ರೈತ ಹೋರಾಟದ ಮೇಲೆ ಅನಿಶ್ಚಿತತೆ ಉಂಟುಮಾಡಿದ ದೆಹಲಿ ಘರ್ಷಣೆ

ಕಹಿ ಘಟನೆಗೆ ಸಾಕ್ಷಿಯಾಗಿದ್ದ ಕೆಂಪು ಕೋಟೆಗೆ ಇಂದು ಸಹ ಸಾರ್ವಜನಿಕರಿಗೆ ಪ್ರವೇಶ ನಿರಾಕರಣೆ ಮಾಡಲಾಗಿತ್ತು. ಜನವರಿ 30ರವರೆಗೂ ಈ ನಿರ್ಬಂಧ ಮುಂದುವರೆಯಲಿದೆ. ಇಷ್ಟೆಲ್ಲದರ ನಡುವೆ ದೆಹಲಿ ಘಟನೆ ವೇಳೆ ಗಾಯಗೊಂಡಿದ್ದ ಪೊಲೀಸರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗಿದ್ದಾರೆ.‌ ದೆಹಲಿಯ ಸಿವಿಲ್ ಲೈನ್ ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಅಮಿತ್ ಶಾ ಗಾಯಗೊಂಡಿದ್ದ ಪೊಲೀಸರ ಯೋಗಕ್ಷೇಮ ವಿಚಾರಿಸಿದರು.

ದೆಹಲಿಯ ರೈತರ ಪ್ರತಿಭಟನೆ.

ದೆಹಲಿಯ ರೈತರ ಪ್ರತಿಭಟನೆ.

  • Share this:
ನವದೆಹಲಿ (ಜ. 28): ಗಣರಾಜ್ಯೋತ್ಸವದ ದಿನ ಕಿಸಾನ್ ರಿಪಬ್ಲಿಕ್ ಡೇ ಪರೆಡ್ ವೇಳೆ ನಡೆದ ಘರ್ಷಣೆ ರೈತ ಹೋರಾಟದ ಮೇಲೆಯೇ ಪರಿಣಾಮ ಬೀರುತ್ತಿದೆ. ಎರಡು ತಿಂಗಳಿನಿಂದ ಶಾಂತಿಯುತವಾಗಿ ಮತ್ತು ನಿರಂತರವಾಗಿ ನಡೆಯುತ್ತಿದ್ದ ಹೋರಾಟದ ಮೇಲೆ ಈಗ ಅನಿಶ್ಚಿತತೆಯ ಕಾರ್ಮೋಡ ಕವಿದಿದೆ.  ಗಣರಾಜ್ಯೋತ್ಸವದ ದಿನ ಸಂಭವಿಸಿದ ಘರ್ಷಣೆಯಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ದೆಹಲಿಯಾದ್ಯಂತ ಭಾರೀ ಬಂದೋಬಸ್ತ್ ಮಾಡಲಾಗಿದೆ. ಕೆಂಪು ಕೋಟೆಗೆ ಅರೆಸೇನೆಯಿಂದ ರಕ್ಷಣೆ ಕೊಡಿಸಲಾಗುತ್ತಿದೆ. ಇನ್ನೊಂದೆಡೆ ರೈತರು ಪ್ರತಿಭಟನೆ ನಡೆಸುತ್ತಿರುವ ಗಡಿಗಳಲ್ಲೂ ಅನಿಶ್ಚಿತತೆಯ ವಾತಾವರಣ ನಿರ್ಮಾಣ ಆಗುತ್ತಿದೆ.

ಪ್ರತಿಭಟನೆ ಕೊನೆಗಾಣಿಸುವಂತೆ ಒತ್ತಾಯ

ಕೆಂಪು ಕೋಟೆಯ ಕಹಿ ಘಟನೆಯಿಂದ ದೆಹಲಿ ಗಡಿಗಳಲ್ಲಿ ಶಾಂತವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಅಲ್ಲಿನ‌ ಸ್ಥಳೀಯರು ಪ್ರತಿಭಟನೆಯನ್ನು ಮೊಟಕುಗೊಳಿಸುವಂತೆ ಒತ್ತಡ ಹೇರುತ್ತಿದ್ದಾರೆ. ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವುದರಿಂದ ಟ್ರಾಫಿಕ್ ಜಾಮ್ ಆಗುತ್ತಿದೆ. ನಮ್ಮ ವ್ಯಾಪಾರ ವಹಿವಾಟಿಗೆ ತೊಂದರೆ ಆಗುತ್ತಿದೆ. ಆದುದರಿಂದ ಜಾಗ ಖಾಲಿ ಮಾಡಿ ಅಂತಾ 24 ಗಂಟೆಗಳ ಗಡುವು ನೀಡಿದ್ದಾರೆ.

ಗಡಿಗಳಿಗೆ ಭದ್ರತೆ ಹೆಚ್ಚಿಸಿದ ಪೊಲೀಸರು

ಪ್ರತಿಭಟನೆ ನಡೆಯುತ್ತಿರುವ ಸಿಂಘು, ಟಿಕ್ರಿ ಮತ್ತು ಗಾಜಿಪುರ್ ಗಡಿಗಳಲ್ಲಿ ಪ್ರತಿಭಟನಾಕಾರರು ಮತ್ತು ಸ್ಥಳೀಯರ ನಡುವೆ ಘರ್ಷಣೆ ಆಗಬಹುದೆಂದು ಮೂರು ಕಡೆ ಹೆಚ್ಚಿನ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಹೀಗೆ ಹೋರಾಟಕ್ಕೆ ಸಂಚಕಾರ ಆಗುವ ಸುಳಿವು ಗೋಚರಿಸುತ್ತಿವೆ. ರೈತ ನಾಯಕರು ಹೋರಾಟ ಮುಂದುವರೆಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹೋರಾಟ ಮುಂದುವರೆಯಲಿದೆ

ದೆಹಲಿಯ ಸಿಂಘು, ಟಿಕ್ರಿ ಮತ್ತು ಗಾಜಿಪುರ್ ಗಡಿಗಳಲ್ಲಿ ರೈತರ ದಿಟ್ಟ ಹೋರಾಟ ಶಾಂತಿಯುತವಾಗಿ ಮುಂದುವರಿದಿದೆ. ಸಿಂಘು ಗಡಿಯಲ್ಲಿ ಸದ್ಭಾವನಾ ಮಾರ್ಚ್ ನಡೆಸಲಾಗುತ್ತಿದೆ. ಯಾವುದೇ ಆತಂಕವಿಲ್ಲ ಎಂದು ಹೋರಾಟನಿರತ ರೈತ ಮುಖಂಡರು ಸ್ಪಷ್ಟಪಡಿಸಿದ್ದಾರೆ.

ಇದನ್ನು ಓದಿ: ಕೆಂಪುಕೋಟೆ ಹಿಂಸಾಚಾರದಲ್ಲಿ ಗಾಯಗೊಂಡ ಪೊಲೀಸ್ ಸಿಬ್ಬಂದಿ ಭೇಟಿಯಾದ ಅಮಿತ್ ಶಾ; ರೈತ ನಾಯಕರ ವಿರುದ್ಧ ಲುಕ್​ಔಟ್ ನೋಟಿಸ್ ಜಾರಿ

ರೈತ ನಾಯಕರಿಗೆ ನೊಟೀಸ್

ದೆಹಲಿಯ ಟ್ರ್ಯಾಕ್ಟರ್ ಮೆರವಣಿಗೆ ವೇಳೆ ಘರ್ಷಣೆಯಾದ ಹಿನ್ನೆಲೆಯಲ್ಲಿ ರೈತ ಮುಖಂಡರಾದ ದರ್ಶನ್ ಪಾಲ್, ರಾಜೀಂದರ್‌ ಸಿಂಗ್, ಬಲ್‌‌ಬೀರ್‌ ಸಿಂಗ್ ರಾಜೇವಾಲ್, ಬೂಟಾ ಸಿಂಗ್ ಬುರ್ಜ್‌ಗಿಲ್, ಜೋಗೀಂದರ್‌ ಸಿಂಗ್‌, ರಾಕೇಶ್ ಟಿಕಾಯತ್‌, ಯೋಗೇಂದ್ರ ಯಾದವ್, ಮೇಧಾ ಪಾಟ್ಕರ್ ಮತ್ತಿತರರಿಗೆ ದೆಹಲಿ ಪೊಲೀಸರು ನೋಟಿಸ್ ನೀಡಿದ್ದಾರೆ. ಪೊಲೀಸರೊಂದಿಗೆ ಮಾಡಿಕೊಂಡಿದ್ದ ಒಪ್ಪಂದದ ಬಗ್ಗೆ 3 ದಿನಗಳೊಳಗೆ ಪ್ರತಿಕ್ರಿಯಿಸುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.

ಕೆಂಪು ಕೋಟೆಗೆ ಪ್ರವೇಶ ನಿರ್ಬಂಧ

ಕಹಿ ಘಟನೆಗೆ ಸಾಕ್ಷಿಯಾಗಿದ್ದ ಕೆಂಪು ಕೋಟೆಗೆ ಇಂದು ಸಹ ಸಾರ್ವಜನಿಕರಿಗೆ ಪ್ರವೇಶ ನಿರಾಕರಣೆ ಮಾಡಲಾಗಿತ್ತು. ಜನವರಿ 30ರವರೆಗೂ ಈ ನಿರ್ಬಂಧ ಮುಂದುವರೆಯಲಿದೆ. ಇಷ್ಟೆಲ್ಲದರ ನಡುವೆ ದೆಹಲಿ ಘಟನೆ ವೇಳೆ ಗಾಯಗೊಂಡಿದ್ದ ಪೊಲೀಸರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗಿದ್ದಾರೆ.‌ ದೆಹಲಿಯ ಸಿವಿಲ್ ಲೈನ್ ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಅಮಿತ್ ಶಾ ಗಾಯಗೊಂಡಿದ್ದ ಪೊಲೀಸರ ಯೋಗಕ್ಷೇಮ ವಿಚಾರಿಸಿದರು.
Published by:HR Ramesh
First published: