ಕಾಲಿಗೆ ಬೀಳಬೇಡಿ, ಕೈ ಮುಗಿದು ಅಭಿಮಾನ ತೋರಿ; ತಮಿಳುನಾಡಿನಲ್ಲಿ ಹೊಸ ನಿಯಮ ತಂದ ಸ್ಟಾಲಿನ್​

news18
Updated:September 1, 2018, 5:52 PM IST
ಕಾಲಿಗೆ ಬೀಳಬೇಡಿ, ಕೈ ಮುಗಿದು ಅಭಿಮಾನ ತೋರಿ; ತಮಿಳುನಾಡಿನಲ್ಲಿ ಹೊಸ ನಿಯಮ ತಂದ ಸ್ಟಾಲಿನ್​
news18
Updated: September 1, 2018, 5:52 PM IST
ನ್ಯೂಸ್​18 ಕನ್ನಡ

ಚೆನ್ನೈ (ಸೆ. 1): ತಮಿಳುನಾಡಿನಲ್ಲಿ ರಾಜಕಾರಣಿಗಳು, ಸಿನಿಮಾ ನಟರನ್ನು ದೇವರಂತೆ ಕಾಣುವವರೂ ಇದ್ದಾರೆ. ಮಾಜಿ ಸಿಎಂ ಜಯಲಲಿತಾ ಅವರಿಗೆ ಜನರು ದೂರದಿಂದಲೇ ಕಾಲಿಗೆ ಅಡ್ಡಬೀಳುತ್ತಿದ್ದರು. ಹತ್ತಿರ ಹೋಗಲೂ ಭಯ ಪಡುತ್ತಿದ್ದರು. ಗೌರವ, ಭಯಮಿಶ್ರಿತ ಭಾವನೆಯೊಂದನ್ನು ಎಲ್ಲರೂ ಇಟ್ಟುಕೊಂಡಿದ್ದರು.

ಆದರೆ, ಇಂತಹ ಸಂಪ್ರದಾಯಗಳಿಗೆಲ್ಲ ಮುಕ್ತಾಯ ಹಾಡಲು ಮುಂದಾಗಿರುವ ಡಿಎಂಕೆ ಪಕ್ಷದ ಅಧ್ಯಕ್ಷ ಎಂ.ಕೆ. ಸ್ಟಾಲಿನ್​, ಯಾರೊಬ್ಬರೂ ಕಾಲು ಮುಟ್ಟಿ ನಮಸ್ಕರಿಸಬಾರದು, ಗಂಧದ ಹಾರವನ್ನು ಹಾಕಬಾರದು. ಭೇಟಿಯಾಗಲು ಬಂದವರು ಕೈಗಳನ್ನು ಮುಗಿದು 'ವಣಕ್ಕಮ್​' (ನಮಸ್ಕಾರ) ಎಂದು ಪ್ರೀತಿಯಿಂದ ಹೇಳಿದರೆ ಅಷ್ಟೇ ಸಾಕು ಎಂದು ಸೂಚಿಸಿದ್ದಾರೆ.

ಕರುಣಾನಿಧಿ ಅವರ ನಿಧನದ ನಂತರ ಡಿಎಂಕೆ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಕರುಣನಿಧಿ ಅವರ ಮಗ ಎಂ.ಕೆ. ಸ್ಟಾಲಿನ್​,  ಕಾಲಿಗೆ ಬಿದ್ದು ನಮಸ್ಕಾರ ಮಾಡುವುದು ಒಬ್ಬರ ಆತ್ಮಗೌರವವನ್ನು ತುಳಿದಂತೆ. ಹಾಗಾಗಿ, ಯಾರೊಬ್ಬರೂ ನನ್ನ ಮುಂದೆ ತಲೆಗಬ್ಬಿಸಬೇಕಾಗಿಲ್ಲ ಎಂದು ಕಾರ್ಯಕರ್ತರಿಗೆ ಹೇಳಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಶಿಸ್ತು, ಪ್ರಾಮಾಣಿಕತೆಯಿದ್ದರೆ ಸಾಕು:

ಕಾಲು ಮುಟ್ಟಿ ನಮಸ್ಕಾರ ಮಾಡಿ ಕಾರ್ಯಕರ್ತರು ತಮ್ಮ ನಿಷ್ಟೆಯನ್ನು ಪ್ರದರ್ಶಿಸಬೇಕಿಲ್ಲ. ಬದಲಾಗಿ, ಪ್ರಾಮಾಣಿಕತೆ ಮತ್ತು ಶಿಸ್ತಿನಿಂದ ಪಕ್ಷದ ಏಳಿಗೆಗೆ ದುಡಿದರೆ ಅದೇ ಪಕ್ಷಕ್ಕೆ ಮತ್ತು ಪಕ್ಷದ ಅಧ್ಯಕ್ಷರಿಗೆ ನೀಡುವ ಗೌರವ ಎಂದು ಪಕ್ಷದ ಕೇಂದ್ರ ಕಚೇರಿಯಿಂದ ತಿಳಿಸಲಾಗಿದೆ.

ಎಐಡಿಎಂಕೆ ಅಧ್ಯಕ್ಷೆಯಾಗಿದ್ದ ಜಯಲಲಿತಾ ಅವರನ್ನು ಜನರು ದೇವರಂತೆ ಗೌರವಿಸುತ್ತಿದ್ದರು. ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ಆಕೆಯ ಕಾಲಿಗೆ ಬಿದ್ದು ನಮಸ್ಕರಿಸುತ್ತಿದ್ದರು. ಇದರಿಂದಾಗಿ ತಮಿಳುನಾಡು ರಾಜಕೀಯದಲ್ಲಿ ಅಲಿಖಿತ ನಿಯಮವೆಂಬಂತೆ ಕಾಲಿಗೆ ಬೀಳುವ ಸಂಪ್ರದಾಯ ಶುರುವಾಗಿತ್ತು. ಇದನ್ನು ನಿಯಂತ್ರಿಸುವ ಸಲುವಾಗಿ ಸ್ಟಾಲಿನ್​ ಈ ರೀತಿಯ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ.
Loading...

ಹಾರದ ಬದಲು ಪುಸ್ತಕ ತನ್ನಿ:

ಯಾರನ್ನೂ ಕೀಳಾಗಿ ಕಾಣುವ ಮನೋಧರ್ಮ ಡಿಎಂಕೆಯಲ್ಲಿಲ್ಲ ಎಂದಿರುವ ಪಕ್ಷದ ಕಚೇರಿಯ ವಕ್ತಾರರು, ಸ್ಟಾಲಿನ್​ ಅವರನ್ನು ನೋಡಲು ಬರುವ ಕಾರ್ಯಕರ್ತರು ಮತ್ತು ಅಭಿಮಾನಿಗಳು ಗಂಧದ ಹಾರ, ಶಾಲುಗಳನ್ನು ತರುವ ಬದಲಾಗಿ ಅದೇ ಹಣದಲ್ಲಿ ಉತ್ತಮ ಪುಸ್ತಕಗಳನ್ನು ಕೊಂಡು ತಮಿಳುನಾಡು ರಾಜ್ಯದ ಗ್ರಂಥಾಲಯಗಳಿಗೆ ನೀಡಿದರೆ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಓದಲು ಅನುಕೂಲವಾದಂತಾಗುತ್ತದೆ ಎಂದು ಕೂಡ ಪಕ್ಷದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಲ್ಲದೆ, ಕಂಡಕಂಡಲ್ಲಿ ಪಕ್ಷದ ಬ್ಯಾನರ್​ಗಳನ್ನು ಹಾಕುವುದು, ಫ್ಲೆಕ್ಸ್​ಗಳನ್ನು ಹಾಕಿ ಸಾರ್ವಜನಿಕರಿಗೆ ತೊಂದರೆ ಕೊಡುವುದನ್ನು ನಿಲ್ಲಿಸಬೇಕೆಂದು ಕೂಡ ಸೂಚಿಸಲಾಗಿದೆ. ಒಟ್ಟಾರೆ, ಇದು ತಮಿಳುನಾಡು ರಾಜಕೀಯರಂಗದಲ್ಲಿ ಉತ್ತಮ ಬೆಳವಣಿಗೆಯೆಂದೇ ಹೇಳಬಹುದು.

 
First published:September 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ