ಶ್ರೀನಗರ: ಭಾನುವಾರ ಪುಲ್ವಾಮದಲ್ಲಿ (Pulwama) ಕಾಶ್ಮೀರಿ ಪಂಡಿತನ (Kashmiri Pandit) ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಭಯೋತ್ಪಾದಕನನ್ನು (Terrorist) ಭದ್ರತಾ ಪಡೆಗಳು (Security Force) ಮಂಗಳವಾರ ಎನ್ಕೌಂಟರ್ (Encounter) ಮಾಡಿ ಹತ್ಯೆ ಮಾಡಿವೆ. ಮಂಗಳವಾರ ಮುಂಜಾನೆ ಅವಂತಿಪೋರಾ ಎಂಬಲ್ಲಿ ಹತ್ಯೆ ಮಾಡಲಾಗಿರುವ ಭಯೋತ್ಪಾದಕನನ್ನು ಅಕಿಬ್ ಮುಷ್ತಾಕ್ ಭಟ್ ಎಂದು ಗುರುತಿಸಲಾಗಿದೆ. ಈತ ಹಿಜ್ಬುಲ್ ಮುಜಾಹಿದ್ದೀನ್ ಸೇರಿದಂತೆ ಹಲವು ಉಗ್ರ ಸಂಘಟನೆಗಳ ಜೊತೆ ಗುರುತಿಸಿಕೊಂಡಿದ್ದ ಎಂದು ತಿಳಿದುಬಂದಿದೆ.
ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಉಗ್ರ
ಪೊಲೀಸರ ಮಾಹಿತಿ ಪ್ರಕಾರ, ಹತ್ಯೆಯಾಗಿರುವ ಭಯೋತ್ಪಾದಕ ಆರಂಭದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಗೆ ಕೆಲಸ ಮಾಡಿದ್ದ, ನಂತರ ಲಷ್ಕರ್-ಎ-ತೊಯ್ಬಾದ ಉಪ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ಗೆ ಸೇರಿದ್ದ. ಭಾನುವಾರ ಬ್ಯಾಂಕ್ ಗಾರ್ಡ್ ಸಂಜಯ್ ಶರ್ಮಾನನ್ನು ಅಕಿಬ್ ಮುಷ್ತಾಕ್ ಭಟ್ ಹತ್ಯೆಗೈದಿದ್ದ ಎಂದು ಕಾಶ್ಮೀರ ಎಡಿಜಿಪಿ ಹೇಳಿದ್ದಾರೆ.
ಉಗ್ರರು ಪುಲ್ವಾಮಾ ಜಿಲ್ಲೆಯ ಅವಂತಿಪೋರಾದಲ್ಲಿ ಅಡಗಿರುವ ಬಗ್ಗೆ ಮಾಹಿತಿ ತಿಳಿದುಕೊಂಡ ಭದ್ರತಾ ಪಡೆಗಳು ಮಧ್ಯರಾತ್ರಿ 1:30ರ ವೇಳೆ ದಾಳಿ ಉಗ್ರನನ್ನು ಹತ್ಯೆ ಮಾಡಿದ್ದಾರೆ. ಈ ವೇಳೆ ಇಬ್ಬರು ಸೇನಾ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಇದೆಯಾದರೂ ಇದರ ಬಗ್ಗೆ ಇನ್ನು ಅಧಿಕೃತ ಮಾಹಿತಿ ತಿಳಿದುಬಂದಿಲ್ಲ.
ಇದನ್ನೂ ಓದಿ: Crime News: ಸಂಸದ ಅಸಾದುದ್ದೀನ್ ಒವೈಸಿ ಸಂಬಂಧಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ!
ಸ್ವಲ್ಪ ಸಮಯದ ನಂತರ ಆವಂತಿಪೋರಾ ಎನ್‌ಕೌಂಟರ್‌ನಲ್ಲಿ ಒಬ್ಬ ಭಯೋತ್ಪಾದಕನನ್ನು ಕೊಲ್ಲಲಾಗಿದೆ ಎಂದು ಪೊಲೀಸರು ಅಪ್ಡೇಟ್ ನೀಡಿದ್ದರು. ಆದರೆ ಅವನ ದೇಹವನ್ನು ಇನ್ನೂ ಪಡೆಯುವುದಕ್ಕೆ ಆಗಿಲ್ಲ, ಭದ್ರತಾ ಪಡೆಗಳು ಉಗ್ರನಿದ್ದ ಪ್ರದೇಶವನ್ನು ಸಮೀಪಿಸುತ್ತಿದ್ದಂತೆ, ಅಡಗಿಕೊಂಡಿದ್ದ ಭಯೋತ್ಪಾದಕರು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಯೋಧರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರುಕಟ್ಟೆಗೆ ಹೋಗುವಾಗ ಶರ್ಮಾ ಹತ್ಯೆ
ಎರಡು ದಿನಗಳ ಹಿಂದೆ, ಬ್ಯಾಂಕ್ ಗಾರ್ಡ್ ಸಂಜಯ್ ಶರ್ಮಾ ಅವರು ಸ್ಥಳೀಯ ಮಾರುಕಟ್ಟೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಪುಲ್ವಾಮಾದ ಅಚಾನ್‌ನಲ್ಲಿ ಭಯೋತ್ಪಾದಕರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ದಾರಿಹೋಕರು ಆತನನ್ನು ಆಸ್ಪತ್ರೆಗೆ ಸೇರಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು.
40 ವರ್ಷದ ಶರ್ಮಾರ ಪಾರ್ಥಿವ ಶರೀರವನ್ನು ಅವರ ಕುಟುಂಬ ಸದಸ್ಯರು ಹಾಗೂ ಸ್ಥಳೀಯರ ಉಪಸ್ಥಿತಿಯ ನಡುವೆ ಹಿಂದೂ ವಿಧಿ ವಿಧಾನಗಳ ಮೂಲಕ ನೆರವೇರಿಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಸ್ಲಿಂ ನೆರೆಹೊರೆಯವರು ಅವರ ಕುಟುಂಬ ಸದಸ್ಯರಿಗೆ ಅಂತಿಮ ವಿಧಿಗಳನ್ನು ನೆರವೇರಿಸಲು ಸಹಾಯ ಮಾಡಿದರು.
ಅಂತ್ಯಸಂಸ್ಕಾರದಲ್ಲಿ ಮುಸ್ಲಿಮರು ಭಾಗಿ
ಭಯೋತ್ಪಾದಕರಿಂದ ಹತ್ಯೆಗೀಡಾದ ಕಾಶ್ಮೀರಿ ಪಂಡಿತ್ ಬ್ಯಾಂಕ್ ಗಾರ್ಡ್ ಸಂಜಯ್ ಕುಮಾರ್ ಶರ್ಮಾ ಅವರ ಅಂತ್ಯಕ್ರಿಯೆಯಲ್ಲಿ ನೆರೆಹೊರೆಯ ಮುಸ್ಲಿಮರು ಭಾಗವಹಿಸಿ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಶರ್ಮಾ ಅವರದು ಅಚಾನ್ ಗ್ರಾಮದಲ್ಲಿದ್ದ ಏಕೈಕ ಪಂಡಿತ್ ಕುಟುಂಬವಾಗಿತ್ತು. ಹಾಗಾಗಿ ಅವರ ಮುಸ್ಲಿಮ್ ಸ್ನೇಹಿತರು ಮತ್ತು ಸ್ಥಳೀಯರು ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ತಮ್ಮಿಂದಾಗುವ ಎಲ್ಲಾ ರೀತಿಯ ನೆರವು ನೀಡಿದ್ದಾರೆ.
ಸಂಜಯ್ ನಮ್ಮಲ್ಲಿ ಒಬ್ಬರಾಗಿದ್ದರು, ನಾವು ಅವರನ್ನು ಪಂಡಿತ ಎಂದು ಎಂದಿಗೂ ಭಾವಿಸಿರಲಿಲ್ಲ ಎಂದು ಶವಪೆಟ್ಟಿಗೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಶವಸಂಸ್ಕಾರಕ್ಕೆ ಮರದ ವ್ಯವಸ್ಥೆ ಮಾಡಿದ ಮುದಾಸಿರ್ ಅಹ್ಮದ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ