Afghanistan Govt: ಸರ್ಕಾರ ರಚಿಸಿದ ತಾಲಿಬಾನ್, FBI Most Wanted ಉಗ್ರ ಇಲ್ಲಿ ಮಂತ್ರಿ!

Taliban Government Ministers: ಸದ್ಯ ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆ ಮಾಡಿರುವ ತಾಲಿಬಾನ್ ಸಿರಾಜುದ್ದೀನ್ ಹಕ್ಕಾನಿಗೆ ಆಂತರಿಕ ಸಚಿವ ಸ್ಥಾನ ನೀಡಿದೆ. ಆದರೆ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಸಿರಾಜುದ್ದೀನ್ ಹಕ್ಕಾನಿಯ ಬಂಧನಕ್ಕೆ ನೇರವಾಗಿ ಕಾರಣವಾಗುವ ಮಾಹಿತಿಗಾಗಿ 5 ಮಿಲಿಯನ್‌ ಅಮೆರಿಕ ಡಾಲರ್‌ವರೆಗೆ ಬಹುಮಾನ ನೀಡುತ್ತಿದೆ.

ಅಫ್ಘನ್ ಸರ್ಕಾರದ ಪ್ರಮುಖರು

ಅಫ್ಘನ್ ಸರ್ಕಾರದ ಪ್ರಮುಖರು

  • Share this:

Taliban Government in Afghanistan: ಹಲವು ದಿನಗಳ ಹಿಂದೆಯೇ ಅಫ್ಘಾನಿಸ್ತಾನವನ್ನು ತಾಲಿಬಾನ್‌ ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರೂ, ಸರ್ಕಾರವನ್ನು ರಚಿಸಿರಲಿಲ್ಲ. ಅಮೆರಿಕ ಸೇನೆ ಸಂಪೂರ್ಣವಾಗಿ ದೇಶವನ್ನು ತೊರೆದ ಕೆಲವೇ ದಿನಗಳ ನಂತರ ಈಗ ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಎರಡನೇ ಬಾರಿಗೆ ಆಡಳಿತ ನಡೆಸುವ ಘೋಷಣೆ ಮಾಡಿದ್ದು, ಕ್ಯಾಬಿನೆಟ್‌ ಮಂತ್ರಿಗಳನ್ನೂ (Cabinet) ಘೋಷಣೆ ಮಾಡಿದೆ. ನಮ್ಮ ಈ ಸರ್ಕಾರ ಕಳೆದ ಬಾರಿಯಂತೆ ಇರುವುದಿಲ್ಲ. ನಾವು ಬದಲಾಗಿದ್ದೇವೆ. ಮಹಿಳೆಯರಿಗೆ ಮತ್ತು ಸಾರ್ವಜನಿಕರಿಗೆ ಸ್ವಾತಂತ್ರ್ಯ (Freedom for Women) ಕೊಡಲಿದ್ದೇವೆ ಎಂದು ಹೇಳಿಕೊಂಡೇ ಬಂದ ತಾಲಿಬಾನ್‌ ಉಗ್ರ ಸಂಘಟನೆಯ ನೂತನ ಸರ್ಕಾರ ಹೇಗಿರಲಿದೆ ಎಂಬ ಕುತೂಹಲ ಹಲವರಲ್ಲಿರುತ್ತೆ. ಬನ್ನಿ, ಈ ಹೊಸ ಸರ್ಕಾರದ ಕ್ಯಾಬಿನೆಟ್‌ ಮಂತ್ರಿಗಳ ವಿವರ ನೋಡೋಣ..


ತಾಲಿಬಾನ್ ಮುಲ್ಲಾ ಮೊಹಮ್ಮದ್ ಹಸನ್ ಅಖುಂಡ್‌ರನ್ನು ನೂತನ ಅಫ್ಘಾನ್ ಸರ್ಕಾರದ ಪ್ರಧಾನಿಯಾಗಿ ನೇಮಕವಾಗಿದ್ದು, ಮುಲ್ಲಾ ಅಬ್ದುಲ್ ಘನಿ ಬರದಾರ್ ಮತ್ತು ಮುಲ್ಲಾ ಅಬ್ದುಸ್ ಸಲಾಮ್ ಉಪ ಪ್ರಧಾನಿಯಾಗಿ ನೇಮಕವಾಗಿದ್ದಾರೆ.


ಮುಲ್ಲಾ ಹಸನ್ ಪ್ರಸ್ತುತ ತಾಲಿಬಾನ್‌ನ ಪ್ರಬಲ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಸ್ಥೆಯ ಮುಖ್ಯಸ್ಥರೂ ಆಗಿದ್ದಾರೆ. ರೆಹಬಾರಿ ಶೂರಾ ಅಥವಾ ನಾಯಕತ್ವ ಮಂಡಳಿ ಎಂಬ ಸಂಸ್ಥೆ, ಸರ್ಕಾರದ ಕ್ಯಾಬಿನೆಟ್‌ನಂತೆ ಕಾರ್ಯನಿರ್ವಹಿಸುತ್ತದೆ, ಇದು ಉನ್ನತ ನಾಯಕನ ಅನುಮೋದನೆಗೆ ಒಳಪಟ್ಟು ಎಲ್ಲಾ ಗುಂಪಿನ ವ್ಯವಹಾರಗಳನ್ನು ನಡೆಸುತ್ತಿದೆ.


ತಾಲಿಬಾನ್‌ನ ಸರ್ವೋಚ್ಚ ನಾಯಕ, ಮೌಲ್ವಿ ಹೈಬತುಲ್ಲಾ ಅಖುಂಡ್ಜಾದಾ ಸರ್ಕಾರ ಮುನ್ನಡೆಸಲು ಮುಲ್ಲಾ ಹಸನ್ ಹೆಸರನ್ನು ಪ್ರಸ್ತಾಪಿಸಿದರು. ಹಾಗೂ, ಸರ್ಕಾರ ರಚನೆಗೆ ಸಂಬಂಧಿಸಿದಂತೆ ತಾಲಿಬಾನ್ ಶ್ರೇಣಿಯೊಳಗಿನ ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎಂದು ಹೇಳಿದರು.


ಯಾರೆಲ್ಲಾ ಪ್ರಮುಖ ನಾಯಕರು?

ಮುಲ್ಲಾ ಹಸನ್ ತಾಲಿಬಾನ್‌ಗಳ ಜನ್ಮಸ್ಥಳವಾದ ಕಂದಹಾರ್‌ಗೆ ಸೇರಿದವರು ಮತ್ತು ಸಶಸ್ತ್ರ ಚಳುವಳಿಯ ಸ್ಥಾಪಕರಲ್ಲಿ ಒಬ್ಬರಾಗಿದ್ದರು. ಅವರು ರೆಹಬಾರಿ ಶೂರಾದ ಮುಖ್ಯಸ್ಥರಾಗಿ 20 ವರ್ಷಗಳ ಕಾಲ ಕೆಲಸ ಮಾಡಿದ್ದು, ಮತ್ತು ಮೌಲ್ವಿ ಹೈಬತುಲ್ಲಾ ಅಖುಂಡ್ಜಾದಾರ ಹತ್ತಿರದಲ್ಲೇ ಇದ್ದರು. ಅವರು 1996 ರಿಂದ 2001ರವರೆಗೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರದ ಅವಧಿಯಲ್ಲಿ ವಿದೇಶಾಂಗ ಸಚಿವರಾಗಿ ಮತ್ತು ಉಪ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.


ಆದರೆ, ಅಖುಂಡ್ಜಾದಾ ಈ ನೂತನ ಅಫ್ಘಾನಿಸ್ತಾನ ಸರ್ಕಾರದಲ್ಲಿ ಯಾವ ಪಾತ್ರ ವಹಿಸುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ. ಪಾಶ್ಚಿಮಾತ್ಯ ಬೆಂಬಲಿತ ಸರ್ಕಾರ ಪತನ ಮತ್ತು ಕಾಬೂಲ್ ಅನ್ನು ತಾಲಿಬಾನ್ ಕಳೆದ ತಿಂಗಳು ವಶಪಡಿಸಿಕೊಂಡ ನಂತರ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ ಅಥವಾ ಭಾಷಣವನ್ನೂ ಮಾಡಿರಲಿಲ್ಲ.


ಈ ಮಧ್ಯೆ, ತಾಲಿಬಾನ್ ಸಂಸ್ಥಾಪಕ ಮುಲ್ಲಾ ಮೊಹಮ್ಮದ್ ಒಮರ್ ಪುತ್ರ ಮುಲ್ಲಾ ಯಾಕೂಬ್ ನೂತನ ಸರ್ಕಾರದ ರಕ್ಷಣಾ ಸಚಿವರಾಗಲಿದ್ದಾರೆ. ಯಾಕೂಬ್ ಮುಲ್ಲಾ ಹೈಬತುಲ್ಲಾರ ವಿದ್ಯಾರ್ಥಿಯಾಗಿದ್ದು, ಅವರನ್ನು ಮೊದಲು ತಾಲಿಬಾನ್‌ನ ಪ್ರಬಲ ಮಿಲಿಟರಿ ಆಯೋಗದ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು.


ಹಕ್ಕಾನಿ ಹಿಡಿತ

ಕುಖ್ಯಾತ ಹಕ್ಕಾನಿ ನೆಟ್ವರ್ಕ್‌ನ ಮುಖ್ಯಸ್ಥ ಮತ್ತು ಪ್ರಸಿದ್ಧ ಸೋವಿಯತ್ ವಿರೋಧಿ ಸೇನಾಧಿಕಾರಿ ಜಲಾಲುದ್ದೀನ್ ಹಕ್ಕಾನಿಯವರ ಪುತ್ರ ಸಿರಾಜುದ್ದೀನ್ ಹಕ್ಕಾನಿ ಆಂತರಿಕ ಸಚಿವರ ಖಾತೆಯನ್ನು ಪಡೆಯಲಿದ್ದು, ಮುಲ್ಲಾ ಅಮೀರ್ ಖಾನ್ ಮುಟ್ಟಾಕಿ ವಿದೇಶಾಂಗ ಸಚಿವರಾಗಲಿದ್ದಾರೆ ಎಂದು ತಾಲಿಬಾನ್ ಮೂಲಗಳು ತಿಳಿಸಿವೆ. ಸಿರಾಜುದ್ದೀನ್ ಹಕ್ಕಾನಿ ವಿಶೇಷವಾಗಿ ಗೊತ್ತುಪಡಿಸಿದ ಜಾಗತಿಕ ಭಯೋತ್ಪಾದಕ ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ.


ಇನ್ನು, ಎಫ್‌ಬಿಐ ವೆಬ್‌ಸೈಟ್‌ನ ಪ್ರಕಾರ, ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಸಿರಾಜುದ್ದೀನ್ ಹಕ್ಕಾನಿಯ ಬಂಧನಕ್ಕೆ ನೇರವಾಗಿ ಕಾರಣವಾಗುವ ಮಾಹಿತಿಗಾಗಿ 5 ಮಿಲಿಯನ್‌ ಅಮೆರಿಕ ಡಾಲರ್‌ವರೆಗೆ ಬಹುಮಾನ ನೀಡುತ್ತಿದೆ. ಈತ ಪಾಕಿಸ್ತಾನದಲ್ಲಿ, ನಿರ್ದಿಷ್ಟವಾಗಿ ಉತ್ತರ ವಾಜಿರಿಸ್ತಾನದ ಮೀರಾಮ್ ಶಾ ಪ್ರದೇಶದಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗಿದ್ದು, ತಾಲಿಬಾನ್ ಮತ್ತು ಅಲ್ ಖೈದಾ ಜೊತೆ ನಿಕಟ ಸಂಬಂಧವನ್ನೂ ಹೊಂದಿದ್ದಾನೆ.


ತಾಲಿಬಾನ್ ಈ ಮೊದಲು ಅಫ್ಘಾನಿಸ್ತಾನದಾದ್ಯಂತ "ಅಮ್ನೆಸ್ಟಿ" ಅಥವಾ ಕ್ಷಮಾದಾನ ನೀಡಿತ್ತು ಮತ್ತು ಮಹಿಳೆಯರನ್ನು ತನ್ನ ಸರ್ಕಾರಕ್ಕೆ ಸೇರುವಂತೆ ಮನವಿ ಮಾಡಿಕೊಂಡಿತ್ತು. ತನ್ನ ಮೊದಲ ಸುದ್ದಿಗೋಷ್ಠಿಯಲ್ಲಿ, ಜಬಿಹುಲ್ಲಾ, ಇಸ್ಲಾಮಿಕ್ ಕಾನೂನಿನ ರೂಢಿಯಂತೆ ತಾಲಿಬಾನ್ ಮಹಿಳಾ ಹಕ್ಕುಗಳನ್ನು ಗೌರವಿಸಲಿದೆ ಎಂಬ ಭರವಸೆ ನೀಡಲಾಗಿತ್ತು. ಅಲ್ಲದೆ, ಖಾಸಗಿ ಮಾಧ್ಯಮಗಳು "ಸ್ವತಂತ್ರವಾಗಿ ಉಳಿಯಬೇಕೆಂದು" ತಾಲಿಬಾನ್‌ ಸಂಘಟನೆ ಬಯಸಿದೆ. ಆದರೆ ಪತ್ರಕರ್ತರು "ರಾಷ್ಟ್ರೀಯ ಮೌಲ್ಯಗಳಿಗೆ ವಿರುದ್ಧವಾಗಿ ಕೆಲಸ ಮಾಡಬಾರದು" ಎಂದು ಆ ವೇಳೆ ಹೇಳಿದ್ದರು.


ಅಲ್ಲದೆ, "ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ ಮಹಿಳೆಯರಿಗೆ ಕೆಲಸ ಮಾಡಲು ಮತ್ತು ಅಧ್ಯಯನ ಮಾಡಲು ಸೂಕ್ತವಾದ ಪರಿಸರ ಒದಗಿಸಲು ಸಿದ್ಧವಾಗಿದೆ ಮತ್ತು ಸರ್ಕಾರದ ವಿವಿಧ ರಚನೆಗಳಲ್ಲಿ ಮಹಿಳೆಯರ ಉಪಸ್ಥಿತಿಯನ್ನು ಇಸ್ಲಾಮಿಕ್ ಕಾನೂನಿನ ಪ್ರಕಾರ ಹಾಗೂ ನಮ್ಮ ಸಾಂಸ್ಕೃತಿಕ ಮೌಲ್ಯಗಳೊಂದಿಗೆ ನೀಡಲು ಸಿದ್ಧ'' ಎಂದೂ ತಾಲಿಬಾನ್‌ನ ಸಾಂಸ್ಕೃತಿಕ ಆಯೋಗದ ಸದಸ್ಯ ಎನಾಮುಲ್ಲಾ ಸಮಂಗಾನಿ ಹೇಳಿಕೊಂಡಿದ್ದರು.


ತಾಲಿಬಾನ್ ಸರ್ಕಾರದ ಮಂತ್ರಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ..
- ಹಸನ್ ಅಖುಂದ್ ನೂತನ ಅಫ್ಘಾನ್‌ ಸರ್ಕಾರದ ಪ್ರಧಾನಿ
- ಮುಲ್ಲಾ ಅಬ್ದುಲ್ ಘನಿ ಬರದಾರ್ ಮತ್ತು ಮುಲ್ಲಾ ಅಬ್ದುಸ್ ಸಲಾಮ್ ಉಪ ಪ್ರಧಾನಿ
- ಅಮೀರ್ ಖಾನ್ ಮುಟ್ಟಾಕಿ ವಿದೇಶಾಂಗ ಸಚಿವರಾಗಲಿದ್ದಾರೆ
- ಅಬ್ಬಾಸ್‌ ಸ್ಟಾನಿಕ್‌ಜಾಯ್ ಉಪ ವಿದೇಶಾಂಗ ಸಚಿವರಾಗಲಿದ್ದಾರೆ.
- ಮುಲ್ಲಾ ಯಾಕೂಬ್ ರಕ್ಷಣಾ ಸಚಿವ
- ಸಿರಾಜುದ್ದೀನ್ ಹಕ್ಕಾನಿ ಆಂತರಿಕ ಸಚಿವರಾಗಿರುತ್ತಾರೆ
- ಆರ್ಥಿಕ ಸಚಿವ: ಖಾರಿ ದಿನ್ ಹನೀಫ್
-ಧಾರ್ಮಿಕ ವ್ಯವಹಾರಗಳ ಹಜ್ ಸಚಿವರು: ಮೌಲ್ವಿ ನೂರ್ ಮೊಹಮ್ಮದ್ ಸಾಕಿಬ್
- ನ್ಯಾಯಾಂಗ ಅಥವಾ ಕಾನೂನು ಮಂತ್ರಿ: ಮೌಲ್ವಿ ಅಬ್ದುಲ್ ಹಕೀಮ್ ಶರೀ
- ಗಡಿ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವ: ಮುಲ್ಲಾ ನೂರುಲ್ಲಾ ನೂರಿ
- ಹಳ್ಳಿಗಾಡಿನ ಪುನರ್ವಸತಿ ಮತ್ತು ಅಭಿವೃದ್ಧಿ ಸಚಿವರು: ಮುಲ್ಲಾ ಮೊಹಮ್ಮದ್ ಯೂನಸ್ ಅಖುಂಡ್ಜಾದ
- ಸಾರ್ವಜನಿಕ ಕಾರ್ಯಗಳ ಸಚಿವ: ಮುಲ್ಲಾ ಅಬ್ದುಲ್ ಮನನ್ ಒಮರಿ
- ಗಣಿ ಮತ್ತು ಪೆಟ್ರೋಲಿಯಂ ಸಚಿವ: ಮುಲ್ಲಾ ಮೊಹಮ್ಮದ್ ಎಸಾ ಅಖುಂಡ್
- ನೀರು ಮತ್ತು ಇಂಧನ ಸಚಿವರು: ಮುಲ್ಲಾ ಅಬ್ದುಲ್ ಲತೀಫ್ ಮನ್ಸೂರ್
- ನಾಗರಿಕ ವಿಮಾನಯಾನ ಮತ್ತು ಸಾರಿಗೆ ಸಚಿವರು: ಮುಲ್ಲಾ ಹಮೀದುಲ್ಲಾ ಅಖುಂಡ್ಜಾದ
- ಉನ್ನತ ಶಿಕ್ಷಣ ಸಚಿವರು: ಅಬ್ದುಲ್ ಬಾಖಿ ಹಕ್ಕಾನಿ
- ದೂರಸಂಪರ್ಕದ ಸಚಿವ: ನಜೀಬುಲ್ಲಾ ಹಕ್ಕಾನಿ
- ನಿರಾಶ್ರಿತರ ಸಚಿವ: ಖಲೀಲ್ ಉರ್ ರಹಮಾನ್‌ ಹಕ್ಕಾನಿ
- ಗುಪ್ತಚರ ನಿರ್ದೇಶಕರು: ಅಬ್ದುಲ್ ಹಕ್ ವಾಸಿಕ್
- ಕೇಂದ್ರೀಯ ಬ್ಯಾಂಕಿನ ಹಂಗಾಮಿ ನಿರ್ದೇಶಕ: ಹಾಜಿ ಮೊಹಮ್ಮದ್ ಇದ್ರಿಸ್
- ಅಧ್ಯಕ್ಷರ ಆಡಳಿತ ಕಚೇರಿಯ ಹಂಗಾಮಿ ನಿರ್ದೇಶಕರು: ಅಹ್ಮದ್ ಜೇನ್ ಅಹ್ಮದಿ

Published by:Soumya KN
First published: