ಹೈದರಾಬಾದ್(ಆ.16): ತೆಲಂಗಾಣದ ಖಮ್ಮಂ ಜಿಲ್ಲೆಯ ಹಳ್ಳಿಯೊಂದರಲ್ಲಿ ಸೋಮವಾರ ರಾಷ್ಟ್ರಧ್ವಜಾರೋಹಣ ಮಾಡಿದ ಕೆಲವೇ ಹೊತ್ತಿನಲ್ಲಿ ಟಿಆರ್‌ಎಸ್ ನಾಯಕ ತಮ್ಮಿನೇನಿ ಕೃಷ್ಣಯ್ಯ ಅವರನ್ನು ನಾಲ್ವರು ಅಪರಿಚಿತ ವ್ಯಕ್ತಿಗಳು ಹತ್ಯೆ ಮಾಡಿದ್ದಾರೆ. ಈ ಘಟನೆಯ ನಂತರ ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಗಮನಿಸಿದ ಪೊಲೀಸ್ ಅಧಿಕಾರಿಗಳು 144 ಸೆಕ್ಷನ್ ಜಾರಿಗೊಳಿಸಿದ್ದಾರೆ.
ತೆಲಂಗಾಣ ರಾಷ್ಟ್ರೀಯ ಸಮಿತಿ ಮುಖಂಡ ತಮ್ಮಿನೇನಿ ಕೃಷ್ಣಯ್ಯ ಅವರ ಮೇಲೆ ಖಮ್ಮಂ ಗ್ರಾಮಾಂತರ ಮಂಡಲದ ತೆಲ್ದಾರುಪಲ್ಲಿ ಗ್ರಾಮದಲ್ಲಿ ನಾಲ್ವರು ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ಬೆಳಗ್ಗೆ ಟಿಆರ್‌ಎಸ್ ನಾಯಕ ರಾಷ್ಟ್ರಧ್ವಜಾರೋಹಣ ಸಮಾರಂಭ ಮುಗಿಸಿ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ.
ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಆರೋಪದಡಿ ಟಿಆರ್‌ಎಸ್ ಸಂಸದರ ಪುತ್ರನ ಮೇಲೆ ಪ್ರಕರಣ ದಾಖಲು
ಖಮ್ಮಂ ಜಿಲ್ಲೆಯ ಸಹಾಯಕ ಪೊಲೀಸ್ ಆಯುಕ್ತರ ಪ್ರಕಾರ, ತಮ್ಮಿನೇನಿ ಕೃಷ್ಣಯ್ಯ ಅವರು ರಾಷ್ಟ್ರಧ್ವಜಾರೋಹಣ ಮುಗಿಸಿ ಬೈಕ್‌ನಲ್ಲಿ ಹಿಂತಿರುಗುತ್ತಿದ್ದರು. ತೆಲ್ದಾರುಪಲ್ಲಿ ಗ್ರಾಮದ ಪ್ರವೇಶ ದ್ವಾರದಲ್ಲಿ ಆಟೋ ರಿಕ್ಷಾದಲ್ಲಿ ಬಂದ ನಾಲ್ವರು ಅವರ ಮೇಲೆ ಹಲ್ಲೆ ನಡೆಸಿ ರಕ್ತಸಿಕ್ತ ದೇಹವನ್ನು ಬಿಟ್ಟು ಪರಾರಿಯಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಖಮ್ಮಂ ಎಸಿಪಿ ತೆಲ್ದಾರುಪಲ್ಲಿ ಗ್ರಾಮದ ಪ್ರವೇಶ ದ್ವಾರದಲ್ಲಿ ಆಟೋ ಬಂದಿದ್ದು, ಅದರಲ್ಲಿದ್ದ ಜನರು ಟಿಆರ್‌ಎಸ್ ಮುಖಂಡನನ್ನು ಸ್ಥಳದಲ್ಲೇ ಕೊಂದು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಘಟನೆಯಲ್ಲಿ ಭಾಗಿಯಾಗಿರುವ ನಾಲ್ವರು ಆರೋಪಿಗಳ ಪತ್ತೆಗೆ 4 ತಂಡಗಳನ್ನು ರಚಿಸಿದ್ದೇವೆ. ತಮ್ಮಿನೇನಿ ಕೃಷ್ಣಯ್ಯ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದಿದ್ದಾರೆ.
ಖಮ್ಮಂ ಗ್ರಾಮಾಂತರ ಪೊಲೀಸರು ಲಭ್ಯವಿರುವ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಘಟನೆಯ ಸ್ವಲ್ಪ ಸಮಯದ ನಂತರ, ಸಿಪಿಐ(ಎಂ) ನಾಯಕ ತಮ್ಮಿನೇನಿ ಕೋಟೇಶ್ವರ ರಾವ್ ಅವರ ನಿವಾಸದ ಮುಂದೆ ಕಲ್ಲು ತೂರಾಟಕ್ಕೆ ಗುಂಪು ಜಮಾಯಿಸಿತು. ಜನಸಮೂಹವು ಸಿಪಿಐ(ಎಂ) ಮುಖಂಡನ ನಿವಾಸದ ಭಾಗಗಳಿಗೆ ತೀವ್ರ ಹಾನಿ ಮಾಡಿದೆ.
ಇದನ್ನೂ ಓದಿ: ಚುನಾವಣೆಗೂ ಮೊದಲೇ ಕೆಸಿಆರ್ಗೆ ಆಘಾತ; ಕಾಂಗ್ರೆಸ್ನತ್ತ ವಾಲಿದ ಟಿಆರ್‌ಎಸ್ ಸಂಸದ
ಕೂಡಲೇ ಗುಂಪನ್ನು ಚದುರಿಸಿದೆವು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಸಾಕ್ಷ್ಯಾಧಾರಗಳ ಆಧಾರದ ಮೇಲೆ ಪ್ರಕರಣಗಳನ್ನು ದಾಖಲಿಸಲಾಗುವುದು. ಗ್ರಾಮಾಂತರ ಪೊಲೀಸರ ತನಿಖೆ ಮುಂದುವರಿದಿದ್ದು, ತೆಲ್ದಾರುಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿಆರ್‌ಪಿಸಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಇನ್ನು ತಮ್ಮಿನೇನಿ ಕೃಷ್ಣಯ್ಯ ಅವರು ಸಿಪಿಎಂ ತೊರೆದು ತೆಲಂಗಾಣ ರಾಷ್ಟ್ರೀಯ ಸಮಿತಿ ಸೇರಿದ್ದರು ಎಂಬುವುದು ಉಲ್ಲೇಖನೀಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ