Tamil Nadu urges Centre: ಶ್ರೀಲಂಕಾಕ್ಕೆ ಕೂಡಲೇ ನೆರವು ನೀಡಿ: ಕೇಂದ್ರಕ್ಕೆ ತಮಿಳುನಾಡು ಸರ್ಕಾರದ ಮನವಿ

ಶ್ರೀಲಂಕಾ ದೇಶಕ್ಕೆ ನೆರವು ನೀಡುವ ಉದ್ದೇಶವನ್ನು ಒಳಗೊಂಡ‌‌ ನಿರ್ಣಯವನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ವಿಧಾನಸಭೆಯಲ್ಲಿ ಮಂಡಿಸಿದರು. ಎಐಎಡಿಎಂಕೆ ಸೇರಿದಂತೆ ಎಲ್ಲಾ ಪ್ರತಿಪಕ್ಷಗಳು ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿದವು.

ಸಿಎಂ ಸ್ಟಾಲಿನ್ , ಪ್ರಧಾನಿ ಮೋದಿ (ಸಂಗ್ರಹ ಚಿತ್ರ)

ಸಿಎಂ ಸ್ಟಾಲಿನ್ , ಪ್ರಧಾನಿ ಮೋದಿ (ಸಂಗ್ರಹ ಚಿತ್ರ)

  • Share this:
ನವದೆಹಲಿ, ಏ. 29: ಆರ್ಥಿಕ ಬಿಕ್ಕಟ್ಟಿಗೆ (Economic Crisis) ಸಿಲುಕಿರುವ ಶ್ರೀಲಂಕಾ (Sri Lanka) ಆಹಾರ ಮತ್ತು ಜೀವರಕ್ಷಕ ಔಷಧಿಗಳನ್ನು ತಕ್ಷಣವೇ ರವಾನಿಸಲು ರಾಜ್ಯ ಸರ್ಕಾರದ ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸುವಂತೆ ಕೇಂದ್ರ ಸರ್ಕಾರ‌‌ (Union Government) ಅನ್ನು ಒತ್ತಾಯಿಸುವ ನಿರ್ಣಯವನ್ನು ತಮಿಳುನಾಡು ವಿಧಾನಸಭೆ (Tamil Madu Assembly) ಶುಕ್ರವಾರ ಅಂಗೀಕರಿಸಿತು. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (Chief Minister M.K. Stalin) ಭಾರತವು ಮಾನವೀಯ ನೆಲಯಲ್ಲಿ ಶ್ರೀಲಂಕಾಕ್ಕೆ ನೆರವು ನೀಡಬೇಕಾದ ಅಗತ್ಯವನ್ನು ಒತ್ತಿ ಹೇಳಿದರು.

ಸರ್ವಾನುಮತದ ಒಪ್ಪಿಗೆ
ಶ್ರೀಲಂಕಾ ದೇಶಕ್ಕೆ ನೆರವು ನೀಡುವ ಉದ್ದೇಶವನ್ನು ಒಳಗೊಂಡ‌‌ ನಿರ್ಣಯವನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ವಿಧಾನಸಭೆಯಲ್ಲಿ ಮಂಡಿಸಿದರು. ಪ್ರತಿಪಕ್ಷಗಳಾದ ಎಐಎಡಿಎಂಕೆ ಸೇರಿದಂತೆ ಸರ್ವಾನುಮತದಿಂದ ನಿರ್ಣಯ ಅಂಗೀಕರವಾಯಿತು. ಕುತೂಹಲಕಾರಿಯಾಗಿ ಸರ್ಕಾರದ ನಿರ್ಣಯಕ್ಕೆ ಬೆಂಬಲವನ್ನು ನೀಡುವುದರ ಜೊತೆಗೆ ವಿರೋಧ ಪಕ್ಷ ಎಐಎಡಿಎಂಕೆಯ ಉಪ ನಾಯಕ ಓ ಪನ್ನೀರಸೆಲ್ವಂ ಅವರು ಶ್ರೀಲಂಕಾ ತಮಿಳರಿಗೆ ವೈಯಕ್ತಿಕವಾಗಿ 50 ಲಕ್ಷ ರೂಪಾಯಿ ನೆರವು ನೀಡುವುದಾಗಿ ಘೋಷಿಸಿದರು.

ಸಹಾಯ ಸಮಯಕ್ಕೆ ಸರಿಯಾಗಿ ಆಗಬೇಕು: ಸ್ಟಾಲಿನ್
ಶ್ರೀಲಂಕಾದಲ್ಲಿನ ಬೆಳವಣಿಗೆಯನ್ನು ನಾವು ನೆರೆಯ ದೇಶದ ಆಂತರಿಕ ಸಮಸ್ಯೆಯಾಗಿ ನೋಡಲಾಗುವುದಿಲ್ಲ. ಮಾನವೀಯ ನೆರವನ್ನು ನೀಡಬೇಕಾಗಿದೆ. ಸಹಾಯವು ಸಮಯಕ್ಕೆ ಸರಿಯಾಗಿ ಆಗಬೇಕು ಎಂದು ನಿರ್ಣಯ ಮಂಡನ ವೇಳೆ ಸ್ಟಾಲಿನ್ ಹೇಳಿದರು. ಇದೇ ವಿಷಯದ ಕುರಿತು ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದನ್ನು ನೆನಪಿಸಿಕೊಂಡ ಸ್ಟಾಲಿನ್, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಕೂಡ ಚರ್ಚೆ ನಡೆಸಿದ್ದೇನೆ. ಆದರೆ ಕೇಂದ್ರ ಸರ್ಕಾರದಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದ್ದರಿಂದ ತಮಿಳುನಾಡು ವಿಧಾನಸಭೆಯಲ್ಲಿ ಈ ನಿರ್ಣಯವನ್ನು ತರಬೇಕಾಯಿತು ಎಂದು ಹೇಳಿದರು.

ಇದನ್ನೂ ಓದಿ: Ukraine Crisis: ವಿಶ್ವಸಂಸ್ಥೆ ಅಧಿಕಾರಿಗಳು ಬಂದಿರುವಾಗಲೇ ಖಿವ್ ಮೇಲೆ ದಾಳಿ, ರಷ್ಯಾ ಉದ್ಧಟತನ!

ತಮಿಳುನಾಡಿನಿಂದ 123 ಕೋಟಿ ರೂ. ನೆರವು
ತಮಿಳರ ವಿಷಯದಲ್ಲಿ ಡಿಎಂಕೆಯು ದೀರ್ಘಕಾಲದ ಬದ್ಧತೆ ಹೊಂದಿದೆ ಎಂದ ಸ್ಟಾಲಿನ್, ನಾವು ಈಗ ಮಾನವೀಯ ನೆರವು ನೀಡಬೇಕೆಂಬುದು ಈ ಸರ್ಕಾರದ ನಿಲುವಾಗಿದೆ. ಮಕ್ಕಳಿಗೆ 40,000 ಟನ್ ಅಕ್ಕಿ, 137 ವಿಧದ ಜೀವರಕ್ಷಕ ಔಷಧಗಳು ಮತ್ತು 500 ಟನ್ ಹಾಲಿನ ಪುಡಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಅಂದಾಜು 123 ಕೋಟಿ ರೂ. ಖರ್ಚಾಗಲಿದೆ.

ಕೇಂದ್ರದ ಸಹಕಾರ ಅತ್ಯಗತ್ಯ
ರಾಜ್ಯ ಸರಕಾರ ನೇರವಾಗಿ ಆಹಾರ ಮತ್ತು ಜೀವರಕ್ಷಕ ಔಷಧಿಗಳನ್ನು ಪೂರೈಸುವಂತಿಲ್ಲ. ಇದನ್ನು ಕೇಂದ್ರ ಸರ್ಕಾರದ ಅನುಮೋದನೆಯೊಂದಿಗೆ ಮಾಡಬೇಕು ಮತ್ತು ಶ್ರೀಲಂಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮೂಲಕ ವಿತರಿಸಬೇಕು. ಶ್ರೀಲಂಕಾದಲ್ಲಿನ ಬಿಕ್ಕಟ್ಟಿನ ನಂತರ ನಾನು ಭಾರತ ಸರ್ಕಾರಕ್ಕೆ (ವಿಷಯದ ಬಗ್ಗೆ) ವಿನಂತಿಯನ್ನು ಸಲ್ಲಿಸಿದ್ದೇನೆ ಎಂದು ಸ್ಟಾಲಿನ್ ಹೇಳಿದರು.

ಕೇಂದ್ರ ಸರ್ಕಾರದಿಂದ ಬಾರದ ಪ್ರತಿಕ್ರಿಯೆ
ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಶ್ರೀಲಂಕಾದ ಜನರಿಗೆ ಅಕ್ಕಿ, ಬೇಳೆಕಾಳುಗಳು ಮತ್ತು ಹಾಲಿನ ಉತ್ಪನ್ನಗಳು ಮತ್ತು ಜೀವರಕ್ಷಕ ಔಷಧಿಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಕಳುಹಿಸಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡುವಂತೆ ತಮಿಳುನಾಡು ಸರ್ಕಾರವು ಭಾರತ ಸರ್ಕಾರವನ್ನು ಉದ್ದೇಶಿಸಿದೆ. ಆದರೆ ಈ ನಿಟ್ಟಿನಲ್ಲಿ ಭಾರತ ಸರ್ಕಾರದಿಂದ ಇದುವರೆಗೆ ಯಾವುದೇ ಸ್ಪಷ್ಟ ಉತ್ತರ ಬಂದಿಲ್ಲ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ. ಹಾಗಾಗಿ ತೀವ್ರ ಸಂಕಷ್ಟ ಎದುರಿಸುತ್ತಿರುವ ಶ್ರೀಲಂಕಾದ ಜನತೆಗೆ ತಮಿಳುನಾಡಿನಿಂದ ಆಹಾರ ಮತ್ತು ಜೀವರಕ್ಷಕ ಔಷಧಗಳು ಸೇರಿದಂತೆ ಇತರೆ ಅಗತ್ಯ ವಸ್ತುಗಳನ್ನು ತಕ್ಷಣವೇ ಕಳುಹಿಸುವಂತೆ ತಮಿಳುನಾಡು ಸರ್ಕಾರದ ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಸದನವು ನಿರ್ಧರಿಸುತ್ತದೆ ಎಂದು ನಿರ್ಣಯದಲ್ಲಿ ಸೇರಿಸಲಾಗಿದೆ.
Published by:Kavya V
First published: