Cyrus Mistry Died: ಮರ್ಸಿಡಿಸ್ ಕಾರಿನಲ್ಲಿ ಭೀಕರ ಅಪಘಾತ; ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ದುರ್ಮರಣ

ಸೈರಸ್ ಮಿಸ್ತ್ರಿ

ಸೈರಸ್ ಮಿಸ್ತ್ರಿ

 • Share this:
  ಮುಂಬೈ: ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ (Tata Group former chairman Cyrus Mistry) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಸೈರಸ್ ಮಿಸ್ತ್ರಿ ಅವರ ಮರ್ಸಿಡಿಸ್ ಕಾರು ಅಹಮದಾಬಾದ್‌ನಿಂದ ಮುಂಬೈಗೆ ಹಿಂದಿರುಗುತ್ತಿದ್ದಾಗ ಪಾಲ್ಘರ್‌ನ ಚರೋತಿಯಲ್ಲಿ ರಸ್ತೆ ಅಪಘಾತದಲ್ಲಿ (Cyrus Mistry Died) ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಕಾರು ಚಾಲಕ ಸೇರಿದಂತೆ  ಪ್ರಯಾಣಿಸುತ್ತಿದ್ದ ಇನ್ನಿಬ್ಬರು ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳನ್ನು ಗುಜರಾತ್‌ನ ಆಸ್ಪತ್ರೆಗೆ ರವಾನಿಸಲಾಗಿದೆ. 

  ಅಪಘಾತದ ದೃಶ್ಯ


  ಮಧ್ಯಾಹ್ನವೇ ಸಂಭವಿಸಿದ ಅಪಘಾತ
  ಸೈರಸ್ ಮಿಸ್ತ್ರಿ ಅವರು ಅಹಮದಾಬಾದ್‌ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದಾಗ ಮಧ್ಯಾಹ್ನ 3.15 ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಭೀಕರ ಅಪಘಾತದಲ್ಲಿ ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ನಿಧನಕ್ಕೆ ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.  ಟಾಟಾ ಸನ್ಸ್ ಚೇರ್​ಮನ್ ಆಗಿ ನೇಮಕಗೊಂಡಿದ್ದ ಸೈರಸ್ ಮಿಸ್ತ್ರಿ ಅವರನ್ನು ಭಿನ್ನಾಭಿಪ್ರಾಯದ ಕಾರಣಕ್ಕೆ 2016ರಲ್ಲಿ ಹುದ್ದೆಯಿಂದ ತೆರವುಗೊಳಿಸಲಾಗಿತ್ತು.

  ಇದನ್ನೂ ಓದಿ: Elephant Retirement: ಮನುಷ್ಯರಂತೆ ಆನೆಗಳಿಗೂ ನಿವೃತ್ತಿ; ವಿದಾಯ ಸಭೆಯ ಭಾವನಾತ್ಮಕ ವಿಡಿಯೋ ವೈರಲ್

  ಟಾಟಾ ಎಂಬ ಅಡ್ಡ ಹೆಸರು ಇಲ್ಲದ ಟಾಟಾ ಅಧ್ಯಕ್ಷ
  ಸೈರಸ್ ಪಲ್ಲೊಂಜಿ ಮಿಸ್ತ್ರಿ ಎಂಬುದು ಸೈರಸ್ ಮಿಸ್ತ್ರಿ ಅವರ ಪೂರ್ಣ ಹೆಸರು.  ಭಾರತೀಯ ಮೂಲದ ಐರಿಶ್ ಉದ್ಯಮಿಯಾಗಿದ್ದ ಅವರು 2012 ರಿಂದ 2016 ರವರೆಗೆ ಭಾರತೀಯ ವ್ಯಾಪಾರ ಸಮೂಹವಾದ ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿದ್ದರು.  ಟಾಟಾ ಸಮೂಹ ಸಂಸ್ಥೆಯ  ಆರನೇ ಅಧ್ಯಕ್ಷರಾಗಿದ್ದ ಅವರು ಟಾಟಾ ಎಂಬ ಉಪನಾಮವನ್ನು ಹೊಂದದ ಎರಡನೆಯ ಅಧ್ಯಕ್ಷ ಎಂದ ಹೆಗ್ಗಳಿಕೆಗೂ ಪಾತ್ರರಾಗಿದ್ದರು.

  ಪತ್ನಿ, ಕುಟುಂಬಸ್ಥರನ್ನು ಅಗಲಿದ ಸೈರಸ್ ಮಿಸ್ತ್ರಿ
  ಸೈರಸ್ ಮಿಸ್ತ್ರಿ ಅವರ ತಾಯಿ ಐರ್ಲೆಂಡ್‌ನಲ್ಲಿ ಜನಿಸಿದ್ದರು. ಹೀಗಾಗಿ ಅವರ ತಂದೆ ಐರಿಶ್ ಪೌರತ್ವವನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದರು. ಸೈರಸ್ ಮಿಸ್ತ್ರಿ ಅವರು ಪತ್ನಿ ಬೆಹ್ರೋತ್, ಹಿರಿಯ ಸಹೋದರ ಶಪೂರ್ ಮಿಸ್ತ್ರಿ, ಲೈಲಾ ಮತ್ತು ಆಲೂ ಎಂಬ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

  ಇದನ್ನೂ ಓದಿ: Sheikh Hasina: ದೆಹಲಿಯಲ್ಲಿ ಗುರುತು ಮರೆಮಾಚಿಕೊಂಡು ರಹಸ್ಯವಾಗಿ ಬದುಕಿದ್ದ ಬಾಂಗ್ಲಾ ಪ್ರಧಾನಿ!

  ಅತ್ಯಂತ ಶ್ರೀಮಂತ ಮತ್ತು ವ್ಯಾವಹಾರಿಕ ಹಿನ್ನೆಲೆ ಹೊಂದಿದ್ದ ಕುಟುಂಬದಿಂದ ಬಂದಿದ್ದ ಸೈರಸ್ ಮಿಸ್ತ್ರಿ ಅವರು ಲಂಡನ್‌ನ ಇಂಪೀರಿಯಲ್ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದರು. 1990 ರಲ್ಲಿ ಲಂಡನ್ ವಿಶ್ವವಿದ್ಯಾನಿಲಯದಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬ್ಯಾಚುಲರ್ ಆಫ್ ಎಂಜಿನಿಯರಿಂಗ್ ಪದವಿ ಗಳಿಸಿದ್ದರು. ಲಂಡನ್ ಬಿಸಿನೆಸ್ ಸ್ಕೂಲ್‌ನಲ್ಲಿ ಅಧ್ಯಯನ ಮಾಡಿದ್ದರಲ್ಲದೇ  1996 ರಲ್ಲಿ ಲಂಡನ್ ವಿಶ್ವವಿದ್ಯಾಲಯದಿಂದ ಮ್ಯಾನೇಜ್‌ಮೆಂಟ್‌ನಲ್ಲಿ ಇಂಟರ್ನ್ಯಾಷನಲ್ ಎಕ್ಸಿಕ್ಯುಟಿವ್ ಮಾಸ್ಟರ್‌ಗಳನ್ನು ಪಡೆದುಕೊಂಡಿದ್ದರು.

  ಮಹಾ ಸಿಎಂ ಏಕನಾಥ ಶಿಂಧೆ ಸಂತಾಪ
  ಟಾಟಾ ಸನ್ಸ್‌ನ ಮಾಜಿ ಮುಖ್ಯಸ್ಥ ಸೈರಸ್ ಮಿಸ್ತ್ರಿ ಅವರ ನಿಧನದ ಬಗ್ಗೆ ಕೇಳಿ ಆಘಾತವಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಭಾನುವಾರ ಸಂತಾಪ ವ್ಯಕ್ತಪಡಿಸಿದ್ದಾರೆ. ಸೈರಸ್ ಮಿಸ್ತ್ರಿ ಅವರು ಯಶಸ್ವಿ ಉದ್ಯಮಿ ಮಾತ್ರವಲ್ಲದೆ ಉದ್ಯಮದಲ್ಲಿ ಯುವ, ಪ್ರಕಾಶಮಾನವಾದ ಮತ್ತು ದೂರದೃಷ್ಟಿಯ ವ್ಯಕ್ತಿತ್ವವಾಗಿ ಕಾಣಿಸಿಕೊಂಡಿದ್ದರು. ಅವರ ಮರಣ ಅಪಾರ ನಷ್ಟವನ್ನುಂಟು ಮಾಡಿದೆ. ಅವರಿಗೆ ನನ್ನ ಹೃತ್ಪೂರ್ವಕ ಶ್ರದ್ಧಾಂಜಲಿ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸಂತಾಪ ಸೂಚಿಸಿದ್ದಾರೆ.
  Published by:guruganesh bhat
  First published: