ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್‌ಗಳ (Smartphone) ಬಳಕೆ ವಿಪರೀತವಾಗಿ ಹೆಚ್ಚಿದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ಕೈಗಳಲ್ಲಿ ಸ್ಮಾರ್ಟ್ ಫೋನ್ ಇದ್ದೇ ಇರುತ್ತದೆ. ಸಮಯ ಸಿಕ್ಕಾಗಲೆಲ್ಲಾ ಅಕ್ಕಪಕ್ಕದಲ್ಲಿ ಏನಾಗುತ್ತಿದೆ ಎನ್ನುವುದನ್ನು ಗಮನಿಸದೆ ಫೋನಿನಲ್ಲೇ ತಲ್ಲೀನರಾಗಿರುತ್ತಾರೆ. ಯಾವುದೇ ವಿಷಯದ ಬಗ್ಗೆ ತಿಳಿದುಕೊಳ್ಳಲು ಯೂಟ್ಯೂಬ್ (YouTube) ಇದೆ ಎಂಬ ಭಾವನೆ ಇಂದು ಬೆಳೆಯುತ್ತಿದೆ. ಆದರೆ ಯೂಟ್ಯೂಬ್ ಒಳ್ಳೆಯ ಕೆಲಸಗಳಿಗೆ ಬಳಸಿದರೆ ಒಳ್ಳೆಯದು, ಆದರೆ ಕಳ್ಳತನ, ಎಟಿಎಂ ಲೂಟಿ ಹೀಗೆ ಹಲವು ಅಪರಾಧ (Crime) ಕೃತ್ಯಗಳಿಗೂ ಉಪಯೋಗಿಸಲಾಗುತ್ತದೆ. ಅಲ್ಲದೆ ವ್ಯಾಯಾಮ (Exercise ), ವ್ಯವಸಾಯ (Agriculture), ಶಿಕ್ಷಣದ ಬಗ್ಗೆ ತಿಳಿದುಕೊಳ್ಳಲು ಕೂಡ ಯೂಟ್ಯೂಬ್ ಮೊರೆ ಹೋಗುವವರಿದ್ದಾರೆ. ಆದರೆ ರೀತಿ ಲೈಂಗಿಕವಾಗಿ ಶೋಷಣೆಗೆ ಒಳಗಾಗಿದ್ದ ಬಾಲಕಿ ಯೂಟ್ಯೂಬ್ ನೋಡಿ ಮನೆಯಲ್ಲಿ ತನ್ನದೇ ಹೆರಿಗೆ (Delivery) ತಾನೆ ಮಾಡಿಕೊಂಡು, ಹುಟ್ಟಿದ ಮಗುವನ್ನು ಕತ್ತು ಹಿಸುಕಿ ಕೊಂದಿರುವ ಭಯಾನಕ ಘಟನೆ ಮಹಾರಾಷ್ಟದಲ್ಲಿ ನಡೆದಿದೆ.
ಆನ್ಲೈನ್ನಲ್ಲಿ ಪರಿಚಯವಾದ ವ್ಯಕ್ತಿಯೊಂದಿಗೆ ಲೈಂಗಿಕ ಸಂಬಂಧ
ನಾಗ್ಪುರದ ಅಂಬಾಜಾರಿ ಪ್ರದೇಶದ ಅಪ್ರಾಪ್ತ ಬಾಲಕಿ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬನ ಜೊತೆ ಸ್ನೇಹ ಬೆಳೆಸಿಕೊಂಡಿದ್ದಾಳೆ. ಇಬ್ಬರ ಪರಿಚಯವಾದ ಕೆಲವು ದಿನಗಳ ನಂತರ ಭೇಟಿಯಾಗಿ ದೈಹಿಕ ಸಂಬಂಧ ಬೆಳೆಸಿದ್ದಾರೆ. ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದಾಳೆ. ಅಲ್ಲದೆ 9 ತಿಂಗಳೂ ತನ್ನ ಮನೆಯವರಿಗೆ ತಾನೂ ಗರ್ಭಿಣಿ ಎನ್ನುವ ವಿಚಾರವನ್ನು ಮುಚ್ಚಿಟ್ಟಿದ್ದಾಳೆ.
ಆರೋಗ್ಯ ಸಮಸ್ಯೆ ಎಂದು ಮನೆಯವರಿಗೆ ಸುಳ್ಳು
ಗರ್ಭಿಣಿಯಾಗಿದ್ದರಿಂದ ಹೊಟ್ಟೆ ನೋಡಿ ತಾಯಿ ಕೇಳಿದಾಗಲೆಲ್ಲಾ ಹುಡುಗಿ ತನಗೆ ಆರೋಗ್ಯ ಸಮಸ್ಯೆ ಇದೆ ಎಂದು ಹೇಳುತ್ತಲೇ ಬಂದಿದ್ದಾಳೆ. ಈ ವಿಷಯ ಮನೆಯಲ್ಲಿ ತಿಳಿದರೆ ಏನಾಗುವುದೋ ಎಂಬ ಭಯದಿಂದ ವಿಷಯ ಮುಚ್ಚಿಟ್ಟಿದ್ದಾಳೆ. ಆದರೆ ಹೊಟ್ಟೆಯಲ್ಲಿ ಮಗುವಿನ ಬೆಳವಣಿಗೆ ಮುಂದುವರಿದಿದೆ.
ಇದನ್ನೂ ಓದಿ: YouTube ನೋಡಿ ಮನೆಯಲ್ಲೇ ಔಷಧಿ ಮಾಡ್ಕೋತೀರಾ? ಇಲ್ಲಿ ನೋಡಿ ವ್ಯಕ್ತಿಯೊಬ್ಬನ ಪ್ರಾಣನೇ ಹೋಯ್ತು!
ಮನೆಯಲ್ಲಿ ಹೆರಿಗೆ ಮಾಡಿಕೊಳ್ಳಲು ಯೂಟ್ಯೂಬ್ ಆಯ್ಕೆ
ಮನೆಯವರಿಂದ ತಾನು ಗರ್ಭಿಣಿ ಎಂಬ ವಿಷಯವನ್ನು ಮುಚ್ಚಿಟ್ಟಿದ್ದ ಬಾಲಕಿ, ವಿಷಯ ಯಾರಿಗೂ ತಿಳಿಯಬಾರದೆಂದು ತಾನೇ ಹೆರಿಗೆ ಮಾಡಿಕೊಳ್ಳಬೇಕೆಂದು ತೀರ್ಮಾನಿಸಿದ್ದಾಳೆ. ಅದಕ್ಕಾಗಿ ಆಕೆ ಯೂಟ್ಯೂಬ್ ಆಯ್ಕೆ ಮಾಡಿಕೊಂಡ ಬಾಲಕಿ, ಪ್ರತಿದಿನ ಹೆರಿಗೆ ಮಾಡಿಸುವ ವಿಡಿಯೋಗಳನ್ನು ನೋಡಲು ಶುರು ಮಾಡಿದ್ದಾಳೆ. ಸ್ವತಃ ಹೆರಿಗೆ ಮಾಡಿಕೊಳ್ಳುವ ಬಗ್ಗೆ ವಿಡಿಯೋಗಳ ಮೂಲಕ ತಿಳಿದುಕೊಂಡ ಬಾಲಕಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಹೆರಿಗೆ ಮಾಡಿಕೊಂಡಿದ್ದಾಳೆ.
ಕತ್ತು ಹಿಸುಕಿ ನವಜಾತ ಶಿಶು ಹತ್ಯೆ
ಯೂಟ್ಯೂಬ್ ನೋಡಿಕೊಂಡು ಮಾರ್ಚ್ 2ರಂದು ಹೆರಿಗೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾದ ಬಾಲಕಿ, ಮಗು ಬಗ್ಗೆ ಕೇಳಿದರೆ ಏನು ಹೇಳಬೇಕೆಂದು ತಿಳಿಯದೇ, ಗರ್ಭದಿಂದ ಹೊರಬಂದ ಮಗು ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಮುನ್ನವೇ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಬಳಿಕ ಶವವನ್ನು ಮನೆಯಲ್ಲಿದ್ದ ಪೆಟ್ಟಿಗೆಯೊಂದರಲ್ಲಿ ಬಚ್ಚಿಟ್ಟಿದ್ದಾಳೆ.
ತಾಯಿ ಆರೋಗ್ಯ ವಿಚಾರಿಸಿದಾಗ ಹೆರಿಗೆ ವಿಚಾರ ಬಹಿರಂಗ
ಹೊರ ಹೋಗಿದ್ದ ತಾಯಿ ಮನೆಗೆ ಬಂದಾಗ ಮಲಗಿದ್ದ ಬಾಲಕಿ ಅನಾರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಬಾಲಕಿ ಸ್ಥಿತಿ ನೋಡಿ ತಾಯಿ ತೀವ್ರವಾಗಿ ವಿಚಾರಿಸಿದಾಗ ಬಾಲಕಿ ಸಂಪೂರ್ಣ ವಿಚಾರವನ್ನು ವಿವರಿಸಿದ್ದಾಳೆ. ನಂತರ ಬಾಲಕಿಯನ್ನು ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವಿಷಯ ತಿಳಿದ ಪೊಲೀಸರು ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.
ಭಾರತೀಯ ದಂಡ ಸಂಹಿತೆ (IPC) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಕೊಲೆ ಆರೋಪ ದಾಖಲಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ