ಮುಂಬೈ (ಜು.15): ವಿಶ್ವದ 6ನೇ ಅತಿ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಮುಖ್ಯಸ್ಥ ಮುಖೇಶ್ ಅಂಬಾನಿ ಒಡೆತನದ ಜಿಯೋ ಪ್ಲಾಟ್ಫಾರ್ಮ್ನಲ್ಲಿ ಗೂಗಲ್ ಸಂಸ್ಥೆ 33,000 ಕೋಟಿ ರೂ. ಹೂಡಿಕೆ ಮಾಡುತ್ತಿದೆ. ಗೂಗಲ್ ಜೊತೆಗಿನ ಈ ಸಹಭಾಗಿತ್ವ 2ಜಿ ಮುಕ್ತ ಭಾರತ ಮಾಡಲು ಸಹಕಾರಿ ಎಂದು ಮುಕೇಶ್ ಅಂಬಾನಿ ಅಭಿಪ್ರಾಯಪಟ್ಟಿದ್ದಾರೆ.
ಇಂದು ನಡೆದ ಆರ್ಐಎಲ್ ವಾರ್ಷಿಕ ಸಭೆಯಲ್ಲಿ ಅಂಬಾನಿ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. “ಈಗಿನ ಮಾರುಕಟ್ಟೆ ಬೆಲೆಯಲ್ಲೇ ನಾವು 4ಜಿ ಅಥವಾ 6ಜಿ ಸ್ಮಾರ್ಟ್ಫೋನ್ಗಳನ್ನು ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದ್ದೇವೆ,” ಎಂದು ಅಂಬಾನಿ ಹೇಳಿದ್ದಾರೆ.
“ಕಡಿಮೆ ಬೆಲೆಯಲ್ಲಿ ಉತ್ತಮ ಸ್ಮಾರ್ಟ್ಫೋನ್ಗಳನ್ನು ನಿರ್ಮಾಣ ಮಾಡಬೇಕು ಎಂದಾದರೆ ನಮಗೆ ಅದೇ ಮೌಲ್ಯಯುತ ಸ್ಮಾರ್ಟ್ಫೋನ್ ಆಪರೇಟಿಂಗ್ ಸಿಸ್ಟಮ್ನ ಅಗತ್ಯವಿದೆ. ಗೂಗಲ್ ಹಾಗೂ ಜಿಯೋ ಸಹಭಾಗಿತ್ವದಿಂದ ಭಾರತದಲ್ಲಿ ಈ ರೀತಿಯ ಆಪರೇಟಿಂಗ್ ಸಿಸ್ಟಮ್ಅನ್ನು ನಾವು ಡೆವಲಪ್ ಮಾಡಬಹುದಾಗಿದೆ,” ಎಂದು ಅಂಬಾನಿ ಹೇಳಿದ್ದಾರೆ.
“ನಾವು ಈಗ 5ಜಿ ಅವಧಿಗೆ ಹತ್ತಿರವಾಗಿದ್ದೇವೆ. ಭಾರತದಲ್ಲಿ ಸುಮಾರು 35 ಕೋಟಿ ಜನರು 2ಜಿ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಅಂಥವರಿಗೆ ನಾವು ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ಫೋನ್ ಸಿದ್ಧಪಡಿಸಿ ನೀಡಬೇಕಿದೆ. ಈ ಮೂಲಕ 2ಜಿ ಮುಕ್ತ ಭಾರತವನ್ನು ಮಾಡಬೇಕಿದೆ,” ಎಂದರು ಅಂಬಾನಿ.
“ಜಿಯೋ 30 ಕೋಟಿಗೂ ಅಧಿಕ ಭಾರತೀಯರಿಗೆ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ಫೋನ್ ನೀಡಲು ಬದ್ಧವಾಗಿದೆ. ಜಿಯೋ 4ಜಿ ಮೊಬೈಲ್ ಅತಿ ಕಡಿಮೆ ಸಿಗುತ್ತಿರುವ ಸ್ಮಾರ್ಟ್ಫೋನ್ ಇದಾಗಿದೆ,” ಎಂದು ಸಂತಸ ಹೊರಹಾಕಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ