಓದಿದ ನಂತರ ಕರಸನ್ ಮನೆಯಲ್ಲಿ ತಯಾರಿಸಿದ ಸಿಲ್ವರ್ ಕ್ಲೋರೈಡ್ ಕೊಲಾಯ್ಡ್ ಅನ್ನು ದೀರ್ಘಕಾಲದವರೆಗೆ ಕುಡಿದರಂತೆ, ಇದು ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ಅವರು ತಿಳಿದಿದ್ದರಂತೆ. ತಮ್ಮ ಚರ್ಮವು ಚಪ್ಪಟೆಯಾಗದಂತೆ ತಡೆಯಲು ಈ ಪೂರಕವನ್ನು ತನ್ನ ಮುಖದ ಚರ್ಮದ ಮೇಲೆ ಉಜ್ಜಿಕೊಂಡಿದ್ದಾರೆ ಅಂತ ಹೇಳಲಾಗುತ್ತಿದೆ.
ಸಂಧಿವಾತ ಕಡಿಮೆ ಮಾಡಿ, ಚರ್ಮ ಹಾಳಾಯ್ತು
ಮನೆಯಲ್ಲಿ ತಯಾರಿಸಿದ ಈ ಪೂರಕ ತನ್ನ ಆಸಿಡ್ ರಿಫ್ಲಕ್ಸ್ ಮತ್ತು ಸಂಧಿವಾತವನ್ನು ಗುಣಪಡಿಸಿದೆ ಎಂದು ಕರಸನ್ ಹೇಳಿಕೊಂಡಿದ್ದರು. ಆದರೆ ಇದರಿಂದ ಅವರ ದೇಹದ ಚರ್ಮ ಸಹ ನೀಲಿ ಬಣ್ಣಕ್ಕೆ ತಿರುಗಿದ್ದು, ಅದನ್ನು ನಂತರದಲ್ಲಿ ಬದಲಾಯಿಸಿಕೊಳ್ಳುವುದಕ್ಕೆ ಆಗಲೇ ಇಲ್ಲವಂತೆ. ತನ್ನ ದೇಹದ ಚರ್ಮದ ಬಣ್ಣ ಬದಲಾಗಿದೆ ಎಂದು ಕರಸನ್ ಗೆ ಮೊದಲಿಗೆ ತಿಳಿದಿರಲಿಲ್ಲವಂತೆ. "ಸ್ವಲ್ಪ ಸಮಯದಿಂದ ನನ್ನನ್ನು ನೋಡದ ಸ್ನೇಹಿತರೊಬ್ಬರು ಬಂದು ನನ್ನನ್ನು ನೋಡಿದಾಗ ಇದೇನು ಆಗಿದೆ ನಿನಗೆ ಅಂತ ಕೇಳಿದರು" ಎಂದು ಅವರು 2008 ರಲ್ಲಿ ಇನ್ಸೈಡ್ ಎಡಿಷನ್ ಜೊತೆಗೆ ಮಾತಾಡುವಾಗ ತಿಳಿಸಿದ್ದರು.
ಇದನ್ನೂ ಓದಿ: Tamannah Bhatia: ನೀಲಿ ಸೀರೆ ಉಟ್ಟ ತಮನ್ನಾ! ಹಾಲಲ್ಲಿ ಸ್ನಾನ ಮಾಡ್ತೀರಾ ಎಂದ ನೆಟ್ಟಿಗರು
ಅವರ ನೀಲಿ ಚರ್ಮವು ಅವರಿಗೆ 'ಬ್ಲೂ ಮ್ಯಾನ್' ಎಂಬ ಅಡ್ಡಹೆಸರನ್ನು ಗಳಿಸಿ ಕೊಟ್ಟಿತು. ಆದರೆ ಈ ಹೆಸರು ಕರಸನ್ ಗೆ ನಿಜವಾಗಿಯೂ ಇಷ್ಟವಾಗಲಿಲ್ಲವಂತೆ. ಕರಸನ್ ಅವರಿಗೆ ತಮ್ಮ ಮೂಲ ಬಿಳಿ ಮೈಬಣ್ಣಕ್ಕೆ ಹಿಂತಿರುಗುತ್ತೀರಾ ಎಂದು ಕೇಳಿದಾಗ, ಅವರು 'ನಿಜವಾಗಿಯೂ ನನಗೆ ಗೊತ್ತಿಲ್ಲ' ಅಂತ ಹೇಳಿದ್ದರು. ನಂತರದಲ್ಲಿ ಹೃದಯಾಘಾತದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ನ್ಯುಮೋನಿಯಾಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸದೇ ಕರಸನ್ 2013 ರಲ್ಲಿ ತಮ್ಮ 62ನೇ ವಯಸ್ಸಿನಲ್ಲಿ ನಿಧನರಾದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ