ಕೋವಿಡ್ ಭೀತಿಯನ್ನು (Covid 19) ಮರೆತು ಜನರು ಸಹಜ ಜನಜೀವನಕ್ಕೆ ಮರಳಿದ್ದರೂ ಇನ್ನೂ ಕೆಲವರು ಸಾಮಾಜಿಕ ಅಂತರ (Social Distance) ಕಾಯ್ದುಕೊಳ್ಳುವಿಕೆ, ಮಾಸ್ಕ್ ಧರಿಸುವುದು (Wear Mask) ಹಾಗೂ ಸ್ಯಾನಿಟೈಸರ್ ಬಳಕೆ ಈ ಮೂರು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುತ್ತಿದ್ದಾರೆ.
ಅದರಲ್ಲೂ ವಿಮಾನ, ಬಸ್ ಹಾಗೂ ರೈಲಿನಲ್ಲಿ ಪ್ರಯಾಣಿಸುವ ಕೆಲವು ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿಯೇ ಪ್ರಯಾಣಿಸುತ್ತಾರೆ. ತಮ್ಮೊಂದಿಗೆ ಇತರರನ್ನು ಸುರಕ್ಷಿತವಾಗಿರಿಸುವ ನಿಟ್ಟಿನಲ್ಲಿ ಮಾಸ್ಕ್ ಧರಿಸುವುದನ್ನು ಮುಂದುವರಿಸುತ್ತಿದ್ದಾರೆ.
ಇದನ್ನೂ ಓದಿ: Smoking In Flight: ಬೆಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಸಿಗರೇಟ್ ಸೇದಿದ ಯುವತಿಯ ಬಂಧನ
ಮಾಸ್ಕ್ ತೆಗೆಯುವುದಕ್ಕೆ $100,000 ಆಫರ್
ಮಾಸ್ಕ್ ಧರಿಸಿ ತನ್ನೊಂದಿಗೆ ಪ್ರಯಾಣಿಸುತ್ತಿದ್ದ ಸಹ ಪ್ರಯಾಣಿಕರೊಬ್ಬರಿಗೆ ಮಾಸ್ಕ್ ತೆಗೆಯುವುದಕ್ಕೆ $100,000 ಅಂದರೆ 825,405 ರೂಪಾಯಿಯನ್ನು ಅಮೇರಿಕನ್ ವಾಣಿಜ್ಯೋದ್ಯಮಿ ಸ್ಟೀವನ್ ಟಾಡ್ ಕಿರ್ಷ್ ಆಫರ್ ಮಾಡಿದರೂ ಆ ವ್ಯಕ್ತಿ ಮಾಸ್ಕ್ ತೆಗೆಯುವುದಿಲ್ಲ ಎಂದು ಹೇಳಿ ಆಫರ್ ತಿರಸ್ಕರಿಸಿರುವುದಾಗಿ ಸ್ಟೀವನ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಈ ಸಹ ಪ್ರಯಾಣಿಕರು ಫಾರ್ಮಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂಬುದಾಗಿ ಸ್ಟೀವನ್ ಟಾಡ್ ತಿಳಿಸಿದ್ದಾರೆ. ಇಷ್ಟೊಂದು ಹಣವನ್ನು ನೀಡುವುದಾಗಿ ತಿಳಿಸಿದರೂ ಜನರು ಆರೋಗ್ಯದ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಿದ್ದಾರೆ ಎಂಬುದಾಗಿ ಸ್ಟೀವನ್ ತಿಳಿಸಿದ್ದಾರೆ.
ಆಫರ್ ತಿರಸ್ಕರಿಸಿದ ಸಹ ಪ್ರಯಾಣಿಕರು!
ಫಸ್ಟ್ ಕ್ಲಾಸ್ ಡೆಲ್ಟಾ ಫ್ಲೈಟ್‌ನಲ್ಲಿ ಸ್ಟೀವನ್ ಪಕ್ಕದ ಸೀಟಿನಲ್ಲಿದ್ದ ಮಹಿಳಾ ಸಹ ಪ್ರಯಾಣಿಕರೊಬ್ಬರಿಗೆ ಮಾಸ್ಕ್ ತೆಗೆಯಲು ಭಾರೀ ಮೊತ್ತವನ್ನು ಆಫರ್ ಮಾಡಿ ಅವರು ತಿರಸ್ಕರಿಸಿರುವ ಸುದ್ದಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಆದರೆ ನೆಟ್ಟಿಗರು ಸ್ಟೀವನ್ ಮಾಡಿದ ಕೆಲಸಕ್ಕೆ ಛೀಮಾರಿ ಹಾಕಿದ್ದಾರೆ. 67 ರ ಹರೆಯದ ಬಿಲಿಯನೇರ್ ತಮ್ಮ ಪಕ್ಕದಲ್ಲಿ ಮಾಸ್ಕ್ ಧರಿಸಿ ಕುಳಿತಿದ್ದ ಸಹಪ್ರಯಾಣಿಕರಿಗೆ ಮಾಸ್ಕ್ ಧರಿಸಿದರೂ ಪ್ರಯೋಜನವಿಲ್ಲ ಎಂದು ತಿಳಿಸಿದ್ದಾರೆ. ಅಂತೆಯೇ ಮಾಸ್ಕ್ ತೆಗೆದರೆ $ 100,000 ಅನ್ನು ನೀಡುವುದಾಗಿಯೂ ಸ್ಟೀವ್ ಆಮಿಷವೊಡ್ಡಿದ್ದಾರೆ. ಆದರೆ 60 ರ ಹರೆಯದ ಸಹಪ್ರಯಾಣಿಕೆ ಈ ಆಫರ್ ಅನ್ನು ತಿರಸ್ಕರಿಸಿದ್ದಾರೆ.
ಬಿಲಿಯನೇರ್ ಕೃತ್ಯಕ್ಕೆ ಛೀಮಾರಿ ಹಾಕಿದ ನೆಟ್ಟಿಗರು
ಸ್ಟೀವನ್ ಈ ಘಟನೆಯನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳುತ್ತಿದ್ದಂತೆಯೇ ನೆಟ್ಟಿಗರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದು ಮಹಿಳೆಯ ವಿಮಾನ ಪ್ರಯಾಣವನ್ನು ಹಾಳುಗೆಡವಿದ ಸೊಕ್ಕಿನ ವ್ಯಕ್ತಿ, ಮೂರ್ಖ ವ್ಯಕ್ತಿ ಎಂದು ಜರೆದಿದ್ದಾರೆ.
ಈ ಘಟನೆ ವೈರಲ್ ಆಗುತ್ತಿದ್ದಂತೆಯೇ ಟೆಕ್ ಟೈಕೂನ್, ತಮ್ಮ ಮೌನ ಮುರಿದಿದ್ದು ತಮ್ಮ ಉದ್ದೇಶ ಏನಾಗಿತ್ತು ಎಂದು ತಿಳಿಸಿದ್ದಾರೆ. ಇದಕ್ಕೆ, ಆಕೆಯ ನಂಬಿಕೆ ಹೇಗಿದೆ ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ತಾವು $100,000 ಕೊಡುಗೆಯನ್ನು ಆಕೆಗೆ ನೀಡುವುದಾಗಿ ತಿಳಿಸಿದ್ದಾಗಿ ಸ್ಟೀವನ್ ತಿಳಿಸಿದ್ದಾರೆ.
ವೈರಸ್‌ನ ವಿರುದ್ಧ ಪರಿಣಾಮಕಾರಿ ರಕ್ಷಣೆಯಂತೆ ಮಾಸ್ಕ್ ಕಾರ್ಯ ನಿರ್ವಹಿಸುತ್ತದೆ ಎಂಬುದು ತಮಗೆ ತಿಳಿದಿದ್ದರೂ ಅವರ ನಿಲುವು ಹೇಗಿತ್ತು ಎಂಬುದನ್ನು ಅರಿತುಕೊಳ್ಳಲು ಸಣ್ಣ ಪರೀಕ್ಷೆ ಮಾಡಿದೆ ಎಂದು ಸ್ಟೀವನ್ ತಿಳಿಸಿದ್ದಾರೆ.
ಇದನ್ನೂ ಓದಿ: EasyJet Flight: ಪ್ರಯಾಣಿಕರಿಗೆ ಬೆಳಕಿನ ದರ್ಶನ ಮಾಡಿಸಲು ವಿಮಾನವನ್ನು 360 ಡಿಗ್ರಿ ತಿರುಗಿಸಿದ ಪೈಲಟ್!
ಆಹಾರ ಸೇವಿಸಲು ಮಾತ್ರ ಮಾಸ್ಕ್ ತೆಗೆಯುತ್ತಿದ್ದರು
ಆದರೆ ಹಣಕ್ಕಿಂತಲೂ ತನ್ನ ಆರೋಗ್ಯ ದೊಡ್ಡದು ಹಾಗೂ ಮಾಸ್ಕ್‌ನ ಮೇಲೆ ಆಕೆ ನಂಬಿಕೆ ಇರಿಸಿದ್ದರು, ಅಷ್ಟೇ ಅಲ್ಲದೇ ನನ್ನ ಊಹೆಯನ್ನು ಅವರು ತಪ್ಪಾಗಿಸಿದರು ಎಂದು ಸುದ್ದಿಮಾಧ್ಯಮಕ್ಕೆ ಸ್ಟೀವನ್ ಹೇಳಿಕೆ ನೀಡಿದ್ದಾರೆ. ಮುಂದುವರಿದು, 'ಆಕೆ ಆಹಾರ ಸೇವಿಸಲು ಮತ್ತು ಕುಡಿಯಲು ಮಾಸ್ಕ್ ಅನ್ನು ತೆಗೆದಾಗ, ಉಸಿರಾಟದ ಸಮಯದಲ್ಲಿ ವೈರಸ್ ಆಕೆಯನ್ನು ಸೋಕಬಹುದು ಎಂದು ತಿಳಿಸಿದ್ದೆ' ಎಂದು ಸ್ಟೀವನ್ ತಿಳಿಸಿದ್ದಾರೆ.
ತಿನ್ನುವ ಕುಡಿಯುವ ಸಮಯದಲ್ಲಿ ನೀವು ಸೋಂಕಿಗೆ ಒಳಗಾಗುವುದಿಲ್ಲ ಎಂಬ ಅರಿವು ಎಲ್ಲರಿಗೂ ಇದ್ದುದರಿಂದ ಆಕೆಗೆ ಉಪಹಾರ ನೀಡಿದ ಒಡನೆಯೇ ತಮ್ಮ ಮಾಸ್ಕ್ ಅನ್ನು ತೆಗೆದರು ಎಂದು ಸ್ಟೀವನ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ಮಾಸ್ಕ್ ತೆಗೆಯುವುದಕ್ಕೆ ಈ ಹಿಂದೆ ಕೂಡ ಹಣ ಆಫರ್ ಮಾಡಿದ್ದರು
ಸ್ಟೀವನ್‌ರ ಈ ಪೋಸ್ಟ್ 32.2 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ರೀತಿ ವಿಮಾನದಲ್ಲಿ ಸತ್ಯ ಪರೀಕ್ಷೆ ನಡೆಸಿರುವುದಕ್ಕೆ ಹಲವಾರು ಬಳಕೆದಾರರು ಅವರನ್ನು ಮೂದಲಿಸಿದ್ದಾರೆ. ಬಹುಶಃ ಮುಂದಿನ ಬಾರಿ ನಾನು ಸಿಲಿಕಾನ್ ವ್ಯಾಲಿ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಯಾರಾದರೂ ಸಹಪ್ರಯಾಣಿಕರ ಜೊತೆ ಆಸೀನನಾಗುತ್ತೇನೆ ಎಂದು ಸ್ಟೀವನ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಹೆಚ್ಚಿನ ಬಳಕೆದಾರರು ಆತನೊಬ್ಬ ಸುಳ್ಳುಗಾರ ಎಂದು ಕರೆದಿದ್ದು, ವಿಮಾನದಲ್ಲಿ ಮಾಸ್ಕ್ ತೆಗೆಯುವಂತೆ ಸ್ಟೀವನ್ ಹಣ ನೀಡುತ್ತಿರುವುದು ಇದು ಮೊದಲ ಬಾರಿಯಲ್ಲ ಎಂದು ವರದಿಯಾಗಿದೆ. ಈ ಹಿಂದೆ ಕೂಡ ಅವರು ತಮ್ಮ ಪಕ್ಕ ಕುಳಿತಿದ್ದ ಸಹಪ್ರಯಾಣಿಕರಿಬ್ಬರಿಗೆ $10,000 ಅನ್ನು ಆಫರ್ ಮಾಡಿದ್ದು, ಅವರಿಬ್ಬರು ಅದನ್ನು ನಿರಾಕರಿಸಿದ್ದರು ಎಂದು ತಿಳಿದು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ