HOME » NEWS » National-international » TERRORISTS KILL PUNJABI JEWELLER AT SRINAGAR TO SCARE OFF OUTSIDERS FROM BUYING LAND SNVS

ಕಾಶ್ಮೀರದಲ್ಲಿ ಖಾಯಂ ನಿವಾಸಿ ಹಕ್ಕು ಪಡೆದ ಪಂಜಾಬಿ ವ್ಯಕ್ತಿ ಉಗ್ರರ ಗುಂಡಿಗೆ ಬಲಿ

ಜಮ್ಮು-ಕಾಶ್ಮೀರದಲ್ಲಿ ಈಗ ಹೊರಗಿನವರು ಬಂದು ಭೂಮಿ ಖರೀದಿಸಿ ಖಾಯಂ ನಿವಾಸಿಯಾಗುವ ಅವಕಾಶ ಮಾಡಿಕೊಡಲಾಗಿದೆ. ಈ ಯೋಜನೆಗೆ ಹಿನ್ನಡೆಯಾಗುವ ಉದ್ದೇಶದಿಂದ ಉಗ್ರರು ಶ್ರೀನಗರದಲ್ಲಿ ಪಂಜಾಬೀ ವ್ಯಾಪಾರಿ ಸತ್ಪಾಲ್ ಅವರನ್ನ ಗುಂಡಿಟ್ಟು ಹತ್ಯೆಗೈದಿದ್ದಾರೆ.

news18
Updated:January 2, 2021, 8:37 AM IST
ಕಾಶ್ಮೀರದಲ್ಲಿ ಖಾಯಂ ನಿವಾಸಿ ಹಕ್ಕು ಪಡೆದ ಪಂಜಾಬಿ ವ್ಯಕ್ತಿ ಉಗ್ರರ ಗುಂಡಿಗೆ ಬಲಿ
ಶ್ರೀನಗರದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಸತ್ಪಾಲ್ ನಿಶ್ಚಲ್ ಅವರ ಮೃತದೇಹ
  • News18
  • Last Updated: January 2, 2021, 8:37 AM IST
  • Share this:
ಶ್ರೀನಗರ್: ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿ ಈ ಕಣಿವೆ ರಾಜ್ಯವನ್ನು ಮುಕ್ತಗೊಳಿಸುವ ಕೇಂದ್ರ ಸರ್ಕಾರದ ಉದ್ದೇಶದಂತೆ ಹೊರಗಿನವರು ಇಲ್ಲಿ ಆಸ್ತಿ ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ. ಕೆಲವರು ಈಗಾಗಲೇ ಇಲ್ಲಿ ಆಸ್ತಿ ಖರೀದಿಸಿ ಖಾಯಂ ನಿವಾಸಿಗಳಾಗಿದ್ದಾರೆ. ಇದೇ ವೇಳೆ, ನಿನ್ನೆ 65 ವರ್ಷದ ಸತ್ಪಾಲ್ ನಿಶ್ಚಲ್ ಅವರು ಉಗ್ರರ ಗುಂಡೇಟಿಗೆ ಬಲಿಯಾಗಿದ ಘಟನೆ ನಡೆದಿದೆ. ವಿಚಿತ್ರವೆಂದರೆ ಸತ್ಪಾಲ್ ಅವರು ಹೊಸದಾಗಿ ಬಂದು ಇಲ್ಲಿ ಆಸ್ತಿ ಖರೀದಿಸಿಲ್ಲ. ನಾಲ್ಕು ದಶಕಗಳಿಂದ ಇಲ್ಲಿ ನೆಲಸಿದ ಇವರನ್ನ ಉಗ್ರಗಾಮಿಗಳು ಗುರುವಾರ ರಾತ್ರಿ ಗುಂಡಿಟ್ಟು ಹತ್ಯೆಗೈದಿದ್ದಾರೆ. ಶ್ರೀನಗರದ ಸರೈಬಾಲಾ ಮತ್ತು ಹರಿಸಿಂಗ್ ಹೈ ಸ್ಟ್ರೀಟ್ ಮಾರುಕಟ್ಟೆ ಪ್ರದೇಶಗಳಲ್ಲಿ ಅನೇಕ ಕಾಶ್ಮೀರೇತರ ವ್ಯಾಪಾರಸ್ಥರು ವ್ಯಾಪಾರ ಮಾಡುತ್ತಿದ್ದಾರೆ. ಹೊಸ ಕಾನೂನಿನ ಪ್ರಕಾರ ಇವರಿಗೆ ಕಾಶ್ಮೀರದಲ್ಲಿ ಖಾಯಂ ನಿವಾಸಿಯಾಗುವ ಅವಕಾಶ ಇದೆ. ಇದನ್ನು ಸ್ಥಳೀಯ ಕಾಶ್ಮೀರಿಗಳ ಕೆಲ ಗುಂಪುಗಳು ಬಲವಾಗಿ ವಿರೋಧಿಸುತ್ತಿವೆ. ಸತ್ಪಾಲ್ ನಿಶ್ಚಲ್ ಅವರನ್ನ ಹತ್ಯೆಗೈಯ್ಯುವ ಮೂಲಕ ಕಾಶ್ಮೀರೇತರರು ಕಣಿವೆ ರಾಜ್ಯದಲ್ಲಿ ನೆಲಯೂರದಂತೆ ಭಯ ಹುಟ್ಟಿಸುವ ಉದ್ದೇಶ ಅಡಗಿರಬಹುದು ಎಂದು ಶಂಕಿಸಲಾಗಿದೆ.

65 ವರ್ಷದ ಸತ್ಪಾಲ್ ನಿಶ್ಚಲ್ ಅವರು ಚಿನ್ನದ ವ್ಯಾಪಾರಿ. ಪಂಜಾಬ್ ಮೂಲಕ ಇವರು ನಾಲ್ಕು ದಶಕಗಳ ಹಿಂದೆ ತಮ್ಮ ತಂದೆ ಜೊತೆ ಬಂದು ಶ್ರೀನಗರದಲ್ಲಿ ನೆಲಸಿದ್ದರು. 17 ವರ್ಷ ಕಾಲ ಸರೈಬಾಲಾ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿದ್ದರು. ಅಕ್ಕಸಾಲಿಗನಾಗಿ (Goldsmith) ಕೆಲಸ ಮಾಡಿಕೊಂಡು ಕ್ಷಿಪ್ರ ಗತಿಯಲ್ಲಿ ಬೆಳವಣಿಗೆ ಸಾಧಿಸಿದರು. ಪ್ರತಿಷ್ಠಿತ ಇಂದಿರಾ ನಗರ್ ಪ್ರದೇಶದಲ್ಲಿ ಮನೆ ಕಟ್ಟಿದ್ದ ಅವರು ಕಳೆದ 25 ವರ್ಷಗಳಿಂದ ನೆರೆಹೊರೆಯ ಮುಸ್ಲಿಮ್ ನಿವಾಸಿಗಳೊಂದಿಗೆ ಸೌಹಾರ್ದಯುತವಾಗಿ ಬದುಕಿಕೊಂಡು ಬಂದಿದ್ದರು ಎಂದು ಇಲ್ಲಿನ ಸ್ಥಳೀಯರು ಹೇಳುತ್ತಾರೆ.

ಇದನ್ನೂ ಓದಿ: ಜಿಎಸ್​ಟಿ ಜಾರಿಯಾದ ಬಳಿಕ ಇದೇ ಮೊದಲ ಬಾರಿಗೆ ದಾಖಲೆ ಪ್ರಮಾಣ ತೆರಿಗೆ ಸಂಗ್ರಹ

ಹಲವು ವರ್ಷಗಳಿಂದ ಇಲ್ಲಿ ಇದ್ದು ಯಾವುದೇ ತಿಕ್ಕಾಟಕ್ಕೆ ಎಡೆ ಮಾಡಿಕೊಡದೇ ಶಾಂತಿಯಿಂದ ಬದುಕುತ್ತಿರುವ ಇಲ್ಲಿನ ಕಾಶ್ಮೀರೇತರ ವ್ಯಾಪಾರಸ್ಥರಿಗೆ ಸತ್ಪಾಲ್ ನಿಶ್ಚಲ್ ಹತ್ಯೆ ಘಟನೆ ಆಘಾತ ತಂದಿದೆ. ಇದು ಉಗ್ರರಿಂದ ಎಚ್ಚರಿಕೆಯ ಸಂದೇಶ ಎಂದು ಭಾವಿಸಲಾಗಿದೆ.

ಸತ್ಪಾಲ್ ಇಲ್ಲಿ ಆಸ್ತಿ ಹೊಂದಿದ್ದಕ್ಕೆ ಹತ್ಯೆಯಾದಂತಿಲ್ಲ. 370ನೇ ವಿಧಿ ರದ್ದಾಗುವುದಕ್ಕೆ ಹಲವು ವರ್ಷಗಳ ಮುಂಚೆಯೇ ಅವರು ಇಲ್ಲಿ ಆಸ್ತಿ ಖರೀದಿಸಿ ಜೀವನ ನಡೆಸುತ್ತಿದ್ದರು. ಆದರೆ, ಹೊಸ ಕಾನೂನಿನ ಪ್ರಕಾರ ಖಾಯಂ ನಿವಾಸಿ ಹಕ್ಕು (Domicile) ಪಡೆದುಕೊಂಡಿದ್ದು ಸ್ಥಳೀಯ ಉಗ್ರರನ್ನು ಕೆರಳಿಸಿರಬಹುದು ಎಂದು ಶಂಕಿಸಲಾಗಿದೆ. ಸಂವಿಧಾನದಲ್ಲಿ ಈ ಮುಂಚೆ ಅಸ್ತಿತ್ವದಲ್ಲಿದ್ದ ಆರ್ಟಿಕಲ್ 370 ಪ್ರಕಾರ ಕಾಶ್ಮೀರೇತರರು ಇಲ್ಲಿ ಖಾಯಂ ನಿವಾಸಿಗಳಾಗುವಂತಿಲ್ಲ, ಸರ್ಕಾರಿ ಕೆಲಸ ಪಡೆಯುವಂತಿಲ್ಲ, ಆಸ್ತಿಪಾಸ್ತಿ ಖರೀದಿಸುವಂತಿರಲಿಲ್ಲ. ಈಗ ಕೇಂದ್ರ ಸರಕಾರ 370ನೇ ವಿಧಿ ರದ್ದುಗೊಳಿಸಿ ಎಲ್ಲರಿಗೂ ಕಾಶ್ಮೀರದಲ್ಲಿ ಆಸ್ತಿ ಖರೀದಿಸಿ ನೆಲಸುವಂತೆ ಕಾನೂನು ತಿದ್ದುಪಡಿ ಮಾಡಿದೆ. ಇದು ಸ್ಥಳೀಯ ಕಾಶ್ಮೀರಿ ಸಮುದಾಯವನ್ನ ದಮನಗೊಳಿಸುವ ಹುನ್ನಾರ ಎಂಬುದು ಇಲ್ಲಿನವರ ಆಕ್ರೋಶವಾಗಿದೆ.

ಇದೇ ವೇಳೆ, ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಎಂಬ ಸಂಘಟನೆಯೊಂದು ನಿಶ್ಚಲ್ ಹತ್ಯೆಯ ಹೊಣೆ ಹೊತ್ತುಕೊಂಡಿದೆ. “ಈತ ಹಿಂದುತ್ವ ಶಕ್ತಿಗಳ ಪಿತೂರಿ ಪ್ರಕಾರ ನಡೆದುಕೊಂಡಿದ್ದ” ಎಂದು ಈ ಸಂಘಟನೆ ಹೇಳಿದೆ.

ಇದನ್ನೂ ಓದಿ: Nostradamus Predictions: ನಾಸ್ಟ್ರಾಡಾಮಸ್ ಪ್ರಕಾರ 2021ರಲ್ಲಿ ಜಗತ್ತಿನಲ್ಲಿ ಏನಾಗಲಿದೆ?: ಇಲ್ಲಿದೆ ಮಾಹಿತಿಕಾಶ್ಮೀರದಲ್ಲಿ ನೆಲಸಬೇಕೆಂಬ ಉದ್ದೇಶದಿಂದ ಬಂದವರನ್ನ ಕೊಂದುಹಾಕುತ್ತೇವೆ ಎಂದು ಟಿಆರ್​ಎಫ್ ಸಂಘಟನೆ ಎಚ್ಚರಿಕೆ ನೀಡುತ್ತಲೇ ಬಂದಿತ್ತು. ಖಾಯಂ ನಿವಾಸಿಯ ಹಕ್ಕು ಪಡೆದ ಕಾರಣಕ್ಕೆ ನಿಶ್ಚಲ್ ಅವರನ್ನ ಹತ್ಯೆಗೈದು ಇತರ ಕಾಶ್ಮೀರೇತರರಿಗೆ ಕಟು ಎಚ್ಚರಿಕೆಯ ಸಂದೇಶ ರವಾನೆಯಾಗಿದೆ.

ಇನ್ನು, ಒಮರ್ ಅಬ್ದುಲ್ಲಾ, ಮೆಹಬೂಬ ಮುಫ್ತಿ ಸೇರಿದಂತೆ ಕಾಶ್ಮೀರದ ರಾಜಕಾರಣಿಗಳು ನಿಶ್ಚಲ್ ಹತ್ಯೆಯನ್ನು ಬಲವಾಗಿ ಖಂಡಿಸಿದ್ಧಾರೆ. ಇಂಥ ಹಿಂಸಾಚಾರ ಅಸಮರ್ಥನೀಯ. ನಾಗರಿಕ ಸಮಾಜದಲ್ಲಿ ಇಂಥದಕ್ಕೆ ಅವಕಾಶ ಇಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ.

ವರದಿ: ಮುಫ್ತಿ ಇಸ್ಲಾ, CNN-News18
Published by: Vijayasarthy SN
First published: January 2, 2021, 8:37 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories