ಅವಧಿಗೂ ಮುನ್ನ ವಿಧಾನಸಭೆ ವಿಸರ್ಜಿಸಲಿದ್ದಾರೆಯೇ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್?

news18
Updated:September 2, 2018, 4:00 PM IST
ಅವಧಿಗೂ ಮುನ್ನ ವಿಧಾನಸಭೆ ವಿಸರ್ಜಿಸಲಿದ್ದಾರೆಯೇ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್?
  • Advertorial
  • Last Updated: September 2, 2018, 4:00 PM IST
  • Share this:
ನ್ಯೂಸ್ 18 ಕನ್ನಡ

ಹೈದರಾಬಾದ್ (ಸೆಪ್ಟೆಂಬರ್ 2): ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಅವಧಿಗೂ ಮುನ್ನ ಇಂದು ವಿಧಾನಸಭೆ ವಿಸರ್ಜನೆ ಘೋಷಣೆ ಮಾಡುವ ಸಾಧ್ಯತೆ ಇದೆ. ಈ ಸಂಬಂಧ ಸಚಿವ ಸಂಪುಟ ನಡೆಸುತ್ತಿರುವ ಮುಖ್ಯಮಂತ್ರಿಗಳು, ಸಭೆಯಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಸದ್ಯದ ಕುತೂಹಲದ ಪ್ರಶ್ನೆಯಾಗಿದೆ.

ಕ್ಯಾಬಿನೆಟ್​ ಮೀಟಿಂಗ್​ನಲ್ಲಿ ತೆಗೆದುಕೊಂಡ ನಿರ್ಧಾರವನ್ನು ಹೈದರಾಬಾದ್​ನ ಹೊರವಲಯದಲ್ಲಿ ಟಿಆರ್​​ಎಸ್​ (ತೆಲಂಗಾಣ ರಾಷ್ಟ್ರ ಸಮಿತಿ) ಪಕ್ಷದಿಂದ ಆಯೋಜಿಸಿರುವ 'ಪ್ರಗತಿ ನಿವೇದನಾ ಸಭೆಯಲ್ಲಿ' ಲಕ್ಷಾಂತರ ಜನರ ಸಮ್ಮುಖದಲ್ಲಿ ಚಂದ್ರಶೇಖರ್​ ರಾವ್ ಈ ಘೋಷಣೆ ಮಾಡುವ ಸಾಧ್ಯತೆ ಇದೆ. ಈ ಮೂಲಕ ತೆಲಂಗಾಣದಲ್ಲಿ ಅವಧಿಗೂ ಮುನ್ನವೇ ವಿಧಾನಸಭೆ ಚುನಾವಣೆ ನಡೆಯುವ ಸಂಭವವಿದೆ.

ಸಚಿವ ಸಂಪುಟ ಸಭೆಯಲ್ಲಿ ಅವಧಿಗೂ ಮುನ್ನವೇ ವಿಧಾನಸಭೆ ವಿಸರ್ಜಿಸಬೇಕೇ ಬೇಡವೇ ಎಂಬುದರ ಕುರಿತು ಅಂತಿಮ ತೀರ್ಮಾನ ಕೈಗೊಂಡ ನಂತರ ಮುಖ್ಯಮಂತ್ರಿಗಳು ಕೆಲ ಸಚಿವರೊಂದಿಗೆ ರಾಜಭವನಕ್ಕೆ ತೆರಳಿ, ರಾಜ್ಯಪಾಲ ನರಸಿಂಹನ್​ ಅವರನ್ನು ಭೇಟಿ ಮಾಡಲಿದ್ದಾರೆ. ನಂತರ ಬೃಹತ್ ಸಾರ್ವಜನಿಕ ಸಭೆಗೆ ತೆರಳಲಿದ್ದಾರೆ. ಈ​ ಸಭೆಯಲ್ಲಿ ಕೆಸಿಆರ್​ ಅವರು ತೆಲಂಗಾಣ ಹೊಸ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ಮೇಲೆ ತಮ್ಮ ಸರ್ಕಾರ ಕೈಗೊಂಡ ಅಭಿವೃದ್ಧಿ ಯೋಜನೆಗಳನ್ನು ವಿವರಿಸಿ, ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ ಎನ್ನಲಾಗುತ್ತಿದೆ.

ಮುಖ್ಯಮಂತ್ರಿ ಚಂದ್ರಶೇಖರ್ ಅವರ ಪುತ್ರಿ, ನಿಜಾಮಾಬಾದ್ ಸಂಸದೆ ಕೆ.ಕವಿತಾ, "ರಾಜ್ಯಕ್ಕೆ ಈ ಸರ್ಕಾರ ಏನು ಮಾಡಿದೆ ಎಂಬ ಪ್ರತಿಪಕ್ಷಗಳ ಟೀಕೆಗೆ ಮುಖ್ಯಮಂತ್ರಿಗಳು ಸರಿಯಾದ ಉತ್ತರ ನೀಡಲಿದ್ದಾರೆ," ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಬೃಹತ್ ಸಾರ್ವಜನಿಕ ಸಭೆಯಲ್ಲಿ 25 ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ ಎಂದು ಶುಕ್ರವಾರ ಪ್ರತಿಕ್ರಿಯೆ ನೀಡಿದ್ದ ರಾಜ್ಯ ಐಟಿ ಮತ್ತು ನಗರಸಭೆ ಆಡಳಿತ ಸಚಿವ ಕೆ.ಟಿ.ರಾಮರಾವ್ ಅವರು "ಅವಧಿಗೂ ಮುನ್ನವೇ ವಿಧಾನಸಭೆ ವಿಸರ್ಜಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ, ಅಂತಿಮ ತೀರ್ಮಾನವನ್ನು ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗುವುದು," ಎಂದು ಹೇಳಿದ್ದರು.

ತೆಲಂಗಾಣದಲ್ಲಿ ಟಿಆರ್​ಎಸ್​ ಸರ್ಕಾರದ ಅವಧಿ 2019 ಮೇನಲ್ಲಿ ಕೊನೆಗೊಳ್ಳಲಿದೆ. ಅವಧಿನಂತರ ಚುನಾವಣೆ ಆದರೆ, ಅದೇ ಸಮಯದಲ್ಲಿ ಲೋಕಸಭೆಗೂ ಚುನಾವಣೆ ನಡೆಯಬಹುದು. ಹೀಗಾಗಿ ಈಗ ಸರ್ಕಾರ ವಿಸರ್ಜಿಸಿದರೆ ಇದೇ ವರ್ಷದ ಡಿಸೆಂಬರ್​ನಲ್ಲಿ ಚುನಾವಣೆ ನಡೆಯಲಿದೆ. ಮೂರು ರಾಜ್ಯಗಳ ವಿಧಾನಸಭೆಗೆ ಇದೇ ಡಿಸೆಂಬರ್​ನಲ್ಲಿ ಚುನಾವಣೆ ನಡೆಯುವುದರಿಂದ ಅವುಗಳ ಜೊತೆಗೆ ತೆಲಂಗಾಣದ ಚುನಾವಣಾ ಪ್ರಕ್ರಿಯೆ ಮುಗಿಸಬಹುದು ಎಂಬ ಉದ್ದೇಶದಿಂದ ಕೆ.ಚಂದ್ರಶೇಖರ್ ರಾವ್ ಅವರು ಸರ್ಕಾರವನ್ನು ಅವಧಿಗೂ ಮುನ್ನವೇ ವಿಸರ್ಜಿಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.ಇತ್ತೀಚೆಗೆ ಕೆ.ಚಂದ್ರಶೇಖರ್ ರಾವ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಎರಡು ಬಾರಿ ಭೇಟಿ ಮಾಡಿದ್ದರು. ಅವರ ಭೇಟಿ ನಂತರ ಇನ್ನು ಎಂಟು ತಿಂಗಳು ಅವಧಿ ಇರುವ ಸರ್ಕಾರವನ್ನು ವಿಸರ್ಜಿಸಲು ಮುಂದಾಗಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಬೃಹತ್ ಸಮ್ಮೇಳನದಲ್ಲಿ ಅವರು ಯಾವ ನಿರ್ಧಾರ ಪ್ರಕಟಿಸಲಿದ್ದಾರೆ ಎಂಬುದು ಸದ್ಯದ ಎಲ್ಲರ ಕುತೂಹಲ ಕೆರಳಿಸಿದೆ.
First published:September 2, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ