ಮುಂಬೈ (Mumbai): ಪರಾರಿಯಾಗಿರುವ ಭೂಗತ ಲೋಕದ ದೊರೆ, ಮೋಸ್ಟ್ ವಾಟೆಂಡ್ ಕ್ರಿಮಿನಲ್ (Most Wanted Criminal) ದಾವೂದ್ ಇಬ್ರಾಹಿಂ ಎರಡನೇ ಮದುವೆಯಾಗಿರುವ (Marriage) ಬಗ್ಗೆ ವರದಿಗಳು ಕೇಳಿ ಬರುತ್ತಿವೆ. ಈ ಬಗ್ಗೆ ಸ್ವತಃ ದಾವೂದ್‌ನ ಸೋದರಳಿಯ ಅಲಿಶಾಹ್ ಪಾರ್ಕರ್, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮುಂದೆ ಹೇಳಿಕೆ ನೀಡಿದ್ದಾನೆ. ದಾವೂದ್ ಇಬ್ರಾಹಿಂನ (Dawood Ibrahim) ಸಹೋದರಿ ಹಸೀನಾ ಪಾರ್ಕರ್‌ಳ ಮಗನಾದ ಅಲಿಶಾಹ್, ತನ್ನ ಸೋದರ ಮಾವನ ವಂಶವೃಕ್ಷದ ಬಗ್ಗೆ ಎನ್‌ಐಎ ಮುಂದೆ ಬಾಯ್ಬಿಟ್ಟಿದ್ದು, ಮೊದಲ ಪತ್ನಿ ಮೈಜಾಬಿನ್ ಜತೆ ಸಂಸಾರ ಮಾಡುತ್ತಿರುವಾಗಲೇ ಪಾಕಿಸ್ತಾನದ (Pakistan) ಪಟ್ಟಣದ ಮಹಿಳೆಯೊಬ್ಬರ ಜೊತೆ ಮರು ಮದುವೆಯಾಗಿದ್ದ ಎಂದು ತಿಳಿಸಿದ್ದಾರೆ. ಅಲ್ಲದೇ ಅಲಿಶಾಹ್ ಅತ್ತೆ ಮೈಜಾಬಿನ್, ವಾಟ್ಸಾಪ್ ಕರೆಗಳ ಮುಖಾಂತರ ಎಲ್ಲರ ಜೊತೆ ಸಂಪರ್ಕದಲ್ಲಿದ್ದಾಳೆ ಎಂದು ತಿಳಿಸಿದ್ದಾನೆ.
ದಾವೂದ್‌ನ ಕುಟುಂಬ ವೃಕ್ಷ ಬಿಚ್ಚಿಟ್ಟ ಸೋದರಳಿಯ
ಭಯೋತ್ಪಾದಕ ನಿಧಿ ಪ್ರಕರಣದಲ್ಲಿ ಎನ್‌ಐಎ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ, ದಾವೂದ್‌ನ ಕುಟುಂಬ ವೃಕ್ಷವನ್ನು ಅಲಿಶಾಹ್ ಪರ್ಕರ್ ತನ್ನ ಹೇಳಿಕೆಯಲ್ಲಿ ವಿವರಿಸಿದ್ದಾನೆ, ಮತ್ತು ತನ್ನ ಮಾವ ಪಾಕಿಸ್ತಾನದ ಕರಾಚಿಯಲ್ಲಿನ ಬೇರೆ ಸ್ಥಳಕ್ಕೆ ಸ್ಥಳಾಂತರ ಹೊಂದಿರುವುದಾಗಿ ಹೇಳಿಕೆ ನೀಡಿದ್ದಾನೆ.
ಭಯೋತ್ಪಾದನೆಗೆ ಧನ ಸಹಾಯ ಮಾಡಿದ ಪ್ರಕರಣದಲ್ಲಿ ದಾವೂದ್ ಇಬ್ರಾಹಿಂ ಮತ್ತು ಆತನ ಆಪ್ತ ಸಹಾಯಕರ ವಿರುದ್ಧ ಎನ್‌ಐಎ ಪ್ರಕರಣ ದಾಖಲಿಸಿ ಕೆಲವರನ್ನು ಬಂಧಿಸಿತ್ತು.
ದಾವೂದ್ ಇಬ್ರಾಹಿಂ ವಿಶೇಷ ತಂಡವನ್ನು ರಚಿಸುತ್ತಿದ್ದು, ದೇಶದ ದೊಡ್ಡ ನಾಯಕರು ಮತ್ತು ಉದ್ಯಮಿಗಳ ಮೇಲೆ ದಾಳಿ ನಡೆಸಲು ಪ್ಲ್ಯಾನ್ ಹಾಕಿಕೊಂಡಿದ್ದ.
ಆದರೆ ಈ ಬಗ್ಗೆ ಎನ್‌ಐಎಗೆ ಸುಳಿವು ಸಿಕ್ಕಿದೆ. ದೊಡ್ಡ ದೊಡ್ಡ ನಗರಗಳಲ್ಲಿ ಅವರು ಹಿಂಸಾಚಾರ ನಡೆಸುವ ಸಾಧ್ಯತೆ ಇದೆ. ಈ ಪ್ರಕರಣದ ತನಿಖೆ ವೇಳೆ, ದಾವೂದ್ ಇಬ್ರಾಹಿಂನ ಸಹೋದರಿ ಹಸೀನಾ ಪಾರ್ಕರ್‌ಳ ಮಗ ಅಲಿಶಾಹ್ ಪಾರ್ಕರ್ ನೀಡಿದ ಹೇಳಿಕೆಗಳನ್ನು ಎನ್‌ಐಎ ದಾಖಲಿಸಿ ಕೊಂಡಿದೆ.
ದಾವೂದ್‌ಗೆ ನಾಲ್ಕು ಮಂದಿ ಸಹೋದರರು ಮತ್ತು ನಾಲ್ಕು ಮಂದಿ ಸಹೋದರಿ
ಇನ್ನೂ ದಾವೂದ್ ಸೋದರಳಿಯ ಹೇಳಿರುವ ಪ್ರಕಾರ ದಾವೂದ್ ಇಬ್ರಾಹಿಂಗೆ ಒಟ್ಟು ನಾಲ್ಕು ಮಂದಿ ಸಹೋದರರು ಮತ್ತು ನಾಲ್ಕು ಮಂದಿ ಸಹೋದರಿಯರಿದ್ದಾರೆ. "ದಾವೂದ್ ಮರು ಮದುವೆಯಾಗಿದ್ದಾನೆ ಮತ್ತು ಆತನ ಎರಡನೇ ಪತ್ನಿ ಪಾಕಿಸ್ತಾನದ ಪಠಾಣ್ ಮಹಿಳೆ" ಎಂದು ಅಲಿಶಾಹ್ ತನಿಖೆಯ ವೇಳೆ ಎನ್ಐಎಗೆ ತಿಳಿಸಿದ್ದಾರೆ.
ಮೊದಲ ಹೆಂಡತಿಗೆ ಡಿವೋರ್ಸ್ ಕೊಡದೇ ಎರಡನೇ ಮದುವೆ
ದಾವೂದ್ ಇಬ್ರಾಹಿಂ ಎರಡನೇ ಬಾರಿಗೆ ಮದುವೆಯಾಗಲು ತನ್ನ ಮೊದಲ ಪತ್ನಿ ಮೈಜಾಬಿನ್‌ಗೆ ವಿಚ್ಛೇದನ ನೀಡಿದ್ದಾರೆ ಎಂದು ಎಲ್ಲರಿಗೂ ಹೇಳಿದ್ದ. ಆದರೆ ಇದು ಶುದ್ಧ ಸುಳ್ಳು.
ಆತ ಮೊದಲ ಪತ್ನಿ ಇರುವಾಗಲೇ ಪಾಕ್ ಮಹಿಳೆಯನ್ನು ಮದುವೆಯಾಗಿದ್ದಾನೆ. ಇದಲ್ಲದೇ, ದಾವೂದ್ ಇಬ್ರಾಹಿಂನ ವಿಳಾಸ ಬದಲಾಗಿದೆ. ಪ್ರಸ್ತುತ ಆತ ಕರಾಚಿಯ ಅಬ್ದುಲ್ಲಾ ಘಾಜಿ ಬಾಬಾ ದರ್ಗಾದ ಹಿಂಬದಿಯಲ್ಲಿರುವ ರಹೀಮ್ ಫಾಕಿ ಸಮೀಪದ ರಕ್ಷಣಾ ಪಡೆಯ ಪ್ರದೇಶದಲ್ಲಿ ವಾಸಿಸುತ್ತಿದ್ದಾನೆ ಎಂದು ಮೋಸ್ಟ್ ವಾಟೆಂಡ್ ಪಾತಕಿಯ ಸ್ಥಳದ ಬಗ್ಗೆ ಅಲಿಶಾಹ್ ಮಾಹಿತಿ ನೀಡಿದ್ದಾನೆ.
2022ರ ಜುಲೈನಲ್ಲಿ ದುಬೈನಲ್ಲಿ ದಾವೂದ್‌ನ ಮೊದಲ ಪತ್ನಿ ಮೈಜಾಬಿನ್‌ಳನ್ನು ತಾನು ಭೇಟಿ ಮಾಡಿದ್ದಾಗಿ ಅಲಿಶಾಹ್ ಹೇಳಿಕೊಂಡಿದ್ದಾನೆ.
ದುಬೈನಲ್ಲಿರುವ ಜೈತೂನ್ ಹಮೀದ್ ಅಂತುಲೆ ಎಂಬುವವರ ಮನೆಯಲ್ಲಿ ಅವರು ತಂಗಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ ದಾವೂದ್ ಪತ್ನಿ ಮೈಜಾಬಿನ್ ಹಬ್ಬ ಹರಿದಿನಗಳಲ್ಲೂ ನನ್ನ ಪತ್ನಿಗೆ ಕರೆ ಮಾಡುತ್ತಾಳೆ, ವಾಟ್ಸಾಪ್ ಕರೆಗಳ ಮೂಲಕ ನನ್ನ ಪತ್ನಿಯೊಂದಿಗೆ ಮಾತನಾಡುತ್ತಾಳೆ ಎಂದು ಅಲಿಶಾಹ್ ಹೇಳಿಕೆ ತಿಳಿಸಿದೆ.
ಕರಾಚಿಯಲ್ಲಿ ದಾವೂದ್ ಇಬ್ರಾಹಿಂ ವಾಸ್ತವ್ಯ
ಪ್ರಸ್ತುತ ದಾವೂದ್ ಇಬ್ರಾಹಿಂ ಕಸ್ಕರ್, ಹಾಜಿ ಅನೀಸ್ ಅಲಿಯಾಸ್ ಅನೀಸ್ ಇಬ್ರಾಹಿಂ ಶೇಖ್ ಮತ್ತು ಮುಮ್ತಾಜ್ ರಹೀಮ್ ಫಕಿ ತಮ್ಮ ಕುಟುಂಬಗಳೊಂದಿಗೆ ಪಾಕಿಸ್ತಾನದ ಕರಾಚಿಯ ಡಿಫೆನ್ಸ್ ಕಾಲೋನಿಯಲ್ಲಿರುವ ಅಬ್ದುಲ್ಲಾ ಘಾಜಿ ಬಾಬಾ ದರ್ಗಾದ ಹಿಂದೆ ವಾಸಿಸುತ್ತಿದ್ದಾರೆ.
ಅಲಿಶಾಹ್ ಪಾರ್ಕರ್ ಹೇಳಿರುವ ಪ್ರಕಾರ, ದಾವೂದ್ ಇಬ್ರಾಹಿಂ ಯಾರ ಜೊತೆಯೂ ಸಂಪರ್ಕದಲ್ಲಿರುವುದಿಲ್ಲ ಎಂಬುದು ಎನ್‌ಐಎಗೆ ಮಾಹಿತಿ ದೊರೆತಿದೆ.
ಎನ್‌ಐಎಗೆ ನೀಡಿದ ಹೇಳಿಕೆಯ ಪ್ರಕಾರ, ದಾವೂದ್ ಇಬ್ರಾಹಿಂ ಕಸ್ಕರ್ ವಂಶವೃಕ್ಷ ಹೀಗಿದೆ. ಆತನ ಪತ್ನಿಯ ಹೆಸರು ಮೈಜಾಬಿನ್ ಮತ್ತು ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ.
ಅವರಲ್ಲಿ ಒಬ್ಬರ ಹೆಸರು ಮಾರುಖ್ (ಜಾವೇದ್ ಮಿಯಾಂದಾದ್ ಅವರ ಮಗ ಜುನೈದ್ ಅವರ ಜೊತೆ ವಿವಾಹವಾಗಿದ್ದಾರೆ), ಇನ್ನೊಬ್ಬರು ಮೆಹ್ರಿನ್, ಮೂರನೇ ಮಗಳು ಮಾಜಿಯಾಗೆ ಇನ್ನೂ ಮದುವೆಯಾಗಿಲ್ಲ. ಮತ್ತು ಮಗ ಮೊಹಿನ್ ನವಾಜ್.
ಇನ್ನೂ ದಾವೂದ್ ಇಬ್ರಾಹಿಂನ ಎರಡನೇ ಪತ್ನಿ ಪಾಕಿಸ್ತಾನಿ ಪಠಾಣ್. ಮೊದಲನೇ ಮದುವೆಯ ಜೊತೆ ಸಂಬಂಧ ಹೊಂದಿರುವಾಗಲೇ ಎರಡನೇ ಮದುವೆಯಾಗಿದ್ದಾನೆ ಎಂದು ದಾವೂದ್ ಸಂಬಂಧಿಕರು ಹೇಳಿದ್ದಾರೆ.
ದಾವೂದ್ ಸಹೋದರರ ಬಳಗ
ಇನ್ನೂ ದಾವೂದ್ ಸಹೋದರರ ಬಗ್ಗೆಯೂ ಅಲಿಶಾಹ್ ಪರ್ಕರ್ ಮಾಹಿತಿ ನೀಡಿದ್ದಾನೆ. ದಾವೂದ್ ಇಬ್ರಾಹಿಂನ ನಾಲ್ವರು ಸಹೋದರರ ಪೈಕಿ ಸಬೀರ್ ಇಬ್ರಾಹಿಂ ಕಸ್ಕರ್, 1983-84ರಲ್ಲಿ ಮುಂಬಯಿಯಲ್ಲಿ ನಡೆದ ಗ್ಯಾಂಗ್‌ವಾರ್‌ನಲ್ಲಿ ಮೃತಪಟ್ಟಿದ್ದಾನೆ. ಆತನ ಪತ್ನಿ ಶೆನಾಜ್.
ಆತನಿಗೆ ಶಿರಾಜ್ ಎಂಬ ಮಗ ಹಾಗೂ ಶಾಹ್ಜಿಯಾ ಎಂಬ ಮಗಳು ಇದ್ದಾಳೆ. ಪಾಕಿಸ್ತಾನದಲ್ಲಿ 2020ರಲ್ಲಿ ಕೋವಿಡ್ 19 ನಿಂದಾಗಿ ಶಿರಾಜ್ ಮೃತಪಟ್ಟಿದ್ದಾನೆ. ಶಾಹ್ಜಿಯಾ, ಮುಂಬಯಿಯ ಅಗ್ರಿಪದದಲ್ಲಿ ಎಸ್ಟೇಟ್ ಏಜೆಂಟ್ ಆಗಿರುವ ಪತಿ ಮೊಝಾಂ ಖಾನ್ ಜತೆ ವಾಸಿಸುತ್ತಿದ್ದಾಳೆ.
ಇನ್ನೊಬ್ಬ ಸಹೋದರ ಹುಮಾಯೂನ್ ಇಬ್ರಾಹಿಂ ಕಸ್ಕರ್ ನಾಲ್ಕೈದು ವರ್ಷಗಳ ಹಿಂದೆ ನಿಧನ ಹೊಂದಿರುವುದಾಗಿ ಅಲಿಶಾಹ್ ಹೇಳಿದ್ದಾನೆ. ಅವನ ಹೆಂಡತಿಯ ಹೆಸರು ಶಾಹಿನ್, ಅವನಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ಅವರ ಹೆಸರುಗಳು ಮರಿಯಾ ಮತ್ತು ಸಾಮಿಯಾ.
ಇಬ್ಬರಿಗೂ ಮದುವೆಯಾಗಿಲ್ಲ. ಇಬ್ಬರೂ ಕರಾಚಿಯಲ್ಲಿ ವಾಸಿಸುತ್ತಿದ್ದಾರೆ ಎಂದು ಎನ್‌ಐಎ ಹೇಳಿಕೆ ದಾಖಲಿಸಿಕೊಂಡಿದೆ. ಇಕ್ಬಾಲ್ ಕಸ್ಕರ್, ಕಳೆದ ಐದು ವರ್ಷಗಳಿಂದ ಥಾಣೆಯ ಜೈಲಿನಲ್ಲಿದ್ದಾನೆ. ಆತನ ಪತ್ನಿ ರಿಜ್ವಾನಾ ದುಬೈನಲ್ಲಿ ವಾಸಿಸುತ್ತಿದ್ದಾಳೆ. ಅವರಿಗೆ ಐವರು ಮಕ್ಕಳು ಇದ್ದಾರೆ.
ದಾವೂದ್ ಸಹೋದರಿಯರು
ದಾವೂದ್‌ನ ಮೊದಲ ಸಹೋದರ ಸೈದಾ ಹಸನ್ ಮಿಯಾ ವಾಘ್ಲೆಗೆ ಹಸನ್ ಮಿಯಾ ಎಂಬಾತನ ಜತೆ ಮದುವೆಯಾಗಿತ್ತು. ಅವರಿಬ್ಬರೂ ಈಗ ಇಲ್ಲ. ಅವರಿಗೆ ನಜ್ಮಾ ಮತ್ತು ಪಿಂಕಿ ಎಂಬ ಹೆಣ್ಣುಮಕ್ಕಳು ಹಾಗೂ ಸಾಜಿದ್ ಮತ್ತು ಸಮೀರ್ ಅಲಿಯಾಸ್ ಲಾಲಾ ಎಂಬ ಗಂಡುಮಕ್ಕಳಿದ್ದಾರೆ.
ಹಸೀನಾ ಇಬ್ರಾಹಿಂ ಪಾರ್ಕರ್ ಇಬ್ರಾಹಿಂ ಪಾರ್ಕರ್ ಅವರನ್ನು ವಿವಾಹವಾದರು. ಇಬ್ಬರೂ ಸಾವನ್ನಪ್ಪಿದ್ದಾರೆ. ಅವರಿಗೆ ಡ್ಯಾನಿಶ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ (ಅವರು ಕಾರು ಅಪಘಾತದಲ್ಲಿ ನಿಧನರಾದರು). ಎನ್‌ಐಎ ಮುಂದೆ ಹೇಳಿಕೆ ನೀಡಿರುವ ಅಲಿಶಾಹ್‌ಗೆ ಕೌಶಿಯಾ ಮತ್ತು ಉಮೇರಾ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ.
ಮತ್ತೊಬ್ಬ ಸಹೋದರಿ ಜೈತುನ್ ಹಮೀದ್ ಅಂತುಳೆ, ಹಮೀದ್ ಅಂತುಳೆಯನ್ನು ಮದುವೆಯಾಗಿದ್ದಾಳೆ. ಹಮೀದ್ ದುಬೈನಲ್ಲಿ ಮಾಣಿಕ್‌ಚಂದ್ ಏಜೆನ್ಸಿ ಹೊಂದಿದ್ದು, ಆತನ ವಿರುದ್ಧ ಸಿಬಿಐ ಪ್ರಕರಣವೊಂದು ದಾಖಲಾಗಿದೆ. ಅವರಿಗೆ ಸಬೀರ್ ಮತ್ತು ಹುಸೈನ್ ಎಂಬ ಇಬ್ಬರು ಗಂಡು ಹಾಗೂ ಸೈದಾ ಎಂಬ ಹೆಣ್ಣುಮಗಳಿದ್ದಾರೆ. ಅವರೆಲ್ಲರೂ ದುಬೈನಲ್ಲಿ ಇದ್ದಾರೆ.
ಫರ್ಜಾನಾ ಸೌದ್ ತುಂಗೇಕರ್ ಸೌದ್ ತುಂಗೇಕರ್ ಅವರನ್ನು ವಿವಾಹವಾದರು. ಅವರಿಗೆ ಜುನೈದ್ ಮತ್ತು ಮೊಹಮ್ಮದ್ ಅಲಿ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ, ಮತ್ತು ಇಬ್ಬರು ಹೆಣ್ಣುಮಕ್ಕಳು, ಒಬ್ಬಳು ಸಾಹಿಲಾ ಮತ್ತು ಇನ್ನೊಬ್ಬ ಮಗಳು ಎರುಮ್.
ಮುಮ್ತಾಜ್ ರಹೀಂ ಫಾಕಿ, ರಹೀಂ ಫಾಕಿ ಜತೆ ವಿವಾಹವಾಗಿದ್ದಾಳೆ. ರಹೀಂ ಫಾಕಿ, ಜೆಜ ಶೂಟೌಟ್ ಪ್ರಕರಣದಲ್ಲಿ ಬೇಕಾಗಿದ್ದಾನೆ. ಅನೀಖ್ ಮತ್ತು ಸಮಿ ಎಂಬ ಗಂಡುಮಕ್ಕಳು ಹಾಗೂ ಜೈನಾಬ್ ಎಂಬ ಹೆಣ್ಣುಮಕ್ಕಳಿದ್ದಾರೆ.
ಇದನ್ನೂ ಓದಿ:Dawood Ibrahim: ದಾವೂದ್ ಇಬ್ರಾಹಿಂ ಬಗ್ಗೆ ಮಾಹಿತಿ ನೀಡಿದರೆ 25 ಲಕ್ಷ ಬಹುಮಾನ; ಡಿ ಕಂಪನಿ ಮಟ್ಟಹಾಕಲು ಯೋಜನೆ
ಅನೀಸ್ ಇಬ್ರಾಹಿಂ ಅವರ ಹೆಂಡತಿಯ ಹೆಸರು ತೆಹ್ಸಿನ್, ಅವರಿಗೆ ಮೂವರು ಹೆಣ್ಣುಮಕ್ಕಳು ಸೇರಿದಂತೆ ಐದು ಮಕ್ಕಳಿದ್ದಾರೆ, ಅವರ ಹೆಸರು ಶಮೀಮ್ (ಮುಂಬೈನಿಂದ ಶಹದಾಬ್ ಖಾನ್ ಅವರನ್ನು ಮದುವೆಯಾಗಿ ದುಬೈನಲ್ಲಿ ವಾಸಿಸುತ್ತಿದ್ದಾರೆ) ಎಂದು ಅಲಿಶಾಹ್ ಹೇಳಿದ್ದಾನೆ.
ಆಕೆ ಪಾಕಿಸ್ತಾನಿದ ನಿವಾಸಿ
ಎರಡನೇ ಮಗಳು ಯಾಸ್ಮಿನ್ (ಪಾಕಿಸ್ತಾನಿ ಮತ್ತು ಕರಾಚಿಯಲ್ಲಿ ವಾಸಿಸುವ ಅಸ್ಗರ್ ಅವರನ್ನು ವಿವಾಹವಾದರು), ಮತ್ತು ಮೂರನೇ ಮಗಳು ಆನಾ.
"ಮುಸ್ತಕೀನ್ ಇಬ್ರಾಹಿಂ ಕಸ್ಕರ್ ಅವರ ಹೆಂಡತಿಯ ಹೆಸರು ಸೀಮಾ. ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮೊದಲ ಮಗಳ ಹೆಸರು ಸೆಹರ್ (ಲಖನೌನಲ್ಲಿ ಖಾಲಿದ್ ಅವರನ್ನು ವಿವಾಹವಾದರು), ಮತ್ತು ಲಕ್ನೋದಲ್ಲಿ ವಾಸಿಸುತ್ತಿದ್ದಾರೆ.
ಎರಡನೇ ಮಗಳು, ಅಮ್ಮಿನಾ, (ಅವಿವಾಹಿತ ಮತ್ತು ಲಂಡನ್ನಿಂದ ಎಲ್ಎಲ್ಬಿ, ಎಲ್ಎಲ್ಎಂ ಮಾಡಿದ್ದಾಳೆ. ), ದುಬೈನಲ್ಲಿ ಅಭ್ಯಾಸ ಮಾಡುತ್ತಿದ್ದಾಳೆ, ಆಕೆಗೆ ಇಬ್ಬರು ಗಂಡು ಮಕ್ಕಳಿದ್ದಾರೆ (ಅವರು ಗುಡ್ಡು ಪಠಾಣ್ ಅವರ ಮಗಳನ್ನು ಮದುವೆಯಾಗಿದ್ದಾರೆ) ಮತ್ತು ಹಮ್ಜಾ (ಅಧ್ಯಯನ ಮಾಡುತ್ತಿದ್ದಾರೆ) ದುಬೈನಲ್ಲಿ ವಾಸಿಸುತ್ತಿದ್ದಾರೆ" ಎಂದು ಹೇಳಿಕೆ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ