ಉಗ್ರಗಾಮಿ ಪ್ರಕರಣ; ಕೊನೆಗೂ ಪೊಲೀಸ್‌ ಅಧಿಕಾರಿ ದೇವಿಂದರ್‌ ಸಿಂಗ್ ವಿರುದ್ದ ಚಾರ್ಜ್‌‌ಶೀಟ್‌ ಸಲ್ಲಿಸಿದ ಎನ್‌ಐಎ

ಜನವರಿ 11, 2020 ರಂದು, ಭಯೋತ್ಪಾದಕರಾದ ನವೀದ್ ಮುಷ್ತಾಕ್ ಮತ್ತು ರಫಿ ಅಹ್ಮದ್ ರಾಥರ್ ಅವರನ್ನು ಜಮ್ಮುವಿಗೆ ಕರೆದೊಯ್ಯುತ್ತಿದ್ದಾಗ ದಕ್ಷಿಣ ಕಾಶ್ಮೀರದ ಕುಲ್ಗಾಮ್‌ನ ವಾನ್ಪೋ ಎಂಬ ಚೆಕ್ ಪಾಯಿಂಟ್‌ನಲ್ಲಿ ದೇವಿಂದರ್‌ ಸಿಂಗ್‌ನನ್ನು ಬಂಧಿಸಲಾಗಿತ್ತು.

ದೇವಿಂದರ್​​ ಸಿಂಗ್

ದೇವಿಂದರ್​​ ಸಿಂಗ್

  • Share this:
ನವ ದೆಹಲಿ (ಜುಲೈ 06); ಉಗ್ರಗಾಮಿಗಳಿಗೆ ದೇಶದೊಳಗೆ ಪ್ರವೇಶಿಸಲು ಸಹಕಾರ ನೀಡಿದ್ದ ಆರೋಪದ ಮೇಲೆ ಬಂಧಿಸಿ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಜಮ್ಮು ಮತ್ತು ಕಾಶ್ಮೀರದ ಉಪ ಪೊಲೀಸ್ ವರಿಷ್ಠಾಧಿಕಾರಿ ದೇವಿಂದರ್ ಸಿಂಗ್ ವಿರುದ್ಧ ಕೊನೆಗೂ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಇಂದು ಚಾರ್ಜ್‌‌ಶೀಟ್‌ ಸಲ್ಲಿಸಿದೆ.

ಕಾನೂನಿನಂತೆ ಯಾವುದೇ ಪ್ರಕರಣ ನಡೆದು 90 ದಿನಗಳ ಒಳಗಾಗಿ ಆರೋಪಿಯ ವಿರುದ್ಧ ಪೊಲೀಸರು ಅಥವಾ ತನಿಖಾ ಸಂಸ್ಥೆ ಚಾರ್ಜ್‌‌ಶೀಟ್‌ ಸಲ್ಲಿಸಬೇಕು. ಆದರೆ, ಪುಲ್ವಾಮಾ ದಾಳಿಯಲ್ಲಿ 46 ಜನ ಭಾರತೀಯ ಸೈನಿಕರ ಜೀವಕ್ಕೆ ಕುತ್ತು ತಂದ ದಾಳಿಯ ಹಿಂದಿನ ಆರೋಪ ಹೊತ್ತಿದ್ದ ಪೊಲಿಸ್ ಅಧಿಕಾರಿ ದೇವಿಂದರ್ ಸಿಂಗ್ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಈವರೆಗೆ ಚಾರ್ಜ್‌‌ಶೀಟ್‌ ಸಲ್ಲಿಸಿರಲಿಲ್ಲ. ಪರಿಣಾಮ ಕಳೆದ ತಿಂಗಳು ದೆಹಲಿ ನ್ಯಾಯಾಲಯ ಆತನಿಗೆ ಜಾಮೀನು ನೀಡಿ ಬಿಡುಗಡೆ ಮಾಡಿತ್ತು.

ಆದರೆ, ಕೊನೆಗೂ ದೇಶದ್ರೋಹಿ ಚಟುವಟಿಕೆಯಲ್ಲಿ ತೊಡಗಿದ್ದ ಪೊಲೀಸ್ ಅಧಿಕಾರಿ ದೇವಿಂದರ್ ಸಿಂಗ್ ವಿರುದ್ಧ ಜಮ್ಮು ನ್ಯಾಯಾಲಯದಲ್ಲಿ ಇಂದು ಚಾರ್ಜ್‌‌ಶೀಟ್‌ ದಾಖಲಿಸಲಾಗಿದೆ ಎಂದು ಎನ್ಐಎ ಅಧಿಕಾರಿಗಳು ಸಿಎನ್ಎನ್ ನ್ಯೂಸ್ 18 ಗೆ ಖಚಿತಪಡಿಸಿದ್ದಾರೆ.

ಚಾರ್ಜ್‌‌ಶೀಟ್‌ನಲ್ಲಿ ಹಿಜ್ಬುಲ್ ಭಯೋತ್ಪಾದಕರಾದ ನವೀದ್ ಮುಷ್ತಾಕ್ ಅಲಿಯಾಸ್ ಬಾಬು, ಅವರ ಸಹೋದರ ಇರ್ಫಾನ್ ಮುಷ್ತಾಕ್, ರಫಿ ಅಹ್ಮದ್ ರಾಥರ್, ಕ್ರಾಸ್ ಲೊಕ್ ಟ್ರೇಡ್ ಅಸೋಸಿಯೇಶನ್‌ ಮಾಜಿ ಅಧ್ಯಕ್ಷ ತನ್ವೀರ್ ಅಹ್ಮದ್ ಮತ್ತು ವಕೀಲ ಇರ್ಫಾನ್ ಶಫಿ ಮಿರ್ ಅವರ ಮೇಲೆಯೂ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯ (ಯುಎಪಿಎ) ವಿವಿಧ ವಿಭಾಗಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ ಎನ್ನಲಾಗುತ್ತಿದೆ.

ರಾಷ್ಟ್ರೀಯ ತನಿಖಾ ದಳ ಸಾವಿರ ಪುಟಗಳ ವಿವರವಾದ ಚಾರ್ಜ್ಶೀಟ್ ಸಲ್ಲಿಸಿದ್ದು, ಈ ಮಹತ್ವದ ಚಾರ್ಜ್ಶೀಟ್ನಲ್ಲಿ ಪಾಕಿಸ್ತಾನ ಹೈಕಮಿಷನ್ನ ಸಹಾಯಕ ಶಫಕಾತ್ ಪಾತ್ರವನ್ನು ಸವಿವರವಾಗಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜನವರಿ 11, 2020 ರಂದು, ಭಯೋತ್ಪಾದಕರಾದ ನವೀದ್ ಮುಷ್ತಾಕ್ ಮತ್ತು ರಫಿ ಅಹ್ಮದ್ ರಾಥರ್ ಅವರನ್ನು ಜಮ್ಮುವಿಗೆ ಕರೆದೊಯ್ಯುತ್ತಿದ್ದಾಗ ದಕ್ಷಿಣ ಕಾಶ್ಮೀರದ ಕುಲ್ಗಾಮ್‌ನ ವಾನ್ಪೋ ಎಂಬ ಚೆಕ್ ಪಾಯಿಂಟ್‌ನಲ್ಲಿ ದೇವಿಂದರ್‌ ಸಿಂಗ್‌ನನ್ನು ಬಂಧಿಸಲಾಗಿತ್ತು.

ಬಂಧನಕ್ಕೊಳಗಾದ ದಿನದಿಂದ ದೇವಿಂದರ್ ಸಿಂಗ್ ಅವರನ್ನು ಅಮಾನತುಗೊಳಿಸಲಾಗಿತ್ತು. ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಲಾಗಿತ್ತು. ಅಲ್ಲದೆ, ಆತನ ವಿರುದ್ದ, “ ಪಾಕಿಸ್ತಾನ ಹೈಕಮಿಷನ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಮತ್ತು ಕಾಶ್ಮೀರ ಕಣಿವೆಯಿಂದ ಜಮ್ಮುವಿಗೆ ಹೋಗಲು ಭಯೋತ್ಪಾದಕರಿಗೆ ಸಹಕರಿಸಿದ್ದರು” ಎಂದು ಆರೋಪಿಸಲಾಗಿತ್ತು.

ಇದನ್ನೂ ಓದಿ : ಹಿಜ್ಬುಲ್-ಮುಜಾಹಿದ್ದೀನ್ ಉಗ್ರರಿಗೆ ಸಹಕರಿಸಿ ಅಮಾನತಾಗಿದ್ದ ಕಾಶ್ಮೀರದ ಡಿಎಸ್‌ಪಿ ದೇವಿಂದರ್‌ ಸಿಂಗ್‌ಗೆ ಜಾಮೀನು

ಪೊಲೀಸ್ ಅಧಿಕಾರಿ ದೇವಿಂದರ್ ಸಿಂಗ್ ಅವರಿಗೆ ಹಿಜ್ಬುಲ್ ಮುಜಾಹಿದ್ದೀನ್ ಜೊತೆ ಸಂಪರ್ಕಿಸುವಲ್ಲಿ ಮಿರ್ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಎನ್ಐಎ ನಡೆಸಿದ ತನಿಖೆಯಿಂದ ತಿಳಿದುಬಂದಿದೆ. ಅಲ್ಲದೆ, ತನ್ವೀರ್ ಅಹ್ಮದ್ ಭಾರತೀಯ ಕರೆನ್ಸಿಗಳನ್ನು ನವೀದ್ ಮುಷ್ತಾಕ್ಗೆ ರವಾನಿಸಿದ್ದಾರೆ ಎಂಬ ಆರೋಪವಿದೆ.
Published by:MAshok Kumar
First published: