ಮುಜಾಫರ್​​ಪುರ್​ ಶೆಲ್ಟರ್​ಹೋಂ ಅತ್ಯಾಚಾರ ಪ್ರಕರಣ: ಶಾಸಕ ಬ್ರಜೇಶ್​ ಠಾಕೂರ್​ ಸೇರಿ 19 ಜನರು ದೋಷಿ

ಬಿಹಾರದ ಮುಜಾಫರ್​​ಪುರ್​ನ ಸರ್ಕಾರಿ ಅನುದಾನಿತ ವಸತಿ ನಿಲಯದಲ್ಲಿ ಅಪ್ರಾಪ್ತ ಬಾಲಕಿಯರ  ಅತ್ಯಾಚಾರ, ಹಲ್ಲೆ, ಕಿರುಕುಳ ಮತ್ತು ದೀರ್ಘ ಸಮಯದವರೆಗೆ ಬೆತ್ತಲಾಗಿ ಕೂರಿಸಿದಂತಹ ಬೆಚ್ಚಿ ಬೀಳಿಸುವಂತಹ ಕಿರುಕುಳ ನಡೆಸಿರುವುದು ಬೆಳಕಿಗೆ ಬಂದಿತ್ತು.

ದೋಷಿ ಬ್ರಜೇಶ್​ ಠಾಕೂರ್​

ದೋಷಿ ಬ್ರಜೇಶ್​ ಠಾಕೂರ್​

  • Share this:
ನವದೆಹಲಿ(ಜ. 20): ಮುಜಾಫರ್​​ಪುರ್​ ಪುನರ್ವಸತಿ ಕೇಂದ್ರದಲ್ಲಿ ಬಾಲಕಿಯರ ಮೇಲೆ ನಡೆದಿದ್ದ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಹಾಗೂ ಬಿಹಾರ್​ ಪೀಪಲ್ಸ್​ ಪಕ್ಷದ ಶಾಸಕ ಬ್ರಜೇಶ್​ ಠಾಕೂರ್​ನನ್ನು ದೋಷಿ ಎಂದು ದೆಹಲಿ ನ್ಯಾಯಾಲಯ ತೀರ್ಮಾನಿಸಿದೆ.

ಪೋಕ್ಸೋ ಕಾಯ್ದೆಯಡಿ ಆತನನ್ನು ದೋಷಿ ಎಂದು ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಬ್ರಜೇಶ್ ಸೇರಿ 20 ಆರೋಪಿಗಳ ಪೈಕಿ 19 ಮಂದಿಯನ್ನು ದೋಷಿಗಳೆಂದು ಕೋರ್ಟ್ ತೀರ್ಪಿತ್ತಿದೆ. ಈ 19 ದೋಷಿಗಳಿಗೆ ಜ. 28ರಂದು ನ್ಯಾಯಾಲಯ ಶಿಕ್ಷೆ ಪ್ರಕಟಿಸಲಿದ್ದು. ಜೀವಾವಧಿ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ನ್ಯಾಯಾಲಯ ತೀರ್ಪು ಪ್ರಕಟಿಸುತ್ತಿದ್ದಂತೆ ಒಬ್ಬ ದೋಷಿಯಂತೂ ದುಃಖಿತಗೊಂಡು, "ನಾನು ಯಾವುದೇ ಬಾಲಕಿಯನ್ನು ಸ್ಪರ್ಶಿಸಿಯೂ ಇಲ್ಲ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ" ಎಂದು ಕೋರ್ಟ್​ ಆವರಣದಲ್ಲಿಯೇ ಭಾವೋದ್ವೇಗಗೊಂಡ ಘಟನೆ ನಡೆಯಿತು.

ಬಿಹಾರದ ಮುಜಾಫರ್​​ಪುರ್​ನ ಸರ್ಕಾರಿ ಅನುದಾನಿತ ವಸತಿ ನಿಲಯದಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ, ಹಲ್ಲೆ, ಕಿರುಕುಳ ಮತ್ತು ದೀರ್ಘ ಸಮಯದವರೆಗೆ ಬೆತ್ತಲಾಗಿ ಕೂರಿಸುವಂತಹ ನಾನಾ ಕಿರುಕುಳಗಳು ನಡೆಸಿರುವುದು ಬೆಳಕಿಗೆ ಬಂದಿತ್ತು.

ಇದನ್ನು ಓದಿ: ಬಿಹಾರ ಆಶ್ರಯ ತಾಣದ ಕ್ರೌರ್ಯ; ಅಸಭ್ಯ ಹಾಡಿಗೆ ನೃತ್ಯ, ಅತಿಥಿಗಳಿಂದ ಅತ್ಯಾಚಾರ; ಸಿಬಿಐ ಮುಂದೆ ಬಾಲಕಿಯರು ಬಿಚ್ಚಿಟ್ಟ ಸತ್ಯಗಳು

ಈ ಪುನರ್ವಸತಿ ಕೇಂದ್ರದಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ವಿಚಾರವು ಟಾಟಾ ಇನ್ಸ್​ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ ಸಂಸ್ಥೆ 2018, ಮೇ 26ರಂದು ಸರ್ಕಾರಕ್ಕೆ ವರದಿ ನೀಡಿದಾಗ ಬೆಳಕಿಗೆ ಬಂದಿತ್ತು. ಮಾಜಿ ಸಚಿವೆ ಹಾಗೂ ಆಗ ಜೆಡಿಯು ನಾಯಕಿಯಾಗಿದ್ದ ಮಂಜು ವರ್ಮಾ ಅವರ ಪತಿಯು ಈ ಶೆಲ್ಟರ್​ಹೋಂನ ಮಾಲೀಕರ ಜೊತೆ ಸಂಬಂಧ ಹೊಂದಿದ್ದಾರೆಂಬ ವಿಚಾರವೂ ಬೆಳಕಿಗೆ ಬಂದಿತ್ತು. 2018ರಲ್ಲೇ ಮಂಜು ವರ್ಮಾ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.

ದೇಶವನ್ನೆ ಬೆಚ್ಚಿ ಬೀಳಿಸಿದ ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದ್ದು, ಪ್ರಕರಣ ಕುರಿತು 73 ಪುಟಗಳ ಜಾರ್ಜ್​ ಶೀಟ್​ ಸಲ್ಲಿಸಲಾಗಿತ್ತು. ಘಟನೆ ಸಂಬಂಧ ಮಾಜಿ ಸಚಿವೆ ಮಂಜು ವರ್ಮಾ ಅವರನ್ನು ಬಂಧಿಸುವುದರ ಜೊತೆಗೆ ಜೆಡಿಯು ಸದಸ್ಯ ಸ್ಥಾನ ಅವರಿಂದ ರಾಜೀನಾಮೆ ಪಡೆಯಲಾಗಿತ್ತು.

ಇನ್ನು ಪ್ರಕರಣವನ್ನು ವಿಶ್ವಾಸಾರ್ಹತೆ ಮೇಲೆ ವಜಾಗೊಳಿಸುವಂತೆ ಕೋರಿ ಬ್ರಜೇಶ್​ ಠಾಕೋರ್ ಸಲ್ಲಿಸಿದ್ದ ಮನವಿಯನ್ನು ಶನಿವಾರ ಕೋರ್ಟ್​ ವಜಾಗೊಳಿಸಿತ್ತು.
First published: