ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ನಡೆದ 11ನೇ ಸುತ್ತಿನ ಸಭೆಯೂ ವಿಫಲ

ಸಭೆಗೆ ಮೂರೂವರೆ ಗಂಟೆ ತಡವಾಗಿ ಬಂದಿದ್ದೂ ಅಲ್ಲದೆ ಹಳೆಯ ಪ್ರಸ್ತಾಪಗಳನ್ನೇ ಮತ್ತೊಮ್ಮೆ ಮುಂದಿಟ್ಟು‌ ಸಭೆಯನ್ನು ತರಾತುರಿಯಲ್ಲಿ ಮುಗಿಸಲು ಪ್ರಯತ್ನಿಸಿದರು. ಕೇಂದ್ರ ಸಚಿವರ ಈ ವರ್ತನೆಯ ಬಗ್ಗೆ ನಾವು ವಿರೋಧ ವ್ಯಕ್ತಪಡಿಸಿದ್ದೇವೆ. ಜೊತೆಗೆ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ಒಪ್ಪಲಿಲ್ಲ. ಕೇಂದ್ರ ಸರ್ಕಾರ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವವರೆಗೆ ಶಾಂತಿಯುತವಾಗಿ ಪ್ರತಿಭಟನೆಯನ್ನು ಮುಂದುವರಿಯುತ್ತೇವೆ ಎಂದು‌ ಹೇಳಿದ್ದಾರೆ.

ರೈತರ ಪ್ರತಿಭಟನೆ

ರೈತರ ಪ್ರತಿಭಟನೆ

  • Share this:
ನವದೆಹಲಿ (ಜ. 22): ರೈತರ ಪಾಲಿಗೆ ಮರಣಶಾಸನವಾಗಿ ಪರಿಣಮಿಸುವ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವ ವಿಷಯಕ್ಕೆ ಸಂಬಂಧಿಸಿದಂತೆ ರೈತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಕೇಂದ್ರ ಸರ್ಕಾರದ ನಡುವೆ ನಡೆದ 11ನೇ ಸುತ್ತಿನ ಸಭೆಯೂ ವಿಫಲವಾಗಿದೆ. 2020ರ ನವೆಂಬರ್ 26ರಿಂದ ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳೊಂದಿಗೆ ಈವರೆಗೆ ಕೇಂದ್ರ ಸರ್ಕಾರ 11 ಸುತ್ತು ಸಭೆ ನಡೆಸಿದೆ. ರೈತರು ತಮ್ಮ ಪಾಲಿಗೆ ಮಾರಕವಾಗಿ ಪರಿಣಮಿಸುವ ಇತ್ತೀಚೆಗೆ ಕೇಂದ್ರ ಸರ್ಕಾರ ತಂದಿರುವ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಎಂದು ಪಟ್ಟು ಹಿಡಿದಿದ್ದಾರೆ. ಕೇಂದ್ರ ಸರ್ಕಾರ ಕಾನೂನುಗಳನ್ನು ಹಿಂಪಡೆಯದೆ ಹಠಮಾರಿತನ ಪ್ರದರ್ಶಿಸುತ್ತಿದೆ. ಪರಿಣಾಮವಾಗಿ 11ನೇ ಸಭೆಯೂ ವಿಫಲವಾಗಿದೆ.

ರೈತರು ಕೊರೆಯುವ ಚಳಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ, 60ಕ್ಕೂ‌ ಹೆಚ್ಚು ರೈತರು ಪ್ರತಿಭಟನಾ ಸ್ಥಳದಲ್ಲಿ ಮೃತಪಟ್ಟಿದ್ದರೂ ಕೇಂದ್ರ ಸರ್ಕಾರ ಸಂವೇದನೆ ಇಲ್ಲದೆ ವರ್ತಿಸುತ್ತಿರುವುದರಿಂದ ರೈತರು ತಮ್ಮ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಜನವರಿ 26ರಂದು ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ರೈತರು ವಿಶೇಷವಾಗಿ ರೈತ ಮಹಿಳೆಯರು ಟ್ರ್ಯಾಕ್ಟರ್ ಮೆರವಣಿಗೆ ಮಾಡಲು ನಿಶ್ವಯಿಸಿದ್ದಾರೆ.
ಜನವರಿ 20ರಂದು ನಡೆದ 10ನೇ ಸುತ್ತಿನ‌ ಸಭೆಯಲ್ಲಿ ವಿವಾದಾತ್ಮಕ ಮೂರು ಕೃಷಿ ಕಾನೂನುಗಳನ್ನು ಒಂದೂವರೆ ವರ್ಷದವರೆಗೆ ತಡೆಹಿಡಿಯುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಈ ಬಗ್ಗೆ ಸರ್ವೋಚ್ಛ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಲು ಸಿದ್ದ ಎಂದು ಕೂಡ ಹೇಳಿತ್ತು. ಕೇಂದ್ರ ಸರ್ಕಾರದ ಈ ಪ್ರಸ್ತಾವನೆಯನ್ನು ಒಪ್ಪಬೇಕೇ? ಬೇಡವೇ ಎಂಬ ಬಗ್ಗೆ ಜನವರಿ 21ರಂದು ಪ್ರತಿಭಟನೆ ನಡೆಯುತ್ತಿರುವ ಗಡಿಯಲ್ಲಿ ಸಭೆ ನಡೆಸಿದ ರೈತ ಸಂಘಟನೆಗಳ ಮುಖಂಡರು ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ನಿರಾಕರಿಸಿ 'ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರ ಹಿಂಪಡೆಯುವವರೆಗೆ ಯಾವ ರೀತಿಯಲ್ಲೂ ರಾಜಿಯಾಗಬಾರದು, ಮಣಿಯಬಾರದು' ಎಂದು ನಿರ್ಧರಿಸಿದ್ದಾರೆ.

ಇಂದು ನಡೆದ ಸಭೆಯಲ್ಲಿ 18 ತಿಂಗಳ ಕಾಲ ಕೃಷಿ ಕಾನೂನುಗಳನ್ನು ತಡೆಹಿಡಿಯುವ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ಒಪ್ಪಿಕೊಳ್ಳುವಂತೆ ಕೇಂದ್ರ ಸಚಿವರು ಒತ್ತಾಯಿಸಿದರು. ಆದರೆ ಇದನ್ನು ಸ್ಪಷ್ಟವಾಗಿ ನಿರಾಕರಿಸಿದ ರೈತ ಸಂಘಟನೆಗಳ ಮುಖಂಡರು 'ಮೂರು ಕಾನೂನುಗಳನ್ನೂ ಶಾಶ್ವತವಾಗಿ ರದ್ದು ಮಾಡಿ, ಬೇರೆ ಯಾವುದೇ ಪ್ರಸ್ತಾಪವನ್ನು ನಾವು ಒಪ್ಪುವುದಿಲ್ಲ' ಎಂದು ಖಡಾಖಂಡಿತವಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಇದಲ್ಲದೆ ಇಂದಿನ ಸಭೆಗೆ ರೈತ ಸಂಘಟನೆಗಳ ಮುಖಂಡರು ಆಗಮಿಸಿದ ಬಳಿಕ ಮೂರೂವರೆ ಗಂಟೆ ತಡವಾಗಿ ಕೇಂದ್ರ ಸಚಿವರು ಆಗಮಿಸಿದ್ದಾರೆ. ರೈತರನ್ನು ಮೂರೂವರೆ ಗಂಟೆ ಕಾಯಿಸಿದ ಕೇಂದ್ರ ಸಚಿವರ ನಡೆ ಬಗ್ಗೆಯೂ ಖಂಡಿಸಿರುವ ರೈತ ಮುಖಂಡರು 'ಇದು ರೈತರಿಗೆ ಮಾಡಿದ ಅವಮಾನ' ಎಂದು ಹೇಳಿದ್ದಾರೆ.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಎಸ್.ಎಸ್. ಪಂಧರ್‌, 'ಕೇಂದ್ರ ಸಚಿವರು 18 ತಿಂಗಳ ಕಾಲ ಕೃಷಿ ಕಾನೂನುಗಳನ್ನು ತಡೆಹಿಡಿಯುವ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಿದರು.‌ ಸಭೆಗೆ ಮೂರೂವರೆ ಗಂಟೆ ತಡವಾಗಿ ಬಂದಿದ್ದೂ ಅಲ್ಲದೆ ಹಳೆಯ ಪ್ರಸ್ತಾಪಗಳನ್ನೇ ಮತ್ತೊಮ್ಮೆ ಮುಂದಿಟ್ಟು‌ ಸಭೆಯನ್ನು ತರಾತುರಿಯಲ್ಲಿ ಮುಗಿಸಲು ಪ್ರಯತ್ನಿಸಿದರು. ಕೇಂದ್ರ ಸಚಿವರ ಈ ವರ್ತನೆಯ ಬಗ್ಗೆ ನಾವು ವಿರೋಧ ವ್ಯಕ್ತಪಡಿಸಿದ್ದೇವೆ. ಜೊತೆಗೆ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ಒಪ್ಪಲಿಲ್ಲ. ಕೇಂದ್ರ ಸರ್ಕಾರ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವವರೆಗೆ ಶಾಂತಿಯುತವಾಗಿ ಪ್ರತಿಭಟನೆಯನ್ನು ಮುಂದುವರಿಯುತ್ತೇವೆ ಎಂದು‌ ಹೇಳಿದ್ದಾರೆ.

ಇದನ್ನು ಓದಿ: Union Budget 2021: ಬಜೆಟ್ ಪ್ರತಿ ಮುದ್ರಣ ಕಾರ್ಯ ಆರಂಭಕ್ಕೂ ಮುನ್ನ ಸಿಬ್ಬಂದಿಗೆ ನಾಳೆ ಹಲ್ವಾ ಸಮಾರಂಭ

ಭಾರತೀಯ ಕಿಸಾನ್ ಯೂನಿಯನ್‌ನ ವಕ್ತಾರ ರಾಕೇಶ್ ಟಿಕಾಯತ್ ಮಾತನಾಡಿ 'ಈಗಾಗಲೇ 11 ಸುತ್ತು ಸಭೆ ನಡೆಸಿರುವುದರಿಂದ ಕೇಂದ್ರ ಸರ್ಕಾರದ ಪ್ರಸ್ತಾಪಗಳನ್ನು ರೈತ ಸಂಘಟನೆಗಳ ನಾಯಕರು ಒಪ್ಪಿಕೊಳ್ಳುವುದಾದರೆ ಮಾತ್ರ ಮತ್ತೊಂದು ಸುತ್ತಿನ ಸಭೆ ಕರೆಯಲಾಗುವುದು ಎಂದು ಕೇಂದ್ರ ಸಚಿವರು ಪರೋಕ್ಷವಾಗಿ ಒತ್ತಾಯ ಹೇರಲು ಯತ್ನಿಸಿದರು. ಅದನ್ನೂ ಕೂಡ ನಾವು ಒಪ್ಪಿಕೊಂಡಿಲ್ಲ. ನಾವು ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ ಮತ್ತು ಈಗಾ ನಿಗಧಿಯಾಗಿರುವಂತೆ ಜನವರಿ 26 ರಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ಮೆರವಣಿಗೆಯನ್ನು ನಡೆಸುತ್ತೇವೆ' ಎಂದು ತಿಳಿಸಿದ್ದಾರೆ.

ಸಭೆಯ ಬಳಿಕ ಮಾತನಾಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್, 'ಸಭೆಗೆ ಬಂದಿದ್ದ ರೈತ ಸಂಘಟನೆಗಳ ಪ್ರತಿನಿಧಿಗಳಲ್ಲಿ ರೈತರ ಬಗ್ಗೆ ಕಾಳಜಿ ಇಲ್ಲದ ಕಾರಣ ಮಾತುಕತೆ ಸಫಲವಾಗುತ್ತಿಲ್ಲ. ಕೇಂದ್ರ ಸರ್ಕಾರವು ಪರ್ಯಾಯ ಮಾರ್ಗಗಳನ್ನು ಹೇಳಿದರೂ ರೈತ ನಾಯಕರು ಕೃಷಿ ಕಾನೂನುಗಳನ್ನು ರದ್ದು ಮಾಡುವಂತೆಯೇ ಒತ್ತಾಯಿಸುತ್ತಿದ್ದಾರೆ' ಎಂದು ತಿಳಿಸಿದ್ದಾರೆ.
Published by:HR Ramesh
First published: