ಪಾಕಿಸ್ತಾನದಲ್ಲಿ ಬಸ್‌ ಸ್ಫೋಟಿಸಿದ ಉಗ್ರರು: ಚೀನಾ ಪ್ರಜೆಗಳು ಸೇರಿ 10 ಜನರ ಸಾವು

ದಾಸು ಆಣೆಕಟ್ಟೆ ನಿರ್ಮಾಣದಲ್ಲಿ ತೊಡಗಿದ್ದ 37 ಚೀನಾ ಎಂಜಿನಿಯರ್‌ಗಳು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದು, ರಕ್ಷಣೆಗೆ ಇಬ್ಬರು ಪಾಕಿಸ್ತಾನಿ ಯೋಧರು ಜೊತೆಯಿದ್ದರು. ಪ್ರಬಲ ಸ್ಪೋಟಕದ ದಾಳಿಯ ಭೀಕರತೆಗೆ ಬಸ್‌ ಸ್ಫೋಟಗೊಂಡಿದ್ದುಚಿದ್ರಗೊಂಡಿದೆ. 

ದಾಳಿಗೆ ಒಳಗಾಗಿರುವ ವಾಹನ

ದಾಳಿಗೆ ಒಳಗಾಗಿರುವ ವಾಹನ

 • Share this:
  ಅಮೆರಿಕಾ ಸೇನಾಪಡೆಗಳು ಅಪಘಾನಿಸ್ತಾನವನ್ನು ತೊರೆಯುತ್ತಿರುವುದರಿಂದ ತಾಲಿಬಾನ್‌ ಪ್ರಾಬಲ್ಯ ಹೆಚ್ಚುತ್ತಿದ್ದು ಕಳೆದ ಒಂದು ತಿಂಗಳಿನಿಂದ ಪಾಕಿಸ್ತಾನದಲ್ಲಿ ಹಾಗೂ ಅಫಘಾನಿಸ್ತಾನದಲ್ಲಿ ಭಯೋತ್ಪಾದಕ ದಾಳಿಗಳು ಅಧಿಕಗೊಂಡಿವೆ. ಪಾಕಿಸ್ತಾನದ ಉತ್ತರ ಪ್ರಾಂತ್ಯವು ಅಪಘಾನಿಸ್ತಾನದೊಂದಿಗೆ ಗಡಿಯನ್ನು ಹಂಚಿಕೊಂಡಿದೆ.

  ಪಾಕಿಸ್ತಾನದ ಉತ್ತರ ಪ್ರಾಂತ್ಯದಲ್ಲಿ ಚೀನಾ ಪ್ರಜೆಗಳು ಪ್ರಯಾಣಿಸುತ್ತಿದ್ದ ಬಸ್‌ ಗುರಿಯಾಗಿಸಿಕೊಂಡು ನಡೆದ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 10 ಜನರು ಮೃತಪಪಟ್ಟಿದ್ದಾರೆ. ಮೃತರಲ್ಲಿ  6 ಜನರು ಚೀನಾ ಎಂಜಿನಿಯರ್​ಗಳು ಎಂದು ತಿಳಿದುಬಂದಿದೆ.  ಇಬ್ಬರು ಪಾಕಿಸ್ತಾನಿ ಸೈನಿಕರು ಮೃತಪಟ್ಟಿರುವುದು ದೃಢಪಟ್ಟಿದೆ.

  ಪಾಕಿಸ್ತಾನದಲ್ಲಿನ ಚೀನಾ ರಾಯಭಾರ ಕಚೇರಿಯು ತನ್ನ ಪ್ರಜೆಗಳ ಸಾವಿನ ವಿಷಯವನ್ನು ದೃಢಪಡಿಸಿದ್ದು ಘಟನೆಗೆ ಸಂಬಂಧಿಸಿ ತನಿಖೆ ನಡೆಸುವಂತೆ ಆಗ್ರಹಿಸಿದೆ. ಜೊತೆಗೆ ಧಾಳಿ ನಡೆಸಿದವರನ್ನು ಬಂಧಿಸಿ ಶಿಕ್ಷೆ ವಿಧಿಸುವಂತೆ ಪಾಕಿಸ್ತಾನ ಸರ್ಕಾರವನ್ನು ಒತ್ತಾಯಿಸಿದೆ.

  ದಾಸು ಅಣೆಕಟ್ಟು ನಿರ್ಮಾಣದಲ್ಲಿ ತೊಡಗಿದ್ದ 37 ಚೀನಾ ಇಂಜಿನೀಯರ್‌ಗಳು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದು, ರಕ್ಷಣೆಗೆ ಇಬ್ಬರು ಪಾಕಿಸ್ತಾನಿ ಯೋಧರು ಜೊತೆಯಿದ್ದರು. ಪ್ರಬಲ IED ಸ್ಪೋಟಕದ ದಾಳಿಯ ಭೀಕರತೆಗೆ ಬಸ್‌ ಸ್ಫೋಟಗೊಂಡಿದ್ದುಚಿದ್ರಗೊಂಡಿದೆ.  ಇನ್ನು ಹಲವರು ಗಂಭೀರ ಗಾಯಗಳಾಗಿವೆ. ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗುವ ಅತಂಕ ಮನೆಮಾಡಿದೆ ಎಂದು ರಾಯಿಟರ್ಸ್‌ ವರದಿ ಮಾಡಿದೆ.

  “ಸ್ಫೋಟದ ನಂತರ ಬಸ್ ಆಳವಾದ ಪ್ರಪಾತಕ್ಕೆ ಬಿದ್ದಿದ್ದು, ಬಸ್‌ನಲ್ಲಿದ್ದ ಒಬ್ಬ ಚೀನಾದ ಎಂಜಿನಿಯರ್ ಮತ್ತು ಓರ್ವ ಸೈನಿಕರಿಗಾಗಿ ಶೋಧಕಾರ್ಯ ನಡೆಯುತ್ತಿದೆ. ಪಾಕಿಸ್ತಾನ ಸೇನೆ ಮತ್ತು ಇತರ ಇಲಾಖೆಗಳು  ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ. ಗಾಯಗೊಂಡವರನ್ನು ಏರ್ ಆಂಬುಲೆನ್ಸ್ ಮೂಲಕ ರಕ್ಷಿಸಲು ಇಡೀ ಸರ್ಕಾರಿ ವ್ಯವಸ್ಥೆ ತೊಡಗಿಸಿಕೊಂಡಿದೆ. ” ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ರಾಯಿಟರ್ಸ್‌ಗೆ ತಿಳಿಸಿದ್ದಾರೆ.
   ಬಸ್‌ನೊಳಗೆ ಸ್ಪೋಟಕಗಳನ್ನು ಇಡಲಾಗಿತ್ತೊ ಅಥವಾ ರಸ್ತೆ ಪಕ್ಕದಲ್ಲಿ ಸ್ಪೋಟಕಗಳನ್ನಿಟ್ಟು ಬಸ್‌ ಸ್ಫೋಟಿಸಲಾಗಿದೆಯೇ ಎಂಬ ಕುರಿತು ಇದುವರೆಗೆ ಮಾಹಿತಿ ತಿಳಿದು ಬಂದಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಸ್ಫೋಟ ಸಂಭವಿಸಿದ ಪ್ರದೇಶದಲ್ಲಿ ಚೀನಾದ ಎಂಜಿನಿಯರ್‌ಗಳು ಮತ್ತು ಪಾಕಿಸ್ತಾನದ ನಿರ್ಮಾಣ ಕಾರ್ಮಿಕರು ಹಲವಾರು ವರ್ಷಗಳಿಂದ ದಾಸು ಜಲವಿದ್ಯುತ್ ಯೋಜನೆಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಇದುವರೆಗೆ  ಅಲ್ಲಿ ಯಾವುದೇ ದಾಳಿ ಸಂಭವಿಸಿರಲಿಲ್ಲ.

  ಪಾಕಿಸ್ತಾನದಲ್ಲಿ ಕಳೆದ ಒಂದು ವಾರದಿಂದ ಸೇನಾಪಡೆಗಳನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕ ದಾಳಿಗಳು ನಡೆಯುತ್ತಿದ್ದು ಮಂಗಳವಾರ 11 ಜನ ಪಾಕಿಸ್ತಾನ ಸೈನ್ಯದ ಯೋಧರನ್ನು ತೆಹ್ರಿಕ್‌ ಎ ತಾಲಿಬಾನ್‌ ಉಗ್ರರು ಹತ್ಯೆಗೈದಿದ್ದರು. ಕೆಲವು ಸೈನಿಕರನ್ನು ಒತ್ತೆಯಾಳುಗಳನ್ನಾಗಿ ಉಗ್ರರು ಹೊತ್ತೊಯ್ದಿದ್ದಾರೆ ಎಂದು ವರದಿಯಾಗಿದೆ.

  ಇದನ್ನೂ ಓದಿ: ಮಾರುಕಟ್ಟೆಗೆ ಬರಲು ಸಿದ್ದವಾಗಿದೆ ಮೋದಿ ಹುಂಡಿ: ಇದು ಬಿಹಾರ ಶಿಲ್ಪಿಯ ಕೈಚಳಕ

  ಅಫಘಾನಿಸ್ತಾನದಲ್ಲೂ ತಾಲಿಬಾನ್​ ಉಗ್ರ ಸಂಘಟನೆ ತನ್ನ ಪ್ರಾಬಲ್ಯವನ್ನು ವಿಸ್ತರಿಸುತ್ತಿದ್ದು, ಈಗಾಗಲೇ ಸಾಕಷ್ಟು ಪ್ರದೇಶಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಕಳೆದ ವಾರ ಭಾರತವು ಕಂದಾಹಾರ್​ನಲ್ಲಿಇರುವ ರಾಯಭಾರ ಕಚೇರಿಯಿಂದ ತನ್ನ ಸಿಬ್ಬಂಧಿಗಳನ್ನು ಮರಳಿ ತವರಿಗೆ ಕರೆಸಿಕೊಂಡಿತ್ತು. ಅಫಘಾನಿಸ್ತಾನದ ವಿದೇಶಾಂಗ ವಕ್ತಾರ ದಾಳಿ ನಡೆಯುವ ಸಂಭವ ಹೆಚ್ಚಿದೆ ಅದರಲ್ಲೂ ಭಾರತೀಯರನ್ನು ಹಾಗೂ ವಿದೇಶಿಯರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗುತ್ತಿದೆ ಎಂದು ಹೇಳಿದ್ದರು. ಅದರಂತೆ ಬುಧವಾರ ಇಂತಹ ದುಷ್ಕೃತ್ಯ ನಡೆದಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  Published by:HR Ramesh
  First published: