• Home
  • »
  • News
  • »
  • national-international
  • »
  • Lila Irene Clerides: ಯಹೂದಿ ಮಹಿಳೆ ಸೈಪ್ರಸ್‌ನ ಪ್ರಥಮ ಮಹಿಳೆಯಾಗಿದ್ದು ಹೇಗೆ?

Lila Irene Clerides: ಯಹೂದಿ ಮಹಿಳೆ ಸೈಪ್ರಸ್‌ನ ಪ್ರಥಮ ಮಹಿಳೆಯಾಗಿದ್ದು ಹೇಗೆ?

ಲೀಲಾ ಐರೀನ್ ಕ್ಲೆರೈಡ್ಸ್

ಲೀಲಾ ಐರೀನ್ ಕ್ಲೆರೈಡ್ಸ್

ಲೀಲಾ ಬ್ರಿಟಿಷ್ ಆಳ್ವಿಕೆಯಲ್ಲಿದ್ದ ಸೈಪ್ರಸ್‌ ದ್ವೀಪದ ಸ್ವಾತಂತ್ರ್ಯ ಹೋರಾಟಕ್ಕೆ ಇಳಿದರು. ಲೀಲಾ ತನ್ನನ್ನು ಸೈಪ್ರಿಯೋಟ್ ಸಮಾಜದಲ್ಲಿ ತೊಡಗಿಸಿಕೊಂಡರು.

  • Share this:

ಸೈಪ್ರಸ್‌ನ ಪ್ರಥಮ ಮಹಿಳೆ (1993 ರಿಂದ 2003) ಆಗಿದ್ದ ಭಾರತೀಯ ಮೂಲದ ಯಹೂದಿ ಮಹಿಳೆ ಲೀಲಾ ಐರೀನ್ (Lila Irene Clerides) ಕ್ಲೆರೈಡ್ಸ್ ಸಾಧನೆಯ ಹಾದಿ ಬಗ್ಗೆ ಅದೆಷ್ಟೋ ಮಂದಿಗೆ ಇನ್ನು ಗೊತ್ತಿಲ್ಲ. ಪ್ರಸಿದ್ಧ ಯಹೂದಿ ಕುಟುಂಬದಲ್ಲಿ ಜನಿಸಿದ ಇವರು ಸದ್ಯ ನಮ್ಮನ್ನೆಲ್ಲ ಅಗಲಿ ಹಲವು ವರ್ಷಗಳೇ ಕಳೆದಿವೆ. ಲೀಲಾ ಐರೀನ್ ಕ್ಲೆರೈಡ್ಸ್ ಸೈಪ್ರಸ್‌ನ ಪ್ರಥಮ ಮಹಿಳೆಯಾಗಿದ್ದರು (First Women), ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸೈಪ್ರಸ್‌ನ (Cyprus) ಪ್ರಥಮ ಮಹಿಳೆ ಮತ್ತು ಅಧ್ಯಕ್ಷರಾಗುವ ಆಗುವ ಮುನ್ನ ಕ್ಲೆರೈಡ್ಸ್ ಮತ್ತು ಲೀಲಾ ದಂಪತಿಗಳು ದ್ವೀಪ ರಾಷ್ಟ್ರ ಸೈಪ್ರಸ್‌ಗಾಗಿ ಹಲವು ಹೋರಾಟಗಳನ್ನು ಮಾಡಿದ್ದಾರೆ.


ಹಾಗಾದರೆ ಯಹೂದಿ ಮಹಿಳೆ ಸೈಪ್ರಸ್‌ನ ಪ್ರಥಮ ಮಹಿಳೆಯಾಗಿದ್ದು ಹೇಗೆ, ಅವರ ಬಂದ ಹಾದಿಯ ಬಗ್ಗೆ ಇಲ್ಲಿದೆ ಒಂದು ವಿವರ.


ಲೀಲಾ ಬಾಲ್ಯ ಜೀವನ


ಲೀಲಾ ಎರುಲ್ಕರ್, 1921ರಲ್ಲಿ ಅಹಮದಾಬಾದ್‌ನಲ್ಲಿ ಪ್ರಸಿದ್ಧ ಯಹೂದಿ ಕುಟುಂಬದಲ್ಲಿ ಜನಿಸಿದರು. ಆಕೆಯ ಮುತ್ತಜ್ಜ ಅಬ್ರಹಾಂ ಬೆಂಜಮಿನ್ ಎರುಲ್ಕರ್. ಅಬ್ರಹಾಂ ಅಹಮದಾಬಾದ್‌ನ ಯಹೂದಿ ಸಮುದಾಯದ ಪ್ರಮುಖ ಆಧಾರಸ್ತಂಭವಾಗಿದ್ದರು.


ನಗರದ ಸಿನಗಾಗ್‌ಗೆ ಕೂಡ ಇವರ ಹೆಸರನ್ನು ನಾಮಕರಣ ಮಾಡಲಾಗಿದೆ. ಲೀಲಾಳ ತಂದೆ ಅಬ್ರಹಾಂ ಸೊಲೊಮನ್ ಎರುಲ್ಕರ್ ಲಂಡನ್‌ನಲ್ಲಿ ವೈದ್ಯಕೀಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿ ಭಾರತದಲ್ಲಿ ಸೇವೆ ಸಲ್ಲಿಸಲು ಅಲ್ಲಿಂದ ಹಿಂದಿರುಗಿ ಬಂದಿದ್ದರು.


ಲಂಡನ್‌ನಲ್ಲಿರುವಾಗಲೇ ಸೊಲೊಮನ್ ಎರುಲ್ಕರ್ ಭಾರತೀಯ ಸ್ವಾತಂತ್ರ್ಯ ಚಳವಳಿಗೆ ತೀವ್ರ ರಾಷ್ಟ್ರೀಯತಾವಾದಿಯಾಗಿ ಬೆಂಬಲ ನೀಡಿದ್ದರು. ಆಕೆಯ ಚಿಕ್ಕಪ್ಪ ಡೇವಿಡ್ 1916 ರಲ್ಲಿ ದೇಶದ್ರೋಹದ ವಿಚಾರಣೆಯ ಸಂದರ್ಭದಲ್ಲಿ ಬಾಲಗಂಗಾಧರ ತಿಲಕ್ ಅವರನ್ನು ಸಮರ್ಥಿಸಲು ಮಹಮ್ಮದ್ ಅಲಿ ಜಿನ್ನಾ ಅವರ ಅಡಿಯಲ್ಲಿ ಕೆಲಸ ಮಾಡಿದ ಕಿರಿಯ ವಕೀಲರಲ್ಲಿ ಒಬ್ಬರು.


The journey of a young Indian Jewish woman to becoming the first lady of Cyprus
ಲೀಲಾ ಐರೀನ್ ಕ್ಲೆರೈಡ್ಸ್


ಉತ್ತಮ ಮತ್ತು ದೇಶಪ್ರೇಮವನ್ನಿಟ್ಟುಕೊಂಡ ಕುಟುಂಬದ ಹಿನ್ನೆಲೆಯಿಂದ ಬಂದ ಲೀಲಾ 11 ನೇ ವಯಸ್ಸಿನಲ್ಲಿ ಲಂಡನ್‌ಗೆ ತೆರಳಬೇಕಾಯಿತು. ಲಂಡನ್‌ಗೆ ಹೋಗುವ ಮುನ್ನ ಇವರು ಸೂರತ್ ಮತ್ತು ಬಾಂಬೆಯಲ್ಲಿ ತಮ್ಮ ಬಾಲ್ಯವನ್ನು ಕಳೆದಿದ್ದರು.


ತನ್ನ ಮೇಲ್ವರ್ಗದ ಕುಟುಂಬದಲ್ಲಿ ಲಲಿತಕಲೆಗಳಿಗೆ ತೆರೆದುಕೊಂಡ ಲೀಲಾ ರಾಯಲ್ ಅಕಾಡೆಮಿ ಆಫ್ ಮ್ಯೂಸಿಕ್‌ಗೆ ಸೇರಿಕೊಂಡಳು. ಗ್ರೀಕ್ ವೆಬ್‌ಸೈಟ್‌ಗಳಲ್ಲಿನ ಹಲವಾರು ವರದಿಗಳು ಅವರು ಬಿಬಿಸಿಯ ಭಾರತ ಸೇವೆಗೆ ಸೇರುವ ಮೊದಲು ಲಂಡನ್‌ನಲ್ಲಿ ನಟನೆಯನ್ನು ಅಭ್ಯಾಸ ಮಾಡಿದ್ದರು ಎಂದು ವರದಿಯಾಗಿವೆ.


ಕ್ಲೆರೈಡ್ಸ್ ಅವರನ್ನು ವಿವಾಹವಾದ ಲೀಲಾ


ಹಲವು ವರ್ಷಗಳಿಂದ ಲಂಡನ್‌ನಲ್ಲಿದ್ದ ಲೀಲಾ, ಕ್ಲೆರೈಡ್ಸ್ ಎಂಬುವವರನ್ನು ವಿವಾಹವಾದರು. ಕ್ಲೆರೈಡ್ಸ್ ರಾಯಲ್ ಏರ್ ಫೋರ್ಸ್‌ನಲ್ಲಿ ಗನ್ನರ್ ಆಗಿದ್ದರು. ದಂಪತಿಗಳು ಮದುವೆಯಾದ ನಂತರ, ಅವರು ಕಿಂಗ್ಸ್ ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆದರು ಮತ್ತು ಅವರು ಸೈಪ್ರಸ್‌ಗೆ ತೆರಳಿದರು.


ಅಲ್ಲಿ ಲೀಲಾ ಬ್ರಿಟಿಷ್ ಆಳ್ವಿಕೆಯಲ್ಲಿದ್ದ ಸೈಪ್ರಸ್‌ ದ್ವೀಪದ ಸ್ವಾತಂತ್ರ್ಯ ಹೋರಾಟಕ್ಕೆ ಇಳಿದರು. ಲೀಲಾ ತನ್ನನ್ನು ಸೈಪ್ರಿಯೋಟ್ ಸಮಾಜದಲ್ಲಿ ತೊಡಗಿಸಿಕೊಂಡರು. ಈ ಎಲ್ಲಾ ಘಟನೆಗಳ ನಡುವೆಯೇ ಲೀಲಾ ಪತಿ ಕ್ಲೆರೈಡ್ಸ್ 1950ರ ದಶಕದಲ್ಲಿ ರಾಜಕೀಯವನ್ನು ಪ್ರವೇಶಿಸಿದರು ಮತ್ತು 1959-'60 ರಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ಸೈಪ್ರಿಯೋಟ್ ಸ್ವಾತಂತ್ರ್ಯಕ್ಕೆ ಪರಿವರ್ತನೆಯ ಅವಧಿಯಲ್ಲಿ ಸಾರ್ವಜನಿಕ ಅಧಿಕಾರಿಯಾದರು.


ರೆಡ್ ಕ್ರಾಸ್‌ನಲ್ಲಿ ಸ್ವಯಂಸೇವಕಿಯಾಗಿ ಸೇವೆ


ಜುಲೈ 1974 ರಲ್ಲಿ ನಡೆದ ದಂಗೆಯು ಸೈಪ್ರಸ್‌ ದ್ವೀಪದಲ್ಲಿ ಮಕರಿಯೋಸ್ III ರ ಉಚ್ಚಾಟನೆಗೆ ಕಾರಣವಾಯಿತು ಮತ್ತು ನಂತರದ ಟರ್ಕಿಯ ದ್ವೀಪದ ಉತ್ತರ ಭಾಗದ ಆಕ್ರಮಣಕ್ಕೆ ಕಾರಣವಾಯಿತು. ಈ ವೇಳೆ ಕ್ಲೆರೈಡ್ಸ್ ಸೈಪ್ರಸ್‌ನ ಕಾರ್ಯಕಾರಿ ಅಧ್ಯಕ್ಷರಾದರು, ಅವರು ಆರು ತಿಂಗಳ ಕಾಲ ಈ ಹುದ್ದೆಯನ್ನು ನಿರ್ವಹಿಸಿದರು. ಇದೇ ವೇಳೆ ಲೀಲಾ ಕೂಡ ರೆಡ್ ಕ್ರಾಸ್ನೊಂದಿಗೆ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದರು.


1993ರಲ್ಲಿ ಸೈಪ್ರಸ್ ಅಧ್ಯಕ್ಷರಾದ ಕ್ಲೆರೈಡ್ಸ್


ಹೀಗೆ ಕ್ಲೆರೈಡ್ಸ್ ಸೈಪ್ರಸ್‌ ದ್ವೀಪದಲ್ಲಿ ಒಂದೊಂದೆ ಅಧಿಕಾರದ ಮೆಟ್ಟಿಲು ಹತ್ತಲು ಆರಂಭಿಸಿದರು. ಸಾರ್ವಜನಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಕ್ಲೆರೈಡ್ಸ್‌ 1993ರಲ್ಲಿ ಸೈಪ್ರಸ್ ಅಧ್ಯಕ್ಷರಾಗಿ ಆಯ್ಕೆಯಾದರು. ಕ್ಲೆರೈಡ್ಸ್‌, ಸೈಪ್ರಸ್ ಅಧ್ಯಕ್ಷರಾಗುತ್ತಿದ್ದಂತೆ ಸಹಜವಾಗಿ ಲೀಲಾ ದ್ವೀಪದ ಪ್ರಥಮ ಮಹಿಳೆಯಾದರು.


ಎರಡನೇ ಬಾರಿ ಮದುವೆಯಾದ ದಂಪತಿಗಳು


ದ್ವೀಪ ರಾಷ್ಟ್ರದ ಆರ್ಚ್‌ಬಿಷಪ್ ದಂಪತಿಗೆ ಚರ್ಚ್ ವಿವಾಹವನ್ನು ಹೊಂದಲು ವಿನಂತಿಸಲಾಯಿತು. ಎರಡನೇ ಬಾರಿ ಮದುವೆಗೆ ಒಪ್ಪಿದ ದಂಪತಿಗಳಿಗೆ ಆದಾಗ್ಲೇ ಇಳಿವಯಸ್ಸಾಗಿತ್ತು. ಆ ಸಮಯದಲ್ಲಿ, ಲೀಲಾ ಅವರಿಗೆ 72 ಮತ್ತು ಅವರ ಪತಿಗೆ 74 ವರ್ಷವಯಸ್ಸಾಗಿತ್ತು. ಹಲವು ಪ್ರಯತ್ನಗಳ ನಂತರ ಎರಡನೇ ಬಾರಿ ಮದುವೆಗೆ ಒಪ್ಪಿಗೆ ನೀಡಿದ ದಂಪತಿಗಳಿಗೆ ಕ್ರಿಶ್ಚಿಯನ್ ಧರ್ಮದ ಪ್ರಕಾರ ಮದುವೆ ನೆರವೇರಿಸಲಾಯಿತು.


ಇದಕ್ಕೂ ಮುನ್ನ ಲೀಲಾ ಔಪಚಾರಿಕವಾಗಿ ಗ್ರೀಕ್ ಆರ್ಥೊಡಾಕ್ಸ್ ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಿದರು ಮತ್ತು ಐರೀನ್ ಅನ್ನು ತನ್ನ ಮೊದಲ ಹೆಸರಿಗೆ ಸೇರಿಸಿದಳು. ಅಂದಿನಿಂದ ಯಹೂದಿ ಮಹಿಳೆ ಲೀಲಾ-ಐರೀನ್ ಕ್ಲೆರೈಡ್ಸ್‌ ಆದರು.


‌ವಿಶೇಷ ಅಗತ್ಯವುಳ್ಳ ಮಕ್ಕಳ ಸೇವೆಯಲ್ಲಿ ತೊಡಗಿಸಿಕೊಂಡ ಲೀಲಾ


ಕ್ಲೆರೈಡ್ಸ್‌ ಸೈಪ್ರಸ್ ಅಧ್ಯಕ್ಷರ ಪಟ್ಟ ಸ್ವೀಕರಿಸಿದರೂ ಸಹ ಲೀಲಾ ಅಧ್ಯಕ್ಷೀಯ ಅರಮನೆಗೆ ಹೋಗಲು ನಿರಾಕರಿಸಿದರು ಮತ್ತು ಬದಲಿಗೆ ದಂಪತಿಗಳು ತಮ್ಮ ಖಾಸಗಿ ಮನೆಯಲ್ಲಿ ವಾಸಿಸಲು ವಿನಂತಿಸಿಕೊಂಡರು.


ಪ್ರಥಮ ಮಹಿಳೆಯಾಗಿದ್ದ ಲೀಲಾ ಸುಮ್ಮನೆ ಕೂರದೇ ವಿಶೇಷ ಅಗತ್ಯವುಳ್ಳ ಮಕ್ಕಳ ಸೇವೆಯಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡರು. ಸೈಪ್ರಿಯೋಟ್ 24 ಸ್ಪೋರ್ಟ್ಸ್ ವೆಬ್‌ಸೈಟ್ ಪ್ರಕಾರ, ಅಧ್ಯಕ್ಷೀಯ ಅರಮನೆಯ ಮುಂಭಾಗದಲ್ಲಿ ಲೀಲಾ ಅವರು ಈ ಮಕ್ಕಳಿಗಾಗಿ ಆಟದ ಮೈದಾನವನ್ನು ನಿರ್ಮಿಸಲು ಕೇಳಿಕೊಂಡಿದ್ದರಂತೆ.


ಸಾಮಾಜಿಕ ಕೆಲಸದಲ್ಲಿ ತೊಡುಗಿಕೊಂಡಿದ್ದ ಲೀಲಾ ಅವರಿಗೆ ಗ್ರೀಕ್‌ ಭಾಷೆ ಕೊಂಚ ಅಡೆತಡೆಯನ್ನು ಉಂಡು ಮಾಡಿತ್ತಂತೆ. ಆದಾಗ್ಯೂ ಅವರು ಅತ್ಯುತ್ತಮವಾಗಿ ಇಂಗ್ಲಿಷ್ ಮಾತನಾಡುತ್ತಿದ್ದರಂತೆ. ರಾಜತಾಂತ್ರಿಕ ವ್ಯವಹಾರಗಳನ್ನು ಲೀಲಾ ಇಂಗ್ಲೀಷ್‌ನಲ್ಲೇ ವ್ಯವಹರಿಸುತ್ತಿರುವುದಾಗಿ ವರದಿಗಳು ತಿಳಿಸಿವೆ.


1997 ರಲ್ಲಿ ಭಾರತಕ್ಕೆ ಬಂದಿದ್ದ ಲೀಲಾ


ಹಲವು ವರ್ಷಗಳ ನಂತರ ಲೀಲಾ 1997 ರಲ್ಲಿ, ಕ್ಲೆರೈಡ್ಸ್ ಜೊತೆ ಆರು ದಿನಗಳ ಭೇಟಿಗಾಗಿ ಅತಿಥಿಯಾಗಿ ಭಾರತಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಲೀಲಾ "ನಾನು ಭಾರತವನ್ನು ಪ್ರೀತಿಸುತ್ತೇನೆ" ಎಂದು ಭೇಟಿಯ ಸಮಯದಲ್ಲಿ ಲೀಲಾ ಹೇಳಿದರು.


“ನಾನು ಇಲ್ಲಿನ ಜನರನ್ನು ಪ್ರೀತಿಸುತ್ತೇನೆ. ನಾನು ಅದರ ಇತಿಹಾಸವನ್ನು ಪ್ರೀತಿಸುತ್ತೇನೆ. ನಾನು ಭಾರತೀಯಳಾಗಿ ಬೆಳೆದಿದ್ದೇನೆ. ನಾನು ಯಾವಾಗಲೂ ಭಾರತದ ಮಗಳು" ಎಂದಿದ್ದರಂತೆ.


ಆದರೆ ಲೀಲಾ ಅವರ ಈ ಮಾತುಗಳು ಭಾರತ-ಸೈಪ್ರಸ್ ಸಂಬಂಧಗಳಲ್ಲಿ ವ್ಯಾಪಕವಾದ ಸಾರ್ವಜನಿಕ ಹಿತಾಸಕ್ತಿಯ ಕೊರತೆಯಿಂದಾಗಿ ವರದಿಯಾಗಿರಲಿಲ್ಲ. ಆದರೆ ಅಂತರರಾಷ್ಟ್ರೀಯ ವ್ಯವಹಾರಗಳ ಪತ್ರಕರ್ತ ರಮೇಶ್ ರಾಮಚಂದ್ರನ್ ಅವರ ಲೇಖನಗಳಲ್ಲಿ ಲೀಲಾ ಅವರ ಮಾತುಗಳನ್ನು ಉಲ್ಲೇಖಿಸಲಾಗಿದೆ.


ಅಟಲ್ ಬಿಹಾರಿ ವಾಜಪೇಯಿ ಅವರ ಆತಿಥ್ಯದ ಹೊಣೆ ಹೊತ್ತಿದ್ದ ಲೀಲಾ


ಅಕ್ಟೋಬರ್ 2002 ರಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸೈಪ್ರಸ್‌ಗೆ ಭೇಟಿ ನೀಡಲಿದ್ದಾರೆ ಎಂದು ಭಾರತ ಸರ್ಕಾರ ಘೋಷಿಸಿದಾಗ ಲೀಲಾ ಸಂತೋಷಪಟ್ಟಿದ್ದರು. ಅಟಲ್ ಬಿಹಾರಿ ವಾಜಪೇಯಿ ಕೋಪನ್‌ಹೇಗನ್‌ನಲ್ಲಿ ಮೂರನೇ ಭಾರತ-ಇಯು ವ್ಯಾಪಾರ ಶೃಂಗಸಭೆಗೆ ಹೋಗುವ ಮೊದಲು ಅವರು ಸೈಪ್ರಸ್‌ನಲ್ಲಿ ಎರಡು ದಿನಗಳನ್ನು ಕಳೆದರು. ಅಟಲ್ ಬಿಹಾರಿ ವಾಜಪೇಯಿ ಅವರ ಆತಿಥ್ಯದ ಹೊಣೆಯನ್ನು ಖುದ್ದು ಲೀಲಾ ಅವರೇ ವಹಿಸಿದ್ದರು.


2007 ರಲ್ಲಿ ಲೀಲಾ ನಿಧನ


2003 ರಲ್ಲಿ ಕೊನೆಗೊಂಡ ಕ್ಲೆರೈಡ್ಸ್ ಅವರ ಅಧ್ಯಕ್ಷತೆಯ ಅವಧಿಯಲ್ಲಿ, ಸೈಪ್ರಸ್ ಯುರೋಪಿಯನ್ ಒಕ್ಕೂಟದ ಸದಸ್ಯವಾಯಿತು. 2003 ರ ನಂತರ ಲೀಲಾ ಅವರ ಆರೋಗ್ಯವು ಹದಗೆಡಲು ಪ್ರಾರಂಭಿಸಿತು. ಕೆಲವು ವರ್ಷಗಳ ಕಾಲ ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡಿದ ನಂತರ, ಅವರು 2007 ರಲ್ಲಿ ಕರಾವಳಿ ಪಟ್ಟಣವಾದ ಲಾರ್ನಾಕಾದಲ್ಲಿನ ತಮ್ಮ ಕುಟುಂಬದ ಮನೆಯಲ್ಲಿ 86ನೇ ವಯಸ್ಸಿನಲ್ಲಿ ನಿಧನರಾದರು.


ಪತ್ನಿಯ ಸಾವಿನಿಂದ ಕ್ಲೆರೈಡ್ಸ್ ಕೂಡ ಜರ್ಜರಿತವಾಗಿ ಹೋಗಿದ್ದರು. ಕ್ಲೆರೈಡ್ಸ್ ಅವರು ತಮ್ಮ ಪ್ರತಿ ಸಂದರ್ಶನದಲ್ಲೂ ಪತ್ನಿಯ ಬಗ್ಗೆ ಭಾವುಕವಾಗಿ ಮಾತನಾಡುತ್ತಿದ್ದರು. ನಾನು ಲೀಲಾಗೆ ತುಂಬಾ ಋಣಿಯಾಗಿದ್ದೇನೆ ಎಂದು ಕ್ಲೆರೈಡ್ಸ್‌ ಯಾವಾಗಲೂ ಹೇಳಿಕೊಳ್ಳುತ್ತಿದ್ದರು.


ಇದನ್ನೂ ಓದಿ: Supreme Court: ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಒಬಿಸಿ ಮೀಸಲಾತಿ ತಡೆಹಿಡಿಯಲು ಕಾರಣಗಳೇನು?


ಕ್ಲೆರೈಡ್ಸ್ 2013 ರಲ್ಲಿ 94 ನೇ ವಯಸ್ಸಿನಲ್ಲಿ ನಿಧನರಾದರು. ಪ್ರಸ್ತುತ ಅವರ ಮಗಳು ಕ್ಯಾಥರೀನ್ ಸೈಪ್ರಸ್‌ನಲ್ಲಿ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ ಮತ್ತು ಗ್ರೀಕ್ ಮತ್ತು ಟರ್ಕಿಶ್ ಸೈಪ್ರಿಯೋಟ್‌ಗಳ ನಡುವೆ ಸಮನ್ವಯ ಪ್ರಯತ್ನಗಳಲ್ಲಿ ಕೆಲಸ ಮಾಡುತ್ತಿದ್ದಾರೆ.


ಭಾರತೀಯ ಮೂಲದ 7,500 ಜನರಿಗೆ ನೆಲೆಯಾದ ಸೈಪ್ರಸ್


ಭಾರತೀಯ ವಿದೇಶಾಂಗ ಸಚಿವಾಲಯದ ಪ್ರಕಾರ, ಸೈಪ್ರಸ್ ಈಗ ಭಾರತೀಯ ಮೂಲದ ಸುಮಾರು 7,500 ಜನರಿಗೆ ನೆಲೆಯಾಗಿದೆ. ಸೈಪ್ರಸ್ ಮೆಡಿಟೆನೇನಿಯನ್ ಸಮುದ್ರದ ಪೂರ್ವಭಾಗದಲ್ಲಿರುವ ಒಂದು ದ್ವೀಪರಾಷ್ಟ್ರ. ಸೈಪ್ರಸ್ ಟರ್ಕಿಯ ದಕ್ಷಿಣಕ್ಕೆ ಹಾಗೂ ಗ್ರೀಸ್‌ನ ಅಗ್ನೇಯಕ್ಕೆ ಮತ್ತು ಈಜಿಪ್ಟ್‌ನ ಉತ್ತರಕ್ಕಿದೆ. ಹಿಂದೆ ಬ್ರಿಟಿಷ್ ಸಾಮ್ರಾಜ್ಯದ ಅಂಗವಾಗಿದ್ದ ಸೈಪ್ರಸ್ 1960ರಲ್ಲಿ ಸ್ವತಂತ್ರ ರಾಷ್ಟ್ರವಾಯಿತು.

Published by:ಪಾವನ ಎಚ್ ಎಸ್
First published: