ತೆಲಂಗಾಣ ಚುನಾವಣೆ: ಕಾಂಗ್ರೆಸ್​​-ಟಿಡಿಪಿ ಲೆಕ್ಕಾಚಾರ vs ಟಿಆರ್​ಎಸ್​​ ಊಹೆ; ಯಾರಿಗೆ ಸಿಗಲಿದೆ ಗೆಲುವಿನ ಹಾರ?

119 ಸ್ಥಾನಗಳ ಪೈಕಿ 100 ಸ್ಥಾನಗಳನ್ನು ನಾವೇ ಗೆಲ್ಲುತ್ತೇವೆ ಎಂದು ಚಂದ್ರಶೇಖರ್​ ರಾವ್​ ಹೇಳಿಕೊಂಡಿದ್ದಾರೆ. ಹಾಸ್ಯಾಸ್ಪದ ಎಂದರೆ ಈ ಮಾತನ್ನು ಯಾರೊಬ್ಬರೂ ಗಂಭೀರವಾಗಿ ಪರಿಗಣಿಸಿಲ್ಲ! ಈ ಬಾರಿಯ ಚುನಾವಣಾ ಫಲಿತಾಂಶ ರಾಜಕೀಯ ತಜ್ಞರ ಲೆಕ್ಕಾಚಾರವನ್ನೂ ತಲೆಕೆಳಗಾಗಿಸಬಹುದು ಎಂಬ ಮಾತಿದೆ.

Rajesh Duggumane | news18
Updated:December 6, 2018, 12:18 PM IST
ತೆಲಂಗಾಣ ಚುನಾವಣೆ: ಕಾಂಗ್ರೆಸ್​​-ಟಿಡಿಪಿ ಲೆಕ್ಕಾಚಾರ vs ಟಿಆರ್​ಎಸ್​​ ಊಹೆ; ಯಾರಿಗೆ ಸಿಗಲಿದೆ ಗೆಲುವಿನ ಹಾರ?
ಚಂದ್ರಬಾಬು ನಾಯ್ಡು ಹಾಗೂ ರಾಹುಲ್​ ತೆಲಂಗಾಣದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವುದು
Rajesh Duggumane | news18
Updated: December 6, 2018, 12:18 PM IST
ಡಿ.ಪಿ. ಸತೀಶ್​

ನಾಳೆ ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಬುಧವಾರ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​​ ನೇತೃತ್ವದ ಟಿಆರ್​ಎಸ್​​ ಸತತ ಮೂರು ತಿಂಗಳು ರಾಜ್ಯದಲ್ಲಿ ಬಿರುಸಿನ ಪ್ರಚಾರ ನಡೆಸಿದೆ. ಸರ್ಕಾರ  ಐದು ವರ್ಷ ಪೂರ್ಣಗೊಳಿಸುವುದರೊಳಗೆ ಚಂದ್ರಶೇಖರ್​ ರಾವ್​ ವಿಧಾನಸಭೆ ವಿಸರ್ಜಿಸಿರುವುದರಿಂದ 9 ತಿಂಗಳು ಮೊದಲೇ ಚುನಾವಣೆ ನಡೆಯುತ್ತಿದೆ.

ಅಚ್ಚರಿ ಎಂದರೆ ಕಾಂಗ್ರೆಸ್​ ಪ್ರಚಾರ ಆರಂಭಿಸಿದ್ದು ಕೇವಲ ಒಂದು ತಿಂಗಳ ಹಿಂದೆ. ಆದರೆ, ಅವರ ಪ್ರಚಾರ ಕಾರ್ಯ ಟಿಆರ್​ಎಸ್​ಗೆ ಸಮನಾಗಿ ನಿಂತಿದೆ. ಕಾಂಗ್ರೆಸ್​ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರು ಈ ಬಾರಿ ಸಾರ್ವಜನಿಕ ಸಭೆಯಲ್ಲಿ ಕಾಣಿಸಿಕೊಂಡಿದ್ದು ತೆಲಂಗಾಣದಲ್ಲಿ ಮಾತ್ರ. ‘ಮಹಾಕೂಟಮಿ’ಗೆ ಮತ ಹಾಕಿ ಎಂದು ಮಂಗಳವಾರ ವಿಡಿಯೋ ಮೂಲಕ ಸೋನಿಯಾ ಕೇಳಿಕೊಂಡಿದ್ದು ಬಿಟ್ಟರೆ ಮತ್ತೆ ಅವರು ಪ್ರಚಾರದಲ್ಲಿ ಕಾಣಿಸಿಕೊಂಡಿಲ್ಲ.

ತೆಲಂಗಾಣದಲ್ಲಿ ಟಿಆರ್​ಎಸ್​ಗೆ ಗೆಲುವು ಸುಲಭದ ತುತ್ತು ಎಂದೇ ಚಂದ್ರಶೇಖರ್​ ರಾವ್​ ಬಲವಾಗಿ ನಂಬಿದ್ದಾರೆ. ಆದರೆ, ಕಾಂಗ್ರೆಸ್​, ಟಿಡಿಪಿ, ಸಿಪಿಐ, ತೆಲಂಗಾಣ ಜನ ಸಮಿತಿ ಒಟ್ಟಾಗಿ ಚುನಾವಣಾ ಪ್ರಚಾರ ನಡೆಸಿದ್ದು ಟಿಆರ್​ಎಸ್​ ಕಾರ್ಯಕರ್ತರ ನಿದ್ದೆಗೆಡಿಸಿದೆ.

ಈ ಬಾರಿ ತೆಲಂಗಾಣ ಚುನಾವಣೆಯಲ್ಲಿ ಅಧಿಕೃತ ‘ಮಹಾಕೂಟಮಿ’ ಹಾಗೂ ಅನಧಿಕೃತ ‘ಮಹಾಕೂಟಮಿ’ ವಿರುದ್ಧ ಸಮರ ನಡೆಯಲಿದೆ ಎಂಬುದು ಕೆಲ ಕಾಂಗ್ರೆಸ್ ಹಾಗೂ ಟಿಡಿಪಿ ನಾಯಕರ ಮಾತು. ಕಾಂಗ್ರೆಸ್​, ಟಿಡಿಪಿ, ಸಿಪಿಐ, ತೆಲಂಗಾಣ ಜನ ಸಮಿತಿ ಒಂದು ಬಣವಾದರೆ, ಟಿಆರ್​ಎಸ್​, ಬಿಜೆಪಿ ಮತ್ತು ಓವೈಸಿ ನೇತೃತ್ವದ ಎಐಎಂಐಎಂ ಮತ್ತೊಂದು ಬಣ ಎನ್ನುವ ಮಾತಿದೆ. ರಾಹುಲ್​ ಗಾಂಧಿ ಚುನಾವಣಾ ಪ್ರಚಾರದ ವೇಳೆ ಈ ಬಗ್ಗೆ ಬಹಿರಂಗವಾಗಿಯೇ ಆರೋಪ ಮಾಡಿದ್ದಾರೆ. ಎಂ​ಐಎಂ ಇದು ಟಿಆರ್​ಎಸ್​​ನ ‘ಸಿ’ ತಂಡ, ಬಿಜೆಪಿ ಪಕ್ಷ ಟಿಆರ್​ಎಸ್​​ನ 'ಬಿ' ತಂಡ ಎಂದು ಹೇಳಿದ್ದರು. ಇದು ತೀವ್ರ ವಿವಾದವನ್ನು ಹುಟ್ಟುಹಾಕಿತ್ತು.

ಕಳೆದಬಾರಿ ಟಿಡಿಪಿ ಬೆಂಬಲದೊಂದಿಗೆ ಕೇವಲ 5 ಸ್ಥಾನಗಳಿಗೆ ಬಿಜೆಪಿ ತೃಪ್ತಿಪಟ್ಟುಕೊಂಡಿತ್ತು. ಈ ಬಾರಿ ಬಿಜೆಪಿ ಸರ್ಕಾರ ರಚಿಸುವ ಹಂಬಲದಲ್ಲಿದೆ. ಹಾಗಾಗಿ ಎಲ್ಲ 119 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಸೇರಿ ಅನೇಕರು ಬಿಜೆಪಿ ಪರ ಬಿರುಸಿನ ಪ್ರಚಾರ ನಡೆಸಿದ್ದಾರೆ. ರಾಹುಲ್​ ಗಾಂಧಿ ಹಾಗೂ ಚಂದ್ರಬಾಬು ನಾಯ್ಡು ಒಂದಾಗಿರುವುದು ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿಗೆ ಭಾರಿ ಹಿನ್ನಡೆಯಾಗುವ ಸಾಧ್ಯತೆ ಇದೆ. ಹಾಗಾಗಿ, ಟಿಆರ್​ಎಸ್​​ಗಿಂತ ಹೆಚ್ಚಾಗಿ ಟಿಡಿಪಿ ಬಗ್ಗೆ ಬಿಜೆಪಿ ಗಮನ ಹರಿಸಿದೆ.

ಇದನ್ನೂ ಓದಿ: ಆಂಧ್ರ ಜನರ ಮೇಲೆ ಕಾಂಗ್ರೆಸ್-ಟಿಡಿಪಿ ಕಣ್ಣು; ಟಿಆರ್​ಎಸ್​ಗೆ ಮಣ್ಣುಮುಕ್ಕಿಸಲು ಮಹಾಕೂಟಮಿ ಸಜ್ಜು
Loading...

ಫಲಿತಾಂಶ ಊಹೆ ಮಾಡುವುದು ಕಷ್ಟ:

119 ಸ್ಥಾನಗಳ ಪೈಕಿ 100 ಸ್ಥಾನಗಳನ್ನು ನಾವೇ ಗೆಲ್ಲುತ್ತೇವೆ ಎಂದು ಚಂದ್ರಶೇಖರ್​ ರಾವ್​ ಹೇಳಿಕೊಂಡಿದ್ದಾರೆ. ಹಾಸ್ಯಾಸ್ಪದ ಎಂದರೆ ಈ ಮಾತನ್ನು ಯಾರೊಬ್ಬರೂ ಗಂಭೀರವಾಗಿ ಪರಿಗಣಿಸಿಲ್ಲ! ಈ ಬಾರಿಯ ಚುನಾವಣಾ ಫಲಿತಾಂಶ ರಾಜಕೀಯ ತಜ್ಞರ ಲೆಕ್ಕಾಚಾರವನ್ನೂ ತಲೆಕೆಳಗಾಗಿಸಬಹುದು ಎಂಬ ಮಾತಿದೆ. ಈ ಬಾರಿಯ ತೆಲಂಗಾಣ ಚುನಾವಣಾ ಫಲಿತಾಂಶ ಹೀಗೇ ಇರುತ್ತದೆ ಎಂದು ಕರಾರುವಕ್ಕಾಗಿ ಹೇಳುವುದು ಕಷ್ಟ ಎನ್ನುತ್ತಾರೆ ಖ್ಯಾತ ರಾಜಕೀಯ ತಜ್ಞ ಕೆ. ನಾಗೇಶ್ವರ್​ ರಾವ್. ‘ಕಾಂಗ್ರೆಸ್​ ಹಾಗೂ ಟಿಆರ್​ಎಸ್​ ಸಮಬಲ ಹೊಂದಿದೆ. ಹಾಗಾಗಿ ಫಲಿತಾಂಶವನ್ನು ಈಗಲೇ ಊಹೆ ಮಾಡುವುದು ಕಷ್ಟ’ ಎನ್ನುತ್ತಾರೆ ಅವರು.

ಯಾರಿಗೆ ಸಿಗಲಿದೆ ಗೆಲುವು?: 

ತೆಲಂಗಾಣ ಎನ್ನುವ ಭಾವನಾತ್ಮಕ ಅಂಶದ ಮೇಲೆ 2014ರಲ್ಲಿ ಟಿಆರ್​ಎಸ್​​ ಅಧಿಕಾರಕ್ಕೆ ಬಂದಿತ್ತು. ಆದರೆ ಈ ಬಾರಿ ಜನರು ಭಾವನಾತ್ಮಕ ಅಂಶವನ್ನು ಬಿಟ್ಟು, ನಿತ್ಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದಾರೆ. ಲೆಕ್ಕಾಚಾರದ ಪ್ರಕಾರ ಮಹಾಕೂಟಮಿ ಗೆಲ್ಲಲಿದೆ. ಊಹೆ ಮೂಲಕ ಹೋದರೆ ಟಿಆರ್​ಎಸ್​ ಕಡೆ ಒಲವು ಜಾಸ್ತಿ ಇದೆ ಎನ್ನಬಹುದು.

ಇದನ್ನೂ ಓದಿ: ಪ್ರತ್ಯಕ್ಷ ವರದಿ: ಸ್ವಕ್ಷೇತ್ರ ಗಜ್​ವೆಲ್​ಗೆ ಇನ್ನೂ ಕಾಲಿಡದ ಕೆಸಿಆರ್​, ಕಾಂಗ್ರೆಸ್​ - ಟಿಡಿಪಿಯಿಂದ ಭಾರೀ ಸ್ಪರ್ಧೆ

2014ರ ಚುನಾವಣೆಯಲ್ಲಿ ಕಾಂಗ್ರೆಸ್​ ಹಾಗೂ ಟಿಡಿಪಿ ಒಟ್ಟಾಗಿ ಶೇ. 39.5 ಮತ ಗಳಿಕೆ ಮಾಡಿಕೊಂಡಿತ್ತು. ಟಿಆರ್​ಎಸ್​ಗೆ ಶೇ. 36 ಮತಗಳು ಬಂದಿದ್ದವು. ಟಿಆರ್​ಎಸ್​ ತೆಕ್ಕೆಗೆ 63 ಸ್ಥಾನಗಳು ಸಿಕ್ಕಿದ್ದರೆ, ಕಾಂಗ್ರೆಸ್​ಗೆ 21, ಟಿಡಿಪಿ 15, ಬಿಜೆಪಿ 5 ಹಾಗೂ ಎಂಐಎಂ 7 ಸ್ಥಾನಗಳನ್ನು ಗಳಿಸಿತ್ತು. ರೆಡ್ಡಿ,ಎಸ್​​ಸಿ, ಮುಸ್ಲಿಂ ಮತಗಳ ಮೇಲೆ ಮಹಾಕೂಟಮಿ ಕಣ್ಣಿಟ್ಟಿದೆ. ಎಸ್​​ಸಿಗಳು ಕಾಂಗ್ರೆಸ್​​ ಬೆಂಬಲಿಸುವ ಸಾಧ್ಯತೆ ಇದೆ. ಮುಸ್ಲಿಂ ಮತಗಳು ಇಬ್ಭಾಗವಾಗಲಿದೆ ಎನ್ನಲಾಗುತ್ತಿದೆ.

ಮಹಾಕೂಟಮಿ ಗೆದ್ದರೆ ಬಿಜೆಪಿಗೆ ಹಿನ್ನಡೆ:

ಈ ಮೊದಲು ಅನೇಕ ಚುನಾವಣಾ ಫಲಿತಾಂಶಗಳ ಬಗ್ಗೆ ಕರಾರುವಕ್ಕಾಗಿ ಭವಿಷ್ಯ ನುಡಿದಿದ್ದ ಕಾಂಗ್ರೆಸ್​ ಸಂಸದ ಲಗಡಪತಿ ರಾಜಗೋಪಾಲ್​ ಈ ಚುನಾವಣೆಯ ಸಮೀಕ್ಷೆ ಮಾಡಿದ್ದಾರೆ. ಅವರ ಪ್ರಕಾರ ಮಹಾಕೂಟಮಿ ಗೆಲುವಿನ ನಗೆ ಬೀರಲಿದೆ. ಗುಪ್ತಚರ ಇಲಾಖೆಗಳು ರಹಸ್ಯವಾಗಿ ನಡೆಸಿರುವ ಸಮೀಕ್ಷೆ ಪ್ರಕಾರ ಟಿಆರ್​ಎಸ್​​ಗೆ 48 ಹಾಗೂ ಮಹಾಕೂಟಮಿಗೆ 46 ಸ್ಥಾನಗಳು ಲಭ್ಯವಾಗಲಿವೆಯಂತೆ.

ಒಂದೊಮ್ಮೆ ಟಿಆರ್​ಎಸ್​ ಗೆಲುವಿನ ನಗೆ ಬೀರಿದರೆ ಕಾಂಗ್ರೆಸ್​​-ಟಿಡಿಪಿ ಮೈತ್ರಿಗೆ ಇದು ದೊಡ್ಡ ಹೊಡೆತ ನೀಡಲಿದೆ. 2019ರಲ್ಲಿ ಸ್ಥಳೀಯ ಪಕ್ಷಗಳು ಒಟ್ಟಾಗಿ ಬಿಜೆಪಿಯನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳುತ್ತಿವೆ. ಒಂದೊಮ್ಮೆ ಈ ಚುನಾವಣೆಯಲ್ಲಿ ಮಹಾಕೂಟಮಿಗೆ ವಿಜಯದ ಹಾರ ಬಿದ್ದರೆ ಇದರಿಂದ ಟಿಆರ್​ಎಸ್​ಗಿಂತ ಬಿಜೆಪಿಗೆ ತೀವ್ರ ಹಿನ್ನಡೆ ಉಂಟಾಗಲಿದೆ.

ಇದನ್ನೂ ಓದಿ: ಕೊಡಂಗಲ್​​ನಲ್ಲಿ ಕೆಸಿಆರ್ ಸಭೆಗೂ ಮುನ್ನ ತೆಲಂಗಾಣ ಕಾಂಗ್ರೆಸ್​ ನಾಯಕ ರೇವಂತ್ ರೆಡ್ಡಿ ಬಂಧಿಸಿದ ಪೊಲೀಸರು

First published:December 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ