ದೋಸ್ತಾ ಕಣೋ.. ಬಾಲ್ಯದ ಗೆಳೆಯನಿಗಾಗಿ 1400 ಕಿ.ಮೀ. ಪ್ರಯಾಣಿಸಿ ಆಕ್ಸಿಜನ್ ತಂದ ಆಪತ್ಭಾಂದವ!

ದೇವೇಂದ್ರ ಬರುವಷ್ಟರಲ್ಲಿ ರಾಜನ್​ ಅವರ ಸಿಲಿಂಡರ್​ನಲ್ಲಿ ಕೇವಲ 10-15 ನಿಮಿಷಗಳಿಗೆ ಆಗುವಷ್ಟು ಮಾತ್ರ ಆಕ್ಸಿಜನ್​ ಉಳಿದಿತ್ತು. ಕೊಂಚ ತಡವಾಗಿದ್ದರೂ ರಾಜನ್​​ ಉಸಿರಾಡಲು ಆಗದೆ ಒದ್ದಾಡಬೇಕಿತ್ತು.

ಗೆಳೆಯರಾದ ರಾಜನ್​​-ದೇವೇಂದ್ರ

ಗೆಳೆಯರಾದ ರಾಜನ್​​-ದೇವೇಂದ್ರ

  • Share this:
ರಾಂಚಿ: ಕಡಿಲಿಗೂ ಒಂದು ಕೊನೆ ಇದೆ ಸ್ನೇಹಕೆ ಎಲ್ಲಿದೆ.. ಎಂಬ ಸಾಲುಗಳು ನಿಜಕ್ಕೂ ಸತ್ಯ ಎನಿಸೋದು ಇಂಥಹ ಸುದ್ದಿಗಳನ್ನು ಕೇಳಿದಾಗಲೆ. ಸ್ನೇಹವೊಂದೇ ನಿಸ್ವಾರ್ಥ ಎಂಬಂತೆ ಇಲ್ಲೊಬ್ಬ ಸ್ನೇಹಿತ ತನ್ನೆಲ್ಲಾ ಶಕ್ತಿ-ಸಾಮರ್ಥ್ಯವನ್ನು ಪಣಕ್ಕಿಟ್ಟು ಚಡ್ಡಿದೋಸ್ತ್​​ನ ಪ್ರಾಣ ಉಳಿಸಿದ್ದಾನೆ. ದೇಶದಲ್ಲಿ ತಲೆದೂರಿರುವ ಆಕ್ಸಿಜನ್​ ಕೊರತೆ ಎಂಬ ಭೂತ ಈ ಸ್ನೇಹಿತರಿಬ್ಬರ ಎದುರು ಸೋತಿದೆ, ಸ್ನೇಹವೇ ಗೆದ್ದು ಬೀಗಿದೆ. ಜಾರ್ಖಂಡ್​ನ ರಾಂಚಿಯಲ್ಲಿ ನೆಲೆಸಿರುವ ರಾಜನ್​ ಕುಮಾರ್​ ಸಿಂಗ್​ ಎಂಬುವರು ಕೆಲ ದಿನಗಳ ಹಿಂದೆ ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಆಸ್ಪತ್ರೆಗಳಲ್ಲಿ ಬೆಡ್​ ಸಿಗದೇ ಮನೆಯಲ್ಲೇ ಆಕ್ಸಿಜನ್​ ನೆರವಿನೊಂದಿಗೆ ಚೇತರಿಸಿಕೊಳ್ಳುತ್ತಿದ್ದರು. ಆದರೆ ರಾಜನ್​ ಬಳಿಯಿದ್ದ ಸಿಲಿಂಡರ್​ನಲ್ಲಿ ಆಕ್ಸಿಜನ್​ ಖಾಲಿಯಾಗುತ್ತಾ ಬಂದಿತ್ತು.

ಸಿಲಿಂಡರ್​ನ ರೀಫಿಲ್​ ಮಾಡಿಕೊಳ್ಳಲು ಇನ್ನಿಲ್ಲದಂತೆ ಪ್ರಯತ್ನಿಸಿದ್ದಾರೆ. ಆದರೆ ಎಲ್ಲೆಲ್ಲೂ ಆಕ್ಸಿಜನ್​ಗಾಗಿ ಹಾಹಾಕಾರವಿದ್ದು, ರಿಫೀಲ್​ ಸಾಧ್ಯವಾಗಲಿಲ್ಲ. ಆಗ ರಾಜನ್​ ಅವರಿಗೆ ನೆನೆಪಾದವನೇ ಬಾಲ್ಯದ ಗೆಳೆಯ ದೇವೇಂದ್ರ ಕುಮಾರ್​ ರೈ. ಗೆಳೆಯನಿಗೆ ಕರೆ ಮಾಡಿ ಆಕ್ಸಿಜನ್​ ಸಮಸ್ಯೆ ಬಗ್ಗೆ ತಿಳಿಸಿದ್ದಾರೆ. ಕೂಡಲೇ ಗೆಳೆಯನ ಮನೆಗೆ ದೇವೇಂದ್ರ ಬಂದಿದ್ದರು. ಇನ್ನು ಕೆಲವೇ ಗಂಟೆಗಳಲ್ಲಿ ಆಕ್ಸಿಜನ್​ ಮುಗಿದು ಹೋಗಲಿದೆ ಎಂದು ಗೊತ್ತಾಗಿದೆ. ಕೂಡಲೇ ದೇವೇಂದ್ರ ಅವರು ಮತ್ತೊಬ್ಬ ಗೆಳೆಯನಿಂದ ಕಾರು ಪಡೆದು ರಾತ್ರೋರಾತ್ರಿ ದೆಹಲಿ ಬಳಿಯ ನೋಯ್ಡಾಗೆ ತೆರಳಿದ್ದಾರೆ.

ರಾತ್ರಿಯೆಲ್ಲಾ ಪ್ರಯಾಣಿಸಿರೋ ದೇವೇಂದ್ರ ಎಲ್ಲಿಯೂ ಕಾರನ್ನು ನಿಲ್ಲಿಸಿ ವಿಶ್ರಾಂತಿ ಪಡೆದಿಲ್ಲ. ಊಟ-ನೀರಿಗಾಗಿಗೂ ನಿಲ್ಲಿಸದೇ ಒಂದೇ ಸಮನೇ ಕಾರ್​​ ಡ್ರೈವ್​ ಮಾಡಿದ್ದಾರೆ. ನೋಯ್ಡ ಬಳಿ ಸಿಲಿಂಡರನ್ನು ರೀಫಿಲ್​ ಮಾಡಿಸಿಕೊಂಡು ರಾಂಚಿಗೆ ದೌಡಾಯಿಸಿದ್ದಾರೆ. ಸಿಲಿಂಡರ್​ ರೀಫಿಲ್​​ ಗಾಗಿ ಬರೋಬ್ಬರಿ 1,400 ಕಿಲೋ ಮೀಟರ್​ ಕ್ರಮಿಸಿದ್ದಾರೆ. ದೇವೇಂದ್ರ ಬರುವಷ್ಟರಲ್ಲಿ ರಾಜನ್​ ಅವರ ಸಿಲಿಂಡರ್​ನಲ್ಲಿ ಕೇವಲ 10-15 ನಿಮಿಷಗಳಿಗೆ ಆಗುವಷ್ಟು ಮಾತ್ರ ಆಕ್ಸಿಜನ್​ ಉಳಿದಿತ್ತು. ಕೊಂಚ ತಡವಾಗಿದ್ದರೂ ರಾಜನ್​​ ಉಸಿರಾಡಲು ಆಗದೆ ಒದ್ದಾಡಬೇಕಿತ್ತು. ಆದರೆ ಪ್ರಾಣ ಸ್ನೇಹಿತ ದೇವೇಂದ್ರ ಸಾಕ್ಷಾತ್​​​ ದೇವರಂತೆ ರಾಜನ್​ನ ಕಾಪಾಡಿದ್ದಾರೆ.

ಸ್ನೇಹಿತನ ಸಹಾಯಕ್ಕೆ ರಾಜನ್​​ ಕಣ್ಣೀರಾಕಿದ್ದಾರೆ. ಇಂದು ನಾನು ಬದುಕಿರಲು ನನ್ನ ಸ್ನೇಹಿತನೇ ಕಾರಣ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಇಡೀ ಘಟನೆ ಬಗ್ಗೆ ಮಾತನಾಡಿರೋ ದೇವೇಂದ್ರ ಅವರು, ಸ್ನೇಹಿತನಿಗೆ ಸಹಾಯ ಮಾಡುವುದು ಬಿಟ್ಟು ನನಗೆ ಬೇರೇನು ಮುಖ್ಯವಾಗಿರಲಿಲ್ಲ. ನಾವಿಬ್ಬರು ಒಂದೇ ಆಸ್ಪತ್ರೆಯಲ್ಲಿ ಹುಟ್ಟಿದವರು. ಜೊತೆಯಾಗಿ ಶಾಲೆಯಲ್ಲಿ ಕಲಿತವರು. ಬೇರೆ ಬೇರೆ ಕಾಲೇಜ್​ಗೆ ಸೇರಿದರೂ ನಾವು ಎಂದಿಗೂ ನಮ್ಮ ಸ್ನೇಹವನ್ನು ಮರೆತಿಲ್ಲ ಎಂದಿದ್ದಾರೆ.

ಇನ್ನು ಸೋಂಕಿನಿಂದ ರಾಜನ್​ ಚೇತರಿಸಿಕೊಳ್ಳುತ್ತಿದ್ದಾರೆ. ರಾಜನ್​ ಪತ್ನಿ 6 ತಿಂಗಳ ಗರ್ಭಿಣಿಯಾಗಿದ್ದು, ಕೊರೋನಾ ಕಾಲದಲ್ಲಿ ಹೆಚ್ಚಾಗಿ ಹೊರ ಹೋಗಲು ಸಾಧ್ಯವಾಗುತ್ತಿಲ್ಲ. ಇದನ್ನು ತಿಳಿದ ದೇವೇಂದ್ರ, ಗೆಳೆಯನ ಮನೆಯಲ್ಲೇ ಇದ್ದುಕೊಂಡು ಗೆಳೆಯ ಹಾಗೂ ಆತನ ಪತ್ನಿಯನ್ನು ನೋಡಿಕೊಳ್ಳುತ್ತಿದ್ದಾರೆ. ನಿತ್ಯದ ಕೆಲಸದಲ್ಲಿ ಅವರಿಗೆ ನೆರವಾಗುತ್ತಿದ್ದಾರಂತೆ. ಒಂದೊಳ್ಳೆ ಸ್ನೇಹಕ್ಕಿಂತ ದೊಡ್ಡ ಆಸ್ತಿ ಉಂಟೇ ಅಂತ ಹೇಳೋದು ಇದಕ್ಕೆ ಅಲ್ಲವೇ?
Published by:Kavya V
First published: