ಮಾರ್ಚ್ ತಿಂಗಳೆಂದರೆ ಹಣಕಾಸು ವರ್ಷದ ಕೊನೆಯ ತಿಂಗಳು. ಇಷ್ಟರಲ್ಲಾಗಲೇ ಐಟಿ ರಿಟರ್ನ್ ಫೈಲ್ ಮಾಡುವ ಪ್ರಕ್ರಿಯೆ ಚಾಲನೆಯಲ್ಲಿರಬೇಕಿತ್ತು. ಆದರೆ, ಲಾಕ್ ಡೌನ್ ಹಿನ್ನೆಲೆಯಲ್ಲಿ ಎಲ್ಲವೂ ಮುಂದೂಡಿಕೆಯಾಗಿದೆ. ಆದಾಯ ತೆರಿಗೆ ಪಾವತಿದಾರರಿಗೂ ಉಸಿರಾಡಲು ಸರ್ಕಾರ ಸಮಯ ಕೊಟ್ಟಿದೆ. ಈ ಬಾರಿಯ ಬಜೆಟ್ನಲ್ಲಿ ಆದಾಯ ತೆರಿಗೆಯಲ್ಲಿ ಮಾಡಿದ ಕೆಲ ಬದಲಾವಣೆಗಳ ಪ್ರಯೋಜನ ಪಡೆಯಲು ಹಾಗೂ ಜೂನ್ 30ರವರೆಗೆ ನಾವು ಮಾಡಬಹುದಾದ ಹೂಡಿಕೆಗಳನ್ನ ತೋರಿಸಲು ಸಾಧ್ಯವಾಗುವಂತೆ ಐಟಿ ರಿಟರ್ನ್ ಫಾರ್ಮನ್ನು ಪರಿಷ್ಕರಿಸಲು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ನಿರ್ಧರಿಸಿದೆ.
ಜನವರಿಯಲ್ಲಿ ಈಗಾಗಲೇ ಬಿಡುಗಡೆ ಮಾಡಲಾಗಿರುವ ಐಟಿರ್-1 (ಸಹಜ್) ಮತ್ತು ಐಟಿಆರ್-4 (ಸುಗಮ್) ಅರ್ಜಿಗಳನ್ನು ಪರಿಷ್ಕರಿಸಲಾಗುವುದು. ಬಜೆಟ್ನಲ್ಲಿ ನೀಡಲಾದ ವಿನಾಯಿತಿಗಳನ್ನ ಅರ್ಜಿಯಲ್ಲಿ ಒಳಗೊಳ್ಳಲಾಗುವುದು. ಈ ಪರಿಷ್ಕೃತ ಅರ್ಜಿನಮೂನೆಗಳು ನೋಟಿಫೈ ಆದ ಬಳಿಕ ಐಟಿ ರಿಟರ್ನ್ ವೆಬ್ಸೈಟ್ನಲ್ಲಿ ಮಾರ್ಪಡಿತ ಅರ್ಜಿಯನ್ನು ಹಾಕಲಾಗುತ್ತದೆ. ಮೇ 31ರಷ್ಟರಲ್ಲಿ ಈ ಪರಿಷ್ಕೃತ ಅರ್ಜಿ ಲಭ್ಯವಿರುವ ನಿರೀಕ್ಷೆ ಇದೆ.
ಇದನ್ನೂ ಓದಿ: ಸೈಕಲ್ ಖರೀದಿಸಲು ಕೂಡಿಟ್ಟಿದ್ದ ಹಣವನ್ನು ಸಿಎಂ ಪರಿಹಾರ ನಿಧಿಗೆ ಕೊಟ್ಟ ಬಾಲಕ
ಕೇಂದ್ರ ಸರ್ಕಾರವು ಆದಾಯ ತೆರಿಗೆ ಅಡಿಯಲ್ಲಿ ಅನೇಕ ಟೈಮ್ಲೈನ್ಗಳನ್ನ ಮೂರು ತಿಂಗಳು ಮುಂದೂಡಿದೆ. ಬಿಕ್ಕಟ್ಟಿನ ಕಾಲದಲ್ಲಿ ಅದಾಯ ತೆರಿಗೆ ಪಾವತಿದಾರರು ತೆರಿಗೆ ವಿನಾಯಿತಿ ಪಡೆಯಲು ಅನುವಾಗುವಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಜನರು ಉಳಿತಾಯ ಯೋಜನೆಗಳಿಗೆ, ಹೂಡಿಕೆಗಳಿಗೆ ಹಣ ತೊಡಗಿಸಿಕೊಳ್ಳಬಹುದು, ದೇಣಿಗೆಗಳನ್ನೂ ನೀಡಬಹುದು. ಇಂಥ ಹಲವು ಕಾರ್ಯಗಳಿಗೆ ತೆರಿಗೆ ರಿಯಾಯಿತಿ ಅಥವಾ ವಿನಾಯಿತಿಗಳನ್ನ ಕಲ್ಪಿಸಲಾಗಿದೆ. ಜೂನ್ 30ರವರೆಗೆ ಜನರು ಇಂಥ ಕಾರ್ಯಗಳಿಗೆ ತಮ್ಮ ಹಣವನ್ನು ವಿನಿಯೋಗಿಸಬಹುದು. ಆ ಮೂಲಕ ತೆರಿಗೆ ವಿನಾಯಿತಿ ಸೌಲಭ್ಯ ಪಡೆದುಕೊಳ್ಳಬಹುದು. ಅಂಥವನ್ನು ಒಳಗೊಳ್ಳುವಂತೆ ಈಗ ಐಟಿ ರಿಟರ್ನ್ ಫಾರ್ಮ್ಗಳನ್ನು ಪರಿಷ್ಕರಿಸಲಾಗುತ್ತಿದೆ.
ಇದೇ ವೇಳೆ, ಐಟಿ ರಿಟರ್ನ್ ಫಾರ್ಮ್ ತುಂಬಿಸಿ ಫೈಲ್ ಮಾಡಲು ಸಾಮಾನ್ಯವಾಗಿ ಜುಲೈ 31ಕ್ಕೆ ಡೆಡ್ಲೈನ್ ಇರುತ್ತದೆ. ಆದರೆ, ಜೂನ್ 30ರವರೆಗೆ ಟೈಮ್ಲೈನ್ ವಿಸ್ತರಣೆ ಆಗಿರುವುದರಿಂದ ರಿಟರ್ನ್ ಫೈಲ್ ಮಾಡುವ ಅವಧಿಯನ್ನೂ ಹೆಚ್ಚಿಸಿ ಎಂಬ ಕೂಗು ಕೇಳಿಬರುತ್ತಿದೆ. ಕೇಂದ್ರ ಸರ್ಕಾರ ಕೂಡ ಅಕ್ಟೋಬರ್ ಅಥವಾ ಸೆಪ್ಟೆಂಬರ್ವರೆಗೆ ಈ ಗಡುವನ್ನು ವಿಸ್ತರಿಸುವ ಸಾಧ್ಯತೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ