ಲಕ್ನೋ: ಮಕ್ಕಳಿಗೆ ಕೇಳಿದ್ದೆಲ್ಲಾ ಕೊಡಿಸಿದರೆ ಎಲ್ಲಿ ಮಕ್ಕಳು (Children) ಹಾಳಾಗಿ ಹೋಗುತ್ತಾರೆ ಅನ್ನೋ ಭಯ ಪೋಷಕರಲ್ಲಿರುತ್ತದೆ. ಹಾಗಾಗಿ ಪೋಷಕರು (Parents) ತಮ್ಮ ಮಕ್ಕಳ ಕೈಗೆ ಹಣ (Money) ಕೊಡುವ ಮುಂಚೆ ಹಣ ಯಾವುದಕ್ಕೆ ಬೇಕು ಅಂತೆಲ್ಲಾ ಪ್ರಶ್ನೆಗಳನ್ನು ಕೇಳುವುದನ್ನು ನಾವೆಲ್ಲಾ ನೋಡಿರುತ್ತೇವೆ. ಆದರೆ ಮಕ್ಕಳು ಇದನ್ನು ಪೋಷಕರು ದುಡ್ಡು ಬಿಚ್ಚಲ್ಲ ಅಂತ ತಿಳಿದುಕೊಂಡಿರುತ್ತಾರೆ. ಹೀಗೆ ಹಣದ ಅವಶ್ಯಕತೆ ಇರುವ ಮಕ್ಕಳು ಕೆಲವೊಮ್ಮೆ ಪೋಷಕರ ದುಡ್ಡನ್ನು ಕದಿಯಲು (Money Theft) ಮುಂದಾಗುತ್ತಾರೆ. ಅದು ತಪ್ಪು ಅಂತ ತಿಳಿದಿದ್ದರೂ ಸಹ ಕಳ್ಳತನ ಮಾಡುವುದನ್ನು ಶುರು ಮಾಡುತ್ತಾರೆ.
ಅದರಲ್ಲೂ ಈಗಿನ ಮಕ್ಕಳು ಪೋಷಕರ ಬಳಿ ಹಣ ಕೇಳುವುದಕ್ಕೆ ನಾನಾ ರೀತಿಯ ಸುಳ್ಳುಗಳನ್ನು ಹೇಳುವುದನ್ನು ನಾವೆಲ್ಲಾ ಒಂದಲ್ಲ ಒಂದು ಬಾರಿ ನೋಡಿರುತ್ತೇವೆ. ಇಲ್ಲಿಯೂ ಸಹ ಒಬ್ಬ ವಿದ್ಯಾರ್ಥಿ ತನ್ನ ತಂದೆಯಿಂದ ಹಣವನ್ನು ಸುಲಿಗೆ ಮಾಡಲು ಎಂತಹ ಪ್ಲ್ಯಾನ್ ಮಾಡಿದ್ದ ಅಂತ ನೋಡಿ.
ಐಫೋನ್ ಖರೀದಿ ಮಾಡ್ಬೇಕು ಅಂತ ಕಿಡ್ನ್ಯಾಪ್ ಪ್ಲ್ಯಾನ್ ಮಾಡಿದ ಹುಡುಗ
ಉತ್ತರ ಪ್ರದೇಶದ ಸೀತಾಪುರ್ ಜಿಲ್ಲೆಯಲ್ಲಿ ಓದುತ್ತಿರುವ 9ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ತಂದೆಯಿಂದ ಹಣವನ್ನು ಹೇಗಾದರೂ ಮಾಡಿ ಸುಲಿಗೆ ಮಾಡಬೇಕು ಅಂತ ಮತ್ತು ಅದರಿಂದ ಐಫೋನ್ ಖರೀದಿಸಬೇಕು ಅಂತ ತನ್ನದೇ ಆದ ಒಂದು ಕಿಡ್ನ್ಯಾಪ್ ಯೋಜನೆಯನ್ನು ಮಾಡಿದ್ದಾನೆ.
ಸಣ್ಣ ಗಾರ್ಮೆಂಟ್ ಅಂಗಡಿಯನ್ನು ಹೊಂದಿರುವ ಅವರ ತಂದೆ ಆ ಹುಡುಗನಿಗೆ ದುಬಾರಿಯ ಐಫೋನ್ ಅನ್ನು ಖರೀದಿಸಿ ಕೊಡಲು ನಿರಾಕರಿಸಿದಾಗ ಆ ಹುಡುಗ ಈ ರೀತಿಯ ಕಿಡ್ನ್ಯಾಪ್ ಪ್ಲ್ಯಾನ್ ಮಾಡಿದ್ದಾನೆ.
ಪೊಲೀಸರು ಈ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದಾಗ ಅವನು ಕರೆ ಮಾಡಿದ ಮೊಬೈಲ್ ಫೋನ್ ನ ಸ್ಥಳವನ್ನು ಪತ್ತೆ ಹಚ್ಚಿದಾಗ, ಅದು ಆ ಹುಡುಗನ ಸ್ನೇಹಿತನ ಮನೆ ಆಗಿತ್ತು. ಇದನ್ನು ಅರಿತುಕೊಂಡ ಪೊಲೀಸರು ಅಪ್ರಾಪ್ತ ವಯಸ್ಕನನ್ನು ಹಿಡಿದಿದ್ದಾರೆ.
ಸ್ನೇಹಿತನ ಫೋನ್ ಬಳಸಿಕೊಂಡು ತಂದೆಗೆ 5 ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡಿದ್ನಂತೆ
ಈ ಬಾಲಕ ತನ್ನ ಸ್ನೇಹಿತನ ಮೊಬೈಲ್ ಫೋನ್ ಬಳಸಿ ತನ್ನ ತಂದೆಯಿಂದ 5 ಲಕ್ಷ ರೂಪಾಯಿ ಕೇಳಿದ್ದನು. ಸೀತಾಪುರ್ ಕೊತ್ವಾಲಿ ಎಸ್‌ಎಚ್‌ಒ ಟಿ.ಪಿ. ಸಿಂಗ್ ಅವರು ಈ ಬಾಲಕ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದು, ತಂದೆಯೊಂದಿಗೆ ವಾಸಿಸುತ್ತಿದ್ದಾನೆ ಎಂದು ಹೇಳಿದ್ದಾರೆ. ಅವನು ಕೇವಲ ಒಂದು ವರ್ಷದವನಾಗಿದ್ದಾಗ ಅವನ ತಾಯಿ ತೀರಿಕೊಂಡರು ಎಂದು ಹೇಳಿದ್ದಾರೆ.
"ಬುಧವಾರ ಶಾಲೆ ಮುಗಿಸಿದ ವಿದ್ಯಾರ್ಥಿ ಮನೆಗೆ ಬಾರದೆ ಇದ್ದಾಗ ಆತನ ತಂದೆ ಮತ್ತು ಇತರ ಸಂಬಂಧಿಕರು ಅವನನ್ನು ಹುಡುಕಲು ಶುರು ಮಾಡಿದ್ದಾರೆ.
ನಂತರ ವಾಟ್ಸಪ್ ನಲ್ಲಿ 5 ಲಕ್ಷ ರೂಪಾಯಿ ಸುಲಿಗೆ ಕರೆ ಬಂದಿತ್ತು. ಈ ಭಾರಿ ಮೊತ್ತದ ಹಣವನ್ನು ಖೈರಾಬಾದ್‌ನಲ್ಲಿ ಮಸೀದಿ ಬಳಿ ತಲುಪಿಸಬೇಕಿತ್ತು" ಎಂದು ಸಿಂಗ್ ಹೇಳಿದ್ದಾರೆ.
ದೂರು ಸ್ವೀಕರಿಸಿದ ನಂತರ ತನಿಖೆ ಶುರು ಮಾಡಿದ ಪೊಲೀಸರು
ಆ ಕರೆಯನ್ನು ಸ್ವೀಕರಿಸಿದ ತಂದೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ನಂತರದಲ್ಲಿ ಜಿಲ್ಲೆಯ ಪೊಲೀಸರು, ಸೈಬರ್ ಮತ್ತು ಎಸ್‌ಒಜಿ ತಂಡಗಳು ಈ ಪ್ರಕರಣದ ಬಗ್ಗೆ ತನಿಖೆ ಶುರು ಮಾಡಿದರು.
"ನಾವು ಅವರ ಮಗನ ರಕ್ಷಣೆಯ ಬಗ್ಗೆ ದೂರುದಾರರಿಗೆ ಭರವಸೆ ನೀಡಿದ್ದೇವೆ ಮತ್ತು ಅವರು ತಮ್ಮ ಮಗನ ಸುರಕ್ಷಿತ ಬಿಡುಗಡೆಗಾಗಿ ಹಣವನ್ನು ತೆಗೆದುಕೊಂಡು ಹೋಗುವಾಗ ಅವರ ಜೊತೆಯಲ್ಲಿ ನಮ್ಮ ತಂಡವನ್ನು ಅವರೊಂದಿಗೆ ಕಳುಹಿಸಿದ್ದೆವು" ಎಂದು ಎಸ್‌ಎಚ್‌ಒ ಹೇಳಿದರು.
ನಂತರ ರಾತ್ರಿ, ಸುಲಿಗೆ ಕರೆಗೆ ಬಳಸಿದ ಮೊಬೈಲ್ ಫೋನ್ ನ ಸ್ಥಳವನ್ನು ಪೊಲೀಸರು ಪತ್ತೆ ಹಚ್ಚಿದರು. ಮೊಬೈಲ್ ಫೋನ್ ಮಾಲೀಕನಾದ ಪಾದರಕ್ಷೆ ಅಂಗಡಿ ಮಾಲೀಕನನ್ನು ವಿಚಾರಿಸಿದಾಗ 9ನೇ ತರಗತಿ ಓದುತ್ತಿರುವ ಆತನ ಮಗ ಫೋನ್ ಬಳಸುತ್ತಿರುವುದು ಬೆಳಕಿಗೆ ಬಂದಿದೆ.
"ಈ ವಿದ್ಯಾರ್ಥಿಯನ್ನು ಹಿಡಿಯಲು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಳುಹಿಸಲಾಯಿತು. ಕೊನೆಗೆ ಕೌನ್ಸೆಲಿಂಗ್ ಬಳಿಕ ಆ ಬಾಲಕನನ್ನು ಅವನ ತಂದೆಗೆ ಒಪ್ಪಿಸಲಾಯಿತು” ಎಂದು ಸಿಂಗ್ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ