• Home
 • »
 • News
 • »
 • national-international
 • »
 • Nepal Plane Crash: ಮನಕಲಕುವ ಘಟನೆ: ಪತಿ ಮೃತಪಟ್ಟ ವಿಮಾನ ಸಂಸ್ಥೆಯಲ್ಲೇ 16 ವರ್ಷದ ಬಳಿಕ ಮಹಿಳಾ ಪೈಲಟ್‌ ದಹನ!

Nepal Plane Crash: ಮನಕಲಕುವ ಘಟನೆ: ಪತಿ ಮೃತಪಟ್ಟ ವಿಮಾನ ಸಂಸ್ಥೆಯಲ್ಲೇ 16 ವರ್ಷದ ಬಳಿಕ ಮಹಿಳಾ ಪೈಲಟ್‌ ದಹನ!

ಪೈಲಟ್ ಅಂಜು ಖತಿವಾಡ

ಪೈಲಟ್ ಅಂಜು ಖತಿವಾಡ

ಭಾನುವಾರ ಕಠ್ಮಂಡುವಿನ ತ್ರಿಭುವನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 10:33 ಟೇಕಾಫ್‌ ಆಗಿದ್ದ ವಿಮಾನದಲ್ಲಿ 5 ಮಂದಿ ಭಾರತೀಯರು ಸೇರಿದಂತೆ ಒಟ್ಟು 68 ಪ್ರಯಾಣಿಕರು ಹಾಗೂ 4 ಸಿಬ್ಬಂದಿ ಇದ್ದರು. ದುರಂತದಲ್ಲಿ ಅವರೆಲ್ಲ ಸುಟ್ಟು ಕರಕಲಾಗಿದ್ದಾರೆ.

 • News18 Kannada
 • 2-MIN READ
 • Last Updated :
 • New Delhi, India
 • Share this:

ಕಠ್ಮಂಡು: ನೆರೆಯ ರಾ‍ಷ್ಟ್ರ ನೇಪಾಳದಲ್ಲಿ (Nepal News) ಕಳೆದ ಭಾನುವಾರ ಸಂಭವಿಸಿದ ಭೀಕರ ವಿಮಾನ ಅಪಘಾತ ಪ್ರಕರಣಕ್ಕೆ (Nepal Plane Crash) ಸಂಬಂಧಿಸಿದಂತೆ ಹತ್ತಾರು ಹೃದಯ ವಿದ್ರಾವಕ ಘಟನೆಗಳು ಹೊರಬರುತ್ತಿದ್ದು, ಒಂದೊಂದು ಘಟನೆಯ ಹಿಂದೆಯೂ ಒಂದಕ್ಕೊಂದು ಭಿನ್ನವಾದ ಮನಕಲಕುವ ಕಥೆಗಳಿರೋದು ಬಹಿರಂಗವಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ದುರಂತಕ್ಕೀಡಾದ ವಿಮಾನದಲ್ಲಿದ್ದ ಮಹಿಳಾ ಪೈಲಟ್‌ (Lady Pilot) ಅವರ ಜೀವನಾಂತ್ಯದ ಕಥೆಯೂ ಎಂಥವರ ಹೃದಯವನ್ನೂ ನಾಟುವಂತಿದೆ.


ಹೌದು, ನೇಪಾಳದ ಪೋಖರಾದಲ್ಲಿ ಭಾನುವಾರ ಸಂಭವಿಸಿದ ಯೇತಿ ಏರ್‌ಲೈನ್ಸ್‌ನ ಭೀಕರ ವಿಮಾನ ದುರಂತದಲ್ಲಿ ವಿಮಾನದ ಮಹಿಳಾ ಪೈಲಟ್ ಅಂಜು ಖಾತಿವಾಡಾ (Anju Khatiwada) ಅವರು ದಾರುಣ ಸಾವನ್ನಪ್ಪಿದ್ದರು. 2010ರಲ್ಲಿ ನೇಪಾಳದ ಯೇತಿ ಏರ್‌ಲೈನ್ಸ್ ವಿಮಾನದಲ್ಲಿ ಸಹ ಪೈಲಟ್ ಹುದ್ದೆಗೆ ಸೇರಿಕೊಂಡಿದ್ದ ಅಂಜು ಖಾತಿವಾಡಾ ಅವರು, ಸಾವಿನಲ್ಲಿಯೂ ಪತಿಯ ಹೆಜ್ಜೆಯನ್ನು ಅನುಸರಿಸಿರೋದು ಸಾಕಷ್ಟು ಸುದ್ದಿಯಾಗಿದೆ.


ಕಳೆದ ನಾಲ್ಕು ವರ್ಷಗಳ ಹಿಂದಷ್ಟೇ ಅಂಜು ಖಾತಿವಾಡಾ ಅವರ ಪತಿ ದೀಪಕ್ ಪೋಖ್ರೇಲ್ ಅವರು ಪೈಲಟ್ ಆಗಿದ್ದ ಸಣ್ಣ ಪ್ಯಾಸೆಂಜರ್ ವಿಮಾನವು ತನ್ನ ಹಾರಾಟದ ವೇಳೆ ಲ್ಯಾಂಡಿಂಗ್‌ಗೂ ಕೆಲವೇ ನಿಮಿಷಕ್ಕೂ ಮುನ್ನ ಭೀಕರವಾಗಿ ಅಪಘಾತಕ್ಕೀಡಾಗಿ ದಹನವಾಗಿತ್ತು. ವಿಪರ್ಯಾಸವೆಂದರೆ ಅಂಜು ಖಾತಿವಾಡಾ (44) ಹಾಗೂ ಅವರ ಪತಿ ದೀಪಕ್ ಪೋಖ್ರೇಲ್ ಅವರ ದುರಂತ ಅಂತ್ಯ ಒಂದೇ ಸಂಸ್ಥೆಗೆ ಸೇರಿದ ವಿಮಾನದಲ್ಲಿ ಸಂಭವಿಸಿರೋದು.


ಇದನ್ನೂ ಓದಿ: Nepal Plane Crash: ವಿಮಾನಗಳಿಗೆ ಸುರಕ್ಷಿತವಲ್ಲವೇ ನೇಪಾಳ ಹವಾಮಾನ? ಪದೇ ಪದೇ ಅಪಘಾತಕ್ಕೆ ಕಾರಣವೇನು?


6,400 ಗಂಟೆ ವಿಮಾನ ಚಾಲನೆಯ ಅನುಭವ


ಸುಮಾರು 6,400 ಗಂಟೆ ವಿಮಾನ ಚಾಲನೆಯಲ್ಲಿ ಅನುಭವ ಹೊಂದಿದ್ದ ಅಂಜು ಖಾತಿವಾಡಾ ಅವರು, ನೇಪಾಳದ ಕಠ್ಮಂಡುನಿಂದ ಅಲ್ಲಿನ ಎರಡನೇ ಅತಿ ದೊಡ್ಡ ನಗರ ಹಾಗೂ ಪ್ರಸಿದ್ಧ ಪ್ರವಾಸಿ ತಾಣ ಪೋಖರಾಗೆ ಈ ಹಿಂದೆಯೂ ವಿಮಾನ ಚಲಾಯಿಸಿದ್ದರು. ಭಾನುವಾರದಂದು ಅವರು ವಿಮಾನ ಸಂಸ್ಥೆಯ ನಿಯಮಾವಳಿಯ ಪ್ರಕ್ರಿಯೆಯಂತೆ ಸೂಚನಾ ಪೈಲಟ್ ಜತೆ ವಿಮಾನ ಚಲಾಯಿಸುತ್ತಿದ್ದರು ಎಂದು ಅಂಜು ಖಾತಿವಾಡಾ ಅವರನ್ನು ಹತ್ತಿರದಿಂದ ಬಲ್ಲ ಯೇತಿ ಏರ್‌ಲೈನ್ಸ್‌ನ ಸಹೋದ್ಯೋಗಿ ಒಬ್ಬರು ಹೇಳಿದ್ದಾರೆ.


ಅಂಜು ಖಾತಿವಾಡಾ ಅವರ ಪತಿ ದೀಪಕ್ ಪೋಖ್ರೇಲ್ ಅವರು ಜುಮ್ಲಾದಲ್ಲಿ 2006ರಲ್ಲಿ ಸಂಭವಿಸಿದ ಯೇತಿ ಏರ್‌ಲೈನ್ಸ್‌ನ ಟ್ವಿನ್ ಒಟ್ಟೆರ್ ವಿಮಾನದ ಅಪಘಾತದಲ್ಲಿ ಮೃತಪಟ್ಟಿದ್ದರು. ತನ್ನ ಪತಿಯ ಸಾವಿನ ನಂತರ ದೊರೆತ ವಿಮಾ ಹಣದಿಂದ ಅಂಜು ಖಾತಿವಾಡಾ ಅವರು ಪೈಲಟ್ ತರಬೇತಿ ಪಡೆದುಕೊಂಡಿದ್ದರು ಎಂದು ಏರ್‌ಲೈನ್ಸ್‌ನ ವಕ್ತಾರ ಸುದರ್ಶನ್ ಬರ್ಟೌಲಾ ತಿಳಿಸಿದ್ದಾರೆ. ಸದ್ಯ ಅಂಜು ಖಾತಿವಾಡಾ ಅವರ ಮೃತದೇಹ ಇದುವರೆಗೂ ಪತ್ತೆಯಾಗಿಲ್ಲ. ಆದರೆ ಅವರು ಬದುಕುಳಿದಿರುವ ಸಾಧ್ಯತೆ ತೀರಾ ಕಡಿಮೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಇದನ್ನೂ ಓದಿ: Nepal Plane Crash: ನೇಪಾಳ ವಿಮಾನ ದುರಂತದ ಕೊನೇ ಕ್ಷಣದ ವಿಡಿಯೋ ಭಾರತೀಯ ಯುವಕನ ಫೋನ್​ನಲ್ಲಿ ಸೆರೆ!


ವಿಮಾನದ ನಿರ್ವಹಣೆ ಮಾಡುತ್ತಿರಲಿಲ್ಲ!


ದುರಂತಕ್ಕೆ ಈಡಾದ 9N-AANC ATR-72  ವಿಮಾನ ಹತ್ತಾರು ವರ್ಷ ಹಳೆಯ ವಿಮಾನವಾಗಿದ್ದು, ವಿಮಾನವನ್ನು ಸರಿಯಾಗಿ ನಿರ್ವಹಣೆಯೂ ಮಾಡುತ್ತಿರಲಿಲ್ಲ. ವಿಶೇಷವಾಗಿ ಪೋಖರಾ ವಿಮಾನ ನಿಲ್ದಾಣದಲ್ಲಿ ಸಿಗ್ನಲ್ ವ್ಯವಸ್ಥೆ ಮತ್ತು ವಿವಿಧ ಮೂಲಭೂತ ಸೌಕರ್ಯಗಳ ಕೊರೆತಯೂ ವ್ಯಾಪಕವಾಗಿತ್ತು. ಅಲ್ಲದೇ ಈ ವಿಮಾನ ನಿಲ್ದಾಣವನ್ನು ತರಾತುರಿಯಲ್ಲಿ ಉದ್ಘಾಟಿಸಲಾಗಿತ್ತು ಎಂದು ಸ್ಥಳೀಯ ಸುದ್ದಿ ವಾಹಿನಿಗಳು ವರದಿ ಮಾಡಿವೆ. ಪ್ರಾಥಮಿಕ ವರದಿಯ ಪ್ರಕಾರ, ಒಟ್ಟು 72 ಪ್ರಯಾಣಿಕರ ಸಜೀವ ದಹನಕ್ಕೆ ಕಾರಣವಾದ 9N-AANC ATR-72  ವಿಮಾನ ಅಪಘಾತ ನಡೆಯಲು ಹವಾಮಾನ ವೈಪರೀತ್ಯ ಕಾರಣವಲ್ಲ, ತಾಂತ್ರಿಕ ದೋಷದಿಂದಲೇ ಈ ಅಪಘಾತ ನಡೆದಿರುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.ಅವಘಡಕ್ಕೆ ಕಾರಣವೇನು?


ಇನ್ನು 9N-AANC ATR-72 ವಿಮಾನ ದುರಂತ ಸಂಭವಿಸಲು ಹವಾಮಾನ ವೈಪರೀತ್ಯ ಕಾರಣವಲ್ಲ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದ್ದು, ಹವಾಮಾನ ಶುಭ್ರವಾಗಿತ್ತು. ಆದರೆ ವಿಮಾನದಲ್ಲಿ ತಾಂತ್ರಿಕ ದೋಷ ಇರುವ ಕುರಿತು ಪೈಲಟ್‌ ಏರ್‌ಪೋರ್ಟ್‌ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಆರಂಭದಲ್ಲಿ ವಿಮಾನದ ಲ್ಯಾಂಡಿಂಗ್‌ಗೆ ರನ್‌ವೇ -3 ಸೂಚಿಸಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಪೈಲಟ್‌ನ ಮನವಿಯಂತೆ ರನ್‌ವೇ-1ರಲ್ಲಿ ಲ್ಯಾಂಡ್‌ ಮಾಡಲು ಅನುಮತಿ ನೀಡಲಾಗಿತ್ತು. ವಿಮಾನ ಭೂಸ್ಪರ್ಶ ಮಾಡಲು ಇನ್ನೇನು ಹತ್ತು ಸೆಕೆಂಡ್‌ಗಳು ಇದೆ ಅನ್ನೋವಷ್ಟರಲ್ಲಿ ಆಕಾಶದಲ್ಲಿ ಒಂದು ಸುತ್ತು ಪಲ್ಟಿ ಹೊಡೆದ ವಿಮಾನ ಅಲ್ಲೇ ಸೇತಿ ನದಿ ತೀರದಲ್ಲಿ ಪತನಗೊಂಡಿತು ಎಂದು ಏರ್‌ ಟ್ರಾಫಿಕ್‌ ಕಂಟ್ರೋಲ್‌ ಅಧಿಕಾರಿ ಅನೂಪ್‌ ಜೋಶಿ ತಿಳಿಸಿದ್ದಾರೆ.

Published by:Avinash K
First published: