ಕಾಶ್ಮೀರ ಕಣಿವೆಯಲ್ಲಿ ಮತ್ತೆ ಗುಂಡಿನ ಸದ್ದು; ಪುಲ್ವಾಮಾ ಬಳಿ ಉಗ್ರರನ್ನು ಸುತ್ತುವರೆದ ಸೇನಾ ಪಡೆ

ಭಾರತೀಯ ಸೇನಾ ಸಿಬ್ಬಂದಿ ಹಾಗೂ ಪೊಲೀಸರು ಈಗಾಗಲೇ 3ರಿಂದ 4 ಉಗ್ರರನ್ನು ಸುತ್ತುವರೆದಿದ್ದಾರೆ. ಅವರನ್ನು ಸೆರೆಹಿಡಿದ ಬಳಿಕ ಎಷ್ಟು ಜನರು ಅಲ್ಲಿ ಅಡಗಿದ್ದಾರೆಂಬ ಮಾಹಿತಿ ಸಿಗುವ ಸಾಧ್ಯತೆಗಳಿವೆ.

ಎನ್​ಕೌಂಟರ್​ಗೆ ಬೀಡುಬಿಟ್ಟಿರುವ ಸೇನಾ ವಾಹನಗಳು

ಎನ್​ಕೌಂಟರ್​ಗೆ ಬೀಡುಬಿಟ್ಟಿರುವ ಸೇನಾ ವಾಹನಗಳು

  • Share this:
ಶ್ರೀನಗರ (ಏ. 2): ಜಮ್ಮು ಕಾಶ್ಮೀರದ ಪುಲ್ವಾಮಾ ಬಳಿಯ ಕಾಕಾಪುರದಲ್ಲಿ ಭಾರತೀಯ ಭದ್ರತಾ ಪಡೆ ಸಿಬ್ಬಂದಿ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ. ಈ ಸ್ಥಳದಲ್ಲಿ ಉಗ್ರರು ಬೀಡುಬಿಟ್ಟಿರುವ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು, ಸೇನಾ ಪಡೆ ಹಾಗೂ ಸಿಆರ್​ಪಿಎಫ್​ ಸಿಬ್ಬಂದಿ ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಕಾಪುರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.

ಭದ್ರತಾ ಪಡೆಯ ಸಿಬ್ಬಂದಿಯ ಗುಂಡಿನ ಮೇಲೆ ಅನುಮಾನಾಸ್ಪದ ಉಗ್ರರ ಗುಂಪು ಗುಂಡಿನ ದಾಳಿ ನಡೆಸಿದ್ದು, ಅದಕ್ಕೆ ಪ್ರತ್ಯುತ್ತರವಾಗಿ ಸೇನಾ ಸಿಬ್ಬಂದಿ ಕೂಡ ಗುಂಡು ಹಾರಿಸಿದ್ದಾರೆ. ಕಾಕಾಪುರದ ಸುತ್ತಲೂ ಭಯೋತ್ಪಾದಕರು ಅಡಗಿರುವ ಅನುಮಾನ ವ್ಯಕ್ತವಾಗಿದ್ದು, ಭಾರತೀಯ ಸೇನೆಯ ಕಾರ್ಯಾಚರಣೆಗೆ ಪೊಲೀಸರು ಹಾಗೂ ಸಿಆರ್​ಪಿಎಫ್ ಸಿಬ್ಬಂದಿ ಕೂಡ ಜೊತೆಯಾಗಿದ್ದಾರೆ.

ನಿನ್ನೆ ರಾತ್ರಿಯಿಂದ ಸೇನಾಪಡೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು, ಇನ್ನೂ ಮುಂದುವರೆದಿದೆ. ಮೂಲಗಳ ಪ್ರಕಾರ, ಭಾರತೀಯ ಸೇನಾ ಸಿಬ್ಬಂದಿ ಹಾಗೂ ಪೊಲೀಸರು ಈಗಾಗಲೇ 3ರಿಂದ 4 ಉಗ್ರರನ್ನು ಸುತ್ತುವರೆದಿದ್ದಾರೆ. ಅವರನ್ನು ಸೆರೆಹಿಡಿದ ಬಳಿಕ ಎಷ್ಟು ಜನರು ಅಲ್ಲಿ ಅಡಗಿದ್ದಾರೆಂಬ ಮಾಹಿತಿ ಸಿಗುವ ಸಾಧ್ಯತೆಗಳಿವೆ.ಕಾಕಾಪುರದಲ್ಲಿ ಸೇನಾ ಪಡೆಯಿಂದ ಸುತ್ತುವರೆಯಲ್ಪಟ್ಟಿರುವ ಇಬ್ಬರು ಉಗ್ರರು ಈ ಹಿಂದೆ ನೌಗಾಮ್​ನಲ್ಲಿ ಬಿಜೆಪಿ ನಾಯಕರೊಬ್ಬರ ಮನೆಯನ್ನು ಉಗ್ರರು ಗುರಿಯಾಗಿಸಿಕೊಂಡು ದಾಳಿ ನಡೆಸಲು ಮುಂದಾದಾಗ ಅಲ್ಲಿ ಭದ್ರತೆಗಿದ್ದ ಕಾಶ್ಮೀರದ ಪೊಲೀಸರನ್ನು ಹತ್ಯೆಗೈದಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ವರ್ಷ ಉಗ್ರರ ಹುಟ್ಟಡಗಿಸಲು ಕಾಶ್ಮೀರದ ಗಡಿಯಲ್ಲಿ ಸಾಲು ಸಾಲು ಗುಂಡಿನ ದಾಳಿಗಳು ನಡೆಯುತ್ತಲೇ ಇವೆ. ಕಾಶ್ಮೀರದ ಕಣಿವೆಯಲ್ಲಿ ಈ ವರ್ಷ 20ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಲಾಗಿದೆ. ಪುಲ್ವಾಮಾ ಹಾಗೂ ಸೋಫಿಯಾನ್​ನಲ್ಲೇ ಅತಿಹೆಚ್ಚು ಕಾರ್ಯಾಚರಣೆ ನಡೆದಿದೆ.
Published by:Sushma Chakre
First published: